ರಾಷ್ಟ್ರಕವಿ ಕುವೆಂಪು ಅವರ ಶ್ರೇಷ್ಠ ಕೃತಿಗಳಲ್ಲಿ ಒಂದಾದ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿ ಮತ್ತೊಮ್ಮೆ ಇಂಗ್ಲಿಷ್‌ಗೆ ಅನುವಾದಗೊಂಡಿದೆ. ಈ ಬಾರಿ ಖ್ಯಾತ ಪ್ರಕಾಶನ ಸಂಸ್ಥೆಯಾದ ‘ಪೆಂಗ್ವಿನ್ ರಾಂಡೋಕ್ ಹೌಸ್ ಇಂಡಿಯಾ’ ಪ್ರಕಟಿಸಿದ್ದು, ಸಾಹಿತಿ, ಪ್ರಾಧ್ಯಾಪಕಿ ವನಮಾಲಾ ವಿಶ್ವನಾಥ ಅವರು ಈ ಬೃಹತ್ ಕಾದಂಬರಿಯನ್ನು ‘ಬ್ರೈಡ್ ಇನ್ ದಿ ಹಿಲ್ಸ್’ (Bride in the Hills) ಎಂಬ ಶೀರ್ಷಿಕೆಯಲ್ಲಿ ಇಂಗ್ಲಿಷ್‌ಗೆ ಅನುವಾದ ಮಾಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಇಂಗ್ಲಿಷ್ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಅನುವಾದಕಿ ವನಮಾಲಾ ವಿಶ್ವನಾಥ ಅವರು ನಾಲ್ಕು ದಶಕಗಳಿಂದ ಬೆಂಗಳೂರಿನ ಗಣ್ಯ ಸಂಸ್ಥೆಗಳಲ್ಲಿ ಇಂಗ್ಲಿಷ್ ಕಲಿಸಿದ್ದಾರೆ. ದ್ವಿಭಾಷಾ ವಿದ್ವಾಂಸರಾಗಿರುವ ಅವರು ಕಥಾ, ಸಾಹಿತ್ಯ ಅಕಾಡೆಮಿ ಮತ್ತು ರಾಷ್ಟ್ರೀಯ ಅನುವಾದ ಮಿಷನ್‌ನ ಸಹಯೋಗದೊಂದಿಗೆ ಇಂಗ್ಲಿಷ್ ಭಾಷಾಂತರದಲ್ಲಿ ಭಾರತೀಯ ಸಾಹಿತ್ಯವನ್ನು ಕಲಿಸಿದ್ದಾರೆ, ಪ್ರಕಟಿಸಿದ್ದಾರೆ ಮತ್ತು ಪ್ರಚಾರ ಮಾಡಿದ್ದಾರೆ.
ಇದನ್ನೂಓದಿ: ಸಂದರ್ಶನ; ರಿಚರ್ಡ್ ಈಟನ್: ಸವೆದ ಹಾದಿಯಲ್ಲಿ ನಡೆಯದ ಇತಿಹಾಸಕಾರ
ಪ್ರಶಸ್ತಿ ವಿಜೇತ ಅನುವಾದಕಿ ಆಗಿರುವ ವನಮಾಲ ಅವರು ಆಧುನಿಕ ಕನ್ನಡ ಲೇಖಕರಾದ ತೇಜಸ್ವಿ (1994), ವೈದೇಹಿ (1998), ಸಾರಾ ಅಬೂಬಕರ್ (1999), ಯು.ಆರ್. ಅನಂತಮೂರ್ತಿ (2001), ಲಂಕೇಶ್ (2003), ಮತ್ತು ಗುಲ್ವಾಡಿ ವೆಂಕಟ ರಾವ್ (2019) ಅವರ ಕೃತಿಗಳನ್ನು ಅನುವಾದ ಮಾಡಿದ್ದಾರೆ. ಅಷ್ಟೆ ಅಲ್ಲದೆ, ವಚನ (2012); ದಿ ಲೈಫ್ ಆಫ್ ಹರಿಶ್ಚಂದ್ರ (ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್, 2017); ಮತ್ತು ವಡ್ಡಾರಾಧನೆಯನ್ನು ಕೂಡಾ ಅವರು ಅನುವಾದ ಮಾಡಿದ್ದಾರೆ. ಅಶೋಕ ವಿಶ್ವವಿದ್ಯಾನಿಲಯದಲ್ಲಿ ಭಾಷಾಂತರ ಫೆಲೋ ಆಗಿರುವ ಅವರು ಪ್ರಸ್ತುತ ಎಲ್. ತೋಲ್ಪಾಡಿಯವರ ಪ್ರಬಂಧ ಸಂಗ್ರಹ, ‘ಮ್ಯೂಸಿಂಗ್ಸ್ ಆನ್ ದಿ ಮಹಾಭಾರತ’ವನ್ನು ಅನುವಾದಿಸುತ್ತಿದ್ದಾರೆ.

ತಮ್ಮ ಅನುವಾದಿತ ಕೃತಿ ‘ಬ್ರೈಡ್ ಇನ್ ದಿ ಹಿಲ್ಸ್’ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ವನಮಾಲ ಅವರು, ”ಕನ್ನಡ ಕಾದಂಬರಿ ಲೋಕದ ಉತ್ತುಂಗ ಶಿಖರ ಎನಿಸಿಕೊಂಡಿರುವ ‘ಮಲೆಗಲಲ್ಲಿ ಮದುಮಗಳು’ ಕೃತಿಯನ್ನು ಸುಮಾರು 30 ವರ್ಷಗಳ ಹಿಂದೆ ಮೊದಲ ಬಾರಿಗೆ ಓದಿದಾಗಲೆ ಅದರ ಆಳ ಅಗಲಗಳನ್ನು ನೋಡಿ ದಂಗಾಗಿ ಬಿಟ್ಟಿದ್ದೆ. ಕಾದಂಬರಿಯ ವಿಸ್ತಾವರವಾದ ಬಿತ್ತಿ ಯಾವುದನ್ನೂ ಯಾರನ್ನೂ ಬಿಡದೆ ಒಳಗೊಳ್ಳುವ ರೀತಿ ಕೆವಿ ಸುಬ್ಬಣ್ಣ ಅವರು ಹೇಳಿದಂತೆ ‘ಮಲೆನಾಡ ಮಹಾಭಾರತ’ ಎನ್ನಿಸುವಂತಹ ಸಂಕೀರ್ಣತೆ ನಮ್ಮ ಮುಂದೆ ಚೈತನ್ಯದಿಂದ ಮಿಡಿಯುತ್ತಿರುವ ಬದುಕನ್ನೆ ಅನಾವರಣ ಮಾಡುತ್ತವೆ. ಇಂತಹ ಮಹಾನ್ ಕೃತಿಯನ್ನು ಅನುವಾದ ಮಾಡಬಹುದು, ನಾನೇ ಮಾಡಿದರೂ ಮಾಡಬಹುದು ಎಂಬ ಕನಸು ಕೂಡಾ ಆಗ ಇರಲಿಲ್ಲ” ಎಂದು ಹೇಳಿದರು.
ಅದಾಗ್ಯೂ, 2017ರಲ್ಲಿ ಹಾರ್ವರ್ಡ್ ಯುನಿವರ್ಸಿಟಿ ಪ್ರೆಸ್‌ಗೆ ‘ಹರಿಶ್ಚಂದ್ರ ಕಾವ್ಯ’ವನ್ನು, 2019ರಲ್ಲಿ ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್‌ಗೆ ‘ಇಂದಿರಾ ಬಾಯಿ’ಯಂತಹ ಬಹು ಭಾಷೆಗಳನ್ನು ಬಳಸಿರುವ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದ ಮಾಡಿದ ನಂತರ ಈ ಸಾಹಸಕ್ಕೆ ಕೈ ಹಾಕುವ ಧೈರ್ಯ ಬಂತು ಎಂದು ವನಮಾಲ ನಾನುಗೌರಿ.ಕಾಂಗೆ ಹೇಳಿದರು.
ಇದನ್ನೂಓದಿ: ದೇವಿದಯಾಳ್ ಅವರ ’ಡಾ. ಬಾಬಾಸಾಹೇಬ್ ಅಂಬೇಡ್ಕರ್ ದಿನಚರಿ’ ಪುಸ್ತಕದ ಕನ್ನಡಾನುವಾದದಿಂದ ಆಯ್ದ ಅಧ್ಯಾಯ
“ಇಂತಹ ಕಷ್ಟಸಾಧ್ಯವಾದ ಕೃತಿಯನ್ನು ಅನುವಾದ ಮಾಡುವುದು ಒಂದು ಮಾತಾದರೆ, ಅದನ್ನು ಕನ್ನಡೇತರರಿಗೆ ದೊರಕುವಂತೆ ಮಾಡುವುದು ಬೇರೆಯದೆ ಮಾತು. ಹೀಗಾಗಿ Penguin Random House India ನಂತಹ ಪ್ರತಿಷ್ಠಿತ ಸಂಸ್ಥೆ ಕೃತಿ ಅನುವಾದ ಪ್ರಕಟಿಸಲು ಮುಂದಾದಾಗ ನನಗೆ ಈ ಹಿಮಾಲಯವನ್ನು ಏರುವುದಕ್ಕೆ ಬೇಕಾದ ಶಕ್ತಿ ಮತ್ತು ಹುರುಪು ಬಂತು” ಎಂದು ತಿಳಿಸಿದರು. ನಮ್ಮ ಅರಿವನ್ನು ಹಿಗ್ಗಿಸಿ ನಮ್ಮ ವರ್ಣ ವರ್ಗಗಳ ಮಿತಿಗಳನ್ನು ವಿಸ್ತರಿಸಿ, ನಮ್ಮ ಅಸ್ಮಿತೆಗಳ ಎಲ್ಲೆಗಳ ಮಾರುವಂತೆ ನಮ್ಮನ್ನು ಬೆಳೆಸುವ ‘ಎಪಿಕ್ ನೋವೆಲ್’ ಇದು. ಇಂತಹ ಮೇರು ಕೃತಿಯನ್ನು ಅನುವಾದ ಮಾಡುವ ಅವಕಾಶ, ಸವಾಲು, ಸಂತೋಷ ನನ್ನಗಾಗಿದ್ದು, ಇದಕ್ಕಾಗಿ, ನಾನು ಚಿರಋಣಿ ಎಂದು ವನಮಾಲ ಹೇಳಿದರು.

1967ರಲ್ಲಿ ಕನ್ನಡದಲ್ಲಿ ಪ್ರಕಟವಾದ “ಮಲೆಗಳಲ್ಲಿ ಮದುಮಗಳು” ಕಾದಂಬರಿಯನ್ನು ಈ ಹಿಂದೆ 2020ರಲ್ಲಿ ‘ಕುವೆಂಪು ಪ್ರತಿಷ್ಠಾನ’ವು ದಿ ಬ್ರೈಡ್ ಇನ್ ದಿ ರೈನಿ ಮೌಂಟೈನ್ಸ್ (The Bride in the Rainy Mountains) ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿತ್ತು. ಅದನ್ನು ಡಾ. ಕೆ.ಎಂ. ಶ್ರೀನಿವಾಸ ಗೌಡ ಮತ್ತು ಜಿ.ಎಸ್ ಶ್ರೀಕಾಂತ ಮೂರ್ತಿ ಇಂಗ್ಲಿಷ್‌ಗೆ ಅನುವಾದಿಸಿದ್ದರು. ಪೆಂಗ್ವಿನ್ ಪ್ರಕಟಿಸಿರುವ, ವನಮಾಲ ವಿಶ್ವನಾಥ್ ಅನುವಾದಿಸಿರುವ ‘ಬ್ರೈಡ್ ಇನ್ ದಿ ಹಿಲ್ಸ್’ (Bride in the Hills) ಇಂಗ್ಲಿಷ್ ಆವೃತ್ತಿಯ ಬೆಲೆ 799/- ಆಗಿದ್ದು ಪುಸ್ತಕದ ಅಂಗಡಿಗಳನ್ನು ದೊರೆಯುತ್ತದೆ.
ವಿಡಿಯೊ ನೋಡಿ: ‘ಗಾಂಧೀಜಿ ಹಂತಕ ಗೋಡ್ಸೆ ಎಂಬ ವ್ಯಕ್ತಿ ಮತ್ತು ಆತನ ದೃಷ್ಟಿಯ ಭಾರತ’ ಪುಸ್ತಕ ಬಿಡುಗಡೆ: ದಿನೇಶ್ ಗುಂಡೂರಾವ್ ಅವರ ಮಾತು


