ಮಾಂಸಾಹಾರಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚುವಂತೆ ಒತ್ತಾಯಿಸಿ ನಡೆದ ಸಭೆಯಲ್ಲಿ ಕೋಮುವಾದಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಶಾಮ್ಲಿ ಜಿಲ್ಲೆಯಲ್ಲಿ 47 ಜನ ಹಿಂದುತ್ವ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಎಫ್‌ಐಆರ್‌ನಲ್ಲಿ ಹೆಸರಿಸಲಾದ ಯೋಗ ಸಾಧನ್ ಆಶ್ರಮದ ಮಹಂತ್ ಸ್ವಾಮಿ ಯಶ್ವೀರ್ ನೇತೃತ್ವದದಲ್ಲಿ, ಅನುಮತಿಯಿಲ್ಲದೆ ಹಿಂದೂ ಪಂಚಾಯತ್ ಅನ್ನು ಸೆಪ್ಟೆಂಬರ್ 29 ರಂದು ಥಾನಭವನ ಪಟ್ಟಣದಲ್ಲಿ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಳೆದ ಭಾನುವಾರ, ಯಶ್ವೀರ್ ಸೇರಿದಂತೆ ಹಿಂದೂ ಕಾರ್ಯಕರ್ತರು ಮಾಂಸಾಹಾರಿ ಹೋಟೆಲ್‌ನ ಹೊರಗೆ ಜಮಾಯಿಸಿ, ಪಟ್ಟಣದ ದೇವಾಲಯಗಳ ನೂರು ಮೀಟರ್ ವ್ಯಾಪ್ತಿಯಲ್ಲಿರುವ ಎಲ್ಲ ಹೋಟೆಲ್‌ಗಳನ್ನು ಮುಚ್ಚಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯ ವೇಳೆ ಅವರು ಧಾರ್ಮಿಕ ಘೋಷಣೆಗಳನ್ನು ಕೂಗಿ, ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಠಾಣಾಧಿಕಾರಿ (ಎಸ್‌ಎಚ್‌ಒ) ವೀರೇಂದ್ರ ಕಸನಾ ಮಾತನಾಡಿ, “ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಏಳು ಹೆಸರಿಸಲಾದ ವ್ಯಕ್ತಿಗಳು ಸೇರಿದಂತೆ 47 ಹಿಂದುತ್ವ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸೆಪ್ಟೆಂಬರ್ 30 ರಂದು ದಾಖಲಿಸಲಾದ ಎಫ್‌ಐಆರ್‌ನಲ್ಲಿ ಮಹಂತ್ ಸ್ವಾಮಿ ಯಶ್ವೀರ್ ಅವರ ಹೆಸರೂ ಇದೆ” ಎಂದು ಮಾಹಿತಿ ನೀಡಿದ್ದಾರೆ.
ಪೊಲೀಸ್ ಪ್ರಕರಣಕ್ಕೆ ಪ್ರತಿಕ್ರಿಯೆಯಾಗಿ, ಹಿಂದೂ ಕಾರ್ಯಕರ್ತರು ತಮ್ಮ ಸಹ ಕಾರ್ಯಕರ್ತರ ವಿರುದ್ಧದ ಆರೋಪಗಳನ್ನು ವಿರೋಧಿಸಿ ಅಕ್ಟೋಬರ್ 10 ರಂದು ಪ್ರತಿಭಟನೆ ನಡೆಸಲು ಯೋಜಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ; ಉದ್ಯೋಗಕ್ಕಾಗಿ ಭೂಮಿ ಪ್ರಕರಣ: ಲಾಲು ಪ್ರಸಾದ್, ತೇಜಸ್ವಿ ಯಾದವ್‌ಗೆ ದೆಹಲಿ ನ್ಯಾಯಾಲಯದಿಂದ ಜಾಮೀನು


