Homeಅಂಕಣಗಳುಸಂದರ್ಶನ; ರಿಚರ್ಡ್ ಈಟನ್: ಸವೆದ ಹಾದಿಯಲ್ಲಿ ನಡೆಯದ ಇತಿಹಾಸಕಾರ

ಸಂದರ್ಶನ; ರಿಚರ್ಡ್ ಈಟನ್: ಸವೆದ ಹಾದಿಯಲ್ಲಿ ನಡೆಯದ ಇತಿಹಾಸಕಾರ

- Advertisement -
- Advertisement -

‘ಚರಿತ್ರೆ ಚಲನಶೀಲವಾದದ್ದು, ಆದರೆ ಚರಿತ್ರಾಕಾರರು ನಿಂತಲ್ಲೇ ನಿಂತು ಜಡವಾಗಿಬಿಟ್ಟಿದ್ದಾರೆ. ತಾವು ಹೇಳಬೇಕು ಎಂದು ಬಯಸಿದ ಸಂಗತಿಯನ್ನು ವ್ಯಕ್ತಪಡಿಸಲು ಅವರು ಅತ್ಯುತ್ಸಾಹ ತೋರುತ್ತಿದ್ದಾರೆ. ಆದರೆ ಚರಿತ್ರಾಕಾರರು ಹೇಳಬೇಕೆಂದು ಬಯಸಿರುವ ಚರಿತ್ರೆಯಲ್ಲಿ ಸತ್ಯಗಳು ಇಲ್ಲವಾಗುತ್ತಿವೆ. ಅವರು ಬರೆಯುತ್ತಿರುವ ಚರಿತ್ರೆಯ ಪುಟಗಳಲ್ಲಿ ಆಯಾ ಕಾಲಘಟ್ಟದ ಆಳುವ ವರ್ಗಗಳ ಹಿತಾಸಕ್ತಿಯೇ ಪ್ರಧಾನವಾಗಿ ಎದ್ದುಕಾಣುತ್ತದೆ. ಅಸ್ತಿತ್ವದಲ್ಲೇ ಇಲ್ಲದ ನಿನ್ನೆಗಳನ್ನು ಸೃಷ್ಟಿ ಮಾಡಲು ಅವರು ಕಾತುರರಾಗಿದ್ದಾರೆ. ಚರಿತ್ರೆಯನ್ನು ಹೀಗೆ ಹಿತಾಸಕ್ತಿಗಳಿಗಾಗಿ ರಚಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಆದರೆ ಇತಿಹಾಸ ಎನ್ನುವುದನ್ನು ಹೀಗೆ ಸುಳ್ಳುಗಳ ಪರದೆಯಿಂದ ಮುಚ್ಚಿಹಾಕಲು ಸಾಧ್ಯವಿಲ್ಲ. ಇತಿಹಾಸವನ್ನು ಹೀಗೆ ಮುಚ್ಚಿಹಾಕಲು ಪ್ರಯತ್ನಿಸಿದಷ್ಟು ಅದು ತನ್ನ ನೈಜ ರೂಪವನ್ನು ಅನಾವರಣ ಮಾಡುವ ಬಾಗಿಲುಗಳನ್ನು ಭವಿಷ್ಯದ ಜನಾಂಗಕ್ಕೆ ತೆರೆಯುತ್ತಲೇ ಹೋಗುತ್ತದೆ. ಚರಿತ್ರೆಯ ವಿರೂಪೀಕರಣ ಎಂಬುದು ವಿಚಲಿತ ಆಳುವ ವರ್ಗದ ತಾತ್ಕಾಲಿಕ ನಡೆ ಮಾತ್ರ. ಚರಿತ್ರೆಯನ್ನು ನೀವು ತಿರುಚಿದಷ್ಟೂ ಅದು ತನ್ನ ಸ್ಪಷ್ಟ ರೂಪದೊಂದಿಗೆ ಅನಾವರಣವಾಗುವ ಸಾಧ್ಯತೆಗಳನ್ನು ನಮ್ಮ ಮುಂದಿಡುತ್ತಾ ಹೋಗುತ್ತದೆ.’- ರಿಚರ್ಡ್ ಈಟನ್ ಚರಿತ್ರೆ ರಚನೆಯ ವರ್ತಮಾನದ ಪ್ರವೃತ್ತಿಗಳ ಕುರಿತು ನಮಗೆ ಹೀಗೆ ವಿವರಿಸಿದರು. ಮಿಷಿಗನ್ ರಾಜ್ಯದ ಹೂರೋನ್ ಮ್ಯಾನಿಸ್ಟೀ ರಾಷ್ಟ್ರೀಯ ಅರಣ್ಯದಲ್ಲಿನ ಬಿಗ್ ಬ್ಯಾಸ್ ಸರೋವರದ ತೀರದಲ್ಲಿ ಒಂದು ಔಪಚಾರಿಕ ಮಾತುಕತೆಯಲ್ಲಿ ನಾವು ತೊಡಗಿದ್ದೆವು. ನಮ್ಮ ಮಾತುಕತೆಯ ಉದ್ದಕ್ಕೂ ಎಂಬತ್ತೆರಡು ವರ್ಷದ ಈಟನ್ ಚರಿತ್ರೆಯ ವಿರೂಪೀಕರಣದ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಚರಿತ್ರೆಯನ್ನು ವಿರೂಪಗೊಳಿಸುವ ಈ ಹುನ್ನಾರ ಕೇವಲ ಶೈಕ್ಷಣಿಕ ವಲಯಕ್ಕೆ ಸೀಮಿತವಾದದ್ದಲ್ಲ. ಈ ಹುನ್ನಾರದ ಹಿಂದೆ ನಿರ್ದಿಷ್ಟ ಸಮುದಾಯಗಳನ್ನು ಅನ್ಯೀಕರಿಸುವ ರಾಜಕಾರಣ ಕೆಲಸ ಮಾಡುತ್ತಿದೆ. ನೂರಾರು ವರ್ಷಗಳಿಂದ ನಡೆಯುತ್ತಿರುವ ಜನಾಂಗೀಯ ಹತ್ಯೆಗಳಿಗೂ ಮತ್ತು ಸಮುದಾಯಗಳನ್ನು ಚರಿತ್ರೆಯಲ್ಲಿ ಅನ್ಯೀಕರಿಸುವುದಕ್ಕೂ ನೇರಾನೇರ ಸಂಬಂಧಗಳಿವೆ. ಆದರೆ ಕಾಲಚಕ್ರದ ಗತಿಯಲ್ಲಿ ಈ ರಾಜಕೀಯ ಹುನ್ನಾರಗಳು ನಾಶವಾಗುತ್ತವೆ. ಚರಿತ್ರೆ ತನ್ನ ನೈಜರೂಪಗಳೊಂದಿಗೆ ಅನಾವರಣವಾಗುತ್ತದೆ ಎಂಬ ಭರವಸೆ ಈಟನ್ ಅವರಲ್ಲಿತ್ತು.

ರಿಚರ್ಡ್ ಈಟನ್ ಅವರ ಪೂರ್ಣ ಹೆಸರು ರಿಚರ್ಡ್ ಮ್ಯಾಕ್ಸ್‌ವೆಲ್ ಈಟನ್. ಇವರು ಅಮೆರಿಕದ ಆರಿಜೋನಾ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ದಶಕದ ಹಿಂದೆ ನಿವೃತ್ತರಾಗಿರುವ 82 ವರ್ಷ ವಯಸ್ಸಿನ ಈಟನ್ ಇಂದಿಗೂ ಹಲವು ಅಧ್ಯಯನ ಯೋಜನೆಗಳನ್ನು ಮುಂದಿಟ್ಟುಕೊಂಡು ಕ್ರಿಯಾಶೀಲ ಜೀವನವನ್ನು ನಡೆಸುತ್ತಿದ್ದಾರೆ. ಅಮೆರಿಕದ ಬಹುದೊಡ್ಡ ವಿಶ್ವವಿದ್ಯಾಲಯವೊಂದರಲ್ಲಿ ಪ್ರಾಧ್ಯಾಪಕರಾಗಿದ್ದುಕೊಂಡು ಈಟನ್ ಆರಾಮಕುರ್ಚಿಯಲ್ಲಿ ಕುಳಿತು ಒಂದಾದನಂತರ ಒಂದು ಥಿಯರಿಗಳನ್ನು ಕಟ್ಟಬಹುದಾಗಿತ್ತು. ಝಗಮಗಿಸುವ ವಿಶ್ವವಿದ್ಯಾಲಯಗಳಲ್ಲಿ ಕ್ಲಾಸಿಕಲ್ ಸೆಮಿನಾರಿಸ್ಟ್ ಆಗಿ ಮಿಂಚಬಹುದಾಗಿತ್ತು. ಆದರೆ ಈಟನ್ ತಮ್ಮ ವೃತ್ತಿಯನ್ನು ಶುದ್ಧ ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತಗೊಳಿಸಲಿಲ್ಲ. ಚರಿತ್ರೆ ರಚನಾಶಾಸ್ತ್ರದಲ್ಲಿ ನಡೆಯುತ್ತಿರುವ ರಾಜಕಾರಣವನ್ನು ಅರ್ಥಮಾಡಿಕೊಳ್ಳುತ್ತಲೇ ಅವರು ಜನತೆಯ ಇತಿಹಾಸವನ್ನು ಬರೆಯುವ ಸವಾಲನ್ನು ಸ್ವೀಕರಿಸಿದರು. ಈ ಸವಾಲು ಅವರನ್ನು ಒಬ್ಬ ವಸ್ತುನಿಷ್ಠ ಚರಿತ್ರಕಾರರನ್ನಾಗಿ ರೂಪಿಸಿದೆ. ಇತಿಹಾಸದ ವಿದ್ಯಾರ್ಥಿಯಾಗಿ ಅವರು ಇಂತಹ ಹತ್ತು ಹಲವು ಸವಾಲುಗಳಿಗೆ ತಮ್ಮನ್ನು ಒಡ್ಡಿಕೊಂಡಿದ್ದಾರೆ. ಈ ಕಾರಣಕ್ಕಾಗಿ ಅವರು ಅಭಿಜಾತ (Classical) ಚರಿತ್ರೆ ರಚನಾಕ್ರಮವನ್ನು ಅನುಸರಿಸಲು ಸಾಧ್ಯವಾಗಲಿಲ್ಲ. ಕೇಂಬ್ರಿಜ್ ಅಧ್ಯಯನ ಮಾದರಿಯಾಗಲಿ, ರಾಷ್ಟ್ರೀಯವಾದಿ ಮತ್ತು ಓರಿಯಂಟಲಿಸ್ಟ್ ಅಧ್ಯಯನ ವಿಧಾನವಾಗಲಿ ಭಾರತದ ನೈಜ ಸಾಮಾಜಿಕ ಚರಿತ್ರೆಯನ್ನು ಕಟ್ಟಿಕೊಡಲು ನೆರವಾಗುವುದಿಲ್ಲ; ವಿಕ್ಟೋರಿಯನ್ ಕಾಲದ ಮೆಕಾಲೆ ಮತ್ತು ಜೆ.ಎಸ್. ಮಿಲ್ ಅನುಸರಿಸಿದ ಯುರೋಪಿಯನ್ ಶೈಕ್ಷಣಿಕ ವಿಧಾನದ ಮೂಲಕ ಪರ್ಯಾಯವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಈಟನ್ ಮನಗಂಡಿದ್ದರು. ಯುರೋಪಿನ ವಿದ್ವಾಂಸರು ನಿರ್ಮಿಸಿದ ಹೆದ್ದಾರಿಯನ್ನು ಈಟನ್ ಆಯ್ಕೆ ಮಾಡಿಕೊಳ್ಳಲಿಲ್ಲ. ಪರಂಪರೆಯ ಸವೆದ ಹಾದಿಯಲ್ಲಿ ನಡೆಯಲು ಬಯಸದ ವ್ಯಕ್ತಿಯು ದಾರಿಯೇ ಇಲ್ಲದ ಕಡೆ ನಡೆದು ಹೋಗಬೇಕಾಗುತ್ತದೆ. ನಡೆಯುತ್ತಲೇ ತನ್ನ ದಾರಿಯನ್ನು ನಿರ್ಮಿಸಿಕೊಳ್ಳುವ ಸವಾಲು ಅವನಿಗೆ ಎದುರಾಗುತ್ತದೆ. ಅಗಾಧ ಪರಿಶ್ರಮ ಮತ್ತು ಬದ್ಧತೆಗಳಿಲ್ಲದೆ ಪರ್ಯಾಯ ಹಾದಿಯ ನಿರ್ಮಾಣ ಅಸಾಧ್ಯ. ಈಟನ್ ತರಹದ ವಿದ್ವಾಂಸರು ತಮ್ಮ ಅಪರಿಮಿತ ಶ್ರದ್ಧೆಗಳಿಂದ ಇಂತಹ ಸವಾಲುಗಳಿಗೆ ಮುಖಾಮುಖಿಯಾಗಬಲ್ಲರು. ಈಟನ್ ಭಾರತದ ಸಾಮಾಜಿಕ ಚರಿತ್ರೆಯನ್ನು ಬರೆಯಲು ತಮ್ಮದೇ ವಿಧಾನವೊಂದನ್ನು ಕಂಡುಕೊಂಡರು. ಯುರೋಪಿನ ಅಭಿಜಾತ (Classical) ಚರಿತ್ರೆ ರಚನಾಕ್ರಮವನ್ನು ಪ್ರಜ್ಞಾಪೂರ್ವಕವಾಗಿ ಈಟನ್ ನಿರಾಕರಿಸಿದವರು. ಈ ಕಾರಣಕ್ಕಾಗಿ ಭಾರತವನ್ನು ಅಧ್ಯಯನ ಮಾಡಿದ ವಿದೇಶಿ ಚರಿತ್ರಾಕಾರರಲ್ಲಿ ಈಟನ್ ಭಿನ್ನವಾಗಿ ನಿಲ್ಲುತ್ತಾರೆ.

ರಿಚರ್ಡ್ ಈಟನ್

ರಿಚರ್ಡ್ ಈಟನ್ ಅಮೆರಿಕದ ಮಿಷಿಗನ್ ರಾಜ್ಯದವರು. ಈಟನ್ ಪದವಿ ಹಂತದಲ್ಲಿ ತತ್ವಶಾಸ್ತ್ರ ಮತ್ತು ಮಣ್ಣಿನ ರಸಾಯನಶಾಸ್ತ್ರವನ್ನು (Soil Chemistry) ಅಧ್ಯಯನ ಮಾಡಿದರು. ನಂತರ ಸ್ನಾತಕ ಪದವಿಯಲ್ಲಿ ಇತಿಹಾಸವನ್ನು ಆಯ್ಕೆ ಮಾಡಿಕೊಂಡರು. ಸ್ನಾತಕ ಪದವಿಯ ನಂತರ ಉದ್ಯೋಗ ಅರಸುವ ಹಂತದಲ್ಲಿ ಇರಾನ್ ದೇಶಕ್ಕೆ ತೆರಳಿದರು. ಈಟನ್ ಅವರ ತಂದೆ ಇರಾನಿನಲ್ಲಿ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದರು. ನೌಕರಿಯನ್ನು ಹುಡುಕುತ್ತ ಇರಾನಿನಲ್ಲಿ ಕೆಲದಿನಗಳ ಕಾಲ ತಂದೆಯ ಜೊತೆಗೆ ನೆಲೆಸಿದರು. ಆಗ ಪೂರ್ವ ಅಜರ್‌ಬೈಜಾನ್ ಪ್ರಾಂತ್ಯದ ರಾಜಧಾನಿಯಾದ ತಬ್ರಿಜ್‌ನಲ್ಲಿ ಇಸ್ಲಾಮಿಕ್ ಕ್ರಾಂತಿಗೂ ಮುನ್ನ ಶಾಂತಿಪಾಲನಾ ಪಡೆಗೆ ಈಟನ್ ಅವರನ್ನು ಅಮೆರಿಕ ಸರಕಾರ ಸೈನಿಕನನ್ನಾಗಿ ಆಯ್ಕೆ ಮಾಡಿತು. ಹೀಗೆ ಅಜರ್‌ಬೈಜಾನಿಗೆ ಹೋಗಿ ಕೆಲ ದಿನಗಳ ಕಾಲ ಈಟನ್ ನೆಲೆಸಬೇಕಾಯ್ತು. ಅಜರ್‌ಬೈಜಾನ್ ಸೂಫಿಗಳ ತವರೂರು. ಅಲ್ಲಿ ಸೂಫಿ ಚಿಂತನೆಗಳಿಗೆ ಎಲ್ಲಿಲ್ಲದ ಮಹತ್ವವಿದೆ. ಆ ಪರಿಸರದಲ್ಲಿ ಈಟನ್ ಮೊದಲ ಬಾರಿಗೆ ಸೂಫಿ ಪಂಥದ ಕುರಿತು ವಿವರಗಳನ್ನು ಪಡೆದುಕೊಳ್ಳಲು ಸಾಧ್ಯವಾಯಿತು. ಇರಾನಿಗೆ ವಾಪಸ್ ಬಂದ ನಂತರ ಈಟನ್ ತಂದೆ ಮತ್ತು ಅವರ ಅಜ್ಜ ಮಧ್ಯಪ್ರಾಚ್ಯದ ಧಾರ್ಮಿಕ ಮತ್ತು ಅಧ್ಯಾತ್ಮಿಕ ಪರಿಸರದ ಕುರಿತು ಹೆಚ್ಚಿನ ವಿವರಗಳನ್ನು ನೀಡಿದರು. ಇವರ ಅಜ್ಜ ಅಮೆರಿಕದಲ್ಲಿ ಕ್ರಿಶ್ಚಿಯನ್ ಧರ್ಮಪ್ರಚಾರಕನಾಗಿದ್ದರು. ರಿಚರ್ಡ್ ಈಟನ್ ಅವರೂ ಸಹ ಕ್ರಿಶ್ಚಿಯನ್ ಧರ್ಮಪ್ರಚಾರಕನಾಗಬೇಕು ಎಂದು ಅವರ ಅಜ್ಜ ಬಯಸಿದ್ದರು. ಸದಾ ಜನರ ನಡುವೆ ಕೆಲಸ ಮಾಡುತ್ತಿದ್ದ ಈಟನ್ ತಂದೆ ಮತ್ತು ಅಜ್ಜ ಇಬ್ಬರೂ ಸಂಪ್ರದಾಯವಾದಿಗಳಾಗಿರಲಿಲ್ಲ. ಧಾರ್ಮಿಕ ಮೂಲಭೂತವಾದದ ಕುರಿತು ಅವರಿಗೆ ತಕರಾರುಗಳಿದ್ದವು. ಇದರಿಂದಾಗಿ ಈಟನ್ ಮನೆಯಲ್ಲಿ ಸಹಜವಾಗಿಯೇ ಒಂದು ಉದಾರವಾದಿ ಪರಿಸರ ನಿರ್ಮಾಣವಾಗಿತ್ತು. ಈಟನ್ ತಂದೆ ಮಧ್ಯಪ್ರಾಚ್ಯದಲ್ಲಿನ ಇಸ್ಲಾಂ ಧರ್ಮದ ಆಗುಹೋಗುಗಳ ಕುರಿತು ಮತ್ತು ಪರ್ಶಿಯನ್ ಸೂಫಿಗಳ ಕುರಿತು ತನ್ನ ಮಗನ ಗಮನ ಸೆಳೆದರು. ಇಸ್ಲಾಂ ಧರ್ಮದ ಮುಖ್ಯಪ್ರವಾಹದಿಂದ ಟಿಸಿಲೊಡೆದ ಮತ್ತು ಪರ್ಯಾಯ ಅಧ್ಯಾತ್ಮವನ್ನು ಸೃಷ್ಟಿಸಲು ಪ್ರಯತ್ನಿಸಿದ ಸೂಫಿ ಮಾರ್ಗವನ್ನು ಅನ್ವೇಷಿಸುವುದಕ್ಕೆ ಈಟನ್ ಮುಂದಾದರು. ಇಸ್ಲಾಂನ ಪಾರಂಪರಿಕ ಕಾಠಿಣ್ಯವನ್ನು ಪ್ರಶ್ನಿಸುವ ಮತ್ತು ಅದರ ಕರ್ಮಠ ಆವರಣವನ್ನು ಮಾನವೀಯಗೊಳಿಸಲು ಜನಿಸಿದ ಸೂಫಿ ಅನುಭಾವವು ಈಟನ್ ಅವರನ್ನು ನಿರ್ದಿಷ್ಟವಾಗಿ ಪ್ರಭಾವಿಸಿತು. ಈ ಕಾರಣಕ್ಕಾಗಿ ಈಟನ್ ಸೂಫಿ ಪಂಥದ ಅಧ್ಯಯನ ಮಾಡಲು ಇರಾನ್, ಅಜರ್‌ಬೈಜಾನ್, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಭಾರತವನ್ನು ಅಲೆದಾಡಿದರು. ಇದೇ ಸಂದರ್ಭದಲ್ಲಿ ಇರಾನ್ ಸರಕಾರ ಈಟನ್ ಅವರನ್ನು ತನ್ನ ಕೃಷಿ ಕಾಲೇಜೊಂದರಲ್ಲಿ ಮಣ್ಣಿನ ರಸಾಯನಶಾಸ್ತ್ರವನ್ನು (Soil Chemistry) ಪಾಠ ಮಾಡಲು ನೇಮಿಸಿಕೊಂಡಿತು. ಇತಿಹಾಸವನ್ನು ಓದಿದ ಈಟನ್ ಇರಾನಿನ ಕಾಲೇಜೊಂದರಲ್ಲಿ ರಸಾಯನಶಾಸ್ತ್ರ ಪಾಠ ಮಾಡುವ ಶಿಕ್ಷಕರಾದರು. ಆದರೆ ನಂತರದ ದಿನಗಳಲ್ಲಿ ಅಮೆರಿಕದ ಆರಿಜೋನಾ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿ ನೇಮಕವಾದರು. ಆರಿಜೋನಾ ವಿಶ್ವವಿದ್ಯಾಲಯದಲ್ಲಿ ದಕ್ಷಿಣ ಏಶಿಯಾದ ಚರಿತ್ರೆಯನ್ನು ಅಧ್ಯಯನ ಮಾಡುವ ಯೋಜನೆಗಳನ್ನು ಹಮ್ಮಿಕೊಂಡು ಭಾರತಕ್ಕೆ ಪ್ರವಾಸ ಕೈಗೊಂಡರು. ಹೈದರಾಬಾದನ್ನು ಕೇಂದ್ರವಾಗಿಸಿಕೊಂಡು ಭಾರತದ ಸೂಫಿ ಪಂಥವನ್ನು ಅಧ್ಯಯನ ಮಾಡಲು ಈಟನ್ ಮುಂದಾದರು. ಈ ಯೋಜನೆಯ ಭಾಗವಾಗಿ 1978ರಲ್ಲಿ ಅವರ ‘ಸೂಫೀಸ್ ಆಫ್ ಬಿಜಾಪುರ್’ ಪುಸ್ತಕ ಪ್ರಕಟವಾಯಿತು. ಈ ಪುಸ್ತಕದ ಮೊದಲ ಆವೃತ್ತಿಯನ್ನು ಪ್ರಿನ್ಸ್‌ಟನ್ ವಿಶ್ವವಿದ್ಯಾಲಯವು ಪ್ರಕಟಿಸಿತು. ನಂತರ ಈಟನ್ ಭಾರತದ ‘ಡೆಕ್ಕನ್’ ಪ್ರದೇಶವನ್ನು ಕೇಂದ್ರೀಕರಿಸಿಕೊಂಡು ಮಹತ್ವದ ಅಧ್ಯಯನಗಳನ್ನು ಕೈಗೊಂಡರು. ಈಟನ್ ಅವರ ಮುಖ್ಯ ಅಧ್ಯಯನ ಕ್ಷೇತ್ರಗಳೆಂದರೆ; 1. ಆಧುನಿಕಪೂರ್ವ (1000 ಇಂದ 1800 ಇಸ್ವಿಯವರೆಗೆ) ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸ. 2. ಸೂಫಿ ತತ್ವಗಳ ಆಚರಣೆ ಮತ್ತು ಈ ಪಂಥದ ಚಾರಿತ್ರಿಕ ಬೆಳವಣಿಗೆ. 3. ಡೆಕ್ಕನ್ ಪ್ರಾಂತ್ಯದ ಸಾಮಾಜಿಕ ಚರಿತ್ರೆ, 4. ಬಂಗಾಳ ಮತ್ತು ಡೆಕ್ಕನ್ ಪ್ರಾಂತ್ಯದಲ್ಲಿ ಇಸ್ಲಾಮಿನ ಬೆಳವಣಿಗೆ, 5. ಡೆಕ್ಕನ್ ಪ್ರದೇಶದಲ್ಲಿನ ವಾಸ್ತುಶಿಲ್ಪ ಮತ್ತು ಮಿಲಿಟರಿ ತಂತ್ರಜ್ಞಾನದ ಬೆಳವಣಿಗೆ, 6. ಭಾರತದಲ್ಲಿ ಸಂಸ್ಕೃತ ಮತ್ತು ಪರ್ಶಿಯನ್ ಭಾಷೆಗಳ ಸಂಕರ ಪ್ರಕ್ರಿಯೆ.

ಈಟನ್ ಅವರ ಅಧ್ಯಯನಗಳನ್ನು ಸ್ಥೂಲವಾಗಿ ಹೀಗೆ ವಿಶ್ಲೇಷಿಸಬಹುದು; ಮಧ್ಯಕಾಲೀನ ಭಾರತದ ಚರಿತ್ರೆಯಲ್ಲಿ ಹೊಸ ಸಮಾಜವನ್ನು ನಿರ್ಮಿಸಲು ಸೂಫಿಗಳು ವಹಿಸಿದ ಪಾತ್ರವೇನು? ಸೂಫಿ ತತ್ವಗಳ ಕುರಿತು ಜನ ಯಾಕಾಗಿ ಆಕರ್ಷಿತರಾಗುತ್ತಿದ್ದಾರೆ? ಸೂಫಿ ಪಂಥ ಒಂದು ತತ್ವವಾಗಿ ವಿಶಾಲ ಸಮುದಾಯವನ್ನು ಹೇಗೆ ಪ್ರಭಾವಿಸುತ್ತಿದೆ ಎಂಬುದನ್ನು ವಿಶ್ಲೇಷಿಸುವುದಕ್ಕಾಗಿ ಈಟನ್ ‘ಸೂಫೀಸ್ ಆಫ್ ಬಿಜಾಪುರ್’ ಯೋಜನೆಯನ್ನು ಕೈಗೊಂಡಿದ್ದಾರೆ. ಇದರ ಜೊತೆಗೆ ಮುಸ್ಲಿಮ್ ರಾಜರು ಭಾರತದಲ್ಲಿ ಸಾವಿರಾರು ದೇವಾಲಯಗಳನ್ನು ಧ್ವಂಸ ಮಾಡಿದ್ದಾರೆ ಎಂಬ ಸಂಗತಿ ಈಟನ್ ಅವರನ್ನು ಹೆಚ್ಚು ಕಾಡಿದಂತೆ ಕಾಣುತ್ತದೆ. 60 ಸಾವಿರ ಹಿಂದೂ ಮಂದಿರಗಳನ್ನು ಮುಸ್ಲಿಂ ಅರಸರು ಕೆಡವಿ ಹಾಕಿದ್ದಾರೆ ಎಂಬ ಬಲಪಂಥೀಯರ ವದಂತಿಗಳನ್ನು ಈಟನ್ ನಿರಾಕರಿಸುತ್ತಾರೆ. ‘ಟೆಂಪಲ್ ಡೆಸಿಕ್ರೇಷನ್ ಅಂಡ್ ಮುಸ್ಲಿಮ್ ಸ್ಟೇಟ್ಸ್ ಇನ್ ಮಿಡಿವಲ್ ಇಂಡಿಯಾ’ ಎಂಬ ಈಟನ್ ಅವರ ಪುಸ್ತಕವು ಭಾರತದಲ್ಲಿ ಒಂದು ಸಂಚಲನವನ್ನುಂಟುಮಾಡಿದೆ. ದೇವಾಲಯಗಳ ಭಗ್ನಗೊಳಿಸುವ ಮತ್ತು ಅಪವಿತ್ರೀಕರಿಸುವ ಮಧ್ಯಕಾಲೀನ ರಾಜಕಾರಣದ ಬಗ್ಗೆ ಈಟನ್ ವಿವರವಾಗಿ ಬರೆದಿದ್ದಾರೆ. ಜಗತ್ತಿನ ಎಲ್ಲೆಡೆ ಬಹುಸಂಖ್ಯಾತವಾದವು (Majoritarianism) ಚರಿತ್ರೆಯನ್ನು ತನಗೆ ಬೇಕಾದಂತೆ ತಿರುಚುತ್ತಿದೆ. ಚರಿತ್ರೆ ಎಂಬುದು ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದಕ್ಕೆ ಇರುವ ಸವಲತ್ತು ಎಂದು ಬಹುಸಂಖ್ಯಾತವಾದ ಭಾವಿಸಿದೆ. ಚರಿತ್ರೆಯನ್ನು ಅಷ್ಟು ಸುಲಭವಾಗಿ ಯಾರೂ ತಿರುಚಲು ಸಾಧ್ಯವಿಲ್ಲ. ಭಾರತದ ಮಧ್ಯಕಾಲೀನ ಚರಿತ್ರೆಯಲ್ಲಿ ನಡೆದಿದೆ ಎನ್ನಲಾಗುವ ದೇವಾಲಯಗಳ ಭಗ್ನಗೊಳಿಸುವಿಕೆಯನ್ನು ಉತ್ಪ್ರೇಕ್ಷಿತ ಕಥೆಗಳಿಂದ ಕೂಗಿ ಹೇಳಲಾಗುತ್ತಿದೆ. ಆದರೆ ಚರಿತ್ರೆಯನ್ನು ಉತ್ಪ್ರೇಕ್ಷೆಗಳಿಂದ ಬರೆಯಲಾಗುವುದಿಲ್ಲ. 1190ರಿಂದ 1760ರವರೆಗೆ ಇದ್ದ ಮುಸ್ಲಿಮ್ ಆಳ್ವಿಕೆಯ ಸಂದರ್ಭದಲ್ಲಿ ದೇವಾಲಯಗಳನ್ನು ಭಗ್ನಗೊಳಿಸಿರುವ ವಿವರಗಳನ್ನು ಈಟನ್ ಈ ಪುಸ್ತಕದಲ್ಲಿ ನೀಡುತ್ತಾರೆ.

‘ಪವರ್, ಮೆಮೊರಿ, ಆರ್ಕಿಟೆಕ್ಚರ್: ಕಂಟೆಸ್ಟಡ್ ಸೈಟ್ಸ್ ಆನ್ ಇಂಡಿಯಾಸ್ ಡೆಕ್ಕನ್ ಪ್ಲೇಟೂ’ ಎಂಬುದು ಇತ್ತೀಚೆಗೆ ಅವರು ಸಹಲೇಖಕರಾಗಿ ಪ್ರಕಟಿಸಿರುವ ಇನ್ನೊಂದು ಪುಸ್ತಕ. ಈ ಪುಸ್ತಕದಲ್ಲಿ ಈಟನ್ ಮಧ್ಯಕಾಲೀನ ಡೆಕ್ಕನ್ ಪ್ರದೇಶದ ಸಾಮಾಜಿಕ ಚರಿತ್ರೆಯನ್ನು ಕಟ್ಟಿಕೊಡಲು ಪ್ರಯತ್ನಿಸುತ್ತಾರೆ. ಆಧುನಿಕ ಪೂರ್ವ ಡೆಕ್ಕನ್ ಪ್ರದೇಶದ ಬಗ್ಗೆ ಚರಿತ್ರೆಯ ಪಾಠಗಳಲ್ಲಿ ಅನೇಕ ಪೂರ್ವಾಗ್ರಹಗಳನ್ನು ಮತ್ತು ತಪ್ಪುಗಳನ್ನು ಹರಡಲಾಗಿದೆ. ಮುಸ್ಲಿಂ ಆಳ್ವಿಕೆಯನ್ನು ಕರಾಳ ಯುಗ ಎಂದೂ, ಅನ್ಯರ ಆಕ್ರಮಣವೆಂದೂ ಕರೆಯುವ ಪರಿಪಾಠ ಭಾರತದಲ್ಲಿ ಜನಜನಿತವಾಗಿದೆ. ಯಾವುದೇ ಪ್ರದೇಶದ ಅಥವಾ ದೇಶದ ಚರಿತ್ರೆಯನ್ನು ಹೀಗೆ ಅಧ್ಯಯನ ಮಾಡಲು ಸಾಧ್ಯವಿಲ್ಲ. ಚರಿತ್ರೆ ಎಂಬುದು ಆಳುವ ವರ್ಗ ಮತ್ತು ಸಾಮಾನ್ಯ ಜನರ ಬದುಕಿನ ಭಾಗವಾಗಿ ಅನಾವರಣವಾಗುತ್ತದೆ. ಜನಸಾಮಾನ್ಯರು ಚರಿತ್ರೆಯನ್ನು ನಿರ್ಮಾಣ ಮಾಡುತ್ತಾರೆ. ಡೆಕ್ಕನ್ ಪ್ರದೇಶದ ಮಧ್ಯಕಾಲೀನ ಮತ್ತು ಆಧುನಿಕಪೂರ್ವ ಕಾಲದ ಚರಿತ್ರೆಯು ನಾವೆಲ್ಲ ಅರ್ಥಮಾಡಿಕೊಂಡಂತೆ ಸರಳವಾಗಿಲ್ಲ. ಈ ಕಾಲಘಟ್ಟಗಳಲ್ಲಿ ಡೆಕ್ಕನ್ ಪ್ರದೇಶದ ಜನಸಾಮಾನ್ಯರ ಬದುಕು ಮತ್ತು ಆಳುವ ವರ್ಗಗಳ ನಡೆಗಳು ಅನೇಕ ಜಟಿಲ ಸಂದರ್ಭಗಳನ್ನು ಹಾದುಬಂದಿವೆ. ಇದನ್ನು ನಾವು ಸೂಕ್ಷ್ಮವಾಗಿ ನೋಡಬೇಕು. ಈ ಕಾಲಘಟ್ಟದ ನಡುವೆ ಸಂಭವಿಸಿರುವ ಅನೇಕ ವಿದ್ಯಮಾನಗಳನ್ನು ಕೋಮುವಾದಿ ದೃಷ್ಟಿಕೋನದ ಮೂಲಕ ಅಧ್ಯಯನ ಮಾಡಲಾಗಿದೆ. ಆದರೆ ಇದು ಸರಿಯಾದ ಕ್ರಮವಲ್ಲ. ಈ ಕಾಲಘಟ್ಟದ ಚರಿತ್ರೆಗೆ ಬೇರೆಯದೇ ಆಯಾಮವಿದೆ ಎಂಬುದನ್ನು ಈಟನ್ ವಿವರಿಸುತ್ತಾರೆ.

‘ಇಂಡಿಯಾ ಇನ್ ಪರ್ಶಿನೇಟ್ ಏಜ್’ ಪುಸ್ತಕದಲ್ಲಿ ಭಾರತದಲ್ಲಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಕರ ಹೇಗೆ ಸಾಧ್ಯವಾಗಿದೆ ಎಂಬುದನ್ನು ಈಟನ್ ಅನಾವರಣ ಮಾಡುತ್ತಾರೆ. ಸಂಸ್ಕೃತ ಭಾಷಾ ಪರಿಸರದಲ್ಲಿ ಪರ್ಶಿಯನ್ ಭಾಷೆಯು ಬೆರೆತುಹೋಗಿ ಒಂದು ಭಾಷಾ ಸಂಕರತೆ ಹೇಗೆ ಸಾಧ್ಯವಾಯಿತು? ಭಾರತದ ಜಟಿಲ ಸಾಮಾಜಿಕ ಪರಿಸರದಲ್ಲಿ ಈ ವಿರಾಟ ಸಂಕರತೆಗೆ ಕಾರಣವಾದ ಚಾರಿತ್ರಿಕ ಸಂಗತಿಗಳಾವವು ಎಂಬುದನ್ನು ಈಟನ್ ವಿಶ್ಲೇಷಿಸುತ್ತಾರೆ. ಈಟನ್ ಅವರು ಇಂದ್ರಾಣಿ ಚಟರ್ಜಿಯವರ ಜೊತೆಗೂಡಿ ಸಂಪಾದಿಸಿರುವ ಇನ್ನೊಂದು ಮಹತ್ವದ ಪುಸ್ತಕ ‘ಸ್ಲೇವರಿ ಅಂಡ್ ಸೌತ್ ಏಶಿಯನ್ ಹಿಸ್ಟರಿ’. ವರ್ಣಾಶ್ರಮ ಪ್ರಣೀತ ಭಾರತದಲ್ಲಿ ಗುಲಾಮಗಿರಿಯನ್ನು ಶಾಸ್ತ್ರಬದ್ಧವಾಗಿ ಸಮರ್ಥಿಸಲಾಗುತ್ತದೆ. ವರ್ಣಾಶ್ರಮ ಪದ್ಧತಿಯಲ್ಲಿ ಗುಲಾಮಗಿರಿ ಎನ್ನುವುದು ಒಂದು ಸಾಮಾನ್ಯ ವ್ಯವಸ್ಥೆ ಎಂದು ಶಾಸ್ತ್ರಗ್ರಂಥಗಳು ಹೇಳುತ್ತವೆ. ಪ್ರಭುತ್ವಗಳು ಗುಲಾಮಗಿರಿಯನ್ನು ಹುಟ್ಟುಹಾಕಿದ್ದಲ್ಲದೆ ಅದನ್ನು ವಿವಿಧ ರೂಪಗಳಲ್ಲಿ ಸಾಕಿಕೊಂಡು ಬಂದಿವೆ. ಇದು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಗುಲಾಮಗಿರಿ ಎನ್ನುವುದು ಜಾಗತಿಕ ವಿದ್ಯಮಾನ. ಊಳಿಗಮಾನ್ಯ ವ್ಯವಸ್ಥೆಯ ಅಸ್ತಿತ್ವ ಗುಲಾಮಗಿರಿಯ ಮೇಲೆ ನಿಂತಿದೆ. ಆಧುನಿಕಪೂರ್ವ ಡೆಕ್ಕನ್ ಪ್ರದೇಶದಲ್ಲಿ ಗುಲಾಮಗಿರಿ ಒಂದು ಸಮಾಜೋರಾಜಕೀಯ ವಿದ್ಯಮಾನವಾಗಿ ಹೇಗೆ ಬೆಳೆಯಿತು ಎಂಬುದರ ವಿಶ್ಲೇಷಣೆ ಈ ಪುಸ್ತಕದಲ್ಲಿನ ಬರಹಗಳಲ್ಲಿದೆ.

ಮತಾಂತರವನ್ನು ಕುರಿತು ಈಟನ್ ಮಾಡಿರುವ ಅಧ್ಯಯನಗಳು ನನ್ನನ್ನು ವಿಶೇಷವಾಗಿ ಸೆಳೆದಿವೆ. ಅದರಲ್ಲೂ ಕ್ರಿಶ್ಚಿಯನ್ ಮಿಶಿನರಿಗಳು ಮತ್ತು ಮೌಲ್ವಿಗಳು ಮಾಡಿರುವ ಮತಾಂತರದ ಕುರಿತು ಈಟನ್ ವಿವರವಾಗಿ ಬರೆದಿದ್ದಾರೆ. ಮತಾಂತರದ ಕುರಿತು ಬೇಕಾಬಿಟ್ಟಿಯಾಗಿ ಹಬ್ಬಿರುವ ಸುಳ್ಳುಗಳಿಗೆ ಈಟನ್ ತಮ್ಮ ಅಧ್ಯಯನದ ಮೂಲಕ ಸಾಕ್ಷಿ ಸಮೇತ ಉತ್ತರಗಳನ್ನು ನೀಡಿದ್ದಾರೆ. ‘ವಸಾಹತು ಕಾಲಘಟ್ಟದಲ್ಲಿ ಈಶಾನ್ಯ ಭಾರತದ ಹಲವು ಕಡೆ ಮಿಶನರಿಗಳು ಸಕ್ರಿಯವಾಗಿದ್ದವು. ಒರಿಸ್ಸಾ, ಅಸ್ಸಾಂ, ಮಣಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್ ಮುಂತಾದ ಭಾಗಗಳಲ್ಲಿ ಮಿಶನರಿಗಳು ಆದಿವಾಸಿಗಳ ಸಬಲೀಕರಣಕ್ಕಾಗಿ ಶ್ರಮಿಸಿದರು. ಆದರೆ, ನಾವೆಲ್ಲ ಭಾವಿಸಿರುವಂತೆ ನಾಗಾಲ್ಯಾಂಡ್‌ಅನ್ನೂ ಒಳಗೊಂಡಂತೆ ಬಹುತೇಕ ಈಶಾನ್ಯ ಪ್ರದೇಶಗಳ ಆದಿವಾಸಿಗಳನ್ನು ಮಿಶಿನರಿಗಳು ಸಾಮೂಹಿಕ ಮತಾಂತರಕ್ಕೆ ಒಳಪಡಿಸಲಿಲ್ಲ. ನಾಗಾಲ್ಯಾಂಡ್‌ನಲ್ಲಿ ಮತಾಂತರ ಹೆಚ್ಚಾಗಿ ನಡೆದದ್ದು 1947ರ ನಂತರ.’ ರಿಚರ್ಡ್ ಈಟನ್ ತಾವು ಸುತ್ತಾಡಿ ಅಧ್ಯಯನ ಮಾಡಿದ ಈಶಾನ್ಯ ಭಾರತದ ಕುರಿತು ಸುದೀರ್ಘವಾಗಿ ವಿವರಿಸಿದರು. ‘ಜರ್ನಲ್ ಆಫ್ ವರ್ಲ್ಡ್ ಹಿಸ್ಟರಿ’ ನಿಯತಕಾಲಿಕೆಯಲ್ಲಿ ಪ್ರಕಟವಾದ ಈ ಲೇಖನವನ್ನು ನಾನು ಈ ಹಿಂದೆ ಓದಿದ್ದೆ. ಆದರೆ ಈ ಕುರಿತು ನನ್ನಲ್ಲಿದ್ದ ಹಲವು ಪ್ರಶ್ನೆಗಳಿಗೆ ಈಟನ್ ಮೂರು ದಿನಗಳ ಚರ್ಚೆಯ ಸಂದರ್ಭದಲ್ಲಿ ವಿವರವಾಗಿ ಉತ್ತರಿಸಿದರು. ‘ವಸಾಹತು ಕಾಲದಲ್ಲಿ ಈಶಾನ್ಯ ಭಾರತದ ಆದಿವಾಸಿಗಳನ್ನು ಮಿಶನರಿಗಳು ಸಾಮೂಹಿಕ ಮತಾಂತರಕ್ಕೆ ಒಳಪಡಿಸಿದರು’ ಎಂಬುದು ಒಂದು ಮಿಥ್. ವಸಾಹತು ಕಾಲದಲ್ಲಿ ಇಂಡಿಯಾದ ಚರಿತ್ರೆ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ವಿಶ್ಲೇಷಿಸಲು ಯುರೋಪಿನವರು ಬಳಸಿದ ಮಾನದಂಡಗಳು ಇಂದಿಗೂ ನಿಮ್ಮಲ್ಲಿ ಜೀವಂತವಾಗಿವೆ. ಕಳೆದ ಶತಮಾನದ ಎಂಬತ್ತರ ದಶಕದಲ್ಲಿ ಸಬಾಲ್ಟ್ರನ್ ಚರಿತ್ರೆ ರಚನಾಕ್ರಮ ಬರುವವರೆಗೂ ಭಾರತದ ಚರಿತ್ರೆಯನ್ನು ಮತೀಯ ಪೂರ್ವಾಗ್ರಹಗಳು ರೂಪಿಸುತ್ತಿದ್ದವು. ಡಿ. ಡಿ. ಕೊಸಾಂಬಿ, ದೇವಿಪ್ರಸಾದ್, ರೋಮಿಲಾ ಥಾಪರ್, ಇರ್ಫಾನ್ ಹಬೀಬ್ ಅವರಂತಹ ಚರಿತ್ರಾಕಾರರು ಮುಖ್ಯವಾಹಿನಿಯ ಶೈಕ್ಷಣಿಕ ವಲಯಕ್ಕೆ ಅಪಥ್ಯವಾಗಿದ್ದರು. ಇವರೆಲ್ಲ ಮಾರ್ಕ್ಸ್‌ವಾದಿಗಳಾಗಿರುವ ಕಾರಣಕ್ಕಾಗಿ ಅವರನ್ನು ದೂರೀಕರಿಸಲಾಗಿತ್ತು. ಮಾರ್ಕ್ಸ್‌ವಾದ ಎಂಬ ಪದವನ್ನು ಭಾರತದಲ್ಲಿ ನಕಾರಾತ್ಮಕ ಅರ್ಥದಲ್ಲಿ ಬಳಸಲಾಗುತ್ತದೆ. ಭಾರತದಲ್ಲಿ ಮಾರ್ಕ್ಸ್‌ವಾದಿಗಳನ್ನು ನಿಷೇಧಿತ ವಲಯಕ್ಕೆ ಸೇರಬೇಕಾದವರು ಎಂಬ ಸಂಕಥನವನ್ನು ಕಟ್ಟಲಾಗಿದೆ’. ಹೀಗೆ ಈಟನ್ ಭಾರತದ ಕುರಿತ ಅವರ ಆಳವಾದ ಗ್ರಹಿಕೆಗಳನ್ನು ನಮ್ಮ ಮುಂದೆ ತೆರೆದಿಟ್ಟರು. ತೀವ್ರವಾದ ಓದು, ಆಳವಾದ ಕ್ಷೇತ್ರಕಾರ್ಯ ಮತ್ತು ತಮ್ಮ ಅಕಾಡೆಮಿಕ್ ನಿಲುವುಗಳ ಕುರಿತು ಈಟನ್ ಅವರಿಗೆ ಇರುವ ಬದ್ಧತೆಯನ್ನು ಕಂಡು ನಾನು ಬೆರಗಾಗಿದ್ದೆ. ಮಿಷಿಗನ್ ರಾಜ್ಯದ ಹೂರೋನ್ ಮ್ಯಾನಿಸ್ಟೀ ರಾಷ್ಟ್ರೀಯ ಅರಣ್ಯದಲ್ಲಿನ (Huron Manistee National Forest) ಅವರ ಸುಂದರ ಕುಟೀರದಲ್ಲಿ ಮೂರು ದಿನಗಳು ಹೇಗೆ ಸರಿದು ಹೋದವೆಂಬುದು ಗೊತ್ತಾಗಲಿಲ್ಲ. ಅಮೆರಿಕದಲ್ಲಿ ಹುಟ್ಟಿ ಬೆಳೆದ ಈ ಇತಿಹಾಸಕಾರ ಭಾರತವನ್ನು, ಅದರಲ್ಲೂ ಮಧ್ಯಕಾಲೀನ ಭಾರತದ ಚರಿತ್ರೆಯನ್ನು ಯಾಕೆ ಅಧ್ಯಯನ ಮಾಡಿದರು? ಅದರಲ್ಲೂ ಭಾರತದ ಮಧ್ಯಕಾಲೀನ ಚರಿತ್ರೆಯನ್ನು ವಿಶ್ಲೇಷಿಸಲು ಈಟನ್ ಬಳಸಿದ ಆಕರಗಳು ಮತ್ತು ಅನುಸರಿಸಿದ ಶೈಕ್ಷಣಿಕ ವಿಧಾನ ಮತ್ತು ಯಾವುದು? ಎಂಬುದರ ಕುರಿತು ನನಗೆ ಕುತೂಹಲಗಳಿದ್ದವು. ಈ ಎಲ್ಲಾ ಪ್ರಶ್ನೆಗಳಿಗೆ ಈಟನ್ ಉತ್ತರಿಸಿದ್ದಾರೆ. ಅವರ ಜೊತೆಗೆ ಮೂರು ದಿನಗಳ ಕಾಲ ನಡೆದ ಮಾತುಕತೆಯನ್ನು ಇಲ್ಲಿ ಸಂಗ್ರಹಿಸಿ ಕೊಟ್ಟಿದ್ದೇನೆ.

ಸಂದರ್ಶನ

ಪ್ರಶ್ನೆ: ಭಾರತಕ್ಕೆ ಬಂದ ನೀವು ಸೂಫಿಗಳನ್ನು ಯಾವ ಕಾರಣಗಳಿಗಾಗಿ ಅಧ್ಯಯನ ಮಾಡಿದಿರಿ ಮತ್ತು ಈ ಅಧ್ಯಯನಕ್ಕಾಗಿ ಬಿಜಾಪುರದ ಸೂಫಿಗಳನ್ನೇ ಏಕೆ ಆಯ್ಕೆ ಮಾಡಿಕೊಂಡಿರಿ?

ಈಟನ್: ಒಳ್ಳೆಯ ಪ್ರಶ್ನೆ. 1960ರಲ್ಲಿ ನಾನು ಇರಾನ್ ದೇಶದಿಂದ ಮೊದಲ ಬಾರಿಗೆ ಭಾರತಕ್ಕೆ ಬಂದೆ. ಮನೆಯಲ್ಲಿ ನನ್ನ ತಂದೆ ಮತ್ತು ತಾತ ಪರ್ಶಿಯಾ ಮತ್ತು ಮಧ್ಯಪ್ರಾಚ್ಯದಲ್ಲಿನ ಸೂಫಿಗಳ ಕುರಿತು ಆಗಾಗ ಚರ್ಚೆ ಮಾಡುತ್ತಿದ್ದರು. ನನ್ನ ತಂದೆ ಮತ್ತು ತಾತನಿಗೆ ಮುಖ್ಯವಾಹಿನಿಯ ಧಾರ್ಮಿಕ ತತ್ವಗಳಿಗಿಂತ ಅನುಭಾವಿ ಪಂಥಗಳ ಚರಿತ್ರೆಯ ಕುರಿತು ವಿಶೇಷ ಒಲವಿತ್ತು. ಪರ್ಶಿಯನ್ ಸೂಫಿ ಪಂಥದ ಕುರಿತು ನಾನು ಮೊದಲ ಬಾರಿಗೆ ವಿವರಗಳನ್ನು ಪಡೆದಿದ್ದು ಈ ಚರ್ಚೆಗಳಿಂದ. ಚರಿತ್ರೆಯ ವಿದ್ಯಾರ್ಥಿಯಾಗಿದ್ದ ನಾನು ಸಹಜವಾಗಿಯೇ ಸೂಫಿ ಪಂಥದ ಅಧ್ಯಯನಕ್ಕೆ ಮುಂದಾದೆ. ಇರಾನಿನಲ್ಲಿ ನಾನು ನನ್ನ ತಂದೆಯ ಜೊತೆಗೆ ನೆಲೆಸಿದ್ದ ಸಂದರ್ಭದಲ್ಲಿ ಪೂರ್ವ ಅಜರ್‌ಬೈಜಾನ್ ಪ್ರಾಂತ್ಯದ ರಾಜಧಾನಿಯಾದ ತಬ್ರಿಜ್‌ನಲ್ಲಿ ಇಸ್ಲಾಮಿಕ್ ಕ್ರಾಂತಿಗೂ ಮುನ್ನ ಶಾಂತಿಪಾಲನಾ ಪಡೆಗೆ ನನ್ನನ್ನು ಸೈನಿಕನನ್ನಾಗಿ ಆಯ್ಕೆ ಮಾಡಲಾಗಿತ್ತು. ನಂತರ ನಾನು ಅಜರ್‌ಬೈಜಾನಿಗೆ ಹೋಗಿ ಕೆಲದಿನಗಳ ಕಾಲ ನೆಲೆಸಿದೆ. ಅಜರ್‌ಬೈಜಾನ್ ಸೂಫಿಗಳ ತವರೂರು. ಅಲ್ಲಿ ಸೂಫಿ ಚಿಂತನೆಗಳಿಗೆ ಎಲ್ಲಿಲ್ಲದ ಮಹತ್ವವಿದೆ. ಆ ಪರಿಸರದಲ್ಲಿ ನಾನು ಸೂಫಿಗಳ ಕುರಿತು ಅಧ್ಯಯನ ಮಾಡಲು ಸಾಧ್ಯವಾಯಿತು. ಅಜರ್‌ಬೈಜಾನಿನ ತಿರುಗಾಟವೂ ಸಹ ಈ ಅಧ್ಯಯನವನ್ನು ಕೈಗೊಳ್ಳಲು ಪ್ರೇರಣೆ ನೀಡಿದೆ.

ಭಾರತದಲ್ಲಿ ಸೂಫಿ ಪಂಥ ಪಡೆದ ಮಹತ್ವ ಮತ್ತು ಅದರ ತಾತ್ವಿಕ ಆಯಾಮಗಳನ್ನು ತಿಳಿದುಕೊಳ್ಳುವ ಹಂಬಲದಿಂದ ನಾನು ಭಾರತಕ್ಕೆ ಬಂದೆ. ಭಾರತದಲ್ಲಿ ನಾನು ಮೊದಲು ಹೈದರಾಬಾದ್‌ಗೆ ಭೇಟಿ ಕೊಟ್ಟೆ. ಭಾರತದಲ್ಲಿನ ಸೂಫಿ ಪಂಥವನ್ನು ಅಧ್ಯಯನ ಮಾಡಲು ಬೇಕಾದ ಮುಖ್ಯವಾದ ಗ್ರಂಥಗಳು ನನಗೆ ಸಿಕ್ಕಿದ್ದು ಹೈದರಾಬಾದ್‌ನಲ್ಲಿ. ಹೈದರಾಬಾದಿನ ಸಲಾರಜಂಗ್ ಮ್ಯೂಸಿಯಮ್, ಅಲ್ಲಿನ ಆರ್ಕೈವ್, ಗ್ರಂಥಾಲಯಗಳು ಮತ್ತು ಅಲ್ಲಿನ ಸ್ಥಳೀಯ ವಿದ್ವಾಂಸರನ್ನು ಭೇಟಿ ಮಾಡಿದೆ. ಹೈದರಾಬಾದಿನ ಪರಿಸರ, ಗೋಲ್ಕೊಂಡ ಕೋಟೆ, ಅಲ್ಲಿನ ವಾಸ್ತುಶಿಲ್ಪ ಮತ್ತು ಶೈಕ್ಷಣಿಕ ವಾತಾವರಣ ನನಗೆ ಇಷ್ಟವಾಯಿತು. ಹಾಗಾಗಿ ನಾನು ಹೈದರಾಬಾದನ್ನು ಕೇಂದ್ರವಾಗಿಟ್ಟುಕೊಂಡೆ. ಹೈದರಾಬಾದಿನಲ್ಲಿ ಸೂಫಿಗಳ ಕುರಿತ ಪರ್ಶಿಯನ್ ಭಾಷೆಯಲ್ಲಿದ್ದ ಪ್ರಾಚೀನ ಗ್ರಂಥಗಳು ನನಗೆ ಸಿಕ್ಕವು. ಅಲ್ಲಿನ ಪರ್ಶಿಯನ್ ಭಾಷಾ ವಿದ್ವಾಂಸರು ತಮ್ಮಲ್ಲಿದ್ದ ಪ್ರಾಚೀನ ಗ್ರಂಥಗಳನ್ನು ನನಗೆ ನೀಡಿ ಉಪಕರಿಸಿದರು. ಹೈದರಾಬಾದಿನ ಗ್ರಂಥಾಲಯಗಳಲ್ಲಿ ನಾನು ಪರ್ಶಿಯನ್ ಹಸ್ತಪ್ರತಿಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ನನ್ನನ್ನು ವಿಶೇಷವಾಗಿ ಆಕರ್ಷಿಸಿದ್ದು ರೌಜತ್ ಅಲ್-ಔಲಿಯ-ಇ ಬಿಜಾಪುರ್ (Rauzat al-Auliya-I Bijapur.) ಎಂಬ ಹಸ್ತಪ್ರತಿ. ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಬರೆಯಲ್ಪಟ್ಟ ಈ ಹಸ್ತಪ್ರತಿಯ ಮೂಲ ಹೆಸರು ತಝ್ಕಿರಾ-ಇ ಔಲಿಯಾ-ಇ ದರ್ ಆಲ್-ಜಾಫರ್ ಬಿಜಾಪುರ್ (Tazkira-yi Auliya-i Dar al-Zafar Bijapur.). ಇದು ಬಿಜಾಪುರದ ಸೂಫಿಗಳ ಬದುಕಿನ ವಿವರಗಳನ್ನೊಳಗೊಂಡ (Biographical Notes) ಹಸ್ತಪ್ರತಿಯಾಗಿತ್ತು. ಇದರ ಕರ್ತೃ ಮುಹಮ್ಮದ್ ಇಬ್ರಾಹಿಂ ಜುಬೈರಿ. ಇದು ಬಿಜಾಪುರದ ಸೂಫಿಗಳ ಜೀವನ ವಿವರಗಳನ್ನು ಒಳಗೊಂಡಿದ್ದ ಏಕೈಕ ಹಸ್ತಪ್ರತಿಯಾಗಿತ್ತು. ಈ ಹಸ್ತಪ್ರತಿಯನ್ನು ಓದಿದ ಮೇಲೆ ನನಗೆ ಬಿಜಾಪುರದ ಸೂಫಿಗಳನ್ನು ಅಧ್ಯಯನ ಮಾಡುವ ಉತ್ಸಾಹ ಮೂಡಿತು.

ಪ್ರಶ್ನೆ: ಸೂಫಿ ಪಂಥವನ್ನು ಯಾಕೆ ಅಧ್ಯಯನ ಮಾಡಬೇಕೆನ್ನಿಸಿತು?

ಈಟನ್: ಇದು ಬಹಳ ಸೂಕ್ಷ್ಮವಾದ ಪ್ರಶ್ನೆ. ಯಾವುದೇ ಇತಿಹಾಸಕಾರನನ್ನು ಚರಿತ್ರೆಯಲ್ಲಿನ ವೈಚಿತ್ರ್ಯಗಳು ಬಹಳ ಆಕರ್ಷಿಸುತ್ತವೆ. ನಿರ್ದಿಷ್ಟ ಪ್ರದೇಶದ ಜನಸಮುದಾಯಗಳು, ರಾಜಕಾರಣ, ಧರ್ಮ ಮತ್ತು ಪರಂಪರೆಗಳನ್ನು ಹೇಗೆ ಅನುಸಂಧಾನ ಮಾಡುತ್ತಾರೆ ಎಂಬ ಸಂಗತಿಗಳು ಚರಿತ್ರಾಕಾರರನ್ನು ಸದಾ ಪ್ರೇರೇಪಿಸುತ್ತವೆ. ನಾನು ನೆಲೆಸಿದ್ದ ಪ್ರದೇಶದಲ್ಲಿ ಇಸ್ಲಾಮ್ ಒಂದು ಪ್ರಭಾವಿ ಧರ್ಮವಾಗಿತ್ತು. ಅಂತಹ ಪ್ರದೇಶದಲ್ಲಿ ಸೂಫಿ ಪಂಥವೂ ನೆಲೆಗೊಂಡಿತ್ತು. ಜನ ಇಸ್ಲಾಮ್‌ಗೆ ಮತಾಂತರವಾಗುತ್ತಿದ್ದರು. ಸೂಫಿ ತತ್ವಗಳನ್ನೂ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಯಾಕಾಗಿ ಜನ ಇಸ್ಲಾಂಗೆ ಮತಾಂತರವಾಗಲು ಬಯಸುತ್ತಿದ್ದಾರೆ? ಮತಾಂತರದ ಹಿಂದಿರುವ ನಿಜವಾದ ಉದ್ದೇಶವೇನು ಎಂಬುದನ್ನು ಅಧ್ಯಯನ ಮಾಡಬೇಕು ಎನ್ನಿಸಿತು. ಅದರಲ್ಲೂ ಸೂಫಿ ತತ್ವಗಳ ಕುರಿತು ಜನ ಯಾಕಾಗಿ ಆಕರ್ಷಿತರಾಗುತ್ತಿದ್ದಾರೆ? ಸೂಫಿ ಪಂಥ ಒಂದು ತತ್ವವಾಗಿ ವಿಶಾಲ ಸಮುದಾಯವನ್ನು ಹೇಗೆ ಪ್ರಭಾವಿಸುತ್ತಿದೆ ಎಂಬುದನ್ನು ನಾನು ಅರ್ಥ ಮಾಡಿಕೊಳ್ಳಬೇಕಿತ್ತು. ಮಧ್ಯಪ್ರಾಚ್ಯದ ತುಂಬ ಹರಡಿದ್ದ ಇಸ್ಲಾಂ ಒಂದು ಪ್ರಬಲ ಧರ್ಮವಾಗಿ ಬೆಳೆದಿತ್ತು. ಅಂತಹ ಧಾರ್ಮಿಕ ಪರಿಸರದಲ್ಲಿ ಒಂದು ಪರ್ಯಾಯ ಅಧ್ಯಾತ್ಮವಾಗಿ ಬೆಳೆದ ಸೂಫಿ ತತ್ವ ಚಿಂತನೆಯ ಕುರಿತು ನನಗೆ ಕುತೂಹಲಗಳಿದ್ದವು. ಇದಕ್ಕಾಗಿ ನಾನು ಪಶ್ಚಿಮ ಪಂಜಾಬ್, ಅಂದರೆ ಪಾಕಿಸ್ತಾನಕ್ಕೆ ಹೋದೆ, 1976ರಲ್ಲಿ ಲಾಹೋರಿನಲ್ಲಿ ಅನೇಕ ದಿನಗಳ ಕಾಲ ನೆಲೆಸಿದೆ. ಲಾಹೋರಿನಲ್ಲಿ ಬಾಬಾ ಫರೀದ್ ಕುರಿತು ಅಧ್ಯಯನ ಮಾಡಿದೆ. ನಂತರ 1981ರಲ್ಲಿ ಪೂರ್ವಬಂಗಾಳಕ್ಕೆ ಬಂದೆ. ಕೊಲ್ಕತ್ತಾದಲ್ಲಿ ಕೆಲದಿನಗಳಿದ್ದೆ. ಕೊಲ್ಕತ್ತಾ ನನಗೆ ತುಂಬಾ ಪ್ರಿಯವಾದ ಜಾಗ, ತುಂಬಾ ಅದ್ಭುತ ನಗರವದು. ಆಗ ಕೊಲ್ಕತ್ತಾ ಭಾರತಕ್ಕೆ ಮಾತ್ರ ಕೇಂದ್ರ ಸ್ಥಾನವಾಗಿರಲಿಲ್ಲ, ಅದು ಪ್ರಪಂಚದ ಬೌದ್ಧಿಕ ಚಟುವಟಿಕೆಗಳ ಕೇಂದ್ರವಾಗಿತ್ತು. ಮುಂದೆ ಢಾಕಾಕ್ಕೆ ಪ್ರಯಾಣ ಮಾಡಿದೆ; ಅಲ್ಲಿ ಎರಡು ವರ್ಷಗಳ ಕಾಲ ಅಧ್ಯಯನ ಮಾಡಿದೆ. ನಂತರ ನಾನು ಹೈದರಾಬಾದಿಗೆ ಬಂದು ಸೂಫಿಗಳನ್ನು ಅಧ್ಯಯನ ಮಾಡುವ ನಿರ್ಧಾರ ಮಾಡಿದೆ. ಸೂಫಿ ಪಂಥವನ್ನು ಅಧ್ಯಯನ ಮಾಡಲು ನನಗೆ ಒಂದು ಮಹತ್ವದ ಸ್ಥಳೀಯ ಕೇಂದ್ರದ ಅಗತ್ಯವಿತ್ತು. ಆ ಕೇಂದ್ರವನ್ನು ಮುಖ್ಯವಾಗಿಟ್ಟುಕೊಂಡು (Case Study) ಸೂಫಿ ದರ್ಶನವನ್ನು ಅಧ್ಯಯನ ಮಾಡುವ ನಿರ್ಧಾರ ಮಾಡಿದೆ. ಅಂತಹ ಒಂದು ಕೇಂದ್ರ ಬಿಜಾಪುರವಾಗಿತ್ತು. ಹೈದರಾಬಾದಿನಲ್ಲಿ ಸಿಕ್ಕ ಪರ್ಶಿಯನ್ ಗ್ರಂಥಗಳು ಮತ್ತು ಹಸ್ತಪ್ರತಿಗಳಲ್ಲಿ ಬಿಜಾಪುರದ ಸೂಫಿಗಳ ಕುರಿತು ಅಪರೂಪದ ವಿವರಗಳು ಸಿಕ್ಕವು. ಈ ಕಾರಣದಿಂದ ನಾನು ಸೂಫಿಗಳ ಅಧ್ಯಯನಕ್ಕಾಗಿ ಬಿಜಾಪುರವನ್ನೇ ಆಯ್ಕೆ ಮಾಡಿಕೊಂಡೆ.

ಪ್ರಶ್ನೆ: ಬಿಜಾಪುರದಲ್ಲಿ ನೀವು ಎಷ್ಟು ದಿನಗಳ ಕಾಲ ನೆಲೆಸಿದ್ದಿರಿ?

ಈಟನ್: ನಾನು ಬಹಳ ದಿನ ಬಿಜಾಪುರದಲ್ಲಿ ಇರಲಿಲ್ಲ. ಹೈದರಾಬಾದಿನಿಂದ ಸೊಲ್ಲಾಪುರವನ್ನು ಹಾದು ಅಲ್ಲಿಂದ ಬಿಜಾಪುರಕ್ಕೆ ರೇಲ್ವೇ ಮೂಲಕ ಪ್ರಯಾಣ ಮಾಡುತ್ತಿದ್ದೆ. ಕ್ಷೇತ್ರಕಾರ್ಯ ಮಾಡುವ ಸಂದರ್ಭದಲ್ಲಿ ಬಿಜಾಪುರದಲ್ಲಿದ್ದುಕೊಂಡು ಸುತ್ತಲ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೆ. ಬಿಜಾಪುರ ಆಗ ಸಣ್ಣ ಪಟ್ಟಣ. ಆಗ ಅಲ್ಲಿನ ಸ್ಮಾರಕಗಳ ಸ್ಥಿತಿ ಶೋಚನೀಯವಾಗಿತ್ತು. ಹಲವು ಸ್ಮಾರಕಗಳು ಹಾಳಾಗಿದ್ದವು. ಅವುಗಳ ಕುರಿತು ಯಾರಿಗೂ ಕಾಳಜಿ ಇರಲಿಲ್ಲ. ವಾಹನ ಸೌಲಭ್ಯಗಳಿರಲಿಲ್ಲ, ಹೆಚ್ಚಾಗಿ ಅಲ್ಲಿ ನಾನು ಬೈಸಿಕಲ್‌ನಲ್ಲಿ ತಿರುಗಾಡಿದೆ. ಅಲ್ಲಿನ ದರ್ಗಾಗಳಿಗೆ, ಸೂಫಿಗಳ ಗದ್ದುಗೆಗಳಿಗೆ ಭೇಟಿ ನೀಡಿದೆ. ಆದರೆ ನಾನು ಹೆಚ್ಚು ನೆಲೆಸಿದ್ದು ಹೈದರಾಬಾದಿನಲ್ಲಿ.

ಪ್ರಶ್ನೆ: ‘ಬಿಜಾಪುರದ ಸೂಫಿಗಳು’ ತುಂಬಾ ಮಹತ್ವದ ಕೃತಿ. ಇಡೀ ಕೃತಿಯಲ್ಲಿ ನೀವು ಅತ್ಯಂತ ಅಪರೂಪದ ವಿವರಗಳನ್ನು ನೀಡುತ್ತೀರಿ. ಆದರೆ ನಿಮ್ಮ ಕೃತಿಯಲ್ಲಿ ಸೂಫಿಸಮ್ಮನ್ನು ಇಸ್ಲಾಂನ ‘ಸುಧಾರಣಾವಾದಿ ಪಂಥ’ ಎಂಬ ಅರ್ಥದಲ್ಲಿ ವಿಶ್ಲೇಷಣೆ ಮಾಡಿದಂತಿದೆ. ಈ ಕುರಿತು ನಿಮ್ಮ ಅಭಿಪ್ರಾಯವೇನು?

ಈಟನ್: ಹೌದಾ, ನಿಮಗೆ ಹಾಗನ್ನಿಸಿತಾ….? ನಿಜ, ಸೂಫಿಸಮ್ ಒಂದು ಸುಧಾರಣಾವಾದಿ ಪಂಥವಲ್ಲ. ಸೂಫಿಗಳು ಬೇರೆಯದೇ ತತ್ವವನ್ನು ರೂಪಿಸಲು ಪ್ರಯತ್ನಿಸಿದರು ಮತ್ತು ಈ ಪ್ರಯತ್ನದಲ್ಲಿ ಅವರು ಯಶಸ್ವಿಯಾದರು. ಸೂಫಿಗಳಿಗೆ ಅಧ್ಯಾತ್ಮ ಒಂದು ನೆಪ ಮಾತ್ರ. ಅವರು ಬೇರೆಯದ್ದೇ ಆದ ಹೊಸ ಸಮಾಜವನ್ನು ನಿರ್ಮಿಸಲು ಮುಂದಾದರು. ಸಮಾಜವನ್ನು ಬದಲಾಯಿಸಲು ಪ್ರಯತ್ನಿಸಿದರು. ಸಮಾಜವನ್ನು ನಿಯಂತ್ರಿಸುವ ಕರ್ಮಠ ವ್ಯವಸ್ಥೆಯನ್ನು ನಿರಾಕರಿಸಿದರು. ಉಳಿದ ಧಾರ್ಮಿಕ ಪರಂಪರೆಗಳ ಆಲೋಚನೆಗಳನ್ನು ಸೂಫಿಗಳು ಒಪ್ಪಲಿಲ್ಲ. ಹಾಗೆಯೇ ಈ ಸೂಫಿಸಮ್ ಸಹ ಒಂದೇ ತೆರನಾಗಿಲ್ಲ. ಪರ್ಶಿಯಾದ ಸೂಫೀ ಪಂಥಕ್ಕೂ ಭಾರತದ ಸೂಫಿ ಚಿಂತನೆಗಳಿಗೂ ವ್ಯತ್ಯಾಸಗಳಿವೆ. ಭಾರತದಲ್ಲೂ ಸೂಫಿಸಮ್ ಏಕಾಕಾರದಲ್ಲಿಲ್ಲ. ಭಾರತದಲ್ಲಿ ಎರಡು ಬಗೆಯ ಸೂಫಿ ಸಾಹಿತ್ಯವನ್ನು ನಾವು ನೋಡುತ್ತೇವೆ. ಒಂದು ಇಸ್ಲಾಮ್‌ನ ಅನುಭಾವಿ ಚಿಂತನೆಗಳಿಂದ ನೇರ ಪ್ರಭಾವಕ್ಕೆ ಒಳಗಾದ ಸಾಹಿತ್ಯ. ಇದು ಮುಖ್ಯವಾಗಿ ಅರೇಬಿಕ್ ಮತ್ತು ಪರ್ಶಿಯನ್ ಭಾಷೆಯಲ್ಲಿದೆ. ಬಿಜಾಪುರದ ಸೂಫಿ ಸಾಹಿತ್ಯವು ಸ್ಥಳೀಯ ಜನಪ್ರಿಯ ಸಂಸ್ಕೃತಿಯಿಂದ ಉತ್ಪನ್ನವಾಗಿದೆ. ಈ ಸಾಹಿತ್ಯವು ದಖನಿಯಲ್ಲಿದೆ. ಈ ಎಲ್ಲ ಸಂಗತಿಗಳನ್ನು ‘ಸೂಫೀಸ್ ಆಫ್ ಬಿಜಾಪುರ್’ ಪುಸ್ತಕದಲ್ಲಿ ವಿವರಿಸಿದ್ದೇನೆ.

ಪ್ರಶ್ನೆ: ‘ಎ ಸೋಷಿಯಲ್ ಹಿಸ್ಟರಿ ಆಫ್ ಡೆಕ್ಕನ್’ ಎಂಬುದು ನಿಮ್ಮ ಮಹತ್ವದ ಪುಸ್ತಕ ಇದನ್ನು ಯಾಕೆ ಬರೆಯಬೇಕೆನ್ನಿಸಿತು? ಇದರ ಹಿಂದಿನ ಪ್ರೇರಣೆಗಳೇನು?

ಈಟನ್: ಹ್ಞಾಂ…. ಕೊಲ್ಕತ್ತಾ, ಢಾಕಾ ನಗರಗಳನ್ನು ಅಲೆದಾಡಿ ಮತ್ತೆ ನಾನು ದಕ್ಷಿಣಕ್ಕೆ ಬಂದೆ, ಅಂದರೆ ಹೈದರಾಬಾದಿಗೆ ವಾಪಸ್ಸಾದೆ. ಅಲ್ಲಿ ನಾನು ಫಿಲಿಪ್ ವ್ಯಾಗ್ನರ್ ಅವರನ್ನು ಭೇಟಿ ಮಾಡಿದೆ. ಅವರು ಪ್ರಾಚೀನ ವಾಸ್ತುಶಿಲ್ಪವನ್ನು ಅಧ್ಯಯನ ಮಾಡುತ್ತಿದ್ದರು. ವ್ಯಾಗ್ನರ್ ನನ್ನನ್ನು ದಕ್ಷಿಣದ ವಾಸ್ತುಶಿಲ್ಪವನ್ನು ಅಧ್ಯಯನ ಮಾಡಲು ಪ್ರೇರೇಪಿಸಿದರು. ದಕ್ಷಿಣದಲ್ಲಿನ ಕೋಟೆಗಳನ್ನು, ಅವುಗಳ ರಚನಾ ಕ್ರಮವನ್ನು ಅಧ್ಯಯನ ಮಾಡುವುದು ನನಗೆ ಖುಷಿ ನೀಡಿತು. ದಕ್ಷಿಣದಲ್ಲಿನ ಅನೇಕ ಬೆಟ್ಟಗಳಲ್ಲಿ ನೀವು ಬೃಹತ್ ಕೋಟೆಗಳನ್ನು ಈಗಲೂ ನೋಡಬಹುದು. ಅಲ್ಲಿಯವರೆಗೂ ದಕ್ಷಿಣ ಭಾರತದ ಕೋಟೆಗಳನ್ನ ಯಾರೂ ಅಧ್ಯಯನ ಮಾಡಿರಲಿಲ್ಲ. ಹೈದರಾಬಾದಿನ ಗೋಲ್ಕೊಂಡಾ ಕೋಟೆ, ಬಿಜಾಪುರ, ಬೀದರ್ ಕೋಟೆಗಳನ್ನು ಅಧ್ಯಯನ ಮಾಡಿದೆವು. ಆಧುನಿಕ ತಂತ್ರಜ್ಞಾನ ಜಿಪಿಎಸ್‌ಅನ್ನು ಬಳಸಿ ಕೋಟೆಗಳ ನಕಾಶೆಯನ್ನು ನಾವು ತಯಾರಿಸಿದೆವು. ದಕ್ಷಿಣದ ಕೋಟೆಗಳನ್ನು ನಕಾಶೆಯ ಮೂಲಕ ಗುರುತಿಸಿದ್ದು ಅದೇ ಮೊದಲು. ನಂತರ ಕೇಂಬ್ರಿಜ್ ಪ್ರೆಸ್ ನನ್ನನ್ನು ದಕ್ಷಿಣ ಭಾರತದ ಸಾಮಾಜಿಕ ಚರಿತ್ರೆಯನ್ನು (A Social History of the Deccan, 1300–1761) ಕುರಿತು ಒಂದು ಪುಸ್ತಕವನ್ನು ಮಾಡಿಕೊಡಲು ಕೇಳಿಕೊಂಡಿತು. ಈ ಯೋಜನೆಯನ್ನು ನಾನು ತೀವ್ರವಾಗಿ ಪರಿಭಾವಿಸಿ ಅಮೆರಿಕದ ವಾಷಿಂಗ್ಟನ್ ಡಿಸಿಯ ಸ್ಮಿತ್ಸೋನಿಯನ್ ಆರ್ಕೈವ್‌ನಲ್ಲಿ ನಾನು ಎರಡು ವರ್ಷ ಕೆಲಸ ಮಾಡಿದೆ. ಭಾರತದ ‘ಡೆಕ್ಕನ್’ ಎಂದರೆ ಯಾವುದು? ಅದು ಭಾರತದ ಯಾವ ಭಾಗದಲ್ಲಿದೆ ಎಂಬುದನ್ನು ನಾನು ಅರ್ಥ ಮಾಡಿಕೊಳ್ಳಬೇಕಿತ್ತು. ಅಲ್ಲಿಯವರೆಗೂ ಭಾರತ ಎಂದರೆ ಅದು ಕೇವಲ ಉತ್ತರ ಭಾರತ ಮಾತ್ರ ಎಂಬ ಗ್ರಹಿಕೆ ಹಲವರಲ್ಲಿತ್ತು. ದಕ್ಷಿಣ ಎಂದರೆ ಅದು ಕೇವಲ ಮದ್ರಾಸ್ ಮಾತ್ರ ಎಂಬ ಭಾವನೆ ಆಳವಾಗಿ ಬೇರೂರಿತ್ತು. ವಾಷಿಂಗ್ಟನ್ ಡಿಸಿಯ ಸ್ಮಿತ್ಸೋನಿಯನ್ ಆರ್ಕೈವ್‌ನಲ್ಲಿ ನಾನು ಮೊದಲ ಬಾರಿಗೆ ಫೆರಿಸ್ತಾ ಅವರ ಪುಸ್ತಕವನ್ನು ಓದಿದೆ. ಫೆರಿಸ್ತಾ ಮೊದಲ ಬಾರಿಗೆ ಭಾರತದ ‘ಡೆಕ್ಕನ್’ ಪ್ರದೇಶವನ್ನು ಗುರುತಿಸಿದವನು. ಫೆರಿಸ್ತಾ ತನ್ನ ಕೃತಿ ತೆಹ್ರಖ್ ಇ ಫೆರಿಸ್ತಾದಲ್ಲಿ (Tarikh-i Firishta) ‘ಡೆಕ್ಕನ್’ನ್ನು ಮೂರು ಭಾಗಗಳಲ್ಲಿ ಗುರುತಿಸುತ್ತಾನೆ. ನಾನು ಈ ಪುಸ್ತಕವನ್ನು ಮೂಲ ಪರ್ಶಿಯನ್ ಭಾಷೆಯಲ್ಲಿಯೇ ಓದಿದೆ. ಒಂದು ತೆಲಂಗಾ (ತೆಲಂಗಾಣ), ಮರಾಠ (ಮಹಾರಾಷ್ಟ್ರ) ಮತ್ತು ಕ್ಯಾನರೀಸ್ ಅಂದರೆ ಕರ್ನಾಟಕ ಇವುಗಳನ್ನು ಫೆರಿಸ್ತಾ ‘ಡೆಕ್ಕನ್’ ಎಂದು ಗುರುತಿಸುತ್ತಾನೆ. ಫೆರಿಸ್ತಾ ಈ ಮೂರೂ ಭಾಷಿಕ ಪ್ರದೇಶಗಳನ್ನು ‘ಡೆಕ್ಕನ್’ ಎಂದು ಕರೆಯುತ್ತಾನೆ. ಇಲ್ಲಿ ತಮಿಳು ಮತ್ತು ಮಲೆಯಾಳಿ ಭಾಷಿಕ ಪ್ರದೇಶಗಳನ್ನು ಫೆರಿಸ್ತಾ ಹೊರಗಿಡುತ್ತಾನೆ. ಇಂತಹ ಮಹತ್ವದ ಪುಸ್ತಕಗಳನ್ನು ಈ ಯೋಜನೆಗಾಗಿ ಅಧ್ಯಯನ ಮಾಡಿದೆ. ಡೆಕ್ಕನ್ ಪ್ರದೇಶದ ತುಂಬಾ ಓಡಾಡಿ ಸಂಗ್ರಹಿಸಿದ ವಿವರಗಳನ್ನು ಜೋಡಿಸಿದೆ. ಕೇಂಬ್ರಿಜ್ ಯೂನಿವರ್ಸಿಟಿ ಪ್ರೆಸ್ ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದೆ. ಅದು ನನ್ನ ಅಚ್ಚುಮೆಚ್ಚಿನ ಪುಸ್ತಕ.

ಪ್ರಶ್ನೆ: ‘ಟೆಂಪಲ್ ಡೆಸಿಕ್ರೇಷನ್ ಅಂಡ್ ಮುಸ್ಲಿಮ್ ಸ್ಟೇಟ್ಸ್ ಇನ್ ಮಿಡಿವಲ್ ಇಂಡಿಯಾ’- ನಿಮ್ಮ ಈ ಪುಸ್ತಕ ಭಾರತದಲ್ಲಿ ಒಂದು ಸಂಚಲನವನ್ನು ಉಂಟುಮಾಡಿದೆ. ದೇವಾಲಯಗಳ ಭಗ್ನಗೊಳಿಸುವ ಮತ್ತು ಅಪವಿತ್ರೀಕರಿಸುವ ಮಧ್ಯಕಾಲೀನ ರಾಜಕಾರಣದ ಬಗ್ಗೆ ನೀವು ಬರೆದಿದ್ದೀರಿ. ಈ ಪುಸ್ತಕ ರಚನೆಯ ಹಿಂದಿನ ಪ್ರೇರಣೆಗಳೇನು?

ಈಟನ್: ಆ ಪುಸ್ತಕದಲ್ಲಿ ತುಂಬಾ ವಿವರಗಳಿವೆ. ಮತ್ತೆ ನಾನು ಆ ವಿವರಗಳಿಗೆ ಹೋಗುವುದಿಲ್ಲ. ಜಗತ್ತಿನ ಎಲ್ಲೆಡೆ ಬಹುಸಂಖ್ಯಾತವಾದವು (Majoritarianism) ಚರಿತ್ರೆಯನ್ನು ತನಗೆ ಬೇಕಾದಂತೆ ತಿರುಚುತ್ತಿದೆ. ಚರಿತ್ರೆ ಎಂಬುದು ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದಕ್ಕೆ ಇರುವ ಸವಲತ್ತು ಎಂದು ಬಹುಸಂಖ್ಯಾತವಾದ ಭಾವಿಸಿದೆ. ಚರಿತ್ರೆಯನ್ನು ಅಷ್ಟು ಸುಲಭವಾಗಿ ಯಾರೂ ತಿರುಚಲು ಸಾಧ್ಯವಿಲ್ಲ. ಯಾವ ಚರಿತ್ರೆಯನ್ನು ನೀವು ತಿರುಚುತ್ತೀರೋ ಆ ಚರಿತ್ರೆಯು ಮುಂದಿನ ಜನಾಂಗಕ್ಕೆ ತನ್ನನ್ನು ಅರ್ಥಮಾಡಿಕೊಳ್ಳುವ ಬಾಗಿಲುಗಳನ್ನು ತೆರೆಯುತ್ತಾ ಹೋಗುತ್ತದೆ. ಚರಿತ್ರೆಗೆ ಯಾವ ಹಂಗುಗಳಿಲ್ಲ, ಅದಕ್ಕೆ ಪರದೆ ಹಾಕಿ ಮರೆಮಾಚಲು ಸಾಧ್ಯವಾಗುವುದಿಲ್ಲ. ಭಾರತದ ಮಧ್ಯಕಾಲೀನ ಚರಿತ್ರೆಯಲ್ಲಿ ನಡೆದಿದೆ ಎನ್ನಲಾಗುವ ದೇವಾಲಯಗಳ ಭಗ್ನಗೊಳಿಸುವಿಕೆಯನ್ನು ಉತ್ಪ್ರೇಕ್ಷಿತ ಕಥೆಗಳಿಂದ ಕೂಗಿ ಹೇಳಲಾಗುತ್ತಿದೆ. ಆದರೆ ಚರಿತ್ರೆಯನ್ನು ಉತ್ಪ್ರೇಕ್ಷೆಗಳಿಂದ ಬರೆಯಲಾಗುವುದಿಲ್ಲ. 1190ರಿಂದ 1760ರವರೆಗೆ ಇದ್ದ ಮುಸ್ಲಿಮ್ ಆಳ್ವಿಕೆಯ ಸಂದರ್ಭದಲ್ಲಿ ದೇವಾಲಯಗಳನ್ನು ಭಗ್ನಗೊಳಿಸಿರುವ ವಿವರಗಳು ನನ್ನ ಪುಸ್ತಕದಲ್ಲಿವೆ; ನೀವು ಅಲ್ಲಿ ನೋಡಬಹುದು. ಒಂದು ಮಾತನ್ನು ನಾನು ಹೇಳಬೇಕು; ಇತಿಹಾಸಕಾರರು ಯಾವತ್ತೂ ಆಳುವ ವರ್ಗದ ಸೇವಕರಂತೆ ಕೆಲಸ ಮಾಡಬಾರದು.

ಪ್ರಶ್ನೆ: ದಕ್ಷಿಣ ಭಾರತದಲ್ಲಿನ ಕೋಟೆಗಳು ಮತ್ತು ಇಲ್ಲಿ ನಡೆದ ಯುದ್ಧಗಳಲ್ಲಿ ಬಳಕೆಯಾದ ಫಿರಂಗಿಗಳ ಕುರಿತು ನೀವು ಬರೆದಿದ್ದೀರಿ. ಫಿರಂಗಿಗಳು ದಕ್ಷಿಣ ಭಾರತದಿಂದ ಯುರೋಪಿಗೆ ರಫ್ತಾಗುತ್ತಿದ್ದವು ಎಂಬುದು ನಿಮ್ಮ ವಾದ. ‘ಪವರ್, ಮೆಮೊರಿ, ಆರ್ಕಿಟೆಕ್ಚರ್: ಕಂಟೆಸ್ಟಡ್ ಸೈಟ್ಸ್ ಆನ್ ಇಂಡಿಯಾಸ್ ಡೆಕ್ಕನ್ ಪ್ಲೇಟೂ’ ಎಂಬ ಪುಸ್ತಕದಲ್ಲಿ ಈ ಕುರಿತು ವಿವರವಾಗಿ ಬರೆದಿದ್ದೀರಿ. ಈ ಅಧ್ಯಯನದ ಹಿಂದಿನ ಪ್ರೇರಣೆಗಳೇನು?

ಈಟನ್: ಆಧುನಿಕ ಪೂರ್ವ ಡೆಕ್ಕನ್ ಪ್ರದೇಶದ ಬಗ್ಗೆ ಚರಿತ್ರೆಯ ಪಾಠಗಳಲ್ಲಿ ಅನೇಕ ಪೂರ್ವಾಗ್ರಹಗಳನ್ನು ಮತ್ತು ತಪ್ಪುಗಳನ್ನು ಹರಡಲಾಗಿದೆ. ಮುಸ್ಲಿಂ ಆಳ್ವಿಕೆಯನ್ನು ಕರಾಳ ಯುಗ ಎಂದೂ, ಅನ್ಯರ ಆಕ್ರಮಣವೆಂದೂ ಕರೆಯುವ ಪರಿಪಾಠ ಭಾರತದಲ್ಲಿ ಜನಜನಿತವಾಗಿದೆ. ಯಾವುದೇ ಪ್ರದೇಶದ ಅಥವಾ ದೇಶದ ಚರಿತ್ರೆಯನ್ನು ಹೀಗೆ ಅಧ್ಯಯನ ಮಾಡಲು ಸಾಧ್ಯವಿಲ್ಲ. ಚರಿತ್ರೆ ಎಂಬುದು ಆಳುವ ವರ್ಗ ಮತ್ತು ಸಾಮಾನ್ಯ ಜನರ ಬದುಕಿನ ಭಾಗವಾಗಿ ಅನಾವರಣವಾಗುತ್ತದೆ. ಜನಸಾಮಾನ್ಯರು ಚರಿತ್ರೆಯನ್ನು ನಿರ್ಮಾಣ ಮಾಡುತ್ತಾರೆ. ಡೆಕ್ಕನ್ ಪ್ರದೇಶದ ಮಧ್ಯಕಾಲೀನ ಮತ್ತು ಆಧುನಿಕಪೂರ್ವ ಕಾಲದ ಚರಿತ್ರೆಯು ನಾವೆಲ್ಲ ಅರ್ಥಮಾಡಿಕೊಂಡಂತೆ ಸರಳವಾಗಿಲ್ಲ. ಈ ಕಾಲಘಟ್ಟಗಳಲ್ಲಿ ಡೆಕ್ಕನ್ ಪ್ರದೇಶದ ಜನಸಾಮಾನ್ಯರ ಬದುಕು ಮತ್ತು ಆಳುವ ವರ್ಗಗಳ ನಡೆಗಳು ಅನೇಕ ಜಟಿಲ ಸಂದರ್ಭಗಳನ್ನು ಹಾದುಬಂದಿವೆ. ಇದನ್ನು ನಾವು ಸೂಕ್ಷ್ಮವಾಗಿ ನೋಡಬೇಕು. ಈ ಕಾಲಘಟ್ಟದ ನಡುವೆ ಸಂಭವಿಸಿರುವ ಅನೇಕ ವಿದ್ಯಮಾನಗಳನ್ನು ಕೋಮುವಾದಿ ದೃಷ್ಟಿಕೋನದ ಮೂಲಕ ಅಧ್ಯಯನ ಮಾಡಲಾಗಿದೆ. ಆದರೆ ಇದು ಸರಿಯಾದ ಕ್ರಮವಲ್ಲ. ಈ ಕಾಲಘಟ್ಟದ ಚರಿತ್ರೆಗೆ ಬೇರೆಯದೇ ಆಯಾಮವಿದೆ. ಬಿಜಾಪುರ, ವಿಜಯನಗರ ಮತ್ತು ಗೋಲ್ಕಂಡದಂತಹ ಅಧಿಕಾರ ಕೇಂದ್ರಗಳಿಗೆ ಮಾತ್ರ ಸೀಮಿತಗೊಳಿಸಿ ನಾವು ಚರಿತ್ರೆಯನ್ನು ಬರೆಯಲು ಸಾಧ್ಯವಿಲ್ಲ. ಈ ಕಾಲಘಟ್ಟದ ಪ್ರಭುತ್ವದ ಸ್ವರೂಪ, ಜನಸಾಮಾನ್ಯರ ಪಾಲ್ಗೊಳ್ಳುವಿಕೆ, ಸಾಮಾಜಿಕ ಸಂಬಂಧಗಳು, ಕೋಮುಸಾಮರಸ್ಯ, ವಾಸ್ತುಶಿಲ್ಪ, ಸಾಹಿತ್ಯ, ಧಾರ್ಮಿಕ ಸ್ಥಿತಿಗತಿ ಮತ್ತು ಒಟ್ಟಾರೆ ಭೌತಿಕ ಸಂಸ್ಕೃತಿಗಳನ್ನು ಆಧರಿಸಿ ಚರಿತ್ರೆಯನ್ನು ಕಟ್ಟಬೇಕಾಗುತ್ತದೆ. ಕ್ರಿಶ 1300ರಿಂದ 1600ರ ನಡುವೆ ಡೆಕ್ಕನ್ ಪ್ರದೇಶದಲ್ಲಿ ಆದ ಸ್ಥಿತ್ಯಂತರಗಳು ಅಸಾಮಾನ್ಯವಾಗಿವೆ. ಈ ಪ್ರಕ್ಷುಬ್ಧ ಕಾಲಘಟ್ಟದಲ್ಲಿ ಸ್ಥಳೀಯ ಪ್ರಭುತ್ವದ ಸ್ವರೂಪ ಮತ್ತು ಆಳುವ ವರ್ಗಗಳ ದೃಷ್ಟಿಕೋನಗಳು ನಿರ್ದಿಷ್ಟವಾಗಿ ರೂಪುಗೊಳ್ಳುತ್ತಾ ಬಂದಿವೆ. ಇಲ್ಲಿನ ವಾಸ್ತುಶಿಲ್ಪ, ನಗರ ನಿರ್ಮಾಣ ಮತ್ತು ಮಿಲಿಟರಿ ತಂತ್ರಜ್ಞಾನಗಳು ಆಶ್ಚರ್ಯಕರ ರೀತಿಯಲ್ಲಿ ವಿಕಾಸವಾಗುತ್ತಾ ಬಂದಿವೆ. ಈ ಕಾರಣಕ್ಕಾಗಿ ನಾನು ಪ್ರಸ್ತುತ ಕಾಲಘಟ್ಟದ ಡೆಕ್ಕನ್ ಪ್ರದೇಶದ ಭೌತಿಕ ಸಂಸ್ಕೃತಿಯನ್ನು ಅಧ್ಯಯನ ಮಾಡಲು ಮುಂದಾದೆ. ಈ ಕೆಲಸದಲ್ಲಿ ನನ್ನ ಜೊತೆಗೆ ಇಬ್ಬರು ವಿದ್ವಾಂಸರು ಜೊತೆಗೂಡಿದರು. ಫಿಲಿಪ್ ವ್ಯಾಗ್ನರ್ ಮತ್ತು ಜಾನ್ ಫ್ರೆಡರಿಕ್ ಈ ಅಧ್ಯಯನದ ಸಂದರ್ಭದಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು.

ಫಿಲಿಪ್ ವ್ಯಾಗ್ನರ್ ಮತ್ತು ಜಾನ್ ಫ್ರೆಡರಿಕ್ ನನಗೆ ಕೋಟೆಗಳ ಅಧ್ಯಯನ ಮಾಡಲು ಪ್ರೇರಣೆ ನೀಡಿದರು. ನಾವು ನಮ್ಮ ಅಧ್ಯಯನದ ತಿರುಗಾಟವನ್ನು ರಾಯಚೂರು ಬಳಿ ಇರುವ ಅದೋನಿಯಿಂದ ಪ್ರಾರಂಭಿಸಿದೆವು. ನನ್ನ ಜೊತೆಗೆ ಫಿಲಿಪ್ ವ್ಯಾಗ್ನರ್ ಮತ್ತು ಜಾನ್ ಫ್ರೆಡರಿಕ್ ಇದ್ದರು. ಜಾನ್ ಫ್ರೆಡರಿಕ್ ಒಬ್ಬ ಡಾಕ್ಟರ್. ಅದೋನಿಯ ಸುತ್ತ ಅವರು ತುಂಬಾ ಜನಪ್ರಿಯ ವ್ಯಕ್ತಿಯಾಗಿದ್ದರು. ಹೊರಗಡೆಯಿಂದ ಅದೋನಿಗೆ ಬಂದರೆ ಒಂದು ಬುಟ್ಟಿ ತುಂಬ ಟೆನ್ನಿಸ್‌ಬಾಲ್‌ಗಳನ್ನು ತಂದು ಅಲ್ಲಿನ ಮಕ್ಕಳಿಗೆ ಹಂಚುತ್ತಿದ್ದರು. ಅದೋನಿಯಲ್ಲಿ ನಾವು ಒಂದು ಬೆಡ್‌ರೂಮಿನ ಚಿಕ್ಕ ಮನೆಯೊಂದರಲ್ಲಿ ಉಳಿದಿದ್ದೆವು. ನಾನು ಮತ್ತು ಜಾನ್ ಒಂದು ಹಾಸಿಗೆಯಲ್ಲಿ ಮಲಗಿದರೆ, ವ್ಯಾಗ್ನರ್ ಹಾಲಿನಲ್ಲಿ ಮಲಗುತ್ತಿದ್ದರು. ಒಂದುದಿನ ಮಧ್ಯರಾತ್ರಿ ಇಲಿಯೊಂದು ನನ್ನ ಮೇಲೆ ಓಡಾಡಿತು. ಬೆಳಗ್ಗೆ ಎದ್ದಾಗ ಆ ಇಲಿ ಜಾನ್ ಅವರ ಹಣೆಯನ್ನು ಕಚ್ಚಿತ್ತು. ನಮ್ಮ ಕ್ಷೇತ್ರಕಾರ್ಯ ಒಂದು ರೀತಿಯಲ್ಲಿ ಇಂತಹುದ್ದೇ ಸಾಹಸಗಳಿಂದ ಕೂಡಿತ್ತು. ಜಾನ್ ಫ್ರೆಡರಿಕ್ ಒಬ್ಬ ಡಾಕ್ಟರ್ ಆಗಿದ್ದರೂ ದಕ್ಷಿಣ ಭಾರತದ ಈ ಭಾಗದಲ್ಲಿ ಕಾಣಸಿಗುವ ಫಿರಂಗಿಗಳ ಕುರಿತು ತಿಳಿದುಕೊಳ್ಳುವ ಕುತೂಹಲಗಳನ್ನಿಟ್ಟುಕೊಂಡಿದ್ದರು. 1520ರಲ್ಲಿ ರಾಯಚೂರು ಯುದ್ಧದಲ್ಲಿ ಬಳಕೆಯಾದ ಫಿರಂಗಿಗಳ ಕುರಿತು ನಾವು ಅಧ್ಯಯನ ಮಾಡಬೇಕಿತ್ತು. ಏಕೆಂದರೆ ದಕ್ಷಿಣ ಭಾರತದಲ್ಲಿ ಬಳಕೆಯಾದ ಈ ಫಿರಂಗಿಗಳು ಯುದ್ಧಗಳ ಸ್ವರೂಪವನ್ನು ಆಮೂಲಾಗ್ರವಾಗಿ ಬದಲಾಯಿಸಿದ್ದವು. 1565ರಲ್ಲಿ ತಾಳಿಕೋಟೆಯಲ್ಲಿ ನಡೆದ ನಿರ್ಣಾಯಕ ಕದನದಲ್ಲೂ ಬಿಜಾಪುರ ಸುಲ್ತಾನರು ಬಳಸಿದ ಫಿರಂಗಿಗಳು ಮಹತ್ವದ ಪಾತ್ರವನ್ನು ವಹಿಸಿದ್ದವು. ಬಹಮನಿ ಮತ್ತು ವಿಜಯನಗರ ಕಾಲದಲ್ಲಿ ನಡೆದ ಯುದ್ಧಗಳಲ್ಲಿ ಬಳಸಲಾದ ಆಯುಧಗಳು ಅದರಲ್ಲೂ ಫಿರಂಗಿಗಳು ದಕ್ಷಿಣ ಭಾರತದ ಯುದ್ಧತಂತ್ರಗಳನ್ನೇ ಬದಲಾಯಿಸಿದವು. ತಾಳಿಕೋಟೆಯ ನಿರ್ಣಾಯಕ ಯುದ್ಧವನ್ನು ಬಹಮನಿ ರಾಜರು ಜಯಸಿದ್ದು ಈ ಫಿರಂಗಿಗಳಿಂದ. ವಿಜಯನಗರದಲ್ಲಿ ಆಗ ಗನ್‌ಪೌಡರ್ ಆಗಲಿ, ಫಿರಂಗಿಗಳನ್ನಾಗಲಿ ವ್ಯಾಪಕವಾಗಿ ಬಳಸುತ್ತಿರಲಿಲ್ಲ. ವಿಜಯನಗರ ಯಾವತ್ತೂ ಫಿರಂಗಿ ಯುದ್ಧ ತಂತ್ರಜ್ಞಾನವನ್ನು ಬೆಳೆಸಲಿಲ್ಲ. ವಿಜಯನಗರದ ಕೋಟೆಗಳನ್ನು ನೀವು ನೋಡಿ, ಅಲ್ಲಿ ಫಿರಂಗಿಗಳನ್ನು ಇಡುವ ಬುರುಜುಗಳಾಗಲಿ, ಬಂದೂಕುಗಳನ್ನು ಇಡುವ ಜಾಗಗಳಾಗಲಿ ಕಾಣುವುದಿಲ್ಲ. ವಿಜಯನಗರದವರು ರಾಯಚೂರು ಯುದ್ಧವನ್ನು ಗೆದ್ದದ್ದು ಕೇವಲ ಪ್ರಬಲವಾದ ಅಶ್ವದಳದ ಮೂಲಕವೇ ಹೊರತು ಅವರು ಗನ್ ಪೌಡರ್‌ಅನ್ನು ಯುದ್ಧದಲ್ಲಿ ಬಳಸಲಿಲ್ಲ.

ಯಾದಗಿರಿಯಲ್ಲಿನ ಒಂದು ಕೋಟೆಯನ್ನು ಜಾನ್ ಫ್ರೆಡರಿಕ್ ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದರು. ಅಲ್ಲಿನ ಕೋಟೆ ಗೋಡೆಗಳ ಆಯಕಟ್ಟಿನ ಸ್ಥಳಗಳಲ್ಲಿ ಫಿರಂಗಿಗಳನ್ನು ಇರಿಸುವ ಜಾಗಗಳನ್ನು ಅವರು ಗುರುತಿಸಿದ್ದರು. ಯಾದಗಿರಿಯ ಕೋಟೆಯ ಮೇಲೆ ಇರಿಸಲಾಗಿದ್ದ 9 ಮೀಟರ್ ಉದ್ದದ ಭಾರವಾದ ಫಿರಂಗಿಯನ್ನು 360 ಡಿಗ್ರಿ ತಿರುಗಿಸಿ ಬಳಸುವ ತಂತ್ರವನ್ನು ಅಲ್ಲಿನ ಮಿಲಿಟರಿ ಇಂಜಿನಿಯರುಗಳು ಅಳವಡಿಸಿದ್ದರು. ಜಗತ್ತಿನ ಯಾವ ಕೋಟೆಯಲ್ಲೂ ಈ ತಂತ್ರಜ್ಞಾನವನ್ನು ಅಳವಡಿಸಿದ ಉದಾಹರಣೆಗಳಿಲ್ಲ. ಬಹುಮನಿ ಸುಲ್ತಾನರು ಫಿರಂಗಿಗಳನ್ನು ಹೀಗೆ ವೈವಿಧ್ಯಮಯವಾಗಿ ಬಳಸಿದರು. ಅಂದಿನ ಕಾಲದಲ್ಲಿ ಬಿಜಾಪುರ ಫಿರಂಗಿಗಳನ್ನು ತಯಾರಿಸುವ ಕೇಂದ್ರವೇ ಆಗಿತ್ತು. ಅಲ್ಲಿಯವರೆಗೂ ಯುರೋಪಿನ ಯಾವ ಯುದ್ಧಗಳಲ್ಲೂ ಫಿರಂಗಿಗಳ ಬಳಕೆ ಆಗಿರಲಿಲ್ಲ. ಯುರೋಪಿನಲ್ಲಿ ಫಿರಂಗಿಗಳು ಮೊದಲು ಬಳಕೆಯಾಗಿದ್ದು 1759ರಲ್ಲಿ. ಟೈಕಾನ್ ಯುದ್ಧದಲ್ಲಿ ಫ್ರೆಂಚರು ಮೊದಲಿಗೆ ಫಿರಂಗಿಗಳನ್ನು ಬಳಸಿದರು. ಅಂದರೆ ಬಹಮನಿ ಅರಸರು ತಮ್ಮ ಯುದ್ಧ ತಂತ್ರಜ್ಞಾನದಲ್ಲಿ ಯುರೋಪಿನವರಿಗಿಂತ 300 ವರ್ಷಗಳಷ್ಟು ಮುಂದಿದ್ದರು. ಆದರೆ ನಾವು ನಮ್ಮ ಶಾಲಾ ಪುಸ್ತಕಗಳಲ್ಲಿ ಬೇರೆಯದನ್ನೇ ಓದುತ್ತಿದ್ದೇವೆ. ‘ಮಿಲಿಟರಿ ತಂತ್ರಜ್ಞಾನವು ಯುರೋಪಿನಿಂದ ಜಗತ್ತಿನ ಉಳಿದೆಲ್ಲ ಕಡೆಗೆ ಹರಡಿತು’ ಎಂದು ಶಾಲಾತರಗತಿಗಳಲ್ಲಿ ನಮಗೆ ಕಲಿಸಲಾಗಿದೆ. ಅದು ಸುಳ್ಳು.

ಪೋರ್ಚುಗೀಸ್ ವೈಸರಾಯ್ ಆಲ್ಬುಕರ್ಕ್ 1510ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಬರುತ್ತಾನೆ. ಅವನು ಭಾರತಕ್ಕೆ ಬಂದ ತಕ್ಷಣ ಗೋವಾದಲ್ಲಿನ ತನ್ನ ಮಿಲಿಟರಿ ಇಂಜಿನಿಯರ್‌ಗಳನ್ನು ಬಿಜಾಪುರಕ್ಕೆ ಕಳುಹಿಸಿ ಫಿರಂಗಿಗಳ ತಂತ್ರಜ್ಞಾನವನ್ನು ಅಧ್ಯಯನ ಮಾಡಲು ಸೂಚಿಸುತ್ತಾನೆ. ಅಲ್ಲಿಯವರೆಗೂ ಯುರೋಪಿನಲ್ಲಿ ಜರ್ಮನಿ ಮಾತ್ರ ಯುದ್ಧಗಳಲ್ಲಿ ಫಿರಂಗಿಗಳನ್ನು ಬಳಸುತ್ತಿತ್ತು. ಬಹಮನಿ ಅರಸರ ಫಿರಂಗಿಗಳು ಜರ್ಮನಿಯ ಫಿರಂಗಿಗಳಿಗಿಂತ ಆಧುನಿಕವಾಗಿವೆ ಎಂದು ಗೋವಾದ ಮಿಲಿಟರಿ ಇಂಜಿನಿಯರ್‌ಗಳು ಆಲ್ಬುಕರ್ಕ್‌ನಿಗೆ ವರದಿ ಮಾಡುತ್ತಾರೆ. ಆಲ್ಬುಕರ್ಕ್ ತನ್ನ ಮಿಲಿಟರಿ ಇಂಜಿನಿಯರ್‌ಗಳಿಗೆ ಬಹಮನಿ ಸುಲ್ತಾನರು ತಯಾರಿಸಿದಂತಹ ಆಧುನಿಕ ಫಿರಂಗಿಗಳನ್ನು ತಯಾರಿಸಲು ಸೂಚಿಸುತ್ತಾನೆ. ಫಿರಂಗಿಗಳನ್ನು ತಯಾರಿಸುವ ಈ ತಂತ್ರಜ್ಞಾನವನ್ನು ಆಲ್ಬುಕರ್ಕ್ ಲಿಸ್ಬನ್ನಿಗೆ ತೆಗೆದುಕೊಂಡು ಹೋಗುತ್ತಾನೆ. ಈ ಕಾರಣದಿಂದ ಮಿಲಿಟರಿ ತಂತ್ರಜ್ಞಾನ, ಅದರಲ್ಲೂ ಫಿರಂಗಿಗಳ ತಯಾರಿಕೆಯಲ್ಲಿ ಡೆಕ್ಕನ್ ಮುಂದುವರಿದಿತ್ತು.

ಪ್ರಶ್ನೆ: ಅಂದರೆ ಫಿರಂಗಿಗಳ ತಂತ್ರಜ್ಞಾನ ಬಿಜಾಪುರದ ಮಿಲಿಟರಿ ಇಂಜಿನಿಯರ್‌ಗಳಿಂದ ಬೆಳೆಯಿತು ಎಂದು ನೀವು ಹೇಳುತ್ತಿದ್ದೀರಿ.

ಈಟನ್: ಹೌದು, ಫಿರಂಗಿಗಳ ತಂತ್ರಜ್ಞಾನ ಬಿಜಾಪುರದ ಸ್ಥಳೀಯ ಮಿಲಿಟರಿ ಇಂಜಿನಿಯರ್‌ಗಳಿಂದ ಬೆಳೆಯಿತು. ಈ ತಂತ್ರಜ್ಞಾನ ಬೆಳೆದದ್ದು ಯುರೋಪಿನಲ್ಲಲ್ಲ. 1520ರಲ್ಲಿ ಬಿಜಾಪುರದ ಸುಲ್ತಾನರು ಯುದ್ಧದಲ್ಲಿ ಸೋಲುತ್ತಾರೆ. ವಿಜಯನಗರದ ಅಶ್ವದಳ ಬಿಜಾಪುರದ ಅರಸರನ್ನು ಹತ್ತಿಕ್ಕಲು ಯಶಸ್ವಿಯಾಗುತ್ತದೆ. ಸುಲ್ತಾನರಿಗೆ ಅದೊಂದು ದೊಡ್ಡ ಸೋಲು. ಯಾವುದೇ ಸೋಲು ಹುಡುಕಾಟಗಳಿಗೆ ಪ್ರೇರಣೆ ನೀಡುತ್ತದೆ. 1520ರ ಸೋಲಿನಿಂದ ಬಿಜಾಪುರದ ಅರಸರು ಬೇಗ ಚೇತರಿಸಿಕೊಳ್ಳಬೇಕು ಎಂದು ಹಂಬಲಿಸುತ್ತಾರೆ. ಆಗ ಅವರು ಅನಿವಾರ್ಯವಾಗಿ ತಮ್ಮ ಯುದ್ಧ ತಂತ್ರಜ್ಞಾನವನ್ನು ಸುಧಾರಿಸುವ ಕೆಲಸಕ್ಕೆ ಕೈಹಾಕುತ್ತಾರೆ. ಆಗಲೇ ಅಲ್ಲಿ ದೊಡ್ಡದೊಡ್ಡ ಫಿರಂಗಿಗಳ ತಯಾರಿಕೆ ನಡೆಯುತ್ತದೆ. ತಮ್ಮ ಕೋಟೆಗಳನ್ನು ಬಲಪಡಿಸಿಕೊಳ್ಳುವುದಲ್ಲದೆ, ಕೋಟೆಗಳ ಮೇಲೆ ಆಯಕಟ್ಟಿನ ಸ್ಥಳಗಳಲ್ಲಿ ಫಿರಂಗಿಗಳನ್ನು ಇಡುವ ಬುರುಜುಗಳನ್ನು ನಿರ್ಮಾಣ ಮಾಡುತ್ತಾರೆ. ಬಿಜಾಪುರದಲ್ಲಿನ ದೊಡ್ಡ ಸ್ಮಾರಕಗಳಾದ ಇಬ್ರಾಹಿಂ ರೋಜಾ, ಗೋಲ್ ಗುಂಬಜ್ ಮುಂತಾದವುಗಳನ್ನು ಕಟ್ಟಿದ್ದು 1520ರ ನಂತರ. ಅಂದರೆ ಕೋಟೆಗಳನ್ನು ಭದ್ರಪಡಿಸಿ ಫಿರಂಗಿಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ಇರಿಸಿದ ನಂತರ ತಮ್ಮ ರಾಜ್ಯದಲ್ಲಿ ಬಹಮನಿ ಸುಲ್ತಾನರು ಭವ್ಯ ಸ್ಮಾರಕಗಳನ್ನು ಕಟ್ಟಿದರು. ಫಿರಂಗಿ ತಂತ್ರಜ್ಞಾನ ಕೇವಲ ಯುದ್ಧಗಳ ಸ್ವರೂಪವನ್ನು ಮಾತ್ರ ಬದಲಿಸಲಿಲ್ಲ. ವಾಸ್ತುಶಿಲ್ಪ ಮತ್ತು ನಗರಗಳ ನಿರ್ಮಾಣವನ್ನೂ ಬದಲಿಸಿತು. ಇದರ ಜೊತೆಗೆ ದಕ್ಷಿಣ ಭಾರತದಲ್ಲಿ ಗನ್ ಪೌಡರ್‌ಗೆ ಜಗ್ಗದ ಬಲಿಷ್ಟ ಕೋಟೆಗಳು ನಿರ್ಮಾಣವಾದವು. ಯಾದಗಿರಿ, ಆದೋನಿ, ರಾಯಚೂರು, ಬಿಜಾಪುರ ಮತ್ತು ಮುದುಗಲ್ ನಗರಗಳಿಗೆ ಕಟ್ಟಿದ ಕೋಟೆಗಳು ದಕ್ಷಿಣ ಭಾರತದಲ್ಲಿ ಅತ್ಯಂತ ಬಲಿಷ್ಟವಾದವು. 1565ರ ನಿರ್ಣಾಯಕ ಯುದ್ಧದಲ್ಲಿ ಬಹಮನಿ ಅರಸರು ವ್ಯಾಪಕವಾಗಿ ಫಿರಂಗಿಗಳನ್ನು ಬಳಸಿದರು. ತಾಳಿಕೋಟೆ ಕದನದ ಫಲಿತಾಂಶವನ್ನು ನಿರ್ಧರಿಸಿದ್ದು ಫಿರಂಗಿಗಳು.

ಈ ಕುರಿತು ನಾನು ಹೇಳಬೇಕಾದ ಇನ್ನೊಂದು ಸಂಗತಿ ಇದೆ; ಪ್ರಸ್ತುತ ಅಧ್ಯಯನದಲ್ಲಿ ಕೇವಲ ಡೆಕ್ಕನ್ ಪ್ರದೇಶದ ಭೌತಿಕ ಸಂಸ್ಕೃತಿಯನ್ನು ಮಾತ್ರ ವಿಶ್ಲೇಷಣೆಗೆ ಒಳಪಡಿಸಿಲ್ಲ. ಈ ಕಾಲಘಟ್ಟದಲ್ಲಿನ ಸಾಮಾಜಿಕ ಸಂಬಂಧಗಳನ್ನು ನಾವು ಹೇಗೆ ಗ್ರಹಿಸಬೇಕು ಎಂಬ ವೈಧಾನಿಕತೆಯೂ ಇಲ್ಲಿ ಸೂಚ್ಯವಾಗಿ ವ್ಯಕ್ತವಾಗಿದೆ. ಭಾರತದಲ್ಲಿ ಚರಿತ್ರೆಯನ್ನು ಹಿಂದೂ ರಾಜರ ಆಳ್ವಿಕೆ ಮತ್ತು ಮುಸ್ಲಿಂ ರಾಜರ ಆಳ್ವಿಕೆ ಎಂದು ಬೈನರಿಯಾಗಿ ನೋಡುವ ಕ್ರಮ ಇದೆ. ಚರಿತ್ರೆಯು ಹೀಗೆ ಸರಳವಾಗಿರುವುದಿಲ್ಲ. ‘ಇತಿಹಾಸವು ಕೇವಲ ದೊಡ್ಡ ಜನಗಳಿಂದ ಮಾತ್ರ ಸೃಷ್ಟಿಯಾಗುವುದಿಲ್ಲ ಎಂದು ಮಾರ್ಕ್ಸ್ ಹೇಳುತ್ತಾನೆ. ಸಮಾಜದಲ್ಲಿರುವ ವೈರುಧ್ಯಗಳು ಮತ್ತು ಆ ಮೂಲಕ ಸೃಷ್ಟಿಯಾಗುವ ಸಾಮಾಜಿಕ ಸಂಬಂಧಗಳು ಚರಿತ್ರೆಯನ್ನು ನಿರ್ಮಾಣ ಮಾಡುತ್ತವೆ. ಈ ಎಲ್ಲ ಸಂಗತಿಗಳನ್ನು ಪ್ರಸ್ತುತ ಕೃತಿಯಲ್ಲಿ ವಿಶ್ಲೇಷಣೆ ಮಾಡಲು ಪ್ರಯತ್ನಿಸಲಾಗಿದೆ.

ಪ್ರಶ್ನೆ: ‘ನನ್ನ ಬರವಣಿಗೆಯ ಮೇಲೆ ಮಾರ್ಕ್ಸ್‌ವಾದದ ಪ್ರಭಾವ ಇದೆ’ ಎಂದು ತಾವು ಎಲ್ಲೋ ಹೇಳಿಕೊಂಡಿದ್ದೀರಿ. ನಿಮ್ಮ ಆಲೋಚನೆಗಳ ಮೇಲೆ ಮಾರ್ಕ್ಸ್‌ವಾದದ ಪ್ರಭಾವ ಆಗಿದೆಯೇ?

ಈಟನ್: ಇಲ್ಲ, ನಾನು ಹಾಗೆ ಹೇಳಿದ ನೆನಪಿಲ್ಲ. ಮಾರ್ಕ್ಸ್‌ವಾದದ ಪ್ರಭಾವ ನನ್ನ ಮೇಲೆ ಆಗಿಲ್ಲ. ಆದರೆ ಮಾರ್ಕ್ಸ್ ಚರಿತ್ರೆಯ ಕುರಿತು ಏನು ಹೇಳಿದ್ದಾನೆ ಅದು ನಿಜ. ಚಾರಿತ್ರಿಕ ಭೌತವಾದದ ವೈಧಾನಿಕತೆಯನ್ನು ನಾನು ಬಳಸಿಕೊಂಡಿರಬಹುದಷ್ಟೆ. ಭಾರತದಲ್ಲಿ ಮಾರ್ಕ್ಸ್‌ವಾದ ಎಂಬುದು ಒಂದು ಕೆಟ್ಟ ಪದವಾಗಿ ಪರಿಗಣಿಸಲ್ಪಟ್ಟಿದೆ. ಅಮೆರಿಕದಲ್ಲೂ ಹಾಗೆಯೇ ಮಾರ್ಕ್ಸ್‌ವಾದ ಒಂದು ರೀತಿಯಲ್ಲಿ ಬಹಿಷ್ಕೃತ ಆಲೋಚನಾಕ್ರಮವಾಗಿಬಿಟ್ಟದೆ.

ಪ್ರಶ್ನೆ: ನೀವು 1960ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದಿರಿ ಮತ್ತು ಇತ್ತೀಚಿನವರೆಗೂ ಬೇರೆಬೇರೆ ಅಧ್ಯಯನ ಯೋಜನೆಗಳ ಕಾರಣಕ್ಕಾಗಿ ಭಾರತಕ್ಕೆ ಭೇಟಿ ನೀಡುವುದನ್ನು ಮುಂದುವರಿಸಿದ್ದೀರಿ. ಅಂದು ನೀವು ಕಂಡ ಭಾರತಕ್ಕೂ ಇಂದಿನ ಭಾರತಕ್ಕೂ ಇರುವ ವ್ಯತ್ಯಾಸಗಳೇನು?

ಈಟನ್: ವ್ಯತ್ಯಾಸಗಳಿವೆ. ಭಾರತ ಹಲವು ಅನುಭಾವಿ ಪಂಥಗಳಿಗೆ ಜನ್ಮ ನೀಡಿದೆ. ಪರಂಪರೆಗಳಲ್ಲಿನ ಕಾಠಿಣ್ಯವನ್ನು ವಿರೋಧಿಸುವ ಸಂತರು ಕಾಲದಿಂದ ಕಾಲಕ್ಕೆ ಇಲ್ಲಿ ಜನಿಸಿದ್ದಾರೆ. ಭಾರತ ದೇಶ ಮುನ್ನಡೆಯಬೇಕಾದ ಹಾದಿಯನ್ನು ಬುದ್ಧ, ಬಸವಣ್ಣ, ಕಬೀರರಂತಹ ಮಹಾನುಭಾವರು ಹಾಕಿಕೊಟ್ಟಿದ್ದಾರೆ. ಜಾತ್ಯತೀತತೆ, ಸಹಬಾಳ್ವೆ ಮತ್ತು ಸಾಮರಸ್ಯಗಳು ಭಾರತದ ಸಮಾಜದ ಪ್ರಧಾನ ಲಕ್ಷಣಗಳು. ಸಾಮರಸ್ಯದಿಂದಾಗಿಯೇ ಭಾರತ ಒಂದು ದೇಶವಾಗಿ ಬೆಳೆದುಬಂದಿದೆ. ಈ ಮೌಲ್ಯಗಳಿಂದ ದೂರ ಸರಿದರೆ ದೇಶ ಒಂದಾಗಿರಲು ಸಾಧ್ಯವಿಲ್ಲ. ಭಾರತದಲ್ಲಿನ ವೈವಿಧ್ಯಮಯ ಸಮಾಜವು ಉಳಿದು ಬೆಳೆಯಲು ಈ ಮೂಲಭೂತ ತತ್ವಗಳನ್ನು ಅಳವಡಿಸಿಕೊಳ್ಳಲೇಬೇಕು. ಈ ಸರಳ ತತ್ವಗಳನ್ನು ಅಳವಡಿಸಿಕೊಂಡಲ್ಲಿ ದೇಶದ ಜನತಂತ್ರವೂ ಉಳಿಯುತ್ತದೆ. ನಾನು 60ರ ದಶಕದಲ್ಲಿ ನೋಡಿದ ಭಾರತದಲ್ಲಿ ಸಹಬಾಳ್ವೆ ಎಂಬುದು ಎದ್ದು ಕಾಣುತ್ತಿತ್ತು. ಬಡತನವಿದ್ದರೂ ಸಾಮಾಜಿಕ ಸಂಬಂಧಗಳಲ್ಲಿ ಸಾಮರಸ್ಯವಿತ್ತು. ಹಳ್ಳಿಗಳಲ್ಲಿ ಅಸಮಾನ ಸಮಾಜವಿದ್ದರೂ ಪರಸ್ಪರರಲ್ಲಿ ನಂಬಿಕೆಗಳಿದ್ದವು. ಧಾರ್ಮಿಕ ಅಸಹನೆ, ಕೋಮುವಾದಗಳು ದೇಶದ ಸಾಮರಸ್ಯಕ್ಕೆ ಧಕ್ಕೆ ತರುವಷ್ಟು ತೀವ್ರವಾಗಿರಲಿಲ್ಲ.

ಪ್ರಶ್ನೆ: ಇತಿಹಾಸಕಾರರಾಗಿ ಸಬಾಲ್ಟ್ರನ್ ಚರಿತ್ರೆ ರಚನಾಕ್ರಮದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಈಟನ್: ಹೌದು, ಸಬಾಲ್ಟ್ರನ್ ಅಧ್ಯಯನಗಳು ಜಗತ್ತಿನ ಚಿಂತನಾಕ್ರಮವನ್ನು ಬದಲಿಸಿದವು. ಯುರೋಪ್ ಮತ್ತು ಏಷಿಯಾದ ಮಾರ್ಕ್ಸ್‌ವಾದಿ ಚಿಂತಕರು ಈ ಹೊಸ ಶೈಕ್ಷಣಿಕ ವಿಧಾನವನ್ನು ರೂಪಿಸಿದರು. ಸಬಾಲ್ಟ್ರನ್ ಅಧ್ಯಯನಗಳ ವೈಧಾನಿಕತೆಯು ಕೇವಲ ಶೈಕ್ಷಣಿಕ ಕ್ಷೇತ್ರದಲ್ಲಿ ಆದ ಪಲ್ಲಟಗಳಿಂದ ಹುಟ್ಟಿದ್ದಲ್ಲ. ಮಾರ್ಕ್ಸ್‌ವಾದಿ ರಾಜಕೀಯ ಚಳವಳಿಗಳಲ್ಲಿ ಆದ ಸ್ಥಿತ್ಯಂತರಗಳು ಈ ಹೊಸ ದೃಷ್ಟಿಕೋನವನ್ನು ರೂಪಿಸಲು ನೆರವಾದವು. ಅದರಲ್ಲೂ ಮುಖ್ಯವಾಗಿ ಲೆನಿನ್ ರಷ್ಯಾದಲ್ಲಿ ಕಾರ್ಮಿಕರ ಐಕ್ಯತೆಯನ್ನು ಸಾಧಿಸಿ ಕ್ರಾಂತಿಗೆ ಕಾರಣನಾದ. ಜಗತ್ತು ಈ ಬದಲಾವಣೆಯನ್ನು ಬೆರಗುಗಣ್ಣುಗಳಿಂದ ನೋಡಿತು. ದುಡಿವ ಜನರ ಐಕ್ಯ ಹೋರಾಟಗಳು ರಾಜಕೀಯಾರ್ಥಿಕ ಬದಲಾವಣೆಗಳನ್ನು ತರಬಲ್ಲವು ಎಂಬುದನ್ನು ಜಗತ್ತು ನಂಬಿತು. ಚೀನಾದಲ್ಲಿ ಮಾವೋತ್ಸೆ ತುಂಗ್ ಈ ಸಮೀಕರಣವನ್ನು ಬದಲಾಯಿಸಿದ. ಕಾರ್ಖಾನೆಗಳ ಕಾರ್ಮಿಕರಿಲ್ಲದ ಚೀನಾದಲ್ಲಿ ಮಾವೋ ಕೃಷಿಕರನ್ನು, ಕೃಷಿಕೂಲಿಗಳನ್ನು ಸಂಘಟಿಸಿ ಚೀನಾದಲ್ಲಿ ಬಹುದೊಡ್ಡ ಬದಲಾವಣೆಯನ್ನು ತಂದನು. ರಷ್ಯಾ ಮತ್ತು ಚೀನಾದಲ್ಲಿ ನಡೆದ ಈ ರಾಜಕೀಯ ಪಲ್ಲಟಗಳು ಜಗತ್ತಿನ ಚಿಂತನಾಕ್ರಮವನ್ನೂ ಬದಲಾಯಿಸಿದವು. ಊಳಿಗಮಾನ್ಯ ಸಮಾಜಗಳಲ್ಲೂ ತಳಸ್ತರದ ಸಮುದಾಯಗಳನ್ನು ಸಂಘಟಿಸುವ ಪ್ರಯತ್ನಗಳು ನಡೆದವು. ಇಂತಹ ಪ್ರಯತ್ನ ಇಟಲಿ ಮತ್ತು ಯುರೋಪಿನ ದಕ್ಷಿಣದ ದೇಶಗಳಲ್ಲಿ ನಡೆದವು. ಆಂತೋನಿ ಗ್ರಾಮ್ಷಿ ಇಟಲಿಯಲ್ಲಿ ಮಾಡಿದ ಸಾಂಘಿಕ ಪ್ರಯೋಗಗಳು ಮತ್ತು ಆತ ರೂಪಿಸಿದ ಚಿಂತನಾಕ್ರಮ ಮುಂದೆ ಸಬಾಲ್ಟ್ರನ್ ಅಧ್ಯಯನಕ್ಕೆ ದಾರಿ ಮಾಡಿಕೊಟ್ಟಿತು. ನಾನು ಸಹ ಸಬಾಲ್ಟ್ರನ್ ಅಧ್ಯಯನಗಳ ಬೆಂಬಲಿಗ. ಏಕೆಂದರೆ ಸಬಾಲ್ಟ್ರನ್ ಅಧ್ಯಯನಗಳು ಕೇಂಬ್ರಿಜ್ ಪರಂಪರೆಯ ಚರಿತ್ರೆ ರಚನಾಕ್ರಮವನ್ನು ತಿರಸ್ಕರಿಸಿ ಹೊಸ ಹಾದಿಯನ್ನು ನಿರ್ಮಿಸಿತು. ಸಮಾಜದ ಅಂಚಿನ ಸಮುದಾಯಗಳ ಮೂಲಕ ಚರಿತ್ರೆಯನ್ನು ಕಟ್ಟುವ ಹೊಸ ಸಂಪ್ರದಾಯ ಶುರುವಾಯಿತು. ರೈತರು, ಮಹಿಳೆಯರು, ಕಾರ್ಮಿಕರು, ಆದಿವಾಸಿಗಳಂತಹ ಅಲಕ್ಷಿತ ಸಮುದಾಯಗಳು ಚರಿತ್ರೆಯ ಯಾವ ಪಾಠಗಳಲ್ಲೂ ದಾಖಲಾಗಿರಲಿಲ್ಲ. ಸಬಾಲ್ಟ್ರನ್ ಅಧ್ಯಯನಗಳಲ್ಲಿ ಈ ಅಂಚಿನ ಸಮುದಾಯಗಳು ಕೇಂದ್ರಕ್ಕೆ ಬಂದವು.

ನಾನು 1982ರಲ್ಲಿ ಕೋಲ್ಕತ್ತಾದಲ್ಲಿದ್ದೆ. ಆಗ ತಾನೆ ಸಬಾಲ್ಟ್ರನ್ ಅಧ್ಯಯನದ ಮೊದಲೆರಡು ಸಂಚಿಕೆಗಳು ಮುದ್ರಣಕ್ಕೆ ಸಿದ್ಧವಾಗಿದ್ದವು. ನಾನು ಅಲ್ಲಿ ಗೌತಮ್ ಭದ್ರಾ ಅವರನ್ನು ಭೇಟಿ ಮಾಡಿದ್ದೆ. ಸಬಾಲ್ಟ್ರನ್ ಅಧ್ಯಯನದ ಸಂಪುಟಗಳನ್ನು ಪ್ರಕಟಿಸಲು ಅವರು ತುಂಬಾ ಉತ್ಸಾಹದಿಂದ ಓಡಾಡುತ್ತಿದ್ದರು. ಈ ಸಂಪುಟಗಳು ಕೋಲ್ಕತ್ತಾದಲ್ಲಿ ಮೊದಲ ಬಾರಿಗೆ ಪ್ರಕಟವಾಗುವ ಸಂದರ್ಭದಲ್ಲಿ ನಾನು ಅವರೆಲ್ಲರ ಉತ್ಸಾಹದಲ್ಲಿ ಭಾಗಿಯಾಗಿದ್ದಕ್ಕೆ ನನಗೆ ಸಂತೋಷವಿದೆ. ಭಾರತದಲ್ಲಿ ಸುಮಿತ್ ಸರ್ಕಾರ್, ರಂಜಿತ್ ಗುಹಾ, ಶಾಹಿದ್ ಅಮೀನ್, ವೀಣಾ ದಾಸ್, ಗ್ಯಾನ್ ಪ್ರಕಾಶ್, ದೀಪೇಶ್ ಚಕ್ರವರ್ತಿ, ಡೇವಿಡ್ ಹಾರ್ಡಿಮನ್, ತನಿಕಾ ಸರ್ಕಾರ್ ಮುಂತಾದ ವಿದ್ವಾಂಸರು ಈ ಅಧ್ಯಯನವನ್ನು ಸೈದ್ಧಾಂತಿಕವಾಗಿ ಬೆಳೆಸಿದರು. ನಾನು ಕ್ಯಾಲಿಫೋರ್ನಿಯಾದಲ್ಲಿದ್ದಾಗ ಭಾರತದಿಂದ ರಂಜಿತ್ ಗುಹಾ, ಆಸ್ಟ್ರೇಲಿಯಾದಿಂದ ಬರ್ನಾಡ್ ಕ್ಹೋನ್ ಬಂದಿದ್ದರು. ಆಗ ಸಬಾಲ್ಟ್ರನ್ ಅಧ್ಯಯನಗಳ ಹೊಸ ಸಾಧ್ಯತೆಗಳ ಬಗ್ಗೆ ನಾವು ಸುದೀರ್ಘವಾಗಿ ಚರ್ಚಿಸಿದೆವು. ಆದರೆ 90ರ ದಶಕದಲ್ಲಿ ಆಧುನಿಕೋತ್ತರವಾದಿಗಳು ಅದರಲ್ಲೂ ಗಾಯತ್ರಿ ಸ್ಪಿವಾಕ್ ಸಬಾಲ್ಟ್ರನ್ ಅಧ್ಯಯನಗಳ ಮಿತಿಗಳನ್ನು ಗುರುತಿಸಿದರು. ಜಗತ್ತಿನ ಚರಿತ್ರೆಯನ್ನು ಮುರಿದುಕಟ್ಟುವ ವಿಶಾಲ ಸಂಕಥನಗಳಲ್ಲಿ ಸಬಾಲ್ಟ್ರನ್ ಅಧ್ಯಯನಗಳು ಕೇವಲ ಒಂದು ಭಾಗ ಮಾತ್ರ ಎಂದು ಅವರು ವಿಮರ್ಶಿಸಿದರು. ಫೂಕೋ, ಗ್ರಾಮ್ಷಿ ಮುಂತಾದ ಲೇಖಕರನ್ನು ಸ್ಪಿವಾಕ್ ತೀವ್ರವಾಗಿ ಓದಿದ್ದರು. ಗಾಯತ್ರಿ ಸ್ಪಿವಾಕ್ ಅವರ ಕಟುವಾದ ವಿಮರ್ಶೆಯ ನಂತರ ಸಬಾಲ್ಟ್ರನ್ ಅಧ್ಯಯನಗಳು ಹಳಿ ತಪ್ಪಿದಂತೆ ಭಾಸವಾಗುತ್ತಿದೆ.

ಸಬಾಲ್ಟ್ರನ್ ಅಧ್ಯಯನಗಳ ಮಿತಿ ಮತ್ತು ಹೊಸ ಸಾಧ್ಯತೆಗಳ ಕುರಿತು ನಾನು 2000ನೇ ಇಸ್ವಿಯಲ್ಲಿ ಒಂದು ಬರಹ ಮಾಡಿದೆ. ಅದರ ಹೆಸರು ‘ವಿ ಇಮ್ಯಾಜಿನಿಂಗ್ ಅದರ್‌ನೆಸ್’ (We Imagining Otherness). ಇದನ್ನು ಭಾರತದ ಯಾವ ಪ್ರಕಾಶಕರೂ ತಮ್ಮ ನಿಯತಕಾಲಿಕೆಗಳಲ್ಲಿ ಪ್ರಕಟಿಸಲಿಲ್ಲ. ‘ದಿ ಜರ್ನಲ್ ಆಫ್ ವರ್ಲ್ಡ್ ಹಿಸ್ಟರಿ’ ನಿಯತಕಾಲಿಕೆಯಲ್ಲಿ ಅದು ಪ್ರಕಟವಾಯಿತು. ನಾನು ಈ ಬರಹದಲ್ಲಿ ಸಬಾಲ್ಟ್ರನ್ ಅಧ್ಯಯನಗಳ ಮಿತಿಗಳ ಕುರಿತು ಬರೆದಿದ್ದೇನೆ. ಒಂದು ಅರ್ಥದಲ್ಲಿ ಸಬಾಲ್ಟ್ರನ್ ಅಧ್ಯಯನಗಳಿಗೆ ಗ್ರಹಣ ಹಿಡಿದಂತೆ ಭಾಸವಾಗುತ್ತಿದೆ. ಜಗತ್ತಿನ ಚರಿತ್ರೆಯಲ್ಲಿ ಯಾವತ್ತೂ ಕಾಣಿಸಿಕೊಳ್ಳದು ದೊಡ್ಡ ಸಂಖ್ಯೆಯ ಜನರ ದನಿಯನ್ನು ಕೇಳಿಸಿಕೊಳ್ಳಬೇಕಿದೆ. ಆದರೆ ಅಮೆರಿಕದಲ್ಲಿ ಹಾಗಾಗುತ್ತಿಲ್ಲ. ಇಲ್ಲಿ ಸಬಾಲ್ಟ್ರನ್ ಎಂದರೆ ಯಾರು ಎಂದು ಗೊತ್ತಿಲ್ಲ. ಈ ಪದವನ್ನು ಅಮೆರಿಕನ್ನರು ಕೇಳಿಸಿಕೊಂಡಿಲ್ಲ.

ಪ್ರಶ್ನೆ: ಇತ್ತೀಚೆಗೆ ಪ್ರಕಟವಾದ ನಿಮ್ಮ ‘ಇಂಡಿಯಾ ಇನ್ ಪರ್ಶಿನೇಟ್ ಏಜ್’ ಪುಸ್ತಕ ಭಾರತದಲ್ಲಿ ಬೇರೆಯದೇ ಆದ ಚರ್ಚೆಗಳನ್ನು ಹುಟ್ಟುಹಾಕುತ್ತಿದೆ.

ಈಟನ್: ಹೌದಾ? ಈ ಕುರಿತು ನನಗೆ ಮಾಹಿತಿ ಇಲ್ಲ. ಆದರೆ ಪುಸ್ತಕ ಓದಿದ ಕೆಲವು ಗೆಳೆಯರು ಪುಸ್ತಕದ ಕುರಿತು ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ. ಮತ್ತೆ ಅದೇ ಮಾತುಗಳನ್ನು ಹೇಳುವುದಾದರೆ; ಇತಿಹಾಸಕಾರ ವಸ್ತುನಿಷ್ಠ ವಿಶ್ಲೇಷಣೆಗೆ ಬದ್ಧನಾಗಿರಬೇಕು. ಚರಿತ್ರೆ ರಚನೆಗೆ ನಾವು ಬಳಸುವ ಆಕರಗಳು ಬಿಟ್ಟುಕೊಡುವ ಸತ್ಯಗಳನ್ನು ವೃತ್ತಿನಿಷ್ಠೆಯಿಂದ ದಾಖಲಿಸಬೇಕು. ಅದಕ್ಕಾಗಿ ಇತಿಹಾಸಕಾರನು ಕಾಲಕ್ಕೆ ಮತ್ತು ತನ್ನ ವೃತ್ತಿಗೆ ನಿಷ್ಠನಾಗಿರಬೇಕು. ಮತೀಯ ಪೂರ್ವಾಗ್ರಹ, ವರ್ಗನಿಷ್ಠೆ, ಧಾರ್ಮಿಕ ಮೂಲಭೂತವಾದಗಳಿಗೆ ತನ್ನನ್ನು ಅರ್ಪಿಸಿಕೊಂಡ ಇತಿಹಾಸಕಾರ ಭವಿಷ್ಯದ ಜನಾಂಗಗಳಿಗೆ ಮಾರಕವಾಗುತ್ತಾನೆ.

‘ಇಂಡಿಯಾ ಇನ್ ಪರ್ಶಿನೇಟ್ ಏಜ್’ ಪುಸ್ತಕವು ಭಾರತದಲ್ಲಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಕರತೆ ಹೇಗೆ ಸಾಧ್ಯವಾಗಿದೆ ಎಂಬುದನ್ನು ಅನಾವರಣ ಮಾಡುತ್ತದೆ. ಭಾರತದ ಜಟಿಲ ಸಾಮಾಜಿಕ ಪರಿಸರದಲ್ಲಿ ಈ ವಿರಾಟ ಸಂಕರತೆ ಹೇಗೆ ಸಾಧ್ಯವಾಯಿತು ಎಂಬುದನ್ನು ವಿಶ್ಲೇಷಿಸಲು ನಾನು ಈ ಅಧ್ಯಯನವನ್ನು ಕೈಗೊಂಡೆ. ಭಾರತದ ಮಧ್ಯಕಾಲೀನ ಚರಿತ್ರೆಯನ್ನು ರಾಷ್ಟ್ರೀಯವಾದಿ ಇತಿಹಾಸಕಾರರು ಕರಾಳ ಅವಧಿ ಎಂದು ಕರೆಯುತ್ತಾರೆ. ಆದರೆ ಈ ಮಧ್ಯಕಾಲೀನ ಚರಿತ್ರೆಯಲ್ಲಿ ಭಾರತವು ಅನೇಕ ರಚನಾತ್ಮಕ ಸಂಕರಗಳಿಗೆ ತನ್ನನ್ನು ಒಡ್ಡಿಕೊಂಡಿದೆ. ಈ ಕಾಲಘಟ್ಟದಲ್ಲಿ ಭಾರತವು ಒಂದು ಉನ್ನತಮಟ್ಟದ ಸಾಮಾಜಿಕ ಮತ್ತು ಸಾಂಸ್ಕೃತಿಕ ಅನುಸಂಧಾನಕ್ಕೆ ಒಳಗಾಗಿದೆ. ರಾಜಕೀಯಾರ್ಥಿಕ ಕ್ಷೇತ್ರಗಳಲ್ಲೂ ಭಾರತ ಒಂದು ಹೊಸ ಚೈತನ್ಯವನ್ನು ಪಡೆದಿದೆ. ಪ್ರಸ್ತುತ ವಿದ್ಯಮಾನವನ್ನು ಅಧ್ಯಯನ ಮಾಡಲು ನಾನು ಈ ಪುಸ್ತಕವನ್ನು ಬರೆಯುವ ಸಾಹಸವನ್ನು ಮಾಡಿದೆ.

ಪರ್ಶಿಯನ್ ಸಂಸ್ಕೃತಿಯು ಸಂಸ್ಕೃತ ಭಾಷಿಕ ಪರಿಸರದ ಒಳಗೆ ಮಿಳಿತವಾಗಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾದಾದ್ಯಂತ ಹರಡಿತು. ಸಂಸ್ಕೃತ ಮತ್ತು ಪರ್ಶಿಯನ್ ಸಂಸ್ಕೃತಿಗಳ ಸಂಕರವು ಭಾರತದಲ್ಲಿ ಗುರುತರ ಬದಲಾವಣೆಗಳನ್ನು ತಂದಿತು. ನಂತರ ಭಾರತದಲ್ಲಿ ಉತ್ಕೃಷ್ಟವಾದ ಪರ್ಶಿಯನ್ ಕೃತಿಗಳು ರೂಪುಗೊಂಡವು. ಅದರಲ್ಲೂ ನಿಘಂಟುಗಳು ಮತ್ತು ಕಾವ್ಯಕ್ಕೆ ಸಂಬಂಧಿಸಿದ ಕೃತಿಗಳು ಭಾರತದಲ್ಲಿ ಪ್ರಕಟವಾದವು. 14ನೇ ಶತಮಾನದ ವೇಳೆಗೆ ಪರ್ಶಿಯನ್ ಭಾಷೆ ದಕ್ಷಿಣ ಏಶಿಯಾದ ಆಡಳಿತ ಕ್ಷೇತ್ರದಲ್ಲಿ ವ್ಯಾಪಕವಾಗಿ ಬಳಕೆಯಾಗಲಾರಂಭಿಸಿತು. ಕಂದಾಯ, ನ್ಯಾಯಾಂಗ ಮತ್ತು ಇತರ ಆಡಳಿತ ಕ್ಷೇತ್ರದಲ್ಲಿ ಪರ್ಶಿಯನ್ ಭಾಷೆಯು ಅಧಿಕೃತ ಭಾಷೆ ಎಂಬಂತೆ ಬಳಕೆಯಾಗತೊಡಗಿತು. ಪರ್ಶಿಯನ್ ಭಾಷೆಯಿಂದ ಸ್ಥಳೀಯ ಭಾಷೆಗೆ ಕೃತಿಗಳು ಅನುವಾದಗೊಂಡವು. ದಾರಾ ಶಿಕೋ ತರಹದ ವಿದ್ವಾಂಸರು ಉಪನಿಷತ್ತುಗಳನ್ನು ಪರ್ಶಿಯನ್ ಭಾಷೆಗೆ ಅನುವಾದಿಸಿದರು. ಮೊಘಲ್ ಅರಸರು ತಮ್ಮ ನಾಣ್ಯಗಳನ್ನು ಸ್ಥಳೀಯ ಪರಂಪರೆಗೆ ಅನುಗುಣವಾಗಿ ರೂಪಿಸಿದರು. ಇದಲ್ಲದೆ ಮೊಘಲರ ಅವಧಿಯಲ್ಲಿ ಭಾರತವು ಆಧುನಿಕತೆಯ ಹಾದಿಯನ್ನು ತುಳಿಯುವಂತಾಯಿತು. ಇದೇ ಕಾಲಘಟ್ಟದಲ್ಲಿ ಸಂಸ್ಕೃತ ಮತ್ತು ಪರ್ಶಿಯನ್ ಸಂಸ್ಕೃತಿಗಳ ಸಂಕರವು ಎಲ್ಲ ರಂಗಗಳಲ್ಲಿ ಅಭಿವ್ಯಕ್ತವಾಯಿತು. ವಾಸ್ತುಶಿಲ್ಪ, ಚಿತ್ರಕಲೆ, ಕಾವ್ಯ ರಚನೆ ಮತ್ತು ನಾಣ್ಯ ತಯಾರಿಕೆಗಳಲ್ಲಿ ಈ ಸಂಕರತೆ ವ್ಯಕ್ತವಾಯಿತು. ಒಟ್ಟಿನಲ್ಲಿ ವಸಾಹತುಪೂರ್ವ ಭಾರತದಲ್ಲಿ ಪರ್ಶಿಯನ್ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯವು ಹೇಗೆ ಭಾರತದ ಸ್ಥಳೀಯ ಸಂಸ್ಕೃತಿಗಳಲ್ಲಿ ಸಮ್ಮಿಳನಗೊಂಡಿತು ಎಂಬುದನ್ನು ಈ ಕೃತಿಯಲ್ಲಿ ವಿಶ್ಲೇಷಿಸಲು ಪ್ರಯತ್ನಿಸಿದ್ದೇನೆ.

ಪ್ರಶ್ನೆ: ನೀವು ಮತ್ತು ಇಂದ್ರಾಣಿ ಚಟರ್ಜಿ ಜೊತೆಗೂಡಿ ಸಂಪಾದಿಸಿರುವ ‘ಸ್ಲೇವರಿ ಅಂಡ್ ಸೌತ್ ಏಶಿಯನ್ ಹಿಸ್ಟರಿ’ ಕೃತಿ ಅತ್ಯಂತ ಮಹತ್ವದ್ದು. ಈ ತರಹದ ಪುಸ್ತಕ ರಚನೆಯ ಹಿಂದಿರುವ ಪ್ರೇರಣೆಗಳೇನು?

ಈಟನ್: ಭಾರತದಲ್ಲಿ ಗುಲಾಮಗಿರಿಯನ್ನು ಶಾಸ್ತ್ರಬದ್ಧವಾಗಿ ಸಮರ್ಥಿಸಲಾಗುತ್ತದೆ. ವರ್ಣಾಶ್ರಮ ಪದ್ಧತಿಯಲ್ಲಿ ಗುಲಾಮಗಿರಿ ಎನ್ನುವುದು ಒಂದು ಸಾಮಾನ್ಯ ವ್ಯವಸ್ಥೆ ಎಂದು ಶಾಸ್ತ್ರಗ್ರಂಥಗಳು ಹೇಳುತ್ತವೆ. ಪ್ರಭುತ್ವಗಳು ಗುಲಾಮಗಿರಿಯನ್ನು ಹುಟ್ಟುಹಾಕಿದ್ದಲ್ಲದೆ ಅದನ್ನು ವಿವಿಧ ರೂಪಗಳಲ್ಲಿ ಸಾಕಿಕೊಂಡು ಬಂದಿವೆ. ಇದು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಗುಲಾಮಗಿರಿ ಎನ್ನುವುದು ಜಾಗತಿಕ ವಿದ್ಯಮಾನ. ಊಳಿಗಮಾನ್ಯ ವ್ಯವಸ್ಥೆಯ ಅಸ್ತಿತ್ವ ಗುಲಾಮಗಿರಿಯ ಮೇಲೆ ನಿಂತಿದೆ. ಮನುಷ್ಯನ ದುಡಿಮೆಯ ಮಹತ್ವ ಮತ್ತು ಘನತೆಗಳನ್ನು ಗುಲಾಮಗಿರಿ ಯಾವತ್ತೂ ಗಂಭೀರವಾಗಿ ತೆಗೆದುಕೊಂಡ ಉದಾಹರಣೆಗಳಿಲ್ಲ. ಪುನರುಜ್ಜೀವನದ ಕಾಲಘಟ್ಟದ ನಂತರ ವಸಾಹತುಗಳ ಸ್ಥಾಪನೆ ಪ್ರಾರಂಭವಾಯಿತು. ವಸಾಹತುಗಳಲ್ಲಿ ದುಡಿಯಲು ಬೇಕಾದ ಮಾನವಸಂಪನ್ಮೂಲವನ್ನು ಬಂಡವಾಳಶಾಹಿ ರಾಷ್ಟ್ರಗಳು ಗುಲಾಮ ವ್ಯವಸ್ಥೆಯ ಮೂಲಕ ಕ್ರೋಢೀಕರಿಸಿದವು. ಭಾರತದ ಮಧ್ಯಕಾಲೀನ ಚರಿತ್ರೆಯಲ್ಲಿ ಗುಲಾಮಗಿರಿಯು ಬೇರೆಯದೇ ಆಯಾಮವನ್ನು ಪಡೆದುಕೊಂಡಿತ್ತು. ಪಾರಂಪರಿಕ ಗುಲಾಮ ವ್ಯವಸ್ಥೆಯ ಜೊತೆಗೆ ಹೊಸ ಬಗೆಯ ಗುಲಾಮಗಿರಿ ಅಸ್ತಿತ್ವಕ್ಕೆ ಬಂದಿತು. ರಜಪೂತರ ಮನೆಗಳಲ್ಲಿ ಮಹಿಳೆಯರನ್ನು ಗುಲಾಮರನ್ನಾಗಿಸಿಕೊಳ್ಳುವ ಪದ್ಧತಿ ಜಾರಿಗೆ ಬಂದಿತು. ಅರಬ್ ವ್ಯಾಪಾರಿಗಳು ಆಫ್ರಿಕಾದಿಂದ ಹಿಡಿದುತಂದ ಗುಲಾಮ-ಸೈನಿಕರನ್ನು ಡೆಕ್ಕನ್ ಪ್ರದೇಶದಲ್ಲಿ ಮಾರಾಟ ಮಾಡಲಾರಂಭಿಸಿದರು. ಮರಾಠ ಅರಸರು ಕಂದಾಯ ಪಾವತಿಸದ ತಳಸಮುದಾಯಗಳ ಹೆಣ್ಣುಮಕ್ಕಳನ್ನು ಕೀಳುದರ್ಜೆಯ ಸ್ವಚ್ಛತಾ ಕೆಲಸಗಳನ್ನು ನಿರ್ವಹಿಸಲು ಗುಲಾಮರನ್ನಾಗಿ ನೇಮಿಸಿಕೊಂಡರು. ಪೂರ್ವದ ರಾಜ್ಯಗಳಾದ ಮಣಿಪುರ, ತ್ರಿಪುರ ಮತ್ತು ಅಸ್ಸಾಂಗಳಲ್ಲಿ ಕಾಡುಗಳನ್ನು ಕಡಿಯಲು ಅಲ್ಲಿನ ಸ್ಥಳೀಯ ಸಮುದಾಯಗಳ ಗಂಡು-ಹೆಣ್ಣುಗಳನ್ನು ಗುಲಾಮರನ್ನಾಗಿಸಿಕೊಳ್ಳಲಾಯಿತು. ಈ ವ್ಯವಸ್ಥೆಯನ್ನು ಅಧ್ಯಯನ ಮಾಡುವುದು ಪ್ರಸ್ತುತ ಯೋಜನೆಯ ಮುಖ್ಯ ಗುರಿಯಾಗಿತ್ತು.

ದಕ್ಷಿಣ ಏಶಿಯಾದಲ್ಲಿನ ಗುಲಾಮ ವ್ಯವಸ್ಥೆ ಏಕರೂಪದಲ್ಲಿಲ್ಲ. ಇತಿಹಾಸದ ದಾಖಲೆಗಳನ್ನು ಪರಿಶೀಲಿಸಿದಾಗ ಈ ಭಾಗದ ಗುಲಾಮ ವ್ಯವಸ್ಥೆಗೆ ಅನೇಕ ಆಯಾಮಗಳಿರುವುದು ಗಮನಕ್ಕೆ ಬಂದಿತು. ಕಾಲ ಮತ್ತು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಗುಲಾಮಗಿರಿಯ ಸ್ವರೂಪ ಬದಲಾಗುತ್ತಾ ಬಂದಿದೆ. ಹೀಗೆ ಬದಲಾದ ಸ್ವರೂಪಕ್ಕೆ ಕಾರಣವಾದ ಚಾರಿತ್ರಿಕ ಸಂಗತಿಗಳನ್ನು ಅಧ್ಯಯನ ಮಾಡುವುದು ನಮ್ಮ ಉದ್ದೇಶವಾಗಿತ್ತು. ಗುಲಾಮಗಿರಿ ಅಮೆರಿಕ ಸಂಯುಕ್ತ ಸಂಸ್ಥಾನದ ಪ್ರಧಾನ ರಾಜಕೀಯ ಆಸ್ಮಿತೆಯಾಗಿತ್ತು. ಕೆರೇಬಿಯನ್ ದ್ವೀಪಗಳಲ್ಲಿ, ದಕ್ಷಿಣ ಅಮೆರಿಕ, ಯುರೋಪ್ ಮುಂತಾದ ಖಂಡಗಳಲ್ಲಿ ಗುಲಾಮ ವ್ಯವಸ್ಥೆಯು ಅನೇಕ ಆಯಾಮಗಳಲ್ಲಿ ಅಸ್ತಿತ್ವದಲ್ಲಿತ್ತು. ಈ ಗುಲಾಮ ವ್ಯವಸ್ಥೆಯನ್ನು ದಕ್ಷಿಣ ಏಶಿಯಾದ ಪರಿಸ್ಥಿತಿಗಳಿಗೆ ಹೋಲಿಸಿ ನೋಡುವ ಪ್ರಯತ್ನಗಳು ಆಗಿರಲಿಲ್ಲ. ಈ ಕಾರಣಕ್ಕಾಗಿ ಪ್ರಸ್ತುತ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂಪುಟದಲ್ಲಿ ದಕ್ಷಿಣ ಏಶಿಯಾದ ಗುಲಾಮಗಿರಿಯನ್ನು ಸಮಗ್ರವಾಗಿ ದಾಖಲಿಸಲಾಗಿಲ್ಲ. ಆದರೆ ಈ ಭಾಗದ ಗುಲಾಮಗಿರಿಯ ವಿವಿಧ ಆಯಾಮಗಳು ಮತ್ತು ಪ್ರದೇಶಿಕ ವೈಶಿಷ್ಟ್ಯಗಳನ್ನು ವಿಶ್ಲೇಷಿಸುವ ಪ್ರಯತ್ನವನ್ನು ಮಾಡಲಾಗಿದೆ.

ಪ್ರಶ್ನೆ: ಇಂಡಿಯಾದ ಯಾವ ಇತಿಹಾಸಕಾರರನ್ನು ನೀವು ಗಾಢವಾಗಿ ಅಧ್ಯಯನ ಮಾಡಿದ್ದೀರಿ? ಭಾರತದ ಯಾವ ಇತಿಹಾಸಕಾರು ನಿಮ್ಮ ಮೇಲೆ ಪ್ರಭಾವ ಬೀರಿದ್ದಾರೆ.

ಈಟನ್: ಇರ್ಫಾನ್ ಸಾಬ್…. ನಿಸ್ಸಂದೇಹವಾಗಿ ನನ್ನ ಮೇಲೆ ಪ್ರಭಾವ ಬೀರಿದ್ದು ಇರ್ಫಾನ್ ಸಾಬ್. ಅಂದರೆ ಇರ್ಫಾನ್ ಹಬೀಬ್. ಇರ್ಫಾನ್ ಅವರನ್ನು ನಾನು ಗಾಢವಾಗಿ ಓದಿದ್ದೇನೆ. ಅವರ ‘ಪೀಪಲ್ ಹಿಸ್ಟರಿ ಸಿರೀಸ್’ ತುಂಬಾ ಚೆನ್ನಾಗಿದೆ. ವಸಾಹತುಪೂರ್ವ ಕಾಲಘಟ್ಟದ ಭಾರತದ ಚರಿತ್ರೆಯನ್ನು ಅವರು ಅತ್ಯಂತ ವಸ್ತುನಿಷ್ಠವಾಗಿ ಕಟ್ಟಿಕೊಟ್ಟಿದ್ದಾರೆ. ಅವರನ್ನು ಭೇಟಿ ಮಾಡುವುದು ನನ್ನ ಕನಸಾಗಿತ್ತು. ಒಮ್ಮೆ ಅಲೀಘಡ್ ವಿಶ್ವವಿದ್ಯಾಲಯದಲ್ಲಿ ಅವರನ್ನು ನಾನು ಭೇಟಿ ಮಾಡಿದೆ. ಅವರ ಕೊಠಡಿಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿ ಎದುರಗಡೆ ಮಾವೊತ್ಸೇತುಂಗ್ ಅವರ ದೊಡ್ಡ ಭಾವಚಿತ್ರ ಕಂಡಿತು. ಆಗ ನನ್ನಲ್ಲಿ ಇರ್ಫಾನ್ ಹಬೀಬ್ ಯಾವ ತರಹದ ಮಾರ್ಕ್ಸ್‌ವಾದಿಯಾಗಿರಬಹುದು ಎಂಬ ಪ್ರಶ್ನೆ ಹುಟ್ಟಿತು. ಅದೇನೇ ಇರಲಿ, ಇರ್ಫಾನ್ ಸಾಬ್ ಭಾರತದ ಬಹಳ ದೊಡ್ಡ ಇತಿಹಾಸಕಾರ.

ಪ್ರಶ್ನೆ: ಇರ್ಫಾನ್ ಹಬೀಬ್ ಅವರನ್ನು ಬಿಟ್ಟು ಇಂಡಿಯಾದ ಯಾವ ಇತಿಹಾಸಕಾರರನ್ನು ನೀವು ಹೆಚ್ಚು ಓದಿದ್ದೀರಿ?

ಈಟನ್: ರೋಮಿಲಾ ಥಾಪರ್…. ಇರ್ಫಾನ್ ಹಬೀಬ್ ನಂತರ ನಾನು ಹೆಚ್ಚು ಓದಿದ್ದು ರೋಮಿಲಾ ಥಾಪರ್ ಅವರನ್ನು. ರೋಮಿಲಾ ಥಾಪರ್ ಅವರೂ ಸಹ ದೊಡ್ಡ ಇತಿಹಾಸಕಾರರು. ಇಂಡಿಯಾದಲ್ಲಿ ಈಗ ಬದುಕಿರುವ ಇತಿಹಾಸಕಾರರಲ್ಲಿ ಅತ್ಯಂತ ಮಹತ್ವದ ಇತಿಹಾಸಕಾರರೆಂದರೆ ಅದು ರೋಮಿಲಾ ಥಾಪರ್. ಅವರು ಮಧ್ಯಕಾಲೀನ ಚರಿತ್ರೆಯ ಬಗ್ಗೆ ಅಷ್ಟು ಕೆಲಸ ಮಾಡಿದಂತಿಲ್ಲ. ಆದರೆ ಭಾರತದ ಪ್ರಾಚೀನ ಇತಿಹಾಸದ ಮೇಲೆ ಅವರು ದೊಡ್ಡ ಕೆಲಸ ಮಾಡಿದ್ದಾರೆ. ಆದರೆ ಅವರಿಗೆ ಮಧ್ಯಕಾಲೀನ ಇತಿಹಾಸದ ಬಗ್ಗೆ ಎಲ್ಲವೂ ಗೊತ್ತು. ನಿಜವಾದ ಅರ್ಥದಲ್ಲಿ ಅವರು ನನ್ನ ಹೀರೋ. 2022ರಲ್ಲಿ ನಾನು ಮಧ್ಯಪ್ರದೇಶ ಸುಲ್ತಾನರ ಬಗ್ಗೆ ಅಧ್ಯಯನ ಮಾಡಲು ಇಂಡಿಯಾಕ್ಕೆ ಬಂದಿದ್ದೆ. ಈ ಕುರಿತು ಹೆಚ್ಚು ಅಧ್ಯಯನಗಳು ನಡೆದಿರಲಿಲ್ಲ. ಈ ಯೋಜನೆಗಾಗಿ ಕ್ಷೇತ್ರಕಾರ್ಯ ಮಾಡಲು ಮಧ್ಯಪ್ರದೇಶದಲ್ಲಿದ್ದೆ. ಅಲ್ಲಿ ನನ್ನ ಆರೋಗ್ಯ ಕೈಕೊಟ್ಟಿತು. ವೀಸಾ ಅವಧಿಯೂ ಮುಗಿಯುತ್ತಾ ಬಂದಿತ್ತು. ಆಗ ನಾನು ದೆಹಲಿಗೆ ವಾಪಸ್ಸಾಗಿ ರೋಮಿಲಾ ಥಾಪರ್ ಅವರಿಗೆ ಫೋನ್ ಮಾಡಿದೆ. ‘ನಾನು ಮಧ್ಯಪ್ರದೇಶದ ಸುಲ್ತಾನರ ಬಗ್ಗೆ ಅಧ್ಯಯನ ಮಾಡಲು ಬಂದಿದ್ದೇನೆ. ಕೆಲವು ದಿನ ಮಾತ್ರ ದೆಹಲಿಯಲ್ಲಿರುವೆ. ಸಾಧ್ಯವಾದರೆ ನಾವು ಭೇಟಿ ಮಾಡಿ ಕಾಫಿ ಕುಡಿಯಬಹುದಾ?’ ಎಂದು ಕೇಳಿದೆ. ರೋಮಿಲಾ ಅವರು ನನ್ನನ್ನು ತಮ್ಮ ಮನೆಗೆ ರಾತ್ರಿ ಊಟಕ್ಕೆ ಆಹ್ವಾನಿಸಿದರು. ಅವರ ಮನೆಗೆ ಹೋಗಿ ಬಹಳ ಹೊತ್ತು ಭಾರತದ ಚರಿತ್ರೆಯ ಕುರಿತು ಚರ್ಚೆ ಮಾಡಿದೆ. ಅಂದು ನನ್ನ ಬಳಿ ಇದ್ದ ‘ಇಂಡಿಯಾ ಇನ್ ಪರ್ಸಿನೇಟ್ ಏಜ್’ ಪುಸ್ತಕವನ್ನು ಅವರಿಗೆ ನೀಡಿದೆ. ಈ ಹಿಂದೆ ರೋಮಿಲಾ ನನ್ನ ಹೆಸರನ್ನು ಪೆಂಗ್ವಿನ್ ಸಂಪಾದಕರಿಗೆ ಪರಿಚಯಿಸಿ ‘ಪೆಂಗ್ವಿನ್ ಹಿಸ್ಟರಿ ಆಫ್ ಇಂಡಿಯಾ’ ಪುಸ್ತಕ ಬರಲು ಅವರೆ ಕಾರಣರಾಗಿದ್ದರು. ಊಟಕ್ಕೆ ಕುಳಿತಿದ್ದಾಗ ನಾನು ಈ ವಿಷಯವನ್ನು ರೋಮಿಲಾ ಅವರಿಗೆ ನೆನಪಿಸಿ ಅವರ ಉದಾರತೆಯನ್ನು ಮನಸಾರೆ ಅಭಿನಂದಿಸಿದೆ. ಆಗ ರೋಮಿಲಾ ‘ಆಯ್ತು ಡೆಕ್ (ಈಟನ್), ನಿಮ್ಮ ಆ ಪುಸ್ತಕಕ್ಕೆ ನನ್ನನ್ನು ಗಾಡ್‌ಮದರ್ ಎಂದು ಬೇಕಾದರೂ ನೀವು ಕರೆಯಬಹುದು’ ಎಂದು ತಮಾಷೆ ಮಾಡಿದರು. ದುರಾದೃಷ್ಟದ ಸಂಗತಿ ಎಂದರೆ ಆ ಪುಸ್ತಕ ರೋಮಿಲಾ ಅವರ ಬಳಿ ಇರಲಿಲ್ಲ. ಆ ಪುಸ್ತಕ ಪ್ರಕಟವಾಗಲು ಕಾರಣವಾದ ‘ಗಾಡ್ ಮದರ್’ ಬಳಿ ಅದರ ಒಂದು ಪ್ರತಿ ಇರಲಿಲ್ಲ. ನಾನು ರಾತ್ರಿ ಹೊಟೇಲ್‌ಗೆ ಬಂದು ನನ್ನ ಬ್ಯಾಗನ್ನು ತಡಕಾಡಿದಾಗ ‘ಪೆಂಗ್ವಿನ್ ಹಿಸ್ಟರಿ ಆಫ್ ಇಂಡಿಯಾ’ ಪುಸ್ತಕದ ಕೊನೆಯ ಪ್ರತಿಯೊಂದು ಉಳಿದುಕೊಂಡಿತ್ತು. ತುಂಬಾ ಸಂತೋಷದಿಂದ ರೋಮಿಲಾಗೆ ಫೋನ್ ಮಾಡಿ ಅದನ್ನು ತಿಳಿಸಿದೆ. ಮರುದಿನ ನಾನು ಮತ್ತೆ ಅವರ ಮನೆಗೆ ಉಪಹಾರಕ್ಕೆ ಹೋದೆ. ರೋಮಿಲಾ ನನಗಾಗಿ ಪ್ಯಾನ್ ಕೇಕ್ ಮತ್ತು ಕೆನೇಡಿಯನ್ ಮೇಪಲ್ ಸಿರಪ್ ತಯಾರಿಸಿ ಇಟ್ಟಿದ್ದರು. ಈ ಎಲ್ಲ ಕಾರಣಕ್ಕಾಗಿ ರೋಮಿಲಾ ಥಾಪರ್ ನನ್ನ ಪಾಲಿಗೆ ಒಂದು ವಿಶೇಷ ವ್ಯಕ್ತಿ. ಅವರನ್ನು ನಾನು ಮರೆಯಲು ಸಾಧ್ಯವಿಲ್ಲ.

ಪ್ರಶ್ನೆ: ಈಗ ನೀವು ಯಾವ ಅಧ್ಯಯನವನ್ನು ಕೈಗೊಂಡಿದ್ದೀರಿ?

ಈಟನ್: ಈ ಅಧ್ಯಯನ ಯೋಜನೆ ಸ್ವಲ್ಪ ಕ್ರೇಜಿಯಾಗಿದೆ. ಅದೇನೆಂದರೆ, ಭಾರತದ ಯಾವುದೇ ಐತಿಹಾಸಿಕ ಸ್ಥಳವನ್ನು ನೀವು ನೋಡಲು ಹೋದರೆ ಅಲ್ಲಿ ನಿಮಗೆ ಮಾರ್ಗದರ್ಶನ ಮಾಡಲು ಗೈಡ್‌ಗಳನ್ನು ಆಯ್ದುಕೊಳ್ಳುತ್ತೀರಿ. ನಿಮಗೆ ದೇವಾಲಯವೊಂದರ ವಾಸ್ತುಶಿಲ್ಪವನ್ನು ವಿವರಿಸುವ ಆ ಗೈಡ್ ಅವನಿಗೆ ತೋಚಿದ ಇತಿಹಾಸವೊಂದನ್ನು ನಿಮಗೆ ಹೇಳುತ್ತಾನೆ. (ಎಲ್ಲಾ ಗೈಡ್‌ಗಳೂ ಹೀಗೆ ಸುಳ್ಳು ಹೇಳುವುದಿಲ್ಲ. ಆದರೆ ಬಹುತೇಕರು ಇಲ್ಲದ ಚರಿತ್ರೆಯನ್ನು ಸೃಷ್ಟಿಸಿ ಹೇಳುತ್ತಾರೆ) ಆ ದೇವಾಲಯದ ಯಾವುದೋ ಭಾಗವು ಮಳೆಗಾಳಿಗೋ ಅಥವಾ ಬೇರೆ ಯಾವುದೋ ಕಾರಣಕ್ಕೆ ಭಗ್ನವಾಗಿದ್ದರೆ ಮುಸ್ಲಿಮರು ಈ ದೇವಾಲಯವನ್ನು ನಾಶ ಮಾಡಿದ್ದಾರೆ ಎಂಬ ಕಥೆ ಹೇಳಲು ಪ್ರಾರಂಭಿಸುತ್ತಾನೆ. ಐತಿಹಾಸಿಕ ಸ್ಥಳಗಳನ್ನು ನೋಡಲು ಬರುವ ಜನಸಾಮಾನ್ಯರಿಗೆ ಈ ಗೈಡ್‌ಗಳು ಇಲ್ಲದ ಭ್ರಮೆಗಳನ್ನು ಹರಿಯಬಿಡುತ್ತಾರೆ. ಜನಸಾಮಾನ್ಯರೂ ಸಹ ಗೈಡ್‌ಗಳ ಸುಳ್ಳುಗಳನ್ನೇ ಚರಿತ್ರೆ ಎಂಬಂತೆ ನಂಬುತ್ತಾರೆ. ಈ ಗೈಡ್‌ಗಳು ಬಿತ್ತರಿಸುತ್ತಿರುವ ಕಟ್ಟುಕಥೆಗಳ ಮೂಲ ಯಾವುದು? ಸುಳ್ಳುಗಳನ್ನು ಚರಿತ್ರೆಯನ್ನಾಗಿಸಿ ಹೇಳಲು ಈ ಗೈಡ್‌ಗಳಿಗೆ ಇರುವ ಪ್ರೇರಣೆಗಳಾವವು? ಈ ವಿದ್ಯಮಾನದಿಂದಾಗಿ ನೈಜ ಚರಿತ್ರೆಯನ್ನು ಜನಸಾಮಾನ್ಯರು ಹೇಗೆ ಅನುಮಾನಿಸುತ್ತಿದ್ದಾರೆ? ಎಂಬ ಪ್ರಶ್ನೆಗಳು ನನ್ನಲ್ಲಿ ಹುಟ್ಟಿವೆ. ಈ ಯೋಜನೆಯ ರೂಪುರೇಷೆಗಳನ್ನು ಇನ್ನೂ ಸಿದ್ಧಪಡಿಸಬೇಕಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಕೈಗೊಳ್ಳುವ ಆಸೆಯಂತೂ ಇದ್ದೇ ಇದೆ.

ಡಾ. ಎ ಎಸ್ ಪ್ರಭಾಕರ

ಡಾ. ಎ. ಎಸ್. ಪ್ರಭಾಕರ
ಹಂಪಿ ವಿವಿಯ ಬುಡಕಟ್ಟು ವಿಭಾಗದ ಅಧ್ಯಾಪಕರಾದ ಡಾ.ಎ.ಎಸ್.ಪ್ರಭಾಕರ, ಮೂಲತಃ ಹರಪನಹಳ್ಳಿಯವರು. ಕರ್ನಾಟಕದ ಜನಪರ ಚಳವಳಿಗಳ ಸಂಗಾತಿಯೂ ಆಗಿರುವ ಅವರ ಕೆಲವು ಪುಸ್ತಕಗಳು ‘ಚಹರೆಗಳೆಂದರೆ ಗಾಯಗಳೂ ಹೌದು’, ‘ಆದಿವಾಸಿಗಳ ಅಭಿವೃದ್ಧಿ’.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...