Homeಕರ್ನಾಟಕಸಾಲ ಕೊಟ್ಟು ಶೂಲಕ್ಕೇರಿಸುವ ಮೈಕ್ರೋ ಫೈನಾನ್ಸ್‌ಗಳು; ಬಡ ಮಹಿಳೆಯರ ’ಮರ್ಯಾದೆ ಅಂಜಿಕೆ’ಯೆ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ...

ಸಾಲ ಕೊಟ್ಟು ಶೂಲಕ್ಕೇರಿಸುವ ಮೈಕ್ರೋ ಫೈನಾನ್ಸ್‌ಗಳು; ಬಡ ಮಹಿಳೆಯರ ’ಮರ್ಯಾದೆ ಅಂಜಿಕೆ’ಯೆ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಬಂಡವಾಳ

- Advertisement -
- Advertisement -

ಕಳೆದ ಎರಡು ದಶಕದಿಂದ ರಾಜ್ಯದ ಹಳ್ಳಿಹಳ್ಳಿಗಳಲ್ಲಿ ಹಲವು ಸ್ವಸಹಾಯ ಗುಂಪುಗಳು ಮತ್ತು ಸಂಘಸಂಸ್ಥೆಗಳು ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಉಳಿತಾಯಕ್ಕೆ ಶ್ರಮಿಸುತ್ತಿವೆ. ಸರ್ಕಾರದ ಮಾರ್ಗಸೂಚಿಯ ಪ್ರಕಾರವೇ ಹಣ ಉಳಿತಾಯದ ಜೊತೆಗೆ, ಅವರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಮೂಲಕ ನೆರವು ನೀಡುತ್ತಾ ಬಂದಿವೆ.

ಆದರೆ, ಕಳೆದ ಏಳೆಂಟು ವರ್ಷಗಳಿಂದ ಈಚೆಗೆ ರಾಜ್ಯದ ಹಳ್ಳಿಹಳ್ಳಿಗಳಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳು ನಾಯಿಕೊಡೆಯಂತೆ ಎದ್ದು ನಿಂತಿವೆ. ಮೊದಮೊದಲಿಗೆ ಉಳಿತಾಯದ ಹೆಸರಿನಲ್ಲಿ ’ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ ಹಳ್ಳಿಗಳಿಗೆ ಕಾಲಿಟ್ಟಾಗ, ಈ ಮೈಕ್ರೋ ಫೈನಾನ್ಸ್ ಸಂಸ್ಥೆಯನ್ನು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಕಾರಣಕ್ಕೆ ಮುಗ್ಧ ಜನರು ಒಪ್ಪಿಕೊಂಡು ಉಳಿತಾಯ ಆರಂಭಿಸಿದ್ದರು. ಧರ್ಮಸ್ಥಳ ಸಂಘದ ಜೊತಗೆ ಇಂದು ನೂರಾರು ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳು ಗ್ರಾಮಗಳಿಗೆ ಭೇಟಿ ನೀಡುತ್ತಿದ್ದು, ಸ್ವಸಹಾಯ ಸಂಘಗಳನ್ನು ಮೂಲೆಗುಂಪು ಮಾಡಿವೆ. ಇವು ಮುಗ್ಧ ಜನರ ಶೋಷಣೆಗೆ ಕೂಡ ಇಳಿದಿವೆ ಎಂಬ ಆರೋಪ ದಟ್ಟವಾಗಿ ಕೇಳಿಬರುತ್ತಿದೆ.

ಸುಲಭವಾಗಿ ಸಾಲ ಸಿಗುತ್ತದೆ ಎಂಬ ಕಾರಣಕ್ಕೆ ಇಂತಹ ಮೈಕ್ರೋಫೈನಾನ್ಸ್ ಕಂಪನಿಗಳಿಂದ ಹಣ ಪಡೆದಿರುವ ಬಹುತೇಕರು ದುಬಾರಿ ಬಡ್ಡಿಯನ್ನು ತಮಗೆ ಅರಿವಿಲ್ಲದೇ ಕಟ್ಟುತ್ತಿದ್ದಾರೆ. ಯಾವುದೇ ಸಾಲದ ಹಿನ್ನಲೆ ಪರಿಶೀಲಿಸದೆ, ಆದಾಯದ ದೃಢೀಕರಣ ಇಲ್ಲದೆ, ಸಿಬಿಲ್ ಸ್ಕೋರ್ ನೋಡದೆ, ಕೇವಲ ಆಧಾರ್ ಮತ್ತು ವಾಸಸ್ಥಳದ ದೃಢೀಕರಣ ಪಡೆದು ಈ ಕಂಪನಿಗಳು ಸಾಲ ನೀಡುತ್ತಿವೆ. ಮೂರ್ನಾಲ್ಕು ಕಂಪನಿಗಳಿಂದ ಸಾಲ ಪಡೆದ ಗ್ರಾಮೀಣ ಭಾಗದ ಜನರು ಸಾಲ ಮರುಪಾವತಿಸಲು ಸಾಧ್ಯವಾಗದೆ ಮರ್ಯಾದೆಗೆ ಅಂಜಿ ಹಲವರು ಊರು ಬಿಡುತ್ತಿದ್ದಾರೆ. ಮತ್ತೊಂದು ಕಡೆ, ಮೈಕ್ರೋ ಫೈನಾನ್ಸ್‌ನಿಂದ ಆದ ಅವಮಾನಕ್ಕೆ ಕೆಲವರು ತಮ್ಮ ಪ್ರಾಣವನ್ನೇ ಬಿಡುತ್ತಿದ್ದಾರೆ. ಮುಗ್ಧ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿರುವ ಕಂಪನಿಗಳು, ಅವರಿಗೆ ಸಾಲ ಕೊಟ್ಟು ಶೂಲಕ್ಕೇರಿಸುತ್ತಿವೆ.

ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಪ್ರಾಣಬಿಟ್ಟ ಮಹಿಳೆ

2023 ಅಕ್ಟೋಬರ್ 7ರಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ತಂಗಲಿ ಗ್ರಾಮದ ಮಹಿಳೆಯೊಬ್ಬರು, ಸಾಲ ತೀರಿಸುವಂತೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡಿದ್ದರಿಂದ ಖಿನ್ನರಾಗಿ ಆತ್ಮಹತ್ಯೆಗೆ ಶರಣಾದರು.

58 ವರ್ಷದ ದೇವೀರಮ್ಮ ಎಂಬುವವರು ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಡೂರಿನ ’ಗ್ರಾಮೀಣ ಕೂಟ’ ಫೈನಾನ್ಸ್‌ನಿಂದ ಅವರು 78 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಬಡ ಕುಟುಂಬದ ಆ ಮಹಿಳೆ ಅರ್ಥಿಕ ಸಂಕಷ್ಟದಿಂದಾಗಿ ಕೇವಲ ಒಂದು ತಿಂಗಳ ಕಂತನ್ನ ಮಾತ್ರ ಮರುಪಾವತಿ ಮಾಡಿರಲಿಲ್ಲ. ಸಾಲದ ಕಂತು ಮರುಪಾವತಿ ಮಾಡಿಲ್ಲವೆಂದು ದೇವೀರಮ್ಮ ಅವರ ಮನೆ ಬಳಿ ಬಂದು ಫೈನಾನ್ಸ್ ಸಿಬ್ಬಂದಿ ಅವಮಾನ ಮಾಡಿದ್ದರು. ಇದರಿಂದ ಮನನೊಂದಿದ್ದ ದೇವೀರಮ್ಮ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಪ್ರಕರಣ ಸಂಬಂಧ ಗ್ರಾಮಿಣ ಕೂಟ ಫೈನಾನ್ಸ್ ಸಿಬ್ಬಂದಿ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೈಕ್ರೋ ಫೈನಾನ್ಸ್ ಸಿಬ್ಬಂದಿ ಸಾಲ ನೀಡುವಾಗಲೇ ಪ್ರತಿ ತಿಂಗಳು ಯಾವ ದಿನ ಹಣ ಮರುಪಾವತಿ ಮಾಡಬೇಕು ಎಂದು ನಿಗದಿಪಡಿಸಿರುತ್ತಾರೆ. ಆ ತಿಂಗಳಲ್ಲಿ ಸರ್ಕಾರಿ ರಜೆ ಇದ್ದರೂ, ಹಬ್ಬ ಅಥವಾ ಇನ್ನಿತರೆ ಶುಭ ಸಮಾರಂಭವಿದ್ದರೂ ಹಣ ಮರುಪಾವತಿ ಮಾಡಲೇಬೇಕು. ಇಲ್ಲದಿದ್ರೆ ವಸೂಲಿಗಾರರು ಮನೆ ಬಿಟ್ಟು ಕದಲುವುದೇ ಇಲ್ಲ. ದೇವೀರಮ್ಮ ಸಾವಿಗೆ ಇದೇ ಕಾರಣ ಎನ್ನುತ್ತಾರೆ ಅವರ ಪುತ್ರ.

ದೇವೀರಮ್ಮ ಅವರು ಗ್ರಾಮೀಣ ಕೂಟ ಎಂಬ ಹೆಸರಿನ ಮೈಕ್ರೋ ಫೈನಾನ್ಸ್ ಮೂಲಕ ಒಮ್ಮೆ 48 ಸಾವಿರ, ಮತ್ತೊಮ್ಮೆ 30 ಸಾವಿರ ಸಾಲ ಪಡೆದಿದ್ದರು. ಸಾಲದ ಕಂತನ್ನು ಪಾವತಿ ಮಾಡಿಲ್ಲ ಎಂದು ಗ್ರಾಮೀಣ ಕೂಟದ ಸಿಬ್ಬಂದಿ ಅವರ ಮನೆಯ ಮುಂದೆ ಸಾಲ ಕೇಳುವ ನೆಪದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿದ್ದಾರೆ.

ಬ್ಯಾಂಕ್ ಸಿಬ್ಬಂದಿ ಮನೆ ಬಾಗಿಲಿಗೆ ಬಂದಾಗ ದೇವೀರಮ್ಮ ತಮ್ಮ ಪುತ್ರ ರಾಘವೇಂದ್ರ ಜತೆಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಆಗ ಸೊಸೆ ದೂರವಾಣಿ ಮೂಲಕ ಕರೆಮಾಡಿ ಘಟನೆಯ ಮಾಹಿತಿ ನೀಡಿದ್ದು, ಮನೆಗೆ ಬಂದ ಪುತ್ರ ಮತ್ತು ತಾಯಿ ದೇವೀರಮ್ಮ ಹಾಗೂ ಫೈನಾನ್ಸ್ ಸಿಬ್ಬಂದಿ ನಡುವೆ ಚರ್ಚೆ ನಡೆದಿದೆ, ಅಂತಿಮವಾಗಿ ಪುತ್ರ ರಾಘವೇಂದ್ರ ಎರಡು ದಿನ ಬಿಟ್ಟು ಹಣ ಪಾವತಿಸುವುದಾಗಿ ಭರವಸೆ ನೀಡಿದ ನಂತರ ಫೈನಾನ್ಸ್ ಸಿಬ್ಬಂದಿ ಅಲ್ಲಿಂದ ತೆರಳಿದ್ದಾರೆ. ಆದರೆ, ಘಟನೆಯಿಂದ ತೀವ್ರವಾಗಿ ಅವಮಾನಕ್ಕೊಳಗಾಗಿದ್ದ ದೇವೀರಮ್ಮ, ಅಂದಿನ ರಾತ್ರಿ ಊಟ ಮುಗಿಸಿ ಮಲಗಲು ತೆರಳಿದವರು ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದರು.

ಮಗುವಿನೊಂದಿಗೆ ಆತಹತ್ಯೆಗೆ ಯತ್ನಿಸಿದ ಮಹಿಳೆ

ಮತ್ತೊಂದು ಘಟನೆಯಲ್ಲಿ, ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಬೇಸತ್ತಿದ್ದ ಮಹಿಳೆಯೊಬ್ಬರು ತನ್ನ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ಕೊರಟಗೆರೆ ತಾಲೂಕಿನಲ್ಲಿ ನಡೆದಿದೆ.

2024ರ ಜುಲೈ 7ರಂದು, ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳದಿಂದ ಮನನೊಂದಿದ್ದ ಮಹಿಳೆಯೊಬ್ಬರು ತನ್ನ ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೊರಟಗೆರೆ ತಾಲೂಕಿನ ಸಿಎನ್ ದುರ್ಗಾ ಹೋಬಳಿಯ ಥರಟಿ ಗ್ರಾಮದಲ್ಲಿ ನಡೆದಿತ್ತು. 35 ವರ್ಷದ ಲಕ್ಷ್ಮಮ್ಮ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಸಾರ್ವಜನಿಕರ ಸಮಯಪ್ರಜ್ಞೆಯಿಂದ ಅದೃಷ್ಟವಶಾತ್ ಮಹಿಳೆ ಮತ್ತು ಮಗು ಇಬ್ಬರೂ ಇಂದು ಬದುಕುಳಿದಿದ್ದಾರೆ.

ರಾಜ್ಯದ ಎಲ್ಲ ಭಾಗಗಳಲ್ಲಿ ಇರುವಂತೆ ಕೊರಟಗೆರೆಯಲ್ಲೂ ಸಹ ಖಾಸಗಿ ಫೈನಾನ್ಸ್ ದಂಧೆ ಮಿತಿಮೀರಿದೆ. 20ಕ್ಕೂ ಹೆಚ್ಚು ಮೈಕ್ರೋ ಫೈನಾನ್ಸ್ ಕಂಪನಿಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಹಲವು ಆಮಿಷಗಳನ್ನು ಹೂಡಿ ಹಣ ನೀಡುತ್ತಾರಾದರೂ ಹಣ ವಸೂಲಿ ಮಾಡುವ ಸಂದರ್ಭದಲ್ಲಿ ಅಶ್ಲೀಲ ಮಾತುಗಳಿಂದ ನಿಂದಿಸಿ ಬಾಯಿಗೆಬಂದಂತೆ ವರ್ತಿಸುವುದಲ್ಲದೆ ಮೈಕ್ರೋ ಫೈನಾನ್ಸ್‌ನ ಕೆಲವು ಯುವಕರ ತಂಡ ರೌಡಿಗಳಂತೆ ಆವಾಜ್ ಹಾಕಿಕೊಂಡು ಹಣ ವಸೂಲಿ ದಂಧೆಯಲ್ಲಿ ನಿರತರಾಗಿದ್ದಾರೆ ಎಂದು ಹಣ ಪಡೆದ ಜನರು ಭಯ ಬೀಳುತ್ತಾರೆ.

ಮೈಕ್ರೋ ಫೈನಾನ್ಸ್ ಕಂಪೆನಿಯು ಮಹಿಳೆಗೆ 50 ಸಾವಿರ ರೂಪಾಯಿ ಸಾಲ ನೀಡಿತ್ತು. ವಾರಕ್ಕೊಮ್ಮೆ ಕಟ್ಟಬೇಕಿದ್ದ ಕಂತನ್ನು ಕಟ್ಟದ ಕಾರಣಕ್ಕೆ ಆ ಫೈನಾನ್ಸ್ ಕಂಪನಿಯ ಸಿಬ್ಬಂದಿ ಕಿರುಕುಳ ನೀಡಿದ್ದರು ಎನ್ನಲಾಗಿದೆ. ಇದರಿಂದ ಮನನೊಂದು ಮಹಿಳೆ ಕೆರೆ ಏರಿ ಮೇಲಿಂದ ಆತ್ಮಹತ್ಯೆಗೆ ಯತ್ನಿಸಿದ್ದರು.

ಈ ಎರಡು ಘಟನೆಗಳಷ್ಟೇ ಅಲ್ಲ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳಿಂದ ಕಿರುಕುಳಕ್ಕೆ ಒಳಗಾದ ಹಲವಾರು ಪ್ರಕರಣಗಳು ವರದಿಯಾಗುತ್ತಲೇ ಇವೆ. ಹಲವಾರು ಸಂಘಸಂಸ್ಥೆಗಳು ಸ್ಥಳೀಯ ಅಧಿಕಾರಿಗಳ ಮೂಲಕ ಆಡಳಿತಕ್ಕೆ ಮನವಿ ಮಾಡಿದ್ದರೂ, ಈವರೆಗೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಮೈಕ್ರೋ ಫೈನಾನ್ಸ್‌ಗಳಿಂದ ಆಗುತ್ತಿರುವ ವಂಚನೆ ಮತ್ತು ಕಿರುಕುಳದ ಬಗ್ಗೆ ಮಾತನಾಡಿದ ಹಿರಿಯ ಮಹಿಳಾ ಹೋರಾಟಗಾರ್ತಿ ಶಾರದಾ ಗೋಪಾಲ್, “ಹಂದೂರು ಎಂಬಲ್ಲಿ ಒಬ್ಬ ಮಹಿಳೆ ಸಾಲ ತೀರಿಸಲು ತಮ್ಮ ಮನೆಯನ್ನೇ ಮಾರಾಟ ಮಾಡಬೇಕಾಯಿತು. ಈಗ ಅದೇ ಮನೆಯಲ್ಲಿ ಧರ್ಮಸ್ಥಳ ಸಂಘ ಕಚೇರಿ ತೆರೆದಿದೆ” ಎಂಬ ಆಘಾತಕಾರಿ ವಿಚಾರವನ್ನು ನಮ್ಮ ಮುಂದೆ ತರೆದಿಟ್ಟಿದ್ದಾರೆ.

“ಮಹಿಳೆಯರಿಗೆ ಸಾಲ ನೀಡುವ ಮೈಕ್ರೋ ಫೈನಾನ್ಸ್‌ನ ಹಲವು ಹೊಸ ಕಂಪನಿಗಳು ಪ್ರತಿದಿನ ಹುಟ್ಟಿಕೊಳ್ಳುತ್ತಿವೆ.. ’ನೀವೊಂದು ಐದು ಜನ ಗುಂಪಾದರೆ ನಾವು ಸಾಲ ನೀಡುತ್ತೇವೆ’ ಎಂದು ಹೇಳುತ್ತಿದ್ದಾರೆ. ಇದಕ್ಕೆಲ್ಲಾ ಮೂಲ ಧರ್ಮಸ್ಥಳ ಸಂಘ, ಅವರೇ ಇದನ್ನು ಆರಂಭಿಸಿದ್ದು, ಅವರಿಗೆ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಸೇರಿದಂತೆ ಸರ್ಕಾರದ ಆಡಳಿತ ಕೂಡಾ ಬೆಂಬಲವಾಗಿ ನಿಂತಿತ್ತು. ಆದ್ದರಿಂದಲೇ ಅವರು ಹಳ್ಳಿಹಳ್ಳಿಗಳಲ್ಲಿ ಗಟ್ಟಿಯಾಗಿ ಬೇರುಬಿಟ್ಟಿದ್ದಾರೆ. ನಂತರ, ಬೇರೆಬೇರೆ ಕಂಪನಿಗಳು ಸಾಲ ನೀಡುವುದಕ್ಕೆ ಆರಂಭಿಸಿದವು. ರಾಜ್ಯದ ಯಾವುದೇ ಹಳ್ಳಿಯಲ್ಲಿ ಒಂದು ಸುತ್ತು ಬಂದರೂ ಹತ್ತಾದರೂ ಖಾಸಗಿ ಮೈಕ್ರೋ ಫೈನಾನ್ಸ್ ಕಂಪನಿಗಳು ಕಾಣಿಸುತ್ತವೆ; ದಿನಬೆಳಗಾದರೆ ಹೊಸ ಕಂಪನಿಗಳು ಹುಟ್ಟಿಕೊಳ್ಳುತ್ತಿವೆ.

“ಇವರು ಪ್ರತಿದಿನ ಹಳ್ಳಿಗಳಿಗೆ ಮತ್ತು ನಗರದ ಸ್ಲಂ ಪ್ರದೇಶಗಳಿಗೆ ತೆರಳಿ ಸಾಲ ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ಆದರೆ, ಯಾವುದೇ ಕಾರಣಕ್ಕೂ ಇಂತಹ ಕಂಪನಿಗಳು ಅಕ್ಷರಸ್ಥ ಹೆಣ್ಣುಮಕ್ಕಳನ್ನು ಸಾಲ ತೆಗೆದುಕೊಳ್ಳಿ ಎಂದು ಕೇಳುವುದಿಲ್ಲ.

“ಸುಲಭವಾಗಿ ಸಾಲ ಸಿಗುತ್ತದೆ ಎಂದು ಜನರು ಯೋಚಿಸುತ್ತಿದ್ದಾರೆಯೇ ಹೊರತು, ಇದರಿಂದ ಆಗುವ ಶೋಷಣೆ ಬಗ್ಗೆ ಚಿಂತಿಸುವುದಿಲ್ಲ. ಪಡೆದ ಹಣವನ್ನು ವಾರಕ್ಕೆ ಅಥವಾ ಹದಿನೈದು ದಿನಕ್ಕೊಮ್ಮೆ ತುಂಬಬೇಕು. ಕೊನೆಯವರೆಗೂ ಅವರು ಮೂಲಧನಕ್ಕೆ ಬಡ್ಡಿ ಕಟ್ಟುತ್ತಿದ್ದೇವೆ ಎಂಬ ಅರಿವೇ ಬರುವುದಿಲ್ಲ. ಹಣ ಕಟ್ಟದವರ ಮನೆ ಮುಂದೆ ಬ್ಯಾಂಕ್‌ನವರು ಬಂದು ಕೂರುತ್ತಾರೆ. ಯಾವುದೇ ಹಳ್ಳಿಯನ್ನು ನೋಡಿದರೂ ಒಂದಲ್ಲಾ ಮನೆ ಮುಂದೆ ನಾಲ್ಕಾರು ಜನ ಬ್ಯಾಂಕ್ ಸಿಬ್ಬಂದಿ ಕುಳಿತಿರುತ್ತಾರೆ. ಸಾಲ ಪಡೆದವರಿಗೆ ಬೈಯುತ್ತಾ ಇರುತ್ತಾರೆ. ಅವರನ್ನು ಮನೆಯಿಂದ ಹೊರಗಡೆ ಹೋಗುವುದಕ್ಕೆ ಬಿಡುವುದಿಲ್ಲ. ’ಕಂಪನಿ ಸಿಬ್ಬಂದಿಗಳು ರಾತ್ರಿ 12 ಗಂಟೆಯಾದರೂ ಮನೆ ಮುಂದೆಯೇ ಕುಳಿತಿರುತ್ತಾರೆ’ ಎಂದು ಹಲವು ಮಹಿಳೆಯರು ನನಗೆ ಹೇಳಿದ್ದಾರೆ. ಈ ರೀತಿಯ ಕಿರುಕುಳ ಹೆಣ್ಣುಮಕ್ಕಳಿಗೆ ಹಚ್ಚಾಗಿದೆ.

“ಮೊದಲೆಲ್ಲಾ ಹೆಣ್ಣುಮಕ್ಕಳು ಮನೆಗೆ ಬೇಕಾಗಿರುವುದನ್ನು ತರಲು ವಾರಕ್ಕೊಮ್ಮೆ ಸಂತೆಗೆ ಹೋಗುತ್ತಿದ್ದರು. ಮನೆಗೆ ಬೇಕಾಗಿರುವ ಅಗತ್ಯ ತರಕಾರಿ, ಹಣ್ಣು ಎಲ್ಲ ತರುತ್ತಿದ್ದರು. ಅವರು ಬರುವುದನ್ನೇ ಮಕ್ಕಳು ಕಾಯುತ್ತಿದ್ದರು. ಆದರೆ, ಇಂದು ಅಂತಹ ದೃಶ್ಯ ಕಾಣುವುದಕ್ಕೆ ಸಾಧ್ಯವೇ ಇಲ್ಲ! ಏಕೆಂದರೆ, ಪ್ರತಿದಿನವೂ ಮಹಿಳೆಯರು ದುಡಿಯಲೇಬೇಕು. ಕೆಲವು ಮಹಿಳೆಯರು ಎರಡೆರಡು ಪಾಳಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ರಜೆ ಎಂಬುದೇ ಅವರಿಗೆ ಇಲ್ಲವಾಗಿದೆ.

ಇದನ್ನೂ ಓದಿ: ಬೌದ್ಧ ಧರ್ಮ ಎಂಬ ಕಾರಣಕ್ಕೆ ದಲಿತ ಯುವಕನಿಗೆ ದೇವಸ್ಥಾನ ಪ್ರವೇಶ ನಿರಾಕರಣೆ; ಶಿವಸೇನಾ ಮುಖಂಡನ ಬೆಂಬಲಿಗರಿಂದ ಸಾಮೂಹಿಕ ಹಲ್ಲೆ

“ನಮ್ಮ ಸರ್ವೆಯ ಪ್ರಕಾರ, ಪ್ರತಿ ಹಳ್ಳಿಯಿಂದ ಕೋಟಿಗಟ್ಟಲೆ ಹಣ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಹೋಗುತ್ತಿದೆ. ಇದು ಒಂದು ಚಿಕ್ಕ ಉದಾಹರಣೆಯಷ್ಟೇ.

“ಆರ್‌ಬಿಐ ನಿಯಮಗಳಂತೆ ಅವರು ಬಡ್ಡಿ ಪಡೆಯುತ್ತಿಲ್ಲ. 10 ಸಾವಿರ ಸಾಲ ಪಡೆದವರು, ಮೊದಲನೇ ಕಂತು ಕಟ್ಟಿದ ನಂತರ ಪಾವತಿಸುವಾಗ ಕೂಡ ಪೂರ್ಣ ಹತ್ತು ಸಾವಿರಕ್ಕೆ ಬಡ್ಡಿ ಕಟ್ಟಬೇಕು. ಕೊನೇಕಂತು ಕಟ್ಟುವಾಗಲೂ ಕೂಡ ಪೂರ್ಣ ಬಡ್ಡಿ ಪಾವತಿಸಬೇಕಾಗುತ್ತದೆ. ಶೇ. 17ರಿಂದ 24 ರಷ್ಟು ಬಡ್ಡಿ ವಿಧಿಸುತ್ತಾರೆ ಎಂಬುದನ್ನು ನಾವು ನಮ್ಮ ಸರ್ವೆ ಮುಖಾಂತರ ಕಂಡುಕೊಂಡಿದ್ದೇವೆ.

“ತೊಂದರೆಗೆ ಒಳಗಾಗಿರುವ ಹಲವು ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳು ನಮ್ಮೊಟ್ಟಿಗೆ ಮಾತನಾಡಿದ್ದಾರೆ. ಹಂದೂರು ಎಂಬಲ್ಲಿ ಒಬ್ಬ ಮಹಿಳೆ ಸಾಲ ತೀರಿಸಲು ತಮ್ಮ ಮನೆಯನ್ನೇ ಮಾರಾಟ ಮಾಡಬೇಕಾಯಿತು. ಈಗ ಅದೇ ಮನೆಯಲ್ಲಿ ಧರ್ಮಸ್ಥಳ ಸಂಘ ಕಚೇರಿ ತೆರೆದಿದೆ. ಆ ಮಹಿಳೆ ಮತ್ತು ಅವರ ಕುಟುಂಬ ಪಕ್ಕದಲ್ಲಿ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದೆ. ಸುರಪುರದ ಹಲವು ಹಳ್ಳಿಗಳಲ್ಲಿ ಎಷ್ಟೋ ಹೆಣ್ಣುಮಕ್ಕಳು ಕಾಣೆಯಾಗಿದ್ದಾರೆ! ಊರಿಗೆ ಹೋಗಿ ಬರುತ್ತೇವೆ ಎಂದವರು ವಾಪಸ್ ಬರಲೇ ಇಲ್ಲ. ಇಂಥ ಪ್ರಕರಣಗಳು ಸಾಮಾನ್ಯ ಆಗಿಬಿಟ್ಟಿವೆ.

“ಜನ ಮರ್ಯಾದೆಗೆ ತುಂಬಾ ಹೆದರುತ್ತಾರೆ. ಜೀವ ಹೋದರೂ ಮರ್ಯಾದೆ ಬಿಡಲ್ಲ ಎನ್ನುತ್ತಿದ್ದ ಜನರ ಮನೆ ಬಾಗಿಲಲ್ಲಿ ಸಾಲಗಾರರು ಬಂದು ಕೂತರೆ ಅವರು ಏನು ಮಾಡುತ್ತಾರೆ? ಮನೆ ಜಫ್ತಿ ಮಾಡುತ್ತೇವೆ ಎನ್ನುತ್ತಾರೆ. ಮನೆಮನೆಗಳ ಮುಂದೆ ಇಂದು ಸಾಲಗಾರರು ಬಂದು ನಿಲ್ಲುತ್ತಿದ್ದಾರೆ. ಹಲವರು ಮನೆ ಬಾಗಿಲು ಹಾಕಿಕೊಂಡು ಹೋಗಿ ತಪ್ಪಿಸಿಕೊಳ್ಳುತ್ತಾರೆ. ಕೆಲವರು ಮನೆ ಹಿಂದಿನ ಬಾಗಿಲಿನಿಂದ ಹೋಗುತ್ತಾರೆ. ಇದು ಅತ್ಯಂತ ಅಮಾನವೀಯ. ಮೈಕ್ರೋ ಫೈನಾನ್ಸ್‌ನಿಂದ ಸಾಲ ಪಡೆದ ಜನರಿಗೆ ಮರ್ಯಾದೆ ಎನ್ನುವುದೇ ಇಲ್ಲದಾಗಿದೆ; ಸಾಲಕ್ಕಾಗಿ ಅದನ್ನು ಮಾರಿಕೊಂಡಿದ್ದಾರೆ ಮತ್ತು ನಿರಂತರ ಕಿರುಕುಳ ಅನುಭವಿಸುತ್ತಿದ್ದಾರೆ” ಎನ್ನುತ್ತಾರೆ ಶಾರದಾ ಗೋಪಾಲ್.

ಸಾಲ ಪಡೆಯುವುದು ಚಟವಾಗಿ ಮಾರ್ಪಟ್ಟಿದೆ

ಮೈಕ್ರೋ ಫೈನಾನ್ಸ್‌ಗಳಿಂದ ಮಹಿಳೆಯರಿಗಾಗುತ್ತಿರುವ ಶೋಷಣೆ ಕುರಿತು ಅಧ್ಯಯನ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತೆ ಮಧು ನ್ಯಾಯಪಥದೊಂದಿಗೆ ಮಾತನಾಡಿ, “ಸುಮಾರು ಜನಕ್ಕೆ ತಮಗಾಗುತ್ತಿರುವ ಶೋಷಣೆಯ ಬಗ್ಗೆ ಮಾತನಾಡುವುದಕ್ಕೆ ಕಷ್ಟ ಆಗುತ್ತದೆ. ಏಕೆಂದರೆ, ಅವರು ಬಹಳ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿರುತ್ತಾರೆ. ಸಾಲದ ಮೇಲೆ ಅವಲಂಬನೆ ಬೆಳೆದ ಮೇಲೆ ಅದರಿಂದ ಹೊರಗೆ ಬರುವುದು ಕಷ್ಟ. ಒಂದು ಕಡೆ ಅವರಿಗೆ ಸಾಲವೂ ಬೇಕು; ಮತ್ತೊಂದು ಕಡೆ ತೊಂದರೆಯೂ ಆಗುತ್ತದೆ, ಇದು ಚಟವಾಗಿ ಪರಿವರ್ತನೆ ಆಗಿದೆ.

“ನಮ್ಮ ಸರ್ವೆಸಮಯದಲ್ಲಿ ಮಾತನಾಡಿದ ಮಹಿಳೆಯೊಬ್ಬರು, ’ಇದು ಒಳ್ಳೆಯದಲ್ಲ ಎಂದು ನಮಗೆ ಗೊತ್ತು, ಆದರೂ ಅದರಲ್ಲಿ ಸಿಲುಕಿದ್ದೇವೆ’ ಎನ್ನುತ್ತಾರೆ. ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರಿಗೆ ಸಂಬಂಧಪಟ್ಟ ಸಂಘವು ಜನರಿಗೆ ಭಾವನಾತ್ಮಕವಾಗಿದೆ. ಅವರು ಧರ್ಮದ ಮೂಲಕ ಜನರಿಗೆ ಅಪೀಲ್ ಮಾಡುತ್ತಾರೆ. ಹಾಗಾಗಿ, ಪ್ರಶ್ನೆ ಮಾಡುವುದೂ ಅವರಿಗೆ ಕಷ್ಟವಾಗುತ್ತದೆ. ಆದರೆ, ಬಹಳಷ್ಟು ಕಡೆ ಈ ಬಗ್ಗೆ ಜಾಗೃತಿ ಬಂದಿದೆ. ನಾವು ಇದರ ಬಗ್ಗೆ ಈಗಾಗಲೇ ಅಧ್ಯಯನ ಆರಂಭಿಸಿದ್ದೇವೆ. ಇನ್ನೂ ಪೂರ್ಣಗೊಂಡಿಲ್ಲ. ನಮ್ಮ ಸರ್ವೆ ಮುಗಿದ ನಂತರ ಜನರ ಮುಂದೆ ಮತ್ತು ಸರ್ಕಾರದ ಗಮನಕ್ಕೆ ತರುತ್ತೇವೆ. ಈ ಬಗ್ಗೆ ಸರ್ಕಾರ ಕೆಲವು ನಿಯಮಗಳನ್ನು ತರಬೇಕು. ಈ ಬಗ್ಗೆ ತಳಮಟ್ಟದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ” ಎನ್ನುತ್ತಾರೆ ಮಧು.

ಒತ್ತಡ ತಾಳಲಾರದೆ ಊರು ಬಿಡುತ್ತಿರುವ ಹೆಣ್ಣುಮಕ್ಕಳು

ಖಾನಾಪುರದ ’ಜಾಗೃತ ಮಹಿಳಾ ಒಕ್ಕೂಟ’ದ ಸುವರ್ಣ ರಾಮಚಂದ್ರ ಕುಟಾಳೆ ಮಾತನಾಡಿ, “ಫೈನಾನ್ಸ್‌ಗಳ ಒತ್ತಡ ತಾಳಲಾರದೆ ಹಲವು ಹೆಣ್ಣುಮಕ್ಕಳು ಇದ್ದಕ್ಕಿದ್ದಂತೆ ಊರು ಬಿಡುತ್ತಿದ್ದಾರೆ. ಕೆಲವರು ಮನೆ ಮಾರಿ ನಗರಗಳಲ್ಲಿ ಕೂಲಿ ಮಾಡುತ್ತಿದ್ದಾರೆ” ಎಂಬ ಆಘಾತಕಾರಿ ವಿವರವನ್ನು ತೆರೆದಿಟ್ಟರು.

“ಮೈಕ್ರೋ ಫೈನಾನ್ಸ್‌ನವರು ಯಾವುದೇ ಆಸ್ತಿ ದಾಖಲಾತಿಗಳಿಲ್ಲದೆ, ಓಟರ್ ಐಡಿ ಮತ್ತು ಆಧಾರ್ ಕಾರ್ಡ್ ಇದ್ದರೆ ಮನೆ ಬಾಗಿಲಿಗೆ ಬಂದು ’ನೀವೊಂದು ಐದು ಜನ ಒಟ್ಟಾದರೆ ಲೋನ್ ಕೊಡುತ್ತೇವೆ’ ಎನ್ನುತ್ತಾರೆ. ಧರ್ಮಸ್ಥಳ ಸಂಘವಂತೂ ಈಗ ದೇಶವ್ಯಾಪಿಯಾಗಿದೆ. ಜೊತೆಗೆ, ಎಸ್ಕೆಎಸ್, ಗ್ರಾಮೀಣ ಕೂಟ, ಭರತ, ನವ ಚೈತನ್ಯ, ಚೈತನ್ಯ, ರತ್ನಾಕರ ಸೇರಿದಂತೆ ಹಲವು ಫೈನಾನ್ಸ್‌ಗಳು ಮನೆ ಬಾಗಿಲಿಗೆ ಬಂದು ಲೋನ್ ಕೊಟ್ಟಿರುವುದರಿಂದ ಸಾಕಷ್ಟು ಮಹಿಳೆಯರು ಸಾಲ ಪಡೆದಿದ್ದಾರೆ.

“ಗುಂಪಿನಲ್ಲಿದ್ದ ಮಹಿಳಯರು ಸಾಲ ಬೇಡ ಎಂದರೂ ಅವರ ಹೆಸರಲ್ಲಿ ಬೇರೆಯವರು ಪಡೆದು ಬಳಸಿಕೊಳ್ಳುತ್ತಾರೆ. ಹೀಗಾಗಿ, ಮಹಿಳೆಯರು ಮೂರ್ನಾಲ್ಕು ಕಡೆ ಸಾಲ ಪಡೆದು ಕಂತಿನ ಜೊತೆಗೆ ಬಡ್ಡಿ ತುಂಬುತ್ತಿದ್ದಾರೆ. ಬಹಳಷ್ಟು ಕಡೆ ಸಾಲ ಪಡೆದವರು ಕಂತು ಕಟ್ಟುವುದಕ್ಕೇ ಸಾಧ್ಯವಾಗದೇ ಇದ್ದಲ್ಲಿ, ಹಣ ಕಟ್ಟಿಸುವುದು ಗುಂಪಿನ ಜವಾಬ್ದಾರಿಯಾಗಿರುತ್ತದೆ. ಎಲ್ಲರೂ ಸೇರಿ ಹಣ ಕಟ್ಟಬೇಕಾಗುತ್ತದೆ. ಹಣ ಕಟ್ಟದಿದ್ದರೆ ರಾತ್ರಿ 12 ಗಂಟೆಯಾದರೂ ವಸೂಲಿಗಾರರು ಮನೆ ಬಿಟ್ಟುಹೋಗುವುದಿಲ್ಲ. ನೀವು ಏನಾದರೂ ಮಾಡಿ, ಯಾವುದಾದರೂ ವಸ್ತು ಮಾರಿಯಾದರೂ ನಮಗೆ ಕಂತು ಕಟ್ಟಬೇಕು ಎಂಬ ಒತ್ತಡ ಹೇರುತ್ತಾರೆ.

“ಈ ಒತ್ತಡದಿಂದ ಜನ ಕೆಲಸ ಹುಡುಕಿಕೊಂಡು ಹೋಗುತ್ತಾರೆ. ಸರಿಯಾಗಿ ಕೂಲಿ ಇಲ್ಲದೆ ಹಣ ಸಿಗದೇ ಇದ್ದಾಗ, ಹಣ ಕೊಡುವವರ ಮನೆಮನೆಗೆ ಎಡತಾಕಿ ದುಡ್ಡು ಕೇಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಒಂದು ಕಡೆ ಹಣ ಪಡೆದಿದ್ದರೆ ಹೇಗಾದರೂ ನಿಭಾಯಿಸಬಹುದು. ಆದರೆ ಮೂರ್ನಾಲ್ಕು ಕಡೆ ಬೇರೆಯವರ ಹೆಸರಿನಲ್ಲಿ ಹಣ ಪಡೆದವರು ತಮ್ಮ ಸಣ್ಣಪುಟ್ಟ ಮನೆ-ನಿವೇಶನವನ್ನೂ ಮಾರಿಕೊಂಡು ಸಾಲ ತೀರಿಸಿದ ಉದಾಹರಣೆ ನಮ್ಮ ಕಣ್ಣಮುಂದಿವೆ. ತಮ್ಮ ಹೆಸರಿನಲ್ಲಿದ್ದ ಒಂದು, ಅರ್ಧ ಎಕರೆ ಜಮೀನನ್ನೂ ಮಾರಾಟ ಮಾಡಿದ್ದಾರೆ.

“ವಸೂಲಿಗಾರರ ಒತ್ತಡ ತಾಳಲಾರದೆ ಹೆಣ್ಣುಮಕ್ಕಳು ಇದ್ದಕ್ಕಿದ್ದಂತೆ ಊರು ಬಿಟ್ಟು ಹೋಗುತ್ತಿದ್ದಾರೆ. ಪ್ರತಿ ಹಳ್ಳಿಯಲ್ಲೂ ಈ ಪರಿಸ್ಥಿತಿ ಇದೆ. ಕೂಲಿ ಮಾಡುವವರಿಗೂ ಸಹ ಒಂದು ಸಣ್ಣ ಮನೆ ಇರುತ್ತದೆ, ಅದನ್ನೂ ಕೂಡ ಕಷ್ಟದ ಪರಿಸ್ಥಿತಿಯಲ್ಲಿ ಮಾರಿಕೊಂಡಿದ್ದಾರೆ. ಖಾನಾಪುರದ ಹಳ್ಳಿಯೊಂದರಲ್ಲಿ ಕಳೆದ ಆರು ತಿಂಗಳಲ್ಲಿ ನಾಲ್ಕು ಮನೆಗಳನ್ನು ಸಾಲ ತೀರಿಸುವುದಕ್ಕೆ ಮಾರಾಟ ಮಾಡಿ ಊರು ಬಿಟ್ಟುಹೋಗಿದ್ದಾರೆ. ಮನೆ ಮಾರಿ ಫೈನಾನ್ಸ್ ಕಂಪನಿಗಳಿಗೆ ಹಣ ಕೊಟ್ಟರೂ ಇನ್ನೂ ಅವರ ಸಾಲ ಮುಗಿದಿಲ್ಲ. ಆದ್ದರಿಂದ, ಅವರು ಊರು ಬಿಟ್ಟು ನಗರಗಳನ್ನು ಸೇರಿಕೊಂಡು ಕೂಲಿ ಮಾಡುತ್ತಿದ್ದಾರೆ.

“ಧರ್ಮದ ಹೆಸರಿನಲ್ಲಿ ’ಧರ್ಮಸ್ಥಳ ಸಂಘ’ ಪ್ರತಿಯೊಬ್ಬರನ್ನೂ ಸುಲಿಗೆ ಮಾಡುತ್ತಿದೆ. ಸಾಲ ನೀಡುವುದರ ಜೊತೆಗೆ ಈ ಸಂಘ ಉಳಿತಾಯದ ಹೆಸರಿನಲ್ಲಿ ಹಣ ಕಟ್ಟಿಸಿಕೊಳ್ಳುತ್ತದೆ. ಗುಂಪಿನ ಉಳಿತಾಯದ ಹಣವನ್ನು ಸದಸ್ಯರಿಗೆ ನೀಡದೆ, ತಮ್ಮ ಖಾತೆಗೆ ಜಮೆ ಮಾಡಿಸಿಕೊಳ್ಳುತ್ತಾರೆ. ನಂತರ, ಸಾಲ ಎಂದು ನೀಡಿ, ಕೊನೆ ಕಂತಿನವರೆಗೆ ಮೊದಲನೇ ಕಂತಿಗೆ ಕಟ್ಟಿದ ಬಡ್ಡಿಯನ್ನೇ ಪಡೆಯುತ್ತಾರೆ. ಇನ್ಷುರೆನ್ಸ್ ಹೆಸರಿನಲ್ಲಿ ಹಣ ಕಟ್ ಮಾಡಿಕೊಳ್ಳುತ್ತಾರೆ. ಜೊತೆಗೆ ಕುಕ್ಕರ್, ಗ್ಯಾಸ್ ಸ್ಟವ್ ಸೇರಿದಂತೆ ಹಲವು ಗೃಹೋಪಯೋಗಿ ವಸ್ತುಗಳನ್ನು ಬೇಡ ಎಂದರೂ ಕಂತಿನಲ್ಲಿ ಹಣ ಕಟ್ಟುವಂತೆ ಹೇಳಿ ತಂದುಕೊಡುತ್ತಾರೆ. ದೊಡ್ಡ ಸಾಲಕ್ಕೆ ಮತ್ತೊಂದು ಚಿಕ್ಕ ಸಾಲ ಕೊಡುತ್ತಾರೆ. ಈ ಎಲ್ಲ ಕಂತುಗಳು ಜನರಿಗೆ ದೊಡ್ಡ ಹೊರೆಯಾಗಿವೆ” ಎನ್ನುತ್ತಾರೆ ಸುವರ್ಣ ರಾಮಚಂದ್ರ ಕುಟಾಳೆ.

ಮೈಕ್ರೋ ಫೈನಾನ್ಸ್ ಹೊಡೆತಕ್ಕೆ ಮರೆಯಾಗುತ್ತಿರುವ ಸ್ವಸಹಾಯ ಸಂಘಗಳು

ಎರಡು ದಶಕಗಳ ಹಿಂದೆ ಬಡ ಮಹಿಳೆಯರಿಗೆ ಆರ್ಥಿಕವಾಗಿ ನೆರವಾಗಲು ಸರ್ಕಾರ ಆರಂಭಿಸಿದ ಸ್ವಸಹಾಯ ಸಂಘಗಳು ಇಂದು ಮೈಕ್ರೋ ಫೈನಾನ್ಸ್ ಹೊಡಡೆತಕ್ಕೆ ಸಿಲುಕಿ ಮರೆಯಾಗುತ್ತಿವೆ.

2000-2001ರಲ್ಲಿ ಕರ್ನಾಟಕ ಸರ್ಕಾರವು ’ಸ್ತ್ರೀಶಕ್ತಿ’ ಎಂಬ ಹೆಸರಿನಲ್ಲಿ ಮಹಿಳಾ ಸ್ವಸಹಾಯ ಗುಂಪುಗಳನ್ನು (ಎಸ್‌ಎಚ್‌ಜಿಗಳು) ಪ್ರಾರಂಭಿಸಿತು. ಇದು ಗ್ರಾಮೀಣ ಮಹಿಳೆಯರಿಗೆ ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸುವ ಉದ್ದೇಶದಿಂದ ತಮ್ಮ ಜೀವನದ ಮೇಲೆ ಹೆಚ್ಚಿನ ನಿಯಂತ್ರಣವನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಆದಾಯ ಸೃಷ್ಟಿಸುವ ಚಟುವಟಿಕೆ, ತರಬೇತಿಗಳು ಮತ್ತು ಅನುಸರಣೆಯನ್ನು ಖಾತ್ರಿಪಡಿಸುವ ಸಮುದಾಯ ಆಧಾರಿತ ಬೆಂಬಲ ವ್ಯವಸ್ಥೆಯನ್ನು ನಿರ್ಮಿಸುವುದು ಅದರ ಉದ್ದೇಶವಾಗಿತ್ತು. ಸ್ವಸಹಾಯ ಗುಂಪು ಎಂದರೆ 10-20 ಮಹಿಳೆಯರ ಗುಂಪು; ಸಾಮಾನ್ಯವಾಗಿ ತುಂಬಾ ಬಡವರು, ಒಬ್ಬರಿಗೊಬ್ಬರು ತಿಳಿದಿರುವವರು ಮತ್ತು ಒಟ್ಟಿಗೆ ಸೇರುವ ಒಂದೇ ನೆರೆಹೊರೆಯವರು ಸೇರಿಕೊಳ್ಳುವುದು. ಅವರು ನಿಯಮಿತವಾಗಿ (ಸಾಪ್ತಾಹಿಕ, ಹದಿನೈದು, ಮಾಸಿಕ) ಹಣವನ್ನು ಉಳಿಸುತ್ತಾರೆ ಮತ್ತು ಈ ಸಂಗ್ರಹಿಸಲಾದ ಉಳಿತಾಯವು ಅವರಿಗೆ ಸಾಲದ ಮೂಲವಾಗುತ್ತದೆ. ಈ ಸ್ವಸಹಾಯ ಸಂಘಗಳನ್ನು ರಾಷ್ಟ್ರೀಕೃತ/ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಲಿಂಕ್ ಮಾಡಲಾಗಿದೆ. ಈ ವ್ಯವಸ್ಥೆಯು ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯದ ಮೂಲಕ ತಮ್ಮ ಜೀವನದ ಮೇಲೆ ಹೆಚ್ಚು ಹಿಡಿತ ಸಾಧಿಸಲು ಅನುವು ಮಾಡಿಕೊಡುತ್ತದೆ ಮತ್ತು ಏಕಕಾಲದಲ್ಲಿ ಸಮುದಾಯದ ಪ್ರಜ್ಞೆಯನ್ನು ಬೆಳೆಸುತ್ತದೆ. ಗ್ರಾಮೀಣ ಆರ್ಥಿಕತೆಗೆ ಪ್ರಚೋದನೆಯನ್ನು ನೀಡುತ್ತದೆ ಮತ್ತು ವಲಸೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಆದರೆ, ಮೈಕ್ರೋ ಫೈನಾನ್ಸ್‌ಗಳ ಹಾವಳಿ ಹೆಚ್ಚಾದ ನಂತರ ಮಹಿಳೆಯರು ಸ್ತ್ರೀಶಕ್ತಿ ಗುಂಪುಗಳಿಂದ ವಿಮುಖರಾಗುತ್ತಿದ್ದಾರೆ. ಸುಲಭಕ್ಕೆ ಸಾಲ ಸಿಗುವ ಮೈಕ್ರೋ ಫೈನಾನ್ಸ್‌ಗಳಲ್ಲಿ ಸಾಲ ಪಡೆದು, ತಮ್ಮ ಅರಿವಿಗೇ ಬಾರದಂತೆ ಹೆಚ್ಚಿನ ಬಡ್ಡಿ ಕಟ್ಟುತ್ತಿದ್ದಾರೆ. ಮೂರ್ನಾಲ್ಕು ಕಂಪನಿಗಳಿಂದ ಸಾಲ ಪಡೆದು ಅದನ್ನು ತೀರಿಸುವ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುವಂಥ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...