Homeಅಂತರಾಷ್ಟ್ರೀಯಬಾಂಗ್ಲಾ ದೇಶದ ರಾಜಕೀಯ ಬಿಕ್ಕಟ್ಟಿನ ಸುತ್ತ

ಬಾಂಗ್ಲಾ ದೇಶದ ರಾಜಕೀಯ ಬಿಕ್ಕಟ್ಟಿನ ಸುತ್ತ

- Advertisement -
- Advertisement -

ಇತ್ತೀಚಿನ ತಿಂಗಳುಗಳಲ್ಲಿ, ಬಾಂಗ್ಲಾದೇಶದಲ್ಲಿ ಮೀಸಲಾತಿ ಸುಧಾರಣೆಗಳ ವಿರುದ್ಧ ವಿದ್ಯಾರ್ಥಿ-ವಿದ್ಯಾರ್ಥಿನಿಯರ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದು ಇದರಿಂದಾಗಿ ಪ್ರಧಾನಿ ಶೇಖ್ ಹಸೀನಾ ಅವರು ರಾಜೀನಾಮೆ ನೀಡಬೇಕಾಗಿ ಬಂದದ್ದಕ್ಕೆ ವಿಶ್ವವೇ ಸಾಕ್ಷಿಯಾಗಿದೆ. ಬಾಂಗ್ಲಾದೇಶದ ಸರ್ವೋಚ್ಚ ನ್ಯಾಯಾಲಯವು ಸ್ವಾತಂತ್ರ್ಯ ಹೋರಾಟಗಾರರ ವಂಶಸ್ಥರಿಗೆ 30% ಮೀಸಲಾತಿಯನ್ನು ಮರುಸ್ಥಾಪಿಸಬೇಕೆಂದು ತೀರ್ಪು ಇತ್ತಿದ್ದು ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಈ ಪ್ರತಿಭಟನೆಗಳು ತೀವ್ರಗೊಂಡು ಪ್ರಧಾನಮಂತ್ರಿ ರಾಜೀನಾಮೆ ನೀಡಬೇಕು ಮತ್ತು ಅವರ ಸರ್ಕಾರಕ್ಕೆ ಬದಲಿಗೆ, ಉಸ್ತುವಾರಿ ಸರ್ಕಾರವನ್ನು ಸ್ಥಾಪಿಸಬೇಕೆಂಬ ಆಗ್ರಹಗಳಾಗಿ ಬೆಳೆಯಿತು.

ಶೇಖ್ ಹಸೀನಾ ಅವರ ಅವಾಮಿ ಲೀಗ್ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸುವ ಮತ್ತು ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಲು ತಮ್ಮ ಪಕ್ಷದ ವಿದ್ಯಾರ್ಥಿ ಸಂಘಟನೆಯಾದ ಛಾತ್ರ ಲೀಗ್‌ಅನ್ನು ನಿಯೋಜಿಸುವ ಮೂಲಕ ಪ್ರತಿಭಟನೆಗಳನ್ನು ಹತ್ತಿಕ್ಕುವುದಕ್ಕೆ ಮುಂದಾದರು. ಅಲ್ಲದೇ, ದೇಶದ ಹಲವೆಡೆ ಕರ್ಫ್ಯೂ ವಿಧಿಸಲಾಯಿತು; ಅಷ್ಟು ಮಾತ್ರವಲ್ಲ, ಬಾಂಗ್ಲಾದೇಶ ಸರ್ಕಾರವು ಇಂಟರ್ನೆಟ್ ಬ್ಲ್ಯಾಕ್‌ಔಟ್‌ಗೆ ಕೂಡ ಮುಂದಾಯಿತು. ಇವೆಲ್ಲದರ ಕಾರಣ 200ಕ್ಕೂ ಹೆಚ್ಚು ಜನ ಸಾವನ್ನಪ್ಪಿ 20,000 ಜನರು ಗಾಯಗೊಂಡರು. ಸರಿಸುಮಾರು 11,000 ಜನರನ್ನು ಬಂಧಿಸಲಾಯಿತು.

ಚಳವಳಿಯ ಹುಟ್ಟು

1971ರಲ್ಲಿ ಪಾಕಿಸ್ತಾನದಿಂದ ಸ್ವಾತಂತ್ರ್ಯ ಪಡೆದನಂತರ, ಬಾಂಗ್ಲಾದೇಶವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರಿಗಾಗಿ 30% ಉದ್ಯೋಗಗಳನ್ನು ಮೀಸಲಿಟ್ಟಿತು. ಆರಂಭದಲ್ಲಿ, ಈ ಕ್ರಮಕ್ಕೆ ಯಾವುದೇ ವಿರೋಧಗಳು ವ್ಯಕ್ತವಾಗಿರಲಿಲ್ಲ. ಕಾರಣ, ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ಜನರಿಗೆ ನೀಡುವ ಮೀಸಲಾತಿ ಜನರ ಕಣ್ಣಿನಲ್ಲಿ ನ್ಯಾಯಸಮ್ಮತವಾಗಿತ್ತು. ಅರ್ಹ ಅಭ್ಯರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸಿ, ಈ ಮೀಸಲಾತಿ ನೀತಿಯ ಅಗತ್ಯತೆಯೇ ಇಲ್ಲವಾಯಿತು. 1997ರಲ್ಲಿ, ಈ ಮೀಸಲಾತಿಯನ್ನು ಸ್ವತಂತ್ರ ಹೋರಾಟಗಾರರ ಮಕ್ಕಳಿಗೂ ವಿಸ್ತರಿಸಲಾಯಿತು. ರಾಜಕೀಯ ಸಂಪರ್ಕಗಳನ್ನು ಹೊಂದಿದ್ದ ಕುಟುಂಬಗಳ ಹಿತಾಸಕ್ತಿಯನ್ನು ಇದು ಕಾಪಿಡುತ್ತದೆ ಎಂಬ ಕೂಗುಗಳ ನಡುವೆ ಈ ಮೀಸಲಾತಿ ನೀತಿಗಳ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದವು. ಈ ರೀತಿಯ ಮೀಸಲಾತಿಗಳ ವಿರುದ್ಧ ಪ್ರತಿಭಟನೆಗಳು 2008ರಲ್ಲಿ ಭುಗಿಲೆದ್ದವು.

2010ರಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದವರ ಮೊಮ್ಮಕ್ಕಳಿಗೂ ಮೀಸಲಾತಿಯನ್ನು ವಿಸ್ತರಿಸಬೇಕೆಂಬ ಆದೇಶವನ್ನು ಸರ್ಕಾರ ಹೊರಡಿಸಿತು. ಇದರಿಂದಾಗಿ, 2013ರಲ್ಲಿ ಮತ್ತೊಮ್ಮೆ ಪ್ರತಿಭಟನೆಗಳು ಭುಗಿಲೆದ್ದವು. ಮಾರ್ಚ್ 2018ರಲ್ಲಿ, ಬಾಂಗ್ಲಾದೇಶದ ಹೈಕೋರ್ಟ್ ಮೀಸಲಾತಿಯನ್ನು ಪ್ರಶ್ನಿಸಿದ ಅರ್ಜಿಯೊಂದನ್ನು ತಿರಸ್ಕರಿಸಿತು.

ನ್ಯಾಯಾಲಯದ ತೀರ್ಪಿನಿಂದಾಗಿ ಸಾರ್ವಜನಿಕ ಉದ್ಯೋಗಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ಅವರ ಕುಟುಂಬಸ್ಥರಿಗೆ ನೀಡಲಾಗುತ್ತಿರುವ ಮೀಸಲಾತಿಯಲ್ಲಿ ಸುಧಾರಣೆಗಳನ್ನು ತರುವುದು ಅಸಾಧ್ಯವೆಂದು ಶೇಖ್ ಹಸೀನಾ ಘೋಷಿಸಿದರು. 18 ಜುಲೈ 2018ರಂದು, ಢಾಕಾ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಸುಮಾರು 500 ವಿದ್ಯಾರ್ಥಿಗಳು “ಆಲ್ ಕಂಬೈನ್ಡ್ ಡಿಪಾರ್ಟ್ಮೆಂಟ್ಸ್” ಎಂಬ ಬ್ಯಾನರ್‌ನ ಅಡಿಯಲ್ಲಿ ಢಾಕಾದ ಸೆಂಟ್ರಲ್ ಶಹೀದ್ ಮಿನಾರ್ ಆವರಣದಲ್ಲಿ ಮಾನವ ಸರಪಳಿಯನ್ನು ರಚಿಸಿದರು. ಅನೇಕರು ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡು, ತರಗತಿಗಳನ್ನೂ-ಪರೀಕ್ಷೆಗಳನ್ನೂ ಬಹಿಷ್ಕರಿಸಿದರು. ಜಹಾಂಗೀರ್‌ನಗರ ವಿಶ್ವವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ಮಾನವ ಸರಪಳಿಯನ್ನು ನಿರ್ಮಿಸಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮೇಲಿನ ಪ್ರಭುತ್ವದ ದಾಳಿಯನ್ನು ಪ್ರತಿಭಟಿಸಿದರು. ಅಲ್ಲದೇ, ಮೀಸಲಾತಿಯ ವ್ಯವಸ್ಥೆಯನ್ನು ಸುಧಾರಿಸಬೇಕೆಂದೂ ಒತ್ತಾಯಿಸಿದರು.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಚಳವಳಿಗಳು ಪ್ರಾರಂಭವಾಗಿದ್ದು ಪ್ರಸ್ತುತ ಪ್ರತಿಭಟನೆಗಳಿಗೂ ಬಹಳ ವರ್ಷಗಳ ಹಿಂದೆಯೇ. ಕಾಲಾಂತರದಲ್ಲಿ ಪ್ರತಿಭಟನೆಗಳು ಹೇಗೆ ಕಾವನ್ನು ಪಡೆದುಕೊಂಡು ಜನರ ಬೆಂಬಲವನ್ನು ಪಡೆದುಕೊಳ್ಳಬಹುದು ಎಂಬುದಕ್ಕೆ ಇದು ತಕ್ಕುದಾದ ಉದಾಹರಣೆ. ಪ್ರಪಂಚದ ಎಲ್ಲೆಡೆಯ ಪ್ರತಿಭಟನೆಗಳಂತೆಯೇ, ಬಾಂಗ್ಲಾದೇಶದ ಪ್ರತಿಭಟನೆಗಳಲ್ಲಿಯೂ ಕೂಡ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಳ್ಳುವುದಕ್ಕೆ ಕನಿಷ್ಟ ಒಂದು ದಶಕದಷ್ಟು ಸಮಯ ಹಿಡಿದಿದೆ.

ಶೇಖ್ ಹಸೀನಾ ಅವರ ಉದಯ ಮತ್ತು ಪತನ

1975ರಲ್ಲಿ, ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟದ ನಾಯಕ ಶೇಖ್ ಮುಜಿಬುರ್ ರೆಹಮಾನ್ ಅವರು ಮಿಲಿಟರಿಯ ಕಾರ್ಯಾಚರಣೆಯಿಂದಾಗಿ ಹತ್ಯೆಗೀಡಾಗುತ್ತಾರೆ. ಆ ವೇಳೆ ಅವರ ಕುಟುಂಬಗಳು ಕೂಡ ದಾಳಿಗಳಿಗೆ ಗುರಿಯಾದವು. ಅವರ ಮಗಳೇ ಶೇಖ್ ಹಸೀನಾ. ತಂದೆ ಹತ್ಯೆಯಾದಾಗ ವಿದೇಶದಲ್ಲಿದ್ದ ಕಾರಣ ಹಸೀನಾ ಬದುಕುಳಿದರು. ಮುಜಿಬುರ್ ರೆಹಮಾನರ ಸಂಬಂಧಿಗಳಲ್ಲಿ ಬದುಕುಳಿದಿದ್ದದ್ದು ಹಸೀನಾ ಒಬ್ಬರೇ. ದೇಶದ ಉಳಿವಿಗಾಗಿ ನಡೆಯುತ್ತಿದ್ದ ಪ್ರಜಾಸತ್ತಾತ್ಮಕ ಚಳವಳಿಯ ಹೊಸ ನಾಯಕಿಯಾಗಿ ಅವರು ರಾಜಕೀಯಕ್ಕೆ ಕಾಲಿರಿಸಬೇಕಾಯಿತು.

ಶೇಖ್ ಮುಜಿಬುರ್ ರೆಹಮಾನ್

1981ರಲ್ಲಿ, ಹಸೀನಾ ಅವರು ಅವಾಮಿ ಲೀಗ್‌ನ ಹೊಸ ಚುನಾಯಿತ ನಾಯಕರಾಗಿ ಮಿಲಿಟರಿ ಆಡಳಿತದಲ್ಲಿದ್ದ ಬಾಂಗ್ಲಾದೇಶಕ್ಕೆ ಮರಳಿದರು. ಅವಾಮಿ ಲೀಗ್ ಎಂಬುದು ಹಸೀನಾ ಅವರ ತಂದೆ ಮುಜಿಬುರ್ ರೆಹಮಾನ್ ನೇತೃತ್ವದಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷವಾಗಿದೆ.

ತನ್ನ ರಾಜಕೀಯ ವೃತ್ತಿಜೀವನದ ಪ್ರಾರಂಭ ಘಟ್ಟದಲ್ಲಿ, ಹಸೀನಾ ಮಿಲಿಟರಿಯ ಪ್ರಾಬಲ್ಯಕ್ಕೆ ಸವಾಲು ಹಾಕುವ ಮೂಲಕ ಉತ್ಕಟವಾಗಿ ಪ್ರಜಾಪ್ರಭುತ್ವದ ವಕೀಲಿಕೆ ವಹಿಸಿದರು. ನವೆಂಬರ್ 1990ರಲ್ಲಿ, ಅವರು ಬಾಂಗ್ಲಾದೇಶದ ಮಿಲಿಟರಿ ಸರ್ವಾಧಿಕಾರಿ ಹುಸೇನ್ ಮುಹಮ್ಮದ್ ಇರ್ಷಾದ್ ಅವರ ರಾಜೀನಾಮೆಗೆ ಒತ್ತಾಯಿಸಿ ಬಹುಪಕ್ಷೀಯ ಘೋಷಣೆಯ ಕರಡನ್ನು ರಚಿಸುವುದರಲ್ಲಿ ಮುಖ್ಯಪಾತ್ರ ವಹಿಸಿದರು. ಈ ಪ್ರಯತ್ನದಿಂದಾಗಿ, ಡಿಸೆಂಬರ್‌ನಲ್ಲಿ ಇರ್ಷಾದ್ ರಾಜೀನಾಮೆ ನೀಡಬೇಕಾಯಿತು.

ಬಾಂಗ್ಲಾದೇಶದಲ್ಲಿ ದ್ವಿಪಕ್ಷೀಯ ಆಡಳಿತ

ಮಿಲಿಟರಿ ಆಡಳಿತವನ್ನು ಕಿತ್ತೊಗೆದ ನಂತರ, ಬಾಂಗ್ಲಾದೇಶವು ದ್ವಿಪಕ್ಷೀಯ ಆಡಳಿತ ವ್ಯವಸ್ಥೆಯಾಗಿ ರೂಪುಗೊಂಡಿತು. ಹಸೀನಾ ಅವರ ಅವಾಮಿ ಲೀಗ್ ವಿರುದ್ಧ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (BNP) ಸೆಣೆಸುತ್ತಿತ್ತು. ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿಯ ನೇತೃತ್ವ ವಹಿಸಿದ್ದವರು ಖಲೀದಾ ಜಿಯಾ. ಇವರು ಬಾಂಗ್ಲಾದೇಶವನ್ನು ಮಿಲಿಟರಿಯು ಸ್ವಾಧೀನಪಡಿಸಿಕೊಳ್ಳಲು ತಂತ್ರವನ್ನು ಹೆಣೆದಿದ್ದ ದಿವಂಗತ ಅಧಿಕಾರಿ ಜಿಯಾವುರ್ ರೆಹಮಾನ್‌ರ ಪತ್ನಿ.

ಮಿಲಿಟರಿ ಆಡಳಿತದ ನಂತರದಲ್ಲಿ, ಬಾಂಗ್ಲಾದೇಶವು ಅತ್ಯಂತ ಅಸ್ಥಿರ ಮತ್ತು ನಿಶ್ಯಕ್ತ ರಾಜಕೀಯ ಸಂದರ್ಭವನ್ನು ಎದುರಿಸಿತು. ಅವಾಮಿ ಲೀಗ್ ಮತ್ತು ಬಿಎನ್‌ಪಿ ಪಕ್ಷಗಳು ಜನರ ವಿಶ್ವಾಸವನ್ನು ಗಳಿಸಲು ಸೋತು ಭ್ರಷ್ಟ ಮತ್ತು ಒಂದು ದೂರಗಾಮಿ ಗುರಿಯೇ ಇಲ್ಲದ ಪಕ್ಷಗಳೆಂದು ಗ್ರಹಿಸಲ್ಪಟ್ಟವು. ತನ್ನ ನೆರೆಯ ಶಕ್ತಿಶಾಲಿ ದೇಶ ಮತ್ತು ಸೋವಿಯಟ್‌ನ ಮಿತ್ರ ರಾಷ್ಟ್ರ ಎಂದೇ ಭಾವಿಸಲಾಗಿದ್ದ ಭಾರತದ ವಿರುದ್ಧ ತನ್ನ ಭದ್ರತೆಯನ್ನು ಹೆಚ್ಚಿಸಿಕೊಳ್ಳಲು ಬಾಂಗ್ಲಾದೇಶ ಅಮೆರಿಕದೊಂದಿಗೆ ಮೃದು ಸಹಕಾರವನ್ನು ನೀತಿಯನ್ನು ಅನುಸರಿಸಿತು. ಇದರಿಂದಾಗಿ ಎನ್‌ಜಿಓಗಳು ಬಾಂಗ್ಲಾದೇಶದೆಲ್ಲೆಡೆ ಹುಟ್ಟಿಕೊಂಡವು. ಅಸಮರ್ಪಕವಾಗಿದ್ದ ಸರ್ಕಾರಿ ವ್ಯವಸ್ಥೆ ನೀಡಲಾಗದ ಕೆಲವು ಸೇವೆಗಳನ್ನು ಒದಗಿಸುವ ಮೂಲಕ ಈ ಎನ್‌ಜಿಓಗಳು ಸಮಾನಾಂತರವಾದ ಕಲ್ಯಾಣ ವ್ಯವಸ್ಥೆಯೊಂದನ್ನು (Parallel Welfare System) ಸ್ಥಾಪಿಸಿದವು.

ಇದನ್ನೂ ಓದಿ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಕೊಲೆ ತನಿಖೆ ಆರಂಭಿಸಿದ ಕೋರ್ಟ್

2007 ಮತ್ತು 2008ರಲ್ಲಿ ಬಾಂಗ್ಲಾದೇಶ ರಾಜಕೀಯವಾಗಿ ಪ್ರಕ್ಷುಬ್ಧವಾಗಿದ್ದ ಅವಧಿಯಲ್ಲಿ, ಮಿಲಿಟರಿ ಬೆಂಬಲಿತ ಮಧ್ಯಂತರ ಸರ್ಕಾರದಿಂದ ಇಬ್ಬರೂ ನಾಯಕಿಯರು ಸೆರೆವಾಸ ಅನುಭವಿಸಬೇಕಾಯಿತು. ಇದು ಬಾಂಗ್ಲಾದೇಶದ ರಾಜಕೀಯ ಭೂಪಟ ಎಷ್ಟು ತೀವ್ರತರವಾಗಿದೆ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಬಾಂಗ್ಲಾದೇಶವನ್ನು ಉಸ್ತುವಾರಿ ಸರ್ಕಾರವೊಂದು (Caretaker government) ಕೊನೆಯ ಬಾರಿಗೆ ಆಳಿದ್ದು ಇದೇ ಸಂದರ್ಭದಲ್ಲಿ.

ಉಸ್ತುವಾರಿ ಸರ್ಕಾರ

ಉಸ್ತುವಾರಿ ಸರ್ಕಾರ ಎಂಬುದು ಬಾಂಗ್ಲಾದೇಶದ ಪ್ರಜಾಪ್ರಭುತ್ವದ ವಿಲಕ್ಷಣ ಸಂಗತಿಯಾಗಿದೆ. ತಮ್ಮ ಆಡಳಿತಾವಧಿಯನ್ನು ಮುಗಿಸಿ ಹೊರಹೋಗುವ ಸರ್ಕಾರಗಳ ರಾಜಕೀಯ ಪ್ರಭಾವವನ್ನು ತೊಡೆದುಹಾಕುವ ಮೂಲಕ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಸುಗಮಗೊಳಿಸುವುದು ಈ ಉಸ್ತುವಾರಿ ಸರ್ಕಾರಗಳ ಹಿಂದಿನ ಉದ್ದೇಶ. ಈ ರೀತಿ ಮಧ್ಯಂತರವಾಗಿ ಆಡಳಿತ ನಡೆಸುವ ಸದಸ್ಯರ ರಾಜಕೀಯ ತಟಸ್ಥತೆಯನ್ನು ಖಚಿತಪಡಿಸಿಕೊಳ್ಳಲು ಅವರು ಯಾವುದೇ ರಾಜಕೀಯ ಪಕ್ಷವನ್ನು ಪ್ರತಿನಿಧಿಸುವುದಕ್ಕಾಗಲೀ, ಚುನಾವಣೆಗಳಲ್ಲಿ ಭಾಗವಹಿಸುವುದಕ್ಕಾಗಲೀ ನಿಷೇಧ ವಿಧಿಸಲಾಗಿದೆ. ಮಧ್ಯಂತರ ಸರ್ಕಾರವು ಹಿಂದಿನ ರಾಜಕೀಯ ಆಡಳಿತದಿಂದ ಯಾವುದೇ ಪಕ್ಷಪಾತ ಅಥವಾ ಹಸ್ತಕ್ಷೇಪವನ್ನು ತಪ್ಪಿಸುವ ಮೂಲಕ ಮುಕ್ತ ಚುನಾವಣೆಯನ್ನು ನಡೆಸಲು ಸೂಕ್ತ ನೆಲೆಯನ್ನು ಸ್ಥಾಪಿಸಬೇಕು. ಚುನಾವಣಾ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದೇ ಇದರ ಮುಖ್ಯ ಜವಾಬ್ದಾರಿಯಾಗಿತ್ತು. ಇದು ದೇಶಕ್ಕೆ ಸಂಬಂಧಿಸಿದಂತೆ ಯಾವುದೇ ನೀತಿ-ನಿರೂಪಣೆಗಳನ್ನು ರೂಪಿಸುವಂತರಿಲಿಲ್ಲ.

ಉಸ್ತುವಾರಿ ಸರ್ಕಾರಗಳು ಸೀಮಿತ ಅಧಿಕಾರವನ್ನು ಹೊಂದಿದ್ದು ಚುನಾವಣಾ ವಾತಾವರಣವನ್ನು ಮತ್ತು ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುವುದಕ್ಕೆ ಅದರ ಜವಾಬ್ದಾರಿಯಾಗಿತ್ತು. ಯಾವುದೇ ಮಹತ್ವದ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಈ ಉಸ್ತುವಾರಿ ಸರ್ಕಾರಗಳು ಹೊಂದಿಲ್ಲ. ಪ್ರಧಾನ ಮಂತ್ರಿಯ ಬದಲಿಗೆ ಮುಖ್ಯ ಸಲಹೆಗಾರರು ಉಸ್ತುವಾರಿ ಸರ್ಕಾರವನ್ನು ಮುನ್ನಡೆಸುವರು.

ಉಸ್ತುವಾರಿ ಸರ್ಕಾರಗಳ ಖ್ಯಾತಿ

ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸಂಸ್ಥೆಯಲ್ಲದಿದ್ದರೂ, 2008ರ ಉಸ್ತುವಾರಿ ಸರ್ಕಾರವು ಬಹಳ ಜನಪ್ರಿಯತೆ ಗಳಿಸಿತ್ತು. ಇದು ತಟಸ್ಥ ಮತ್ತು ಪರಿಣಾಮಕಾರಿ ಸರ್ಕಾರವೆಂದು ಭಾವಿಸಲಾಗಿತ್ತು. ಈ ಸಂದರ್ಭದಲ್ಲಿ ರಾಜಕಾರಣಿಗಳನ್ನು ಕ್ಷುಲ್ಲಕರು ಮತ್ತು ಭ್ರಷ್ಟರಂತೆ ಕಾಣಲಾಗುತ್ತಿತ್ತು. ಉಸ್ತುವಾರಿ ಆಡಳಿತವು ನ್ಯಾಯಸಮ್ಮತ ಚುನಾವಣೆಗೆ ಬದ್ಧವಾಗಿದೆ ಎಂದೂ ಭಾವಿಸಲಾಗಿತ್ತು. ಚುನಾವಣೆಗಳಲ್ಲಿ ಆಯ್ಕೆಯಾಗುವ ನಾಯಕರುಗಳಿಂತ ಈ ಸರ್ಕಾರವೇ ಹೆಚ್ಚು ಪ್ರಜಾಸತ್ತಾತ್ಮಕ ಎಂಬ ವ್ಯಂಗ್ಯ ಗ್ರಹಿಕೆ ಮುನ್ನಲೆಗೆ ಬಂದಿತು.

ಮೊಹಮ್ಮದ್ ಯೂನಸ್

 

2024ರಲ್ಲಿ ಹೊಸ ಉಸ್ತುವಾರಿ ಸರ್ಕಾರಕ್ಕಾಗಿ ಆಗ್ರಹ

ಶೇಖ್ ಹಸೀನಾ ರಾಜೀನಾಮೆಯೊಂದಿಗೆ ಮೊಹಮ್ಮದ್ ಯೂನಸ್ ನೇತೃತ್ವದಲ್ಲಿ ಹೊಸ ಉಸ್ತುವಾರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಯೂನಸ್ ತನ್ನ ಕುಖ್ಯಾತ ಕಿರುಸಾಲ (micro-credit) ಯೋಜನೆಯ ಮೂಲಕ ಹೆಸರುವಾಸಿ. ಕಿರುಸಾಲ ವ್ಯವಸ್ಥೆಯು ಬಡ ಮಹಿಳೆಯರಿಗೆ ಹೆಚ್ಚಿನ ಬಡ್ಡಿಗೆ ಸಣ್ಣ ಮೊತ್ತದ ಸಾಲಗಳನ್ನು ನೀಡುವ ಮೂಲಕ ಸಣ್ಣ ಉದ್ಯಮಗಳನ್ನು ಉತ್ತೇಜಿಸಲು ಪ್ರಯತ್ನಿಸಿತು. ಮಹಿಳೆಯರ ಸಬಲೀಕರಣಕ್ಕಾಗಿ ರೂಪಿಸಲಾದ ಯೋಜನೆಯಾಗಿ ಇದನ್ನು ಬಿಂಬಿಸಲಾಯಿತು. ಆದರೆ, ದಶಕಗಳ ನಂತರ, ಇದು ಮಹಿಳೆಯರನ್ನು, ಅದರಲ್ಲೂ ವಿಶೇಷವಾಗಿ ತಳ ಸಮುದಾಯಗಳ ಹಿನ್ನೆಲೆಯ ಮಹಿಳೆಯರನ್ನು ಸಾಲದ ಸುಳಿಯಲ್ಲಿ ಸಿಲುಕಿಸಿ ಅವರನ್ನು ಶೋಷಿಸುವ ವ್ಯವಸ್ಥೆಯೆಂಬುದು ಖಚಿತವಾಗಿದೆ. ಈ ಕಿರುಸಾಲಗಳಿಂದಾಗಿ ಸಮುದಾಯದ ಜನರು ಪರಸ್ಪರವಾಗಿ ಕಚ್ಚಾಡಿಕೊಳ್ಳುವಂತಾಯಿತು. ಅಲ್ಲದೇ, ಇದರಿಂದ ಬಲಿಷ್ಟಗೊಂಡದ್ದು ಜನರಲ್ಲ, ಹಣಕಾಸು ಉದ್ಯಮಿಗಳು ಮಾತ್ರ. ಯೂನಸ್ ಬೆಳೆದುಬಂದದ್ದೂ ಕೂಡ ಬಾಂಗ್ಲಾದೇಶದ ಈ ಎನ್‌ಜಿಓ ಸಂಸ್ಕೃತಿಯಿಂದಲೇ ಎಂದರೆ ತಪ್ಪಾಗಲಾರದು.

ಯೂನಸ್ ಪಾಶ್ಚಿಮಾತ್ಯ ದೇಶಗಳೊಂದಿಗೆ ಕೈಜೋಡಿಸಿರುವ ಕಾರಣ ಶೇಖ್ ಹಸೀನಾರಿಂದ ಟೀಕೆಗಳನ್ನು ಎದುರಿಸಿದ್ದಾರೆ. ಈ ವಿವಾದಗಳ ಹೊರತಾಗಿಯೂ, ಬಾಂಗ್ಲಾದೇಶದ ರಾಷ್ಟ್ರೀಯ ನಾಯಕನೆಂದು ಅವರನ್ನು ಗೌರವಯುತವಾಗಿ ಕಾಣಲಾಗುತ್ತದೆ. ಅವರ ಹಿಂದಿನ ಕಾರ್ಯಗಳು ಮತ್ತು ಮುಂಬರುವ ಚುನಾವಣೆಗಳಲ್ಲಿ ಅವರು ಬೀರಬಹುದಾದ ಪರಿಣಾಮಗಳನ್ನು ಗಮನದಲ್ಲಿರಿಸಿಕೊಂಡು ಅವರು ನೇತೃತ್ವ ವಹಿಸುವ ಉಸ್ತುವಾರಿ ಸರ್ಕಾರದ ಕಾರ್ಯಗಳನ್ನು ಬಹಳ ಸೂಕ್ಷ್ಮವಾಗಿಯೇ ಗಮನಿಸಬೇಕು.

ಅನುವಾದ: ಶಶಾಂಕ್ ಎಸ್. ಆರ್

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಡಾ ಪ್ರಕರಣ : ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

0
ಆಪಾದಿತ ಮುಡಾ ಹಗರಣ ಪ್ರಕರಣದಲ್ಲಿ ತನ್ನ ವಿರುದ್ದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ. ಇಂದು ಅರ್ಜಿ ವಿಚಾರಣೆ ನಡೆಯಿತು. ವಾದ...