ಇಬ್ಬರು ವ್ಯಕ್ತಿಗಳು ಬಾಲಕನೋರ್ವನ ಕೈ ಹಿಡಿದುಕೊಂಡು, ಆತನಿಂದ ರೈಲು ಹಳಿ ಮೇಲೆ ಇಟ್ಟಿರುವ ಕಲ್ಲುಗಳನ್ನು ತೆಗೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವಿಡಿಯೋದಲ್ಲಿ, ಆ ವ್ಯಕ್ತಿಗಳು ಕನ್ನಡ ಭಾಷೆಯಲ್ಲಿ “ಎಷ್ಟು ರೈಲುಗಳಿಗೆ ಈ ರೀತಿ ಕಲ್ಲು ಇಟ್ಟಿದ್ದೀರಿ? ಎಂದು ಕೇಳುತ್ತಿರುವುದು ಮತ್ತು ಅದಕ್ಕೆ, “ಇದೇ ಮೊದಲ ಬಾರಿ ಇಟ್ಟಿದ್ದೀನಿ ಅಂಕಲ್. ನಿಮ್ಮ ಕಾಲಿಗೆ ಬೀಳುತ್ತೇನೆ, ದಯವಿಟ್ಟು ಬಿಟ್ಟು ಬಿಡಿ” ಎಂದು ಬಾಲಕ ಹೇಳುತ್ತಿರುವುದನ್ನು ನೋಡಬಹುದು.
ಸದಾ ಸುಳ್ಳು ಮತ್ತು ಕೋಮು ದ್ವೇಷದ ಸುದ್ದಿಗಳನ್ನು ಹಂಚಿಕೊಳ್ಳುವ ಬಲಪಂಥೀಯ ಎಕ್ಸ್ ಬಳಕೆದಾರ ರೌಶನ್ ಸಿಹ್ಹಾ ಅಥವಾ ಮಿ.ಸಿನ್ಹಾ ಇಂದು (ಸೆಪ್ಟೆಂಬರ್ 8, 2024) ವಿಡಿಯೋ ಪೋಸ್ಟ್ ಮಾಡಿ “ಇದು ತಮಾಷೆಯಲ್ಲ; ಇದು ಗಂಭೀರ ಸಮಸ್ಯೆ!. ದಿನಾಂಕ ಮತ್ತು ಸ್ಥಳ ತಿಳಿದಿಲ್ಲ. ಆದರೆ, ಇಂತಹ ವಿಡಿಯೋಗಳು ಬಹುತೇಕ ಪ್ರತಿದಿನ ಹೊರ ಬರುತ್ತಿವೆ. ರೈಲು ಹಳಿತಪ್ಪಿಸುವ ಉದ್ದೇಶದಿಂದ ಇಂತಹ ಕೆಲಸಗಳನ್ನು ಮಾಡಲು ಅವರಿಗೆ ಕಲಿಸಲಾಗುತ್ತಿದೆಯೇ?” ಎಂದು ಬರೆದುಕೊಂಡಿದ್ದಾರೆ.

ಮತ್ತೋರ್ವ ಬಲ ಪಂಥೀಯ ಎಕ್ಸ್ ಬಳಕೆದಾರ ದೀಪಕ್ ಶರ್ಮಾ (@SonOfBharat7)ಸೆಪ್ಟೆಂಬರ್ 6, 2024ರಂದು ವಿಡಿಯೋ ಹಂಚಿಕೊಂಡು ” ಹಿಂದೂಗಳೇ ನಿಮ್ಮನ್ನು ಕೊಲ್ಲಲು ನರಭಕ್ಷಕ ಜಿಹಾದಿಗಳ ಮಗು ಸಿದ್ದವಾಗಿದೆ. ನಿಮ್ಮ ಪ್ರೀತಿ ಪಾತ್ರರ ಮೃತದೇಹಗಳನ್ನು ನಿಮ್ಮ ನಾಲ್ಕು ಭುಜಗಳ ಮೇಲೆ ಹೊತ್ತುಕೊಂಡು ಹೋಗುತ್ತೀರಿ. ಈ ವಿಡಿಯೋ ಕರ್ನಾಟಕದದ್ದು ಎನ್ನಲಾಗಿದೆ. ಎಕ್ಸ್ ಪ್ರೆಸ್ ರೈಲು ಪಲ್ಟಿಯಾಗಿ ಎಷ್ಟೋ ಜನ ಪ್ರಾಣ ಕಳೆದುಕೊಂಡಿದ್ದಾರೆ. ಹೀಗೊಂದು ಸುದ್ದಿ ಬರುವ ದಿನ ದೂರವಿಲ್ಲ. ಎಚ್ಚರಿಕೆ” ಎಂದು ಹಿಂದಿ ಭಾಷೆಯಲ್ಲಿ ಬರೆದುಕೊಂಡಿದ್ದರು

ಕೋಮು ದ್ವೇಷದ ಸುದ್ದಿಗಳನ್ನು ಹಂಚಿಕೊಳ್ಳುವ ಫ್ರಂಟಲ್ ಪೋರ್ಸ್ (@FrontalForce) ಎಂಬ ಇನ್ನೊಂದು ಎಕ್ಸ್ ಖಾತೆಯಲ್ಲಿ ಸೆಪ್ಟೆಂಬರ್ 7ರಂದು ವಿಡಿಯೋ ಹಂಚಿಕೊಂಡು “ಬ್ರೇಕಿಂಗ್, ರೈಲು ಅಪಘಾತ ಉಂಟು ಮಾಡಲು ರೈಲು ಹಳಿಗಳ ಮೇಲೆ ಕಲ್ಲು ಮತ್ತು ಇತರ ವಸ್ತುಗಳನ್ನು ಇಟ್ಟು ಸ್ಥಳೀಯರ ಕೈಗೆ ಸಿಕ್ಕಿಬಿದ್ದ ಮೂಲಭೂತವಾದಿ ಎಂದು ಬರೆದುಕೊಂಡಿದ್ದರು.

ಇನ್ನೂ ಅನೇಕ ಬಲಪಂಥೀಯ ಸಾಮಾಜಿಕ ಜಾಲತಾಣ ಬಳಕೆದಾರರು ವಿಡಿಯೋ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡವರಲ್ಲಿ ಕೆಲವರು ‘ಮುಸ್ಲಿಂ ಹುಡುಗ’ ರೈಲು ಹಳಿ ಮೇಲೆ ಕಲ್ಲುಗಳನ್ನು ಇಟ್ಟು ಸಿಕ್ಕಿ ಬಿದ್ದಿದ್ದಾನೆ ಎಂದು ನೇರವಾಗಿ ಬರೆದುಕೊಂಡರೆ, ಇನ್ನೂ ಕೆಲವರು ಪರೋಕ್ಷವಾಗಿ ವಿಡಿಯೋಗೆ ಕೋಮು ಬಣ್ಣ ಬಳಿಯುವ ಪ್ರಯತ್ನ ಮಾಡಿದ್ದಾರೆ.
ವಿಡಿಯೋ ಪೋಸ್ಟ್ ಮಾಡಿದವರು ಸದಾ ಸುಳ್ಳು ಮತ್ತು ಕೋಮುದ್ವೇಷದ ಸುದ್ದಿಗಳನ್ನು ಹಂಚಿಕೊಳ್ಳುವವರಾದ್ದರಿಂದ ವಿಡಿಯೋದ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ.
ಫ್ಯಾಕ್ಟ್‌ಚೆಕ್ : ವೈರಲ್ ಆಗಿರುವ ವಿಡಿಯೋ ಕರ್ನಾಟಕದ ಕಲಬುರಗಿ ಜಿಲ್ಲೆಯದ್ದು ಮತ್ತು ಆರು ವರ್ಷ ಹಳೆಯದ್ದಾಗಿದೆ. ಅಂದರೆ, 2018ರಲ್ಲಿ ನಡೆದ ಘಟನೆಯದ್ದಾಗಿದೆ.
ಕಲಬುರಗಿ ಕೇಂದ್ರ ರೈಲು ನಿಲ್ದಾಣದಿಂದ ಹಿರೇನಂದೂರು ಕಡೆಗೆ ಸುಮಾರು 2 ಕಿಮೀ ದೂರದಲ್ಲಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿರುವ ಬಾಲಕ ಪಕ್ಕದ ಕೊಳಗೇರಿಯ ನಿವಾಸಿಯಾಗಿದ್ದು, ಆತ ಮತ್ತು ಸ್ನೇಹಿತರು ಆಟವಾಡುತ್ತಾ ರೈಲು ಹಳಿ ಮೇಲೆ ಕಲ್ಲುಗಳನ್ನು ಜೋಡಿಸಿದ್ದಾರೆ. ಅವರಿಗೆ ಹಳಿ ಮೇಲೆ ಕಲ್ಲುಗಳನ್ನು ಇಟ್ಟು ಅಪಘಾತ ಉಂಟು ಮಾಡುವ ಯಾವುದೇ ಉದ್ದೇಶ ಇರಲಿಲ್ಲ.
ಮಕ್ಕಳು ರೈಲು ಹಳಿಗಳ ಮೇಲೆ ಕಲ್ಲು ಇಟ್ಟಿರುವುದನ್ನು ಗಮನಿಸಿದ ಟ್ರ್ಯಾಕ್‌ಮೆನ್‌ಗಳಾದ ಗೋಪಾಲ್, ರಾಜ್‌ಕುಮಾರ್ ಮತ್ತು ರಾಜು ಬಾಲಕನೋರ್ವನನ್ನು ಹಿಡಿದು ಕಲ್ಲುಗಳನ್ನು ತೆಗೆಸಿದ್ದರು.
ಈ ಘಟನೆಯ ವಿಡಿಯೋ 2018ರ ಬಳಿಕ ಅನೇಕ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಮುಸ್ಲಿಂ ಬಾಲಕರು ರೈಲು ಹಳಿಗಳ ಮೇಲೆ ಕಲ್ಲುಗಳನ್ನು ಇಟ್ಟಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಅಸಲಿಗೆ ರೈಲು ಹಳಿಗೆ ಕಲ್ಲುಗಳನ್ನು ಇಟ್ಟ ಬಾಲಕ ಹಿಂದೂ ಧರ್ಮದವನಾಗಿದ್ದಾನೆ.
ಇಲ್ಲಿ ಬಾಲಕನ ಧರ್ಮವನ್ನು ಹೇಳುವ ಅಗತ್ಯವಿಲ್ಲ. ಆದರೆ, ಇತ್ತೀಚಿಗೆ ಯಾವುದೇ ರೈಲು ಹಳಿಗಳ ಮೇಲೆ ಯಾವುದೇ ವಸ್ತುಗಳನ್ನು ಇಟ್ಟಿರುವುದು ಕಂಡು ಬಂದರೆ ಅಥವಾ ನೂತನ ವಂದೇ ಭಾರತ್ ರೈಲಿಗೆ ಯಾರಾದರು ಕಲ್ಲು ಎಸೆದರೆ, ಅದನ್ನು ಮುಸ್ಲಿಮರೇ ಮಾಡಿದ್ದಾರೆ ಎಂದು ಹೇಳುವುದು ಕೆಲವರಿಗೆ ವಾಡಿಕೆಯಾಗಿದೆ. ಈ ಮೂಲಕ ಮುಸ್ಲಿಂ ಸಮುದಾಯವನ್ನು ದೇಶ ವಿರೋಧಿಗಳ ರೀತಿ ಬಿಂಬಿಸಲಾಗುತ್ತಿದೆ.
ಇತ್ತೀಚೆಗೆ ಪಾಕಿಸ್ತಾನದಲ್ಲಿ ರೈಲು ಹಳಿಯೊಂದರಿಂದ ಮಕ್ಕಳು ಕಬ್ಬಿಣದ ವಸ್ತುಗಳನ್ನು ಕಳವು ಮಾಡಿದ ಘಟನೆಯನ್ನು ಭಾರತದಲ್ಲಿ ರೈಲು ಅಪಘಾತ ಉಂಟು ಮಾಡಲು ಮುಸ್ಲಿಂ ಮಕ್ಕಳು ರೈಲು ಹಳಿಗೆ ಹಾನಿ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಅದನ್ನು ನಾವು ಫ್ಯಾಕ್ಟ್‌ಚೆಕ್ ಮಾಡಿ ಜನರಿಗೆ ಸತ್ಯಾಸತ್ಯತೆ ತಿಳಿಸುವ ಪ್ರಯತ್ನ ಮಾಡಿದ್ದೇವೆ. ಆ ಸುದ್ದಿಯ ಲಿಂಕ್ ಕೆಳಗಿದೆ.
FACT CHECK : ಮುಸ್ಲಿಂ ಮಕ್ಕಳು ರೈಲ್ವೆ ಹಳಿಗೆ ಹಾನಿ ಮಾಡಿದ್ದಾರೆ ಎಂದು ಸುಳ್ಳು ವಿಡಿಯೋ ಹಂಚಿಕೆ
ಕಳೆದ ವರ್ಷ ಕಲಬುರಗಿಯ ಬಾಲಕನ ವಿಡಿಯೋ ಸುಳ್ಳು ಪ್ರತಿಪಾದನೆ ಮತ್ತು ಕೋಮು ಬಣ್ಣದೊಂದಿಗೆ ವೈರಲ್ ಆಗಿತ್ತು. ಆಗ ಖ್ಯಾತ ಫ್ಯಾಕ್ಟ್‌ಚೆಕ್ ಸಂಸ್ಥೆ ಆಲ್ಟ್ ನ್ಯೂಸ್ ವರದಿ ಪ್ರಕಟಿಸಿ ಜನರಿಗೆ ಸತ್ಯ ತಿಳಿಸಿತ್ತು. ಅದರ ಲಿಂಕ್ ಕೆಳಗಿದೆ.
5-yr-old video of boy placing stones on rail tracks viral with misleading claims
ಆಲ್ಟ್ ನ್ಯೂಸ್ ಸುದ್ದಿ ಬರೆಯುವ ವೇಳೆ, ರಾಯಚೂರು ರೈಲ್ವೆಯ ವೃತ್ತ ನಿರೀಕ್ಷಕ ರವಿಕುಮಾರ್ ಅವರನ್ನು ಸಂಪರ್ಕಿಸಿತ್ತು. ಅವರು ಕಲಬುರಗಿಯಲ್ಲಿ ಮಕ್ಕಳು ಆಟವಾಡುತ್ತಾ ರೈಲು ಹಳಿ ಮೇಲೆ ಕಲ್ಲು ಇಟ್ಟಿರುವುದನ್ನು ಖಚಿತಪಡಿಸಿದ್ದರು.
ಇಂದು (ಸೆ.8, 2024) ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಝುಬೈರ್ ಅವರು ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಕಲಬುರಗಿಯ ಹಳೆಯ ವಿಡಿಯೋಗೆ ಬಲಪಂಥೀಯರು ಕೋಮು ಬಣ್ಣ ಬಳಿದಿರುವುದನ್ನು ವಿವರಿಸಿದ್ದಾರೆ.
Right Wing Pro-Govt Propaganda accounts like @SonOfBharat7 are sharing old videos to give communal angles to the train accidents by claiming it is a deliberate act of 'sabotage' by the Muslim community. This is a 6-yr-old video of boy placing stones on rail tracks in Kalburgi.… pic.twitter.com/pHYskFC6KW
— Mohammed Zubair (@zoo_bear) September 8, 2024
ಒಟ್ಟಿನಲ್ಲಿ, ಕಲಬುರಗಿಯಲ್ಲಿ 6 ವರ್ಷಗಳ ಹಿಂದೆ ನಡೆದ ಘಟನೆಯೊಂದರ ವಿಡಿಯೋವನ್ನು ಈಗ ಹಂಚಿಕೊಂಡು, ಅದಕ್ಕೆ ಕೋಮು ಬಣ್ಣ ಬಳಿಯಲಾಗಿದೆ.
ಇದನ್ನೂ ಓದಿ : FACT CHECK : ಹಿಂದೂ ಬಾಲಕನ ತಾಯತವನ್ನು ಮುಸ್ಲಿಮರು ಬಲವಂತದಿಂದ ತೆಗೆದಿದ್ದಾರೆ ಎಂಬುವುದು ಸುಳ್ಳು


