ಇತ್ತೀಚೆಗೆ ಮಲಯಾಳಂ ಸಿನಿಮಾ ರಂಗದ ಪ್ರಮುಖ ನಟರ ವಿರುದ್ದ ಲೈಂಗಿಕ ದೌರ್ಜನ್ಯ ದೂರು ದಾಖಲಿಸಿದ್ದ ಕೇರಳದ ನಟಿಯ ವಿರುದ್ದವೇ ಇದೀಗ ಪೋಕ್ಸೋ ಕೇಸ್ ದಾಖಲಾಗಿದೆ.
ನಟಿಯ ಸಂಬಂಧಿಯೊಬ್ಬರು ನೀಡಿರುವ ದೂರಿನ ಆಧಾರದ ಮೇಲೆ ಮುವಟ್ಟುಪುಝ ಪೊಲೀಸರು ಸೆಪ್ಟೆಂಬರ್ 20ರಂದು ಆಕೆಯ ವಿರುದ್ದ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
“ನಾನು 16 ವರ್ಷದವಳಿದ್ದಾಗ ನಟಿ ನನ್ನನ್ನು ಸಿನಿಮಾ ಆಡಿಷನ್‌ಗೆಂದು ಚೆನ್ನೈಗೆ ಕರೆದೊಯ್ದು ಕೆಲ ಪುರುಷರಿಗೆ ಪರಿಚಯ ಮಾಡಿಸಿಕೊಟ್ಟಿದ್ದು. ಆಡಿಷನ್ ನಡೆಯುವಾಗ ಪುರುಷರು ನನ್ನನ್ನು ಅಸಭ್ಯವಾಗಿ ಸ್ಪರ್ಶಿಸಿದ್ದರು. ಆಗ ನಾನು ವಿರೋಧ ವ್ಯಕ್ತಪಡಿಸಿದ್ದೆ, ಅತ್ತು ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದೆ. ಆಗ ನಟಿ ‘ಅವರೊಂದಿಗೆ ಸಹಕರಿಸು’ ಎಂದು ನನಗೆ ಹೇಳಿದ್ದರು” ಎಂದು ದೂರುದಾರರು ಆರೋಪಿಸಿದ್ದಾರೆ. “ನಟಿ ಸೆಕ್ಸ್ ಟ್ರೇಡ್, ಸೆಕ್ಸ್ ರಾಕೇಟ್ ನಡೆಸುತ್ತಿದ್ದಾರೆ” ಎಂದೂ ದೂರಿನಲ್ಲಿ ಹೇಳಿದ್ದಾರೆ.
ದೂರು ಸ್ವೀಕರಿಸಿರುವ ಪೊಲೀಸರು ನಟಿಯ ವಿರುದ್ದ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ), ಬಾಲನ್ಯಾಯ ಕಾಯ್ದೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಮತ್ತು 354A (ಲೈಂಗಿಕ ಕಿರುಕುಳ) ಪ್ರಕರಣ ದಾಖಲಿಸಿದ್ದಾರೆ.
ಚೆನ್ನೈನಲ್ಲಿ ನೆಲೆಸಿರುವ ಆರೋಪಿ ನಟಿ, ಆಗಸ್ಟ್ ಕೊನೆಯ ವಾರದಲ್ಲಿ ಮಲಯಾಳಂ ಸಿನಿಮಾದ ನಾಲ್ವರು ನಟರು ಸೇರಿದಂತೆ ಏಳು ಮಂದಿಯ ವಿರುದ್ಧ ದೂರು ದಾಖಲಿಸಿದ್ದರು. ಆರಂಭದಲ್ಲಿ, ಹೇಮಾ ಸಮಿತಿ ವರದಿ ಬಿಡುಗಡೆಯಾದ ನಂತರ ಪ್ರಾರಂಭಗೊಂಡ ಮೀ ಟೂ ಚಳವಳಿಯ ಭಾಗವಾಗಿ ಅವರು ಫೇಸ್‌ಬುಕ್ ಪೋಸ್ಟ್ ಮೂಲಕ ನಟರ ವಿರುದ್ದ ಆರೋಪಗಳನ್ನು ಮಾಡಿದ್ದರು.
ಆಗಸ್ಟ್ 27 ರಂದು ನಟರಾದ ಜಯಸೂರ್ಯ, ಇಡವೇಲ ಬಾಬು, ಮಣಿಯನ್ಪಿಳ್ಳ ರಾಜು, ಪ್ರೊಡಕ್ಷನ್ ಕಂಟ್ರೋಲರ್‌ಗಳಾದ ನೋಬಲ್ ಮತ್ತು ವಿಚು ಹಾಗೂ ನಿರ್ಮಾಪಕ ಮತ್ತು ವಕೀಲರ ಕಾಂಗ್ರೆಸ್ ಅಧ್ಯಕ್ಷ ವಿಎಸ್ ಚಂದ್ರಶೇಖರನ್ ವಿರುದ್ಧ ಕೇರಳ ಪೊಲೀಸರಿಗೆ ಪ್ರತ್ಯೇಕ ಇಮೇಲ್ ದೂರುಗಳನ್ನು ಕಳುಹಿಸಿದ್ದರು.
“ಹಲವು ವರ್ಷಗಳ ಹಿಂದೆ ನಟ ಹಾಗೂ ರಾಜಕಾರಣಿ ಮುಕೇಶ್ ನನಗೆ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಆದರೆ, ತಾನು ಸಿನಿಮಾ ರಂಗಕ್ಕೆ ಹೊಸಬಳಾಗಿದ್ದರಿಂದ ಮತ್ತು ಪರಿಣಾಮ ಎದುರಿಸುವ ಭಯದಿಂದ ಆ ಸಮಯದಲ್ಲಿ ದೂರು ನೀಡಿರಲಿಲ್ಲ” ಎಂದಿದ್ದರು.
ತನ್ನ ವಿರುದ್ದದ ಆರೋಪಗಳನ್ನು ನಿರಾಕರಿಸಿರುವ ನಟಿ, ದೂರು ನೀಡಿರುವ ಸಂಬಂಧಿ ತನಗೆ ಸ್ವಲ್ಪ ಹಣ ಕೊಡಲು ಬಾಕಿ ಇದೆ. ಅಲ್ಲದೆ, ನಾನು ನಟರ ವಿರುದ್ದ ನೀಡಿರುವ ದೂರಿನಿಂದ ಗಮನ ಬೇರೆಡೆಗೆ ಸೆಳೆಯಲು ನನ್ನ ವಿರುದ್ದ ದೂರು ದಾಖಲಿಸಲಾಗಿದೆ ಎಂದು ಹೇಳಿದ್ದಾಗಿ ವರದಿಯಾಗಿದೆ.
ನಟಿ ಪ್ರಮುಖ ನಟರ ವಿರುದ್ದ ದೂರು ದಾಖಲಿಸಿದ್ದಾಗ ಅದು ಕೇರಳ ಮಾತ್ರವಲ್ಲದೆ ದೇಶದಾದ್ಯಂತ ಸುದ್ದಿಯಾಗಿತ್ತು. ಆದರೆ, ಈಗ ಅದೇ ನಟಿ ವಿರುದ್ದ ಪೋಕ್ಸೋ ಕೇಸ್ ದಾಖಲಾಗಿರುವುದು ಎಲ್ಲೆಡೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಇದನ್ನೂ ಓದಿ : ದಾವುದ್ ಇಬ್ರಾಹಿಂ ಜೊತೆ ಲಿಂಕ್ ಎಂದ ಎಎನ್‌ಐ | ಸುಳ್ಳು ಸುದ್ದಿಗೆ ಕ್ಷಮೆಯಾಚಿಸಲು ಸಲ್ಮಾನ್ ಖಾನ್ ಒತ್ತಾಯ


