ರಾಜ್ಯಸಭೆಗೆ 12 ಸದಸ್ಯರು ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎನ್‌ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಗಳಿಸಿದೆ.
ಒಟ್ಟು 12 ಸದಸ್ಯರಲ್ಲಿ 9 ಮಂದಿ ಬಿಜೆಪಿಯಿಂದ ಮತ್ತು ಅದರ ಮಿತ್ರ ಪಕ್ಷಗಳಾದ ಎನ್‌ಸಿಪಿ (ಅಜಿತ್ ಪವಾರ್ ಬಣ) ಮತ್ತು ರಾಷ್ಟ್ರೀಯ ಲೋಕ ಮಂಚ್‌ನ ತಲಾ ಒಬ್ಬರು ಆಯ್ಕೆಯಾಗಿದ್ದಾರೆ. ಇನ್ನೊಂದು ಸ್ಥಾನವನ್ನು ಕಾಂಗ್ರೆಸ್ ಪಕ್ಷ ತೆಲಂಗಾಣದಿಂದ ಗೆದ್ದುಕೊಂಡಿದೆ.
ಹೊಸದಾಗಿ 12 ಸದಸ್ಯರ ಆಯ್ಕೆಗೂ ಮುನ್ನ ರಾಜ್ಯಸಭೆಯಲ್ಲಿ ಆರು ನಾಮನಿರ್ದೇಶನಗೊಂಡ ಸದಸ್ಯರು ಮತ್ತು ಹರಿಯಾಣದ ಒಬ್ಬ ಪಕ್ಷೇತರ ಸೇರಿ ಎನ್‌ಡಿಎ ಮೈತ್ರಿಕೂಟದ ಸದಸ್ಯರ ಸಂಖ್ಯೆ 110 ಇತ್ತು. ಅದೀಗ 121ಕ್ಕೆ ಏರಿಕೆಯಾಗಿದೆ.
ಪ್ರತಿಪಕ್ಷಗಳ ಸದಸ್ಯರ ಸಂಖ್ಯೆ 84 ಇತ್ತು. ಹೊಸದಾಗಿ ಕಾಂಗ್ರೆಸ್‌ನಿಂದ ಒಬ್ಬರು ಅವಿರೋಧ ಆಯ್ಕೆಯಾಗುವ ಮೂಲಕ 85 ಆಗಿದೆ.
ರಾಜ್ಯಸಭೆಯಲ್ಲಿ ಹಾಲಿ ಸದಸ್ಯರ ಸಂಖ್ಯೆ 237 ಇದೆ. ಎಂಟು ಸ್ಥಾನಗಳು (ಜಮ್ಮು ಮತ್ತು ಕಾಶ್ಮೀರದಿಂದ 4, ನಾಮನಿರ್ದೇಶಿತ 4) ಖಾಲಿಯಿವೆ. ನಾಮ ನಿರ್ದೇಶಿತ ಸದಸ್ಯರ ನಾಲ್ಕು ಸ್ಥಾನಗಳನ್ನು ಸರ್ಕಾರ ಭರ್ತಿಗೊಳಿಸಿದರೆ ಎನ್‌ಡಿಎ ಸದಸ್ಯರ ಸಂಖ್ಯೆ 125 ಆಗಲಿದೆ.
ರಾಜ್ಯಸಭೆಯ ಒಟ್ಟು ಸದಸ್ಯರ ಸಂಖ್ಯೆ 245, ಅದು ಸಂಪೂರ್ಣ ಭರ್ತಿಯಾದರೆ 123 ಸ್ಥಾನಗಳನ್ನು ಪಡೆದವರು ಬಹುಮತ ಸಾಧಿಸಲಿದ್ದಾರೆ.
ಅಸ್ಸಾಂನಿಂದ ಮಿಷನ್ ರಂಜನ್ ದಾಸ್ ಮತ್ತು ರಾಮೇಶ್ವರ್ ತೇಲಿ, ಬಿಹಾರದಿಂದ ಮನನ್ ಕುಮಾರ್ ಮಿಶ್ರಾ, ಹರಿಯಾಣದಿಂದ ಕಿರಣ್ ಚಾಧರಿ, ಮಧ್ಯಪ್ರದೇಶದಿಂದ ಜಾರ್ಜ್ ಕುರಿಯನ್, ಮಹಾರಾಷ್ಟ್ರದಿಂದ ಧೀರ್ಯಾ ಶೀಲ್ ಪಾಟೀಲ್, ಒಡಿಶಾದಿಂದ ಮಮತಾ ಮೊಹಾಂತ, ರಾಜಸ್ಥಾನದಿಂದ ರವನೀತ್ ಸಿಂಗ್ ಬಿಟ್ಟು ಮತ್ತು ರಾಜೀವ್, ತ್ರಿಪುರಾದ ರಾಜೀವ್ ಭಟ್ಟಾಚಾರ್ಯ ಹೊಸದಾಗಿ ಆಯ್ಕೆಯಾದ ಬಿಜೆಪಿ ಸದಸ್ಯರು.
ಈ ಪೈಕಿ ಜಾರ್ಜ್ ಕುರಿಯನ್ ಮತ್ತು ರವನೀತ್ ಸಿಂಗ್ ಬಿಟ್ಟು ಈಗಾಗಲೇ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಕಳೆದ ಜೂನ್‌ನಲ್ಲಿ ಸಂಪುಟಕ್ಕೆ ಸೇರ್ಪಡೆಗೊಳ್ಳುವಾಗ ಇವರು ಸಂಸದರಾಗಿರಲಿಲ್ಲ.
ತೆಲಂಗಾಣದಿಂದ ಕಾಂಗ್ರೆಸ್‌ನ ಅಭಿಷೇಕ್ ಮನು ಸಿಂಘ್ವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎನ್‌ಸಿಪಿ ಅಜಿತ್ ಪವಾರ್ ಬಣದ ನಿತಿನ್ ಪಾಟೀಲ್ ಮಹಾರಾಷ್ಟ್ರದಿಂದ ಮತ್ತು ಆರ್‌ಎಲ್‌ಎಂನ ಉಪದೇಂದ್ರ ಕುಶ್ವಾಹಾ ಬಿಹಾರದಿಂದ ಮೇಲ್ಮನೆಗೆ ಆಯ್ಕೆಯಾದ್ದಾರೆ.
ಹೊಸ ಸದಸ್ಯರ ಸೇರ್ಪಡೆ ಮೂಲಕ ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ 96ಕ್ಕೆ ಏರಿಕೆಯಾಗಿದೆ. ಪ್ರತಿಪಕ್ಷ ಕಾಂಗ್ರೆಸ್ 27 ಸದಸ್ಯರನ್ನು ಹೊಂದಿದ್ದು. 13 ಸದಸ್ಯರ ಮೂಲಕ ಟಿಎಂಸಿ ಹೆಚ್ಚು ಸದಸ್ಯರನ್ನು ಹೊಂದಿರುವ ಮೂರನೇ ಪಕ್ಷ ಎನಿಸಿದೆ.
ಇದನ್ನೂ ಓದಿ : ಜೀವಾವಧಿ ಶಿಕ್ಷೆ ಪ್ರಶ್ನಿಸಿ ಸಂಜೀವ್ ಭಟ್ ಮೇಲ್ಮನವಿ : ಗುಜರಾತ್ ಸರ್ಕಾರಕ್ಕೆ ಸುಪ್ರೀಂ ನೋಟಿಸ್


