Homeಕರ್ನಾಟಕಮಹೇಂದ್ರಕುಮಾರ್ ಎಂಬ ಪ್ರಚ್ಛನ್ನ ಆಕ್ಟಿವಿಸ್ಟ್

ಮಹೇಂದ್ರಕುಮಾರ್ ಎಂಬ ಪ್ರಚ್ಛನ್ನ ಆಕ್ಟಿವಿಸ್ಟ್

- Advertisement -
- Advertisement -

ಸ್ಪೂರ್ತಿಧಾಮ ಸಂಸ್ಥೆಯು ತಳಸ್ತರದ ಸಮುದಾಯಗಳ ಸಬಲೀಕರಣಕ್ಕೆ ದುಡಿದ ಮಹನೀಯರಿಗೆ ‘ಬೋಧಿವೃಕ್ಷ’ ಮತ್ತು ‘ಬೋಧಿವರ್ಧನ’ ಪ್ರಶಸ್ತಿಗಳನ್ನು ಕಳೆದ ಒಂದೂವರೆ ದಶಕದಿಂದ ನೀಡುತ್ತಾ ಬಂದಿದೆ. ಪ್ರಭುತ್ವ ಕಾಟಾಚಾರಕ್ಕಾಗಿ ಮಾಡುವ ಅಂಬೇಡ್ಕರ್ ಜಯಂತಿಯನ್ನು ಸ್ಪೂರ್ತಿಧಾಮ ಸಂಸ್ಥೆಯು ‘ಅಂಬೇಡ್ಕರ್ ಹಬ್ಬ’ವನ್ನಾಗಿ ಆಚರಿಸುತ್ತಾ ಬಂದಿದೆ. ಜೊತೆಗೆ ಮಹತ್ವದ ಚಿಂತಕರನ್ನು ‘ಅಂಬೇಡ್ಕರ್ ಹಬ್ಬ’ಕ್ಕೆ ಆಹ್ವಾನಿಸಿ ಅರ್ಥಪೂರ್ಣ ಚರ್ಚೆಗಳನ್ನು ಸಹ ಏರ್ಪಡಿಸಲಾಗುತ್ತದೆ. ಈ ವರ್ಷ ಆರು ಜನ ಮಹನೀಯರ ಸಾರ್ಥಕ ಬದುಕನ್ನು ಗುರುತಿಸಿ ಸ್ಪೂರ್ತಿಧಾಮವು ಪ್ರಶಸ್ತಿಗಳನ್ನು ನೀಡಿದೆ. ಪ್ರಶಸ್ತಿಗಳಿಗೆ ಬೆಲೆ ಇಲ್ಲದಂತಾಗಿರುವ ಸಂದರ್ಭದಲ್ಲಿ ಸ್ಪೂರ್ತಿಧಾಮದಂತಹ ಸಂಸ್ಥೆಗಳು ನೀಡುವ ಪ್ರಶಸ್ತಿಗಳು ಪ್ರಶಸ್ತಿಗಳ ಮೌಲ್ಯಗಳನ್ನು ಹೆಚ್ಚುಸುತ್ತಿವೆ. ಮತ್ತು ಬದ್ಧತೆಯ ವ್ಯಕ್ತಿತ್ವಗಳನ್ನು ಗುರುತಿಸಿ ಗೌರವಿಸುವ ಪರಿಕ್ರಮವು ಸಾಂಸ್ಕೃತಿಕ ಜಗತ್ತಿನ ಕುರಿತು ಹೆಚ್ಚು ನಂಬಿಕೆಗಳನ್ನು ಹುಟ್ಟುಹಾಕುತ್ತದೆ. ಸ್ಪೂರ್ತಿಧಾಮ ಸಂಸ್ಥೆಯು ಈ ಸಲ ತೆಲಂಗಾಣದ ಡಾ. ಆರ್. ಎಸ್. ಪ್ರವೀಣ್ ಕುಮಾರ್ ಅವರಿಗೆ ’ಬೋಧಿವೃಕ್ಷ ಪ್ರಶಸ್ತಿಯನ್ನು, ದಲಿತ ಚಳವಳಿಯ ರೂವಾರಿಗಳಲ್ಲೊಬ್ಬರಾದ ಶ್ರೀ ಗುರುಪ್ರಸಾದ್ ಕೆರೆಗೋಡು, ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಶ್ರೀಮತಿ ಡಿ. ನಾಗಲಕ್ಷ್ಮಿಯವರಿಗೆ, ಅಚಲ ಪರಂಪರೆಯ ಗುರುಮಾರ್ಗದ ಪ್ರವರ್ತಕರಾದ ಶ್ರೀ ಪದ್ಮಾಲಯ ನಾಗರಾಜ ಅವರಿಗೆ, ಆದಿವಾಸಿಗಳ ಅರಣ್ಯ ಹಕ್ಕುಗಳಿಗಾಗಿ ಮೂರು ದಶಕಗಳಿಂದ ಹೋರಾಡುತ್ತಿರುವ ಡಾ. ಬಿ. ಪಿ. ಮಹೇಂದ್ರಕುಮಾರ್ ಅವರಿಗೆ, ಆರೋಗ್ಯ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಮೇರಿ ಲೋಬೋ ಅವರಿಗೆ ‘ಬೋಧಿವರ್ಧನ’ ಪ್ರಶಸ್ತಿಗಳನ್ನು ನೀಡಿದೆ. ತಳಸ್ತರದ ಸಮುದಾಯಗಳ ಸಬಲೀಕರಣಕ್ಕಾಗಿ ಜೀವನವನ್ನು ಅರ್ಪಿಸಿಕೊಂಡ ಸಾಮಾಜಿಕ ಕಾರ್ಯಕರ್ತರನ್ನು ಗುರುತಿಸುವ ಈ ಮಹಾನ್ ಕಾರ್ಯದಲ್ಲಿ ತೊಡಗಿರುವ ಸ್ಪೂರ್ತಿಧಾಮ ಸಂಸ್ಥೆಯನ್ನು ನಾಡಿನ ಎಲ್ಲ ಸಮಸ್ತರ ಪರವಾಗಿ ಅಭಿನಂದಿಸಬೇಕಿದೆ.

‘ಬೋಧಿವರ್ಧನ’ ಪ್ರಶಸ್ತಿ ಪಡೆದಿರುವ ಗೆಳೆಯ ಮಹೇಂದ್ರಕುಮಾರ್ ಕಳೆದ ಎರಡು ದಶಕಗಳಿಂದ ನನಗೆ ಪರಿಚಿತರು. ಗ್ರೀನ್ ಇಂಡಿಯಾ ಎಂಬ ಸಂಸ್ಥೆಯನ್ನು ಉತ್ತರ ಕನ್ನಡದ ದಾಂಡೇಲಿಯಲ್ಲಿ ಪ್ರಾರಂಭಿಸಿ ಕಳೆದ ಮೂರು ದಶಕಗಳಿಂದ ಆದಿವಾಸಿಗಳ ಅಭಿವೃದ್ಧಿಗೆ ಮತ್ತು ಬಹಳ ಮುಖ್ಯವಾಗಿ ಅವರ ಪಾರಂಪರಿಕ
ಹಕ್ಕುಗಳ ಉಳುವಿಕೆಗಾಗಿ ದುಡಿಯುತ್ತಿದ್ದಾರೆ. ಮಹೇಂದ್ರಕುಮಾರ್ ಮೂಲತಃ ಸಸ್ಯಶಾಸ್ತ್ರಜ್ಞ. ಮೈಸೂರು ವಿಶ್ವವಿದ್ಯಾಲಯದಿಂದ ಸಸ್ಯಶಾಸ್ತ್ರದಲ್ಲಿ ಸ್ನಾತಕ ಪದವಿ ಪಡೆದ ಅವರು ಕಾಲೇಜೊಂದರಲ್ಲಿ ಅಧ್ಯಾಪಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಆದರೆ ತಮ್ಮ ನಿಷ್ಠುರ ಮತ್ತು ಬದ್ಧತೆಗಳ ಕಾರಣಕ್ಕಾಗಿ
ಮುಂದುವರೆಯಲಾಗದೆ ಅರಣ್ಯಗಳ ರಕ್ಷಣೆಗಾಗಿ ಒಂದು ಖಾಸಗಿ ಸಂಸ್ಥೆಯಲ್ಲಿ ವೃತ್ತಿಯನ್ನಾರಂಭಿಸಿದರು. ಖಾಸಗಿ ಸಂಸ್ಥೆಗಳಲ್ಲಿನ ಊಳಿಗಮಾನ್ಯ ರೀತಿನೀತಿಗಳನ್ನು ಪ್ರತಿಭಟಿಸಿ ಹೊರಬಂದ ಮಹೇಂದ್ರಕುಮಾರ್ ‘ಗ್ರೀನ್ ಇಂಡಿಯಾ’ ಎಂಬ ಸ್ವಯಂಸೇವಾ ಸಂಸ್ಥೆಯನ್ನು ಸ್ಥಾಪಿಸಿ ಉತ್ತರ ಕನ್ನಡದ ಆದಿವಾಸಿಗಳ ಜೊತೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಾರಂಭಿಸಿದರು. ಅಲ್ಲಿಂದ ಇಲ್ಲಿಯವರೆಗೂ ಮಹೇಂದ್ರಕುಮಾರ್ ದನಿಯೇ ಇಲ್ಲದ ಆದಿವಾಸಿಗಳ ಸ್ವಾವಲಂಬನೆಗಾಗಿ ದುಡಿಯುತ್ತಿದ್ದಾರೆ.

ಮಹೇಂದ್ರಕುಮಾರ್ ಅವರ ಪರಿಚಯದ ಆರಂಭದಲ್ಲಿ ಅವರ ಬಿಡುಬೀಸು ವಾಚಾಳಿತನದಿಂದ ನಾನು ಬೆಚ್ಚಿಬಿದ್ದಿದ್ದೆ. ಆದರೆ ಅವರ ಮಾತುಗಳಲ್ಲಿ ನಾಜೂಕತನವಾಗಲಿ, ತನ್ನನ್ನು ವಿಜೃಂಭಿಸಿಕೊಳ್ಳುವ ಚಪಲವಾಗಲಿ ಇರಲಿಲ್ಲ. ವ್ಯವಸ್ಥೆಯಲ್ಲಿನ ಅನ್ಯಾಯಗಳ ಕುರಿತು, ಕೇಡುಗಳ ಕುರಿತು ಆಕ್ರೋಶವಿತ್ತು. ಯಾವುದೂ ಸರಿ ಇಲ್ಲದ ಈ ಅವ್ಯವಸ್ಥೆಯಲ್ಲಿ ಏನಾದರು ಬದಲಾವಣೆಯಾಗಲೇಬೇಕು ಎಂಬ ಹೆಬ್ಬಯಕೆ ಇತ್ತು. ಇದೆಲ್ಲಕ್ಕಿಂತ ಹೆಚ್ಚಾಗಿ ಅನ್ಯಾಯಗಳನ್ನು ನೋಡಿ ನಖಶಿಖಾಂತ ಉರಿದು ಬೀಳುವ, ಮುಖಾಮೂತಿ ನೋಡದೆ ಪ್ರತಿಭಟಿಸಿ ನಿಂತುಬಿಡುವ ಹುಂಬ ಧೈರ್ಯವಿತ್ತು. ನನಗೆ ಮಹೇಂದ್ರಕುಮಾರ್ ಅವರನ್ನು ಇಷ್ಟಪಡಲು ಈ ಕಾರಣಗಳು ಸಾಕಿತ್ತು. ಮುಂದೆ ಅವರ ಜೊತೆಗೆ ಕೆಲಸ ಮಾಡಲು ತೊಡಗಿದೆ. ಸಸ್ಯಶಾಸ್ತ್ರವನ್ನು ಬಿಟ್ಟರೆ, ತಮ್ಮ ಸಾರ್ವಜನಿಕ ಬದುಕಿನ ಆರಂಭದಲ್ಲಿ ಮಹೇಂದ್ರ ಅವರು ರಾಜಕೀಯ ಸಿದ್ಧಾಂತಗಳನ್ನು ಅಷ್ಟೇನು ಅಧ್ಯಯನ ಮಾಡಿದಂತಿರಲಿಲ್ಲ. ಆದರೆ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಮೈಸೂರಿನ ಕ್ರಾಂತಿಕಾರಿ ಪ್ರೊಫೆಸರ್ ರಾಮಲಿಂಗಮ್ ಅವರ ಒಡನಾಟವಿತ್ತು. ಪ್ರಗತಿಪರರ ಸಂಪರ್ಕಗಳಿದ್ದವು. ಆದರೆ ಕನ್ನಡ ವಿಶ್ವವಿದ್ಯಾಲಯಕ್ಕೆ ಪಿಎಚ್‌ಡಿ ಅಧ್ಯಯನಕ್ಕಾಗಿ ಬಂದ ಮೇಲೆ ಮಹೇಂದ್ರಕುಮಾರ್ ಅವರ ಆಲೋಚನೆಗಳು ಹೆಚ್ಚು ಸ್ಪಷ್ಟವಾದಂತೆ ಕಂಡಿತು. ವೇದಿಕೆಯಲ್ಲಿ ನಿಂತು ಭಾಷಣ ಮಾಡುವಾಗ ದಶದಿಕ್ಕುಗಳಿಗೆ ಚಲ್ಲಾಪಿಲ್ಲಿಯಾಗುತ್ತಿದ್ದ ಮಾತಿನ ಹರಿವು ಚಾನಲೈಸ್ ಆಗತೊಡಗಿತು.

ಪೆರಿಯಾರ್, ಲೋಹಿಯಾ, ಅಂಬೇಡ್ಕರ್, ಮಾರ್ಕ್ಸ್ ಮುಂತಾದವರು ಅವರ ಮಾತುಗಳಲ್ಲಿ ಕಾಣಿಸಿಕೊಳ್ಳತೊಡಗಿದರು. ಸಹವಾಸ ದೋಷದ ಕಾರಣಕ್ಕಾಗಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಅಧ್ಯಯನಕ್ಕಾಗಿ ನೋಂದಣಿ ಪಡೆದರು. ಕನ್ನಡದಲ್ಲಿ ಇಲ್ಲಿಯವರೆಗೆ ಅಧ್ಯಯನಗಳು ನಡೆಯದೇ ಇರುವ ‘ಆದಿವಾಸಿಗಳ ಸೀಮಾ (ಜಮ್ಮಾ) ಪದ್ಧತಿ’ ಎಂಬ ವಿಷಯವನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ನಡೆಸಿದರು. ಅವರು ಬರೆದ ಮಹಾಪ್ರಬಂಧವು ಟಿಪಿಕಲ್ ಶೈಕ್ಷಣಿಕ ಶಿಸ್ತಿನ ಅಧ್ಯಯನವಾಗದೆ, ಅವರ ಆಕ್ಟಿವಿಸ್ಟ್ ಬದುಕಿನ ಸವಿವರ ದಾಖಲಾತಿಯಂತೆ ಮೂಡಿಬಂದಿತು. ಅಧ್ಯಯನಕ್ಕಾಗಿ ಸಮಾಜವನ್ನು ಆಯ್ಕೆ ಮಾಡಿಕೊಳ್ಳುವ ವಿದ್ವಾಂಸರು ತಮಗರಿವಿಲ್ಲದಂತೆ ಆಕ್ಟಿವಿಸ್ಟ್ ಆಗಿಬಿಡುವ ಚಮತ್ಕಾರ ಸಮಾಜ ವಿಜ್ಞಾನಗಳಲ್ಲಿ ನಡೆದುಹೋಗುತ್ತದೆ. ಆದರೆ ಮಹೇಂದ್ರಕುಮಾರ್ ಸ್ವತಃ ಪ್ರಚ್ಛನ್ನ ಆಕ್ಟಿವಿಸ್ಟ್. ಹಾಗಾಗಿ ಆದಿವಾಸಿಗಳು ತಮ್ಮ ಪಾರಂಪರಿಕ ಹಕ್ಕುಗಳ ಭಾಗವಾಗಿ ಕಟ್ಟಿಕೊಂಡು ಬಂದ ಜಮ್ಮಾ ಪದ್ಧತಿಯನ್ನೇ ತಮ್ಮ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡರು ಮತ್ತು ಪ್ರಬಂಧವನ್ನು ಆಕ್ಟಿವಿಸ್ಟ್ ಆಗಿಯೇ ಬರೆದು ಮುಗಿಸಿದರು.

ಇಂತಹ ಮಹೇಂದ್ರಕುಮಾರ್ ಕಳೆದ ಮೂವತ್ತು ವರ್ಷಗಳಿಂದ ಆದಿವಾಸಿಗಳ ಹಕ್ಕುಗಳಿಗೆ ಹೋರಾಡುತ್ತ ಜನಪರ ಚಳಿವಳಿಗಳನ್ನು ಸಂಘಟಿಸಿದ್ದಾರೆ. ಇವರ ನಿರಂತರ ಹೋರಾಟದ ಭಾಗವಾಗಿ ಉತ್ತರ ಕನ್ನಡದ ಸಿದ್ದಿ ಸಮುದಾಯವನ್ನು ಒಕ್ಕೂಟ ಸರಕಾರವು 2003ರಲ್ಲಿ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಿತು. 1998ರಲ್ಲಿ ಅಣಿಶಿ ರಾಷ್ಟ್ರೀಯ ಉದ್ಯಾನ ಘೋಷಣೆಯಾದ ಮೇಲೆ ಅಲ್ಲಿ ವಾಸಿಸುತ್ತಿದ್ದ ಕುಣಬಿ ಮತ್ತು ಸಿದ್ದಿ ಸಮುದಾಯಗಳನ್ನು ಸ್ಥಳಾಂತರ ಮಾಡಲು ಸರಕಾರಗಳು ಮುಂದಾದ ಸಂದರ್ಭದಲ್ಲಿ ಆದಿವಾಸಿಗಳನ್ನು ಸಂಘಟಿಸಿ ಹೋರಾಟಗಳನ್ನು ರೂಪಿಸಿದರು. ಜೋಯಿಡಾ ಭಾಗದ ಕುಣಬಿ ಮತ್ತು ಸಿದ್ದಿಗಳನ್ನು ಅಲ್ಲಿಂದ ಸ್ಥಳಾಂತರಿಸುವುದನ್ನು ತಡೆದಿದ್ದಲ್ಲದೆ, ಅರಣ್ಯವಾಸಿಗಳಿಗೆ ಅವರ ಪಾರಂಪರಿಕ ಹಕ್ಕುಗಳು ಲಭ್ಯವಾಗಬೇಕು ಎಂದು ಪ್ರತಿಪಾದಿಸಿ ಅವು ಆದಿವಾಸಿಗಳಿಗೆ ದಕ್ಕುವಂತೆ ಮಾಡಿದ್ದಾರೆ. ಉತ್ತರ ಕನ್ನಡ, ಕೊಡಗು ಮತ್ತು ಮೈಸೂರು ಜಿಲ್ಲೆಗಳ ಆದಿವಾಸಿಗಳ ನಿರಂತರ ಸಂಪರ್ಕಗಳಿರುವ ಮಹೇಂದ್ರ ಆದಿವಾಸಿಗಳ ಜೊತೆಗೆ ಮಾತನಾಡುತ್ತಲೇ ಇದ್ದಾರೆ. ಮಹೇಂದ್ರ ಇನ್ನೊಬ್ಬರ ಮಾತುಗಳನ್ನು ಕೇಳಿಸಿಕೊಂಡಿದ್ದಕ್ಕಿಂತ ತಾನು ಮಾತಾಡಿದ್ದೇ ಹೆಚ್ಚು. ಯಾವತ್ತೂ ಒಳ್ಳೆಯ ಕೇಳುಗನ್ನಲ್ಲದ ಮಹೇಂದ್ರ ತಮ್ಮ ಅನುಭವಗಳನ್ನು ದಾಖಲಿಸುವ ಪ್ರಯತ್ನವನ್ನೇ ಮಾಡಲಿಲ್ಲ. ಮೂರು ದಶಕಗಳ ಕಾಡಿನ ಮಕ್ಕಳ ಜೊತೆಗಿನ ಅನುಸಂಧಾನವನ್ನು ಅವರು ಬರೆಯುವುದಿನ್ನೂ ಬಾಕಿ ಇದೆ.

ಇದಲ್ಲದೆ, ಮಹೇಂದ್ರಕುಮಾರ್ ಕರ್ನಾಟಕದ ಅನೇಕ ಪ್ರಗತಿಪರ ಚಳವಳಿಗಳ ಸಂಗಾತಿಯೂ ಹೌದು. ‘ಉಡುಪಿ ಚಲೋ’ದಂತಹ ಮಹತ್ವದ ಹೋರಾಟದ ಚಾಲನಾ ಸಮಿತಿಯಲ್ಲಿದ್ದು ಮಹೇಂದ್ರ ಕಾರ್ಯನಿರ್ವಹಿಸಿದ್ದಾರೆ. ದಾನಮ್ಮನ ಅತ್ಯಾಚಾರ ಖಂಡಿಸಿ ನಡೆದ ‘ಬಿಜಾಪುರ ಚಲೋ’ದಲ್ಲಿಯೂ ಭಾಗವಹಿಸಿದ್ದಾರೆ. ಇದಲ್ಲದೆ ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ಅಧ್ಯಯನ ಯೋಜನೆಗಳಲ್ಲಿ ತೊಡಗಿಕೊಂಡು ಉಪಯುಕ್ತ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ಅಂಬೇಡ್ಕರ್ ಚಿಂತನೆಗಳ ಗಾಢ ಪ್ರಭಾವದಲ್ಲಿ ಈಗ ಓದು ಬರಹ ಮಾಡುತ್ತಿರುವ ಮಹೇಂದ್ರಕುಮಾರ್ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತಮ್ಮ ಚಿಂತನೆಗಳನ್ನು ಮಂಡಿಸಿದ್ದಾರೆ. ಅಕ್ಟಿವಿಸಮ್ ಮತ್ತು ಸೂಕ್ಷ್ಮ ಓದಿನ ಕಾರಣದಿಂದ ಮಹೇಂದ್ರಕುಮಾರ್ ಒಬ್ಬ ಅಪರೂಪದ ಸಾಮಾಜಿಕ ಕಾರ್ಯಕರ್ತನಾಗಿ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದಾರೆ.

ಸ್ವಯಂಸೇವಾ ಸಂಸ್ಥೆಗಳ ಕಾರ್ಯವೈಖರಿ ಮತ್ತು ಅವುಗಳ ನಿಲುವುಗಳ ಕುರಿತು ನನಗಿರುವ ಭಿನ್ನಮತಗಳ ಕಾರಣಕ್ಕಾಗಿ ಮಹೇಂದ್ರಕುಮಾರ್ ಅವರ ಸಂಸ್ಥೆಯ ಜೊತೆ ನನಗೆ ಆರಂಭದಲ್ಲಿ ಗುರುತಿಸಿಕೊಳ್ಳಲಾಗಲಿಲ್ಲ. ಆದರೆ, ನಮ್ಮ ವಿಶ್ವವಿದ್ಯಾಲಯದ ಸೆಮಿನಾರ್ ಒಂದಕ್ಕೆ ಅವರು ಕ್ಯಾಂಪಸ್‌ನಲ್ಲಿದ್ದಾಗ ದಾಂಡೇಲಿಯ ಅವರ ಮನೆಯ ಮೇಲೆ ದುಷ್ಕರ್ಮಿ ಪುಂಡರು ದಾಳಿ ಮಾಡಿದ್ದರು. ‘ಕಾಡಲ್ಲಿರುವ ಜನರಿಗಾಗಿ ಬೀದಿಗೆ ಬಂದು ಹೋರಾಟ ಮಾಡುವ ಈತ ನಕ್ಸಲೈಟ್. ಈತನನ್ನು ಊರು ಬಿಡಿಸಬೇಕು’ ಎಂಬುದು ಪುಂಡರ ಅಂಬೋಣವಾಗಿತ್ತು. ಮನೆಯ ಮೇಲೆ ದಾಳಿಯಾಗಿದ್ದರೂ ಸ್ಥಿತಪ್ರಜ್ಞನಂತೆ ಅಂದು ವೇದಿಕೆಯ ಮೇಲೆ ನಿಂತು ತಮಗೆ ಕೊಟ್ಟ ವಿಷಯವನ್ನು ಮಹೇಂದ್ರಕುಮಾರ್ ಅಚ್ಚುಕಟ್ಟಾಗಿ ಮಂಡಿಸಿದರು. ಅಂದಿನಿಂದ ಮಹೇಂದ್ರಕುಮಾರ್ ಅವರ ಬದ್ಧತೆ ಮತ್ತು ನಿಲುವುಗಳ ಕುರಿತು ನನ್ನಲ್ಲಿ ಪ್ರಶ್ನೆಗಳು ಉಳಿದುಕೊಳ್ಳಲಿಲ್ಲ. ಮಹೇಂದ್ರಕುಮಾರ್ ದಾಂಡೇಲಿಯನ್ನೇನೂ ಬಿಡಲಿಲ್ಲ. ಇನ್ನೂ ಅದೇ ನೆಲದಲ್ಲಿ ಗಟ್ಟಿಯಾಗಿ ನಿಂತಿದ್ದಾರೆ. ಯಾರಿಗೂ ಹೆದರದೆ ದನಿ ಎತ್ತಿ ಪ್ರತಿಭಟಿಸುವ ಛಾತಿಯನ್ನು ಉಳಿಸಿಕೊಂಡಿದ್ದಾರೆ. ಆದರೆ ಇಂತಹ ಕಾರ್ಯಕರ್ತರು ತಾವು ಬದುಕಿದ್ದಾಗ ಎದೆಗೆ ಮುಳ್ಳುಗಳನ್ನು ಚುಚ್ಚಿಕೊಂಡೇ ಬದುಕಬೇಕಾಗುತ್ತದೆ. ಎಲ್ಲರೂ ಮೆಚ್ಚುವ ರೀತಿಯಲ್ಲಿ ನಾಜೂಕತನ ತೋರಿಸುತ್ತ ಅಬಲಾಶ್ರಮಗಳಲ್ಲಿ ಬ್ರೆಡ್ಡು ಹಂಚಿ ಸಮಾಜಸೇವೆ ಮಾಡುವ ಜನರನ್ನು ಸಮಾಜ ಕೊಂಡಾಡುತ್ತದೆ.

ಜನರ ಬದುಕಿನ ಭಾಗವಾಗಿ, ಅವರ ಕಷ್ಟಸುಖಗಳಲ್ಲಿ ಪಾಲ್ಗೊಂಡು, ಬದುಕಿನ ವೈರುಧ್ಯಗಳನ್ನು ಹೇಳಿಕೊಟ್ಟು ಅರಿವು ಮೂಡಿಸುವ ಸಮಾಜಸೇವೆ ನಮ್ಮಲ್ಲಿ ಅಪರೂಪ. ‘ಜನರಿಗೆ ಬೇಕಾದರೆ ಭಿಕ್ಷೆ ಕೊಡಿ, ಆದರೆ ಅವರನ್ನು ಬುದ್ಧಿಜೀವಿಯಾಗಿಸುವುದು ಬೇಡ’ ಎಂಬುದು ಅನಾದಿಕಾಲದ ಊಳಿಗಮಾನ್ಯ ಪ್ರಭುಗಳ ಕಟ್ಟಪ್ಪಣೆ. ಈ ಕಟ್ಟಪ್ಪಣೆಯನ್ನು ಮೀರಿದವರು ‘ಸಮಾಜ ವಿರೋಧಿಗಳಾಗಿ’ ಇಲ್ಲವೆ, ‘ದೇಶದ್ರೋಹಿಗಳಾಗಿ’ ತುಚ್ಛೀಕರಿಸಲ್ಪಡುತ್ತಾರೆ. ಜನರ ದುಃಖ ಮತ್ತು ನೋವುಗಳಿಗೆ ಅಹರ್ನಿಶಿ ದುಡಿವ ಮತ್ತು ತಾವು ಬದುಕುವ ಪರಿಸರದ ಜನಜೀವನದ ಜೊತೆ ಸಾವಯವ ಸಂಬಂಧಗಳನ್ನೇರ್ಪಡಿಸಿಕೊಳ್ಳುವ ಎಲ್ಲರನ್ನೂ ಪ್ರಭುತ್ವ ಹೀಗೆ ತುಚ್ಛೀಕರಿಸುತ್ತಲೇ ಬಂದಿದೆ. ಇಂತಹ ಮಹನೀಯರನ್ನು ಹಿಂಸಿಸಿ ಕೊಂದುಹಾಕಿದ್ದಲ್ಲದೆ, ‘ಅವರನ್ನು ಕೊಂದದ್ದು ದೇಶಕ್ಕಾಗಿ’ ಎಂಬ ಸುಳ್ಳನ್ನು ಹೇಳುತ್ತಾ ಬಂದಿದೆ. ಈ ಪಾಖಂಡಿ ಸುಳ್ಳನ್ನು ಸತ್ಯವಾಗಿಸಲು ಮತ್ತು ತಮ್ಮ ಕೊಲೆಗಳಿಗೆ ಸಮ್ಮತಿಯನ್ನು ಹುಟ್ಟುಹಾಕುವ ಪ್ರಯತ್ನಗಳು ಇಂದಿಗೂ ನಡೆಯುತ್ತಿವೆ. ಫ್ಯಾಸಿಸಮ್ ಎನ್ನುವ ಸಮೂಹ ನಾಶದ ರಾಕ್ಷಸ ಹುಟ್ಟಿ ರೆಕ್ಕೆ ಅಗಲಿಸುವ ಈ ವಿನಾಶಕಾರಿ ಸಂದರ್ಭದಲ್ಲಿ ಗಾಂಧಿಯನ್ನು ಕೊಂದವನು ದೇವರಾಗುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ಜನರೇ ಜೀವಂತವಾಗಿಟ್ಟುರುವ ಚಳವಳಿಗೆಳು ಮತ್ತು ಸಂಸ್ಥೆಗಳು ಮಾತ್ರ ನಮ್ಮ ಸಮಾಜದ ಆರೋಗ್ಯವನ್ನು ಕಾಪಾಡಬಲ್ಲವು. ಸ್ಪೂರ್ತಿಧಾಮದಂತಹ ಸಂಸ್ಥೆಗಳು ಸಾಮಾಜಿಕ ಅರಿವನ್ನು ವಿಸ್ತರಿಸುವ ನಿಟ್ಟಿನಲ್ಲಿ ಇಂದಿಗೂ ಸಕ್ರಿಯವಾಗಿರುವುದು ನಮ್ಮ ನಾಡಿನ ಪುಣ್ಯ.

ಡಾ. ಎ ಎಸ್ ಪ್ರಭಾಕರ

ಡಾ. ಎ ಎಸ್ ಪ್ರಭಾಕರ
ಹಂಪಿ ವಿವಿಯ ಬುಡಕಟ್ಟು ವಿಭಾಗದ ಅಧ್ಯಾಪಕರಾದ ಡಾ.ಎ.ಎಸ್.ಪ್ರಭಾಕರ, ಮೂಲತಃ ಹರಪನಹಳ್ಳಿಯವರು. ಕರ್ನಾಟಕದ ಜನಪರ ಚಳವಳಿಗಳ ಸಂಗಾತಿಯೂ ಆಗಿರುವ ಅವರ ಹೊಸ ಪುಸ್ತಕ ‘ಚಹರೆಗಳೆಂದರೆ ಗಾಯಗಳೂ ಹೌದು’ ಬಿಡುಗಡೆಯಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಬಾಬಾಸಾಹೇಬರ ಚಿಂತನೆಗಳ ತಳಹದಿಯಲ್ಲಿ ರಾಷ್ಟ್ರವನ್ನು ಕಟ್ಟಿಕೊಳ್ಳದಿದ್ದರ ಪರಿಣಾಮ..

ಇದನ್ನೂ ಓದಿ: ’ಕಲ್ಲು ಹೂವಿನ ನೆರಳು’: ತಾಜಾ ನಿರೂಪಣೆಯ ಮತ್ತು ಸಂವೇದನೆಯುಳ್ಳ ಗ್ರಹಿಕೆಯ ಕಥೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...