ಬೆಂಗಳೂರು ನಗರದ ಮಲ್ಲೇಶ್ವರ ಪೈಪ್‌ಲೈನ್ ಕೆ.ವಿ ರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆಯೊಬ್ಬರನ್ನು ಹತ್ಯೆಗೈದು, ದೇಹವನ್ನು ಸುಮಾರು 30 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟ ಭೀಕರ ಘಟನೆ ಬೆಳಕಿಗೆ ಬಂದಿದೆ.
ಮಹಾಲಕ್ಷ್ಮಿ (29) ಹತ್ಯೆಯಾದ ಮಹಿಳೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವೈಯ್ಯಾಲಿಕಾವಲ್ ಠಾಣೆ ಪೊಲೀಸರು, ಹಂತಕನ ಪತ್ತೆಗೆ ಶೋಧ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕೃತ್ಯ ನಡೆದ ಸ್ಥಳಕ್ಕೆ ಬೆರಳಚ್ಚು, ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಜ್ಞರು, ಶ್ವಾನದಳ ಹಾಗೂ ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೆಹಲಿಯ ಶ್ರದ್ದಾ ವಾಕರ್ ರೀತಿಯಲ್ಲೇ ಕೊಲೆ ನಡೆದಿದೆ ಎಂದು ವರದಿಗಳು ಹೇಳಿವೆ.
ಕೃತ್ಯ ನಡೆದ ಸ್ಥಳದ ಅಕ್ಕಪಕ್ಕದ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಲಾಗುತ್ತಿದೆ. ಕೊಲೆಯಾದ ಮಹಿಳೆಯ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಹಂತಕನ ಸುಳಿವು ಸಿಕ್ಕಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ಮಹಾಲಕ್ಷ್ಮಿ ಅವರ ಪೋಷಕರು ನೇಪಾಳ ಮೂಲದವರು. 30 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ನೆಲಮಂಗಲ ಬಳಿ ವಾಸಿಸುತ್ತಿದ್ದರು. ಮಹಾಲಕ್ಷ್ಮಿ ಪಶ್ಚಿಮ ಬಂಗಾಳದ ಹೇಮಂತ್ ದಾಸ್ ಎಂಬವರನ್ನು ಮದುವೆಯಾಗಿದ್ದರು. ದಂಪತಿಗೆ 4 ವರ್ಷದ ಹೆಣ್ಣು ಮಗುವಿದೆ. ದಂಪತಿ ಮಧ್ಯೆ ಇತ್ತೀಚೆಗೆ ವೈಮನಸ್ಸು ಉಂಟಾಗಿತ್ತು. ಮಹಾಲಕ್ಷ್ಮಿ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
ಪ್ರತಿನಿತ್ಯ ಕೆಲಸಕ್ಕೆ ಹೋಗಿ ಬರುತ್ತಿದ್ದ ಮಹಾಲಕ್ಷ್ಮಿ, ಕಳೆದ 20 ದಿನಗಳಿಂದ ಕಾಣಿಸುತ್ತಿರಲಿಲ್ಲ. ಹಾಗಾಗಿ, ಅಕ್ಕಪಕ್ಕದ ಮನೆಯವರು ಆಕೆಗೆ ಕರೆ ಮಾಡಿದ್ದರು. ಈ ವೇಳೆ ಮೊಬೈಲ್ ಸ್ವಿಚ್ ಆಫ್ ಬಂದಿದೆ. ಅನುಮಾನಗೊಂಡ ಸ್ಥಳೀಯರು ಮಹಾಲಕ್ಷ್ಮಿಯ ಸ್ನೇಹಿತೆಯರಿಂದ ನಂಬರ್ ಪಡೆದು, ಆಕೆಯ ತಾಯಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಅವರು ಬಂದು ಮನೆಯ ಬೀಗ ಒಡೆದು ಪರಿಶೀಲಿಸಿದಾಗ ದುರ್ವಾಸನೆ ಬರಲು ಪ್ರಾರಂಭಿಸಿದೆ. ಮನೆಯಲ್ಲಿ ರಕ್ತದ ಕಲೆಗಳು ಕಂಡು ಬಂದಿದೆ. ಫ್ರಿಡ್ಜ್ ತೆರೆದು ನೋಡಿದಾಗ, ಅದರಲ್ಲಿ ತುಂಡರಿಸಿದ ಮಹಾಲಕ್ಷ್ಮಿಯ ದೇಹ ಕಂಡು ಬಂದಿದೆ ಎಂದು ವರದಿಗಳು ಹೇಳಿವೆ.
ಪತಿಯ ವಿಚಾರಣೆ : ಪೊಲೀಸರು ಕೊಲೆಯಾದ ಮಹಾಲಕ್ಷ್ಮಿಯ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಪೌರಕಾರ್ಮಿಕ ಮಹಿಳೆಯರ ಮೇಲೆ ಹಲ್ಲೆ, ಜಾತಿ ನಿಂದನೆ ಪ್ರಕರಣ : ಆರೋಪಿಯ ಬಂಧನ


