‘ಲ್ಯಾಟರಲ್ ಎಂಟ್ರಿ’ ಮೂಲಕ ಸರ್ಕಾರಿ ನೌಕರರನ್ನು ನೇಮಿಸಿಕೊಳ್ಳುವ ನಿರ್ಧಾರವನ್ನು ವಿರೋಧಿಸಿದ ಬಳಿಕ, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರು ವಿರೋಧ ಪಕ್ಷಗಳ ‘ಜಾತಿ ಜನಗಣತಿ’ ಆಗ್ರಹಕ್ಕೆ ದನಿಗೂಡಿಸಿದ್ದಾರೆ.
ಇಂಡಿಯಾ ಟುಡೇ ವರದಿ ಮಾಡಿರುವಂತೆ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು “ನನ್ನ ಪಕ್ಷ (ಎಲ್‌ಜೆಪಿ) ಯಾವಾಗಲೂ ಜಾತಿ ಗಣತಿಯ ಪರವಾಗಿದೆ” ಎಂದು ತನ್ನ ನಿಲುವನ್ನು ಸ್ಪಷ್ಟವಾಗಿ ಹೇಳಿದ್ದಾರೆ.
ತಮ್ಮ ನಿಲುವಿನ ಕುರಿತು ವಿವರಿಸಿದ ಅವರು, ”ಅನೇಕ ಬಾರಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಫಲಾನುಭವಿಗಳ ಜಾತಿಯನ್ನು ಗಮನದಲ್ಲಿಟ್ಟುಕೊಂಡು ಹಲವು ಯೋಜನೆಗಳನ್ನು ರೂಪಿಸುತ್ತವೆ. ಆ ಯೋಜನೆಗಳು ಹಿಂದುಳಿದ ವರ್ಗದವರನ್ನು ಮುಖ್ಯವಾಹಿನಿಯೊಂದಿಗೆ ಸಂಪರ್ಕಿಸುವ ಚಿಂತನೆಯೊಂದಿಗೆ ಸಿದ್ಧಪಡಿಸಲಾಗಿರುತ್ತದೆ. ಆದ್ದರಿಂದ ನಾನು ಜಾತಿ ಜನಗಣತಿಯನ್ನು ಬೆಂಬಲಿಸುತ್ತೇನೆ” ಎಂದಿದ್ದಾರೆ.
ಕೇಂದ್ರ ಸರ್ಕಾರ ಜಾತಿವಾರು ಜನಸಂಖ್ಯೆಯ ಬಗ್ಗೆ ತಿಳಿದಾಗ ಮಾತ್ರ ಸಂಪನ್ಮೂಲಗಳ ಸರಿಯಾದ ವಿತರಣೆ ಮತ್ತು ಯೋಜನೆಯ ಪ್ರಯೋಜನಗಳನ್ನು ಲೆಕ್ಕಾಚಾರ ಮಾಡಬಹುದು ಎಂದು ಚಿರಾಗ್ ಪಾಸ್ವಾನ್ ಪ್ರತಿಪಾದಿಸಿದ್ದಾರೆ.
ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರಾಗಿರುವ ಪಾಸ್ವಾನ್ ಅವರು, ಈ ಹಿಂದೆ ಸರ್ಕಾರಿ ಉದ್ಯೋಗಗಳಲ್ಲಿ ಲ್ಯಾಟರಲ್ ಎಂಟ್ರಿ ನೇಮಕಾತಿಗಳ ವಿರುದ್ಧ ಮಾತನಾಡಿದ್ದರು, ನಾಗರಿಕ ಸೇವೆಗಳಲ್ಲಿ ಅಂತಹ ವ್ಯವಸ್ಥೆ ‘ಸಂಪೂರ್ಣ ತಪ್ಪು’ ಎಂದಿದ್ದರು. ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ಸರ್ಕಾರಗಳು ಕನ್ವರ್ ಯಾತ್ರೆ ಮಾರ್ಗದ ಅಂಗಡಿಗಳಲ್ಲಿ ಮಾಲೀಕರು ಮತ್ತು ಸಿಬ್ಬಂದಿ ಹೆಸರು ಪ್ರದರ್ಶಿಸುವಂತೆ ಸೂಚಿಸಿದ್ದ ಆದೇಶವನ್ನು ವಿರೋಧಿಸಿದ್ದರು.
ಪಾಸ್ವಾನ್ ಅವರ ಹೇಳಿಕೆಗಳು ಅವರು ಮೈತ್ರಿ ಮಾಡಿಕೊಂಡಿರುವ ಬಿಜೆಪಿಯ ವಿರುದ್ಧವಾಗಿದೆ. ಸಂಸತ್ತಿನಲ್ಲಿ, ರಾಷ್ಟ್ರವ್ಯಾಪಿ ಜಾತಿ ಗಣತಿಯನ್ನು ಪರಿಚಯಿಸುವ ಪ್ರತಿಪಕ್ಷಗಳ ಪ್ರಯತ್ನಗಳನ್ನು ಬಿಜೆಪಿ ಹಿಂದಿನಿಂದಲೂ ವಿರೋಧಿಸುತ್ತಿದೆ.
ಪ್ರತಿಪಕ್ಷಗಳು ಜಾತಿ ಜನಗಣತಿಯ ಅಗತ್ಯೆಯನ್ನು ಸಮರ್ಥಿಸಿಕೊಂಡಿವೆ. ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲೇ ಜಾತಿ ಜನಗಣತಿಯ ಭರವಸೆ ನೀಡಿತ್ತು. ಪ್ರಸ್ತುತ ಲೋಕಸಭೆಯ ಪ್ರತಿಪಕ್ಷ ನಾಯಕರಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣಾ ಭಾಷಣಗಳಲ್ಲಿ ಪದೇ ಪದೇ ಜಾತಿ ಜನಗಣತಿಯ ವಿಷಯ ಉಲ್ಲೇಖಿಸಿದ್ದರು.
ಇದನ್ನೂ ಓದಿ : ಒಡಿಶಾ: ಜಗಳದ ವೇಳೆ ಗಂಡನಿಗೆ ಥಳಿಸಿದ ಮಹಿಳೆ; ಸ್ಥಳೀಯರ ಪಂಚಾಯಿತಿ ಆದೇಶ ನಂತರ ತಲೆ ಬೋಳಿಸಿ ಬಹಿಷ್ಕಾರ


