Homeಕರ್ನಾಟಕಆನೆ ವಿಜ್ಞಾನದ ವಿಸ್ಮಯಗಳು

ಆನೆ ವಿಜ್ಞಾನದ ವಿಸ್ಮಯಗಳು

- Advertisement -
- Advertisement -

ಆಗಸ್ಟ್ 12, 2024ರಂದು ವಿಶ್ವ ಆನೆ ದಿನವನ್ನು ಆಚರಿಸಲಾಯಿತು. ಕಳೆದ ಹನ್ನೆರಡು ವರ್ಷಗಳಿಂದ ಈ ದಿನವನ್ನು ಆನೆಗಳ ಸ್ಥಿತಿಗತಿ, ಸಂರಕ್ಷಣೆ, ಆವಾಸಸ್ಥಾನದ ರಕ್ಷಣೆ ಹಾಗೂ ಆನೆ-ಮಾನವ ಸಂಘರ್ಷವನ್ನು ತಡೆದು ಆನೆಗಳು ನೆಮ್ಮದಿಯಿಂದ ಬದುಕು ಸಾಗಿಸುವ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ ಆಚರಿಸಲಾಗುತ್ತಿದೆ. ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಸುಮಾರು 350ಕ್ಕೂ ಹೆಚ್ಚು ಜನರು ಆನೆಗಳ ದಾಳಿಯಿಂದ ಮೃತಪಟ್ಟಿದ್ದಾರೆ. ಮೈಸೂರು ಆನೆ ಮೀಸಲು ಪ್ರದೇಶ ಮತ್ತು ದಾಂಡೇಲಿ ಆನೆ ಮೀಸಲು ಪ್ರದೇಶ ಎಂಬ ಎರಡು ಆನೆ ಮೀಸಲು ಪ್ರದೇಶಗಳು ರಾಜ್ಯದಲ್ಲಿವೆ. ನಮ್ಮ ದೇಶದಲ್ಲಿ 2017ರ ಆನೆಗಣತಿಯ ಪ್ರಕಾರ ಸುಮಾರು 30 ಸಾವಿರ ಆನೆಗಳಿದ್ದು, ರಾಜ್ಯದಲ್ಲಿ 6,395 ಆನೆಗಳಿವೆ. ಹವಾಮಾನ ಬದಲಾವಣೆ ಕಾರಣದ ಜೊತೆಗೆ ನೀರು ಮತ್ತು ಆಹಾರ ಅರಸಿ ಅರಣ್ಯೇತರ ಪ್ರದೇಶಗಳತ್ತ ಆನೆಗಳು ಬರುತ್ತಿರುವುದರಿಂದ ಆನೆ-ಮಾನವ ಸಂಘರ್ಷಗಳಾಗುತ್ತಿವೆ.

ಸಾರ್ವಜನಿಕರಲ್ಲಿ ವಿಸ್ಮಯವನ್ನುಂಟುಮಾಡುವ ಆನೆ ವಿಜ್ಞಾನದ ಅಂಶಗಳಿವೆ. ಆನೆಗಳ ವರ್ತನೆಯನ್ನು ಸಾರ್ವಜನಿಕರು ಅರಿತು ನಡೆದರೆ ಅವುಗಳೊಂದಿಗಿನ ಸಂಘರ್ಷವನ್ನು ತಕ್ಕಮಟ್ಟಿಗೆ ತಡೆಯಬಹುದಾಗಿದೆ. ಮೈಸೂರಿನ ದಸರಾದಲ್ಲೂ ಆನೆಗಳ ಆಕರ್ಷಣೆಯಿರುತ್ತದೆ. ಈಗಾಗಲೇ ಕಾಡಿನಿಂದ ಆನೆಗಳನ್ನು ಮೈಸೂರಿಗೆ ಕರೆತರಲಾಗಿದೆ.

ಆನೆ ಗಾತ್ರ, ಆನೆ ಬುದ್ಧಿ, ಆನೆ ನೆನಪು, ಆನೆ ಬಲ, ಆನೆ ಆಹಾರ, ಆನೆ ಆಯಸ್ಸು, ಆನೆಗಳ ಕೂಡು ಕುಟುಂಬ, ಆನೆ ಕುಟುಂಬದ ರಕ್ಷಣೆ, ಆನೆಗಳಲ್ಲಿ ಸಂತಾನೋತ್ಪತ್ತಿ, ಆನೆಗಳ ಪಂಚೇಂದ್ರಿಯಗಳ ಶಕ್ತಿ- ಹೀಗೆ ಹತ್ತಾರು ಆಸಕ್ತಿದಾಯಕ ಅಂಶಗಳು ನಿಜಕ್ಕೂ ವಿಸ್ಮಯಕಾರಿಯಾಗಿವೆ.

ಆನೆಗಳ ಒಟ್ಟು ದೇಹರಚನೆಯು ಒಂದು ದೊಡ್ಡ ಕಮಾನನ್ನು ಹೋಲುತ್ತದೆ. ಏಶಿಯಾದ ಆನೆಗಳ ವೈಜ್ಞಾನಿಕ ಹೆಸರು ಎಲೆಫಸ್ ಮ್ಯಾಕ್ಸಿಮಸ್. ಎಲೆಫಸ್ ಪದದ ಅರ್ಥ ’ಕಮಾನು’. ಆನೆಗಳ ಆಕಾರವು ದೊಡ್ಡ ಕಮಾನಿನಂತಿರುತ್ತದೆ. ಆಫ್ರಿಕಾದ ಆನೆಗಳ ವೈಜ್ಞಾನಿಕ ಹೆಸರು ಲೋಕ್ಸಾಡಾಂಟಾ ಆಫ್ರಿಕಾನಾ. ’ಓರೆಯಾದ ದಂತ’ ಎಂಬುದು ಲೋಕ್ಸಾಡಾಂಟಾ ಪದದ ಅರ್ಥವಾಗಿದೆ (ಡಾಂಟಾ ಮತ್ತು ದಂತ ಪದಗಳ ಉಚ್ಚಾರಣೆ ಹಾಗೂ ಕಾಗುಣಿತದ ನೆಂಟಸ್ತಿಕೆ ಗುರುತಿಸಿ). ಆಫ್ರಿಕಾದ ಹೆಣ್ಣು ಮತ್ತು ಗಂಡಾನೆ ಎರಡರಲ್ಲೂ ಬಾಗಿದ ಅಥವಾ ಓರೆಯಾದ ದಂತಗಳಿರುತ್ತವೆ. ಆದ್ದರಿಂದಲೇ ಲೋಕ್ಸಾಡಾಂಟಾ ಎಂಬ ಹೆಸರು. ಆದರೆ ಏಶಿಯಾದ ಗಂಡಾನೆಗಳಲ್ಲಿ ಮಾತ್ರ ದಂತವಿರುತ್ತದೆ. ದಂತವಿಲ್ಲದ ಗಂಡಾನೆಯನ್ನು ’ಮಖ್ನಾ’ ಎಂದು ಕರೆಯಲಾಗಿದೆ. ಆನೆ ದಂತವು ವರ್ಷಕ್ಕೆ ಅರ್ಧ ಅಡಿಯಷ್ಟು ಬೆಳೆಯುತ್ತದೆ. ಏಶಿಯಾದ ಆನೆಗಳ ದೇಹತೂಕ 4000ದಿಂದ 5200 ಕಿಲೋಗ್ರಾಂಗಳು.

ಅವು ಬಾಯಿಯ ಮೂಲಕ ಉಸಿರಾಡುತ್ತವೆ. ಉಸಿರಾಡಲು ಮೂಗಿಲ್ಲವಲ್ಲ. ಮೂಗೇ ಸೊಂಡಿಲಾಗಿ ಮಾರ್ಪಟ್ಟಿದೆ. ಆನೆಗಳು ಅತಿ ಬುದ್ಧಿವಂತ ಪ್ರಾಣಿಗಳು. ಅಗಾಧವಾದ ನೆನಪಿನ ಶಕ್ತಿಯಿರುತ್ತದೆ. ಅವುಗಳಿಗೆ ನೆನಪು ಮಾಸುವುದಿಲ್ಲ. ಆಹಾರ, ನೀರು ಸಿಗುವ ಜಾಗ, ನಡೆದ ಹಾದಿ ಮುಂತಾದ ಅಂಶಗಳನ್ನು ದಶಕಗಳಗಟ್ಟಲೆ ನೆನಪಿನಲ್ಲಿಟ್ಟುಕೊಳ್ಳುತ್ತವೆ. ದಿನಕ್ಕೆ ನಾಲ್ಕು ಗಂಟೆಗಳ ಕಾಲ ನಿದ್ದೆ ಮಾಡುತ್ತವೆ. ಬಲಬದಿ, ಎಡಬದಿ ಮಲಗಿ, ಇಲ್ಲವೆ ನಿಂತೇ ನಿದ್ದೆ ಮಾಡುತ್ತವೆ. ಮರಕ್ಕೆ ಒರಗಿನಿಂತು ಮಾಡುತ್ತವೆ. ಆನೆಗಳ ಸರಾಸರಿ ಆಯಸ್ಸು 70 ವರ್ಷಗಳು. ಹೆಚ್ಚೂಕಡಿಮೆ ಮಾನವನಷ್ಟು ಆಯಸ್ಸು.

ಆನೆಗಳಲ್ಲಿ ಸಂತಾನೋತ್ಪತ್ತಿ

ಆನೆಗಳ ವೃಷಣಗಳು ಹೊಟ್ಟೆಯ ಒಳಗೆ ಮೂತ್ರಕೋಶದ ಪಕ್ಕದಲ್ಲಿರುತ್ತವೆ. ಹತ್ತಿರದ ರಕ್ತ ಸಂಬಂಧದೊಳಗೆ ಸಂತಾನೋತ್ಪತ್ತಿಯಾಗುವುದನ್ನು ಆನೆಗಳು ಇಚ್ಛಿಸುವುದಿಲ್ಲ. ಮದಗಜವು ಹಲವು ದಿನಗಳಿಂದ ಹಲವು ತಿಂಗಳವರೆಗೆ ತೀವ್ರ ಕಾಮಾವಸ್ಥೆಯಲ್ಲಿರುತ್ತದೆ. ಕಣ್ಣು ಮತ್ತು ಕಿವಿಯ ಮಧ್ಯದಲ್ಲಿರುವ ತಾತ್ಕಾಲಿಕ ಗ್ರಂಥಿ (ಟೆಂಪೊರಲ್ ಗ್ಲಾಂಡ್)ಯು ಇನ್ನಷ್ಟು ದಪ್ಪವಾಗಿ ದ್ರವ ಸ್ರವಿಸಲಾರಂಭಿಸುತ್ತದೆ. ಗಂಡು ಚೋದಕವಾದ ಟೆಸ್ಟೊಸ್ಟೀರಾನಿನ ಪ್ರಮಾಣವು ರಕ್ತದಲ್ಲಿ 20 ಪಟ್ಟು ಹೆಚ್ಚಾಗುತ್ತದೆ. ಮದಗಜವು ರೋಷಾವೇಶದಿಂದ ವರ್ತಿಸುತ್ತದೆ. ಹೆಣ್ಣಾನೆಯನ್ನು ಹುಡುಕಿಕೊಂಡು ಎಲ್ಲೆಡೆ ಅಲೆಯುತ್ತದೆ. ಆಗ ಮಾನವ ವಸತಿ ಪ್ರದೇಶಗಳತ್ತ ಬಂದಾಗ ಆನೆ-ಮಾನವ ಸಂಘರ್ಷ ಏರ್ಪಡಬಹುದು.

ಸುಮಾರು 10 ರಿಂದ 12 ವರ್ಷ ವಯಸ್ಸಿಗೆ ಹೆಣ್ಣಾನೆಗಳು ಪ್ರೌಢಾವಸ್ಥೆಗೆ ಬರುತ್ತವೆ. ಋತುಚಕ್ರದಲ್ಲಿ ಎರಡು ಸಾರಿ ಲ್ಯುಟಿನೈಸಿಂಗ್ ಹಾರ್ಮೋನು ಉಲ್ಬಣಾವಸ್ಥೆಗೆ ಏರುವುದೊಂದು ಅಪರೂಪದ ವಿಶೇಷ. ಎರಡನೇ ಉಲ್ಬಣಾವಸ್ಥೆಯಲ್ಲಿ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುತ್ತದೆ. ಹೆಣ್ಣಾನೆಗಳು ಮೂರು ವಾರಗಳ ಕಾಲ ಲೈಂಗಿಕ ಬಯಕೆಯನ್ನು ಹೊಂದಿರುತ್ತವೆ.

ಯಾವುದಾದರೂ ಕೆಲಸವನ್ನು ಪೂರೈಸುವುದು ತಡವಾದರೆ ’ಗಜಗರ್ಭ’ದಂತೆ ಕೆಲಸ ನಿಧಾನವಾಗುತ್ತಿದೆ ಎಂಬ ರೂಪಕವನ್ನು ಬಳಸುತ್ತೇವೆ. ಆನೆಗಳ ಗರ್ಭಾವಸ್ಥೆಯ ಅವಧಿ 660 ದಿನಗಳು. ಅಬ್ಬಾ! ಗರಿಷ್ಟ 22 ತಿಂಗಳು. ಆ ಗಜಗರ್ಭ ಬೃಹತ್ತಾಗಿ ಬೆಳೆಯಲು ಅಧಿಕ ಸಮಯ ಬೇಕಾಗುತ್ತದೆ ಎಂದು ಆಲೋಚಿಸಬಹುದಾಗಿದೆ. ಏಶಿಯಾದ ಆನೆ ಕರುವಿನ ಹುಟ್ಟುತೂಕ 90 ಕಿಲೋಗ್ರಾಂ.

ಮರಿಹಾಕಿದ ನಂತರ ಹಾಲು ಕೊಡುವ ಅವಧಿ ನಾಲ್ಕರಿಂದ ಎಂಟು ವರ್ಷಗಳು. ಆನೆ ಹಾಲಿನಲ್ಲಿ ಶೇ.11.6ರಷ್ಟು ಜಿಡ್ಡಿನ ಅಂಶವಿರುತ್ತದೆ. ಇದು ಎಮ್ಮೆ ಹಾಲಿನಲ್ಲಿರುವ ಶೇ.8ರಷ್ಟು ಜಿಡ್ಡಿನ ಅಂಶಕ್ಕಿಂತ ಅಧಿಕ.

ಆನೆಯು ಗಂಟೆಗೆ 6ರಿಂದ 30 ಕಿಲೋಮೀಟರಿನಷ್ಟು ವೇಗವಾಗಿ ನಡೆಯುತ್ತದೆ. ಅವುಗಳ ಹಿಂಡಿನಲ್ಲಿ ಎರಡರಿಂದ 20ರವರೆಗೆ ಆನೆಗಳಿರುತ್ತವೆ. ಹೆಚ್ಚು ಅನುಭವವುಳ್ಳ ಹಾಗೂ ಅತಿ ವಯಸ್ಸಾದ ಹೆಣ್ಣಾನೆಯು ಆನೆಗಳ ಕುಟುಂಬದ ಮುಖ್ಯಸ್ಥೆ. ಅಂತಹ ಹೆಣ್ಣಾನೆಯು ಕುಟುಂಬದ ಒಳಿತಿಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ತನ್ನ ಪ್ರಾಣವನ್ನು ಒತ್ತೆ ಇಟ್ಟಾದರೂ ಕುಟುಂಬದ ಸದಸ್ಯರನ್ನು ಕಾಪಾಡುತ್ತದೆ. ಹುಲಿ, ಸಿಂಹ, ಹೈನಾ ಮತ್ತು ಮೊಸಳೆಗಳು ಮರಿಯಾನೆ, ರೋಗಪೀಡಿತ ಮತ್ತು ಮುದಿ ಆನೆಗಳನ್ನು ಬೇಟೆಯಾಡುತ್ತವೆ. ಗಂಡಾನೆಗಳು 12ರಿಂದ 14 ವರ್ಷ ವಯಸ್ಸಿಗೆ ಬರುತ್ತಿದ್ದಂತೆ ಕುಟುಂಬದಿಂದ ಹೊರನಡೆಯುತ್ತವೆ. ಯಾಕೆಂದರೆ, ಅವು ರಕ್ತ ಸಂಬಂಧದ ಹೆಣ್ಣಾನೆಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದಿಲ್ಲ. ಸಾಮಾನ್ಯವಾಗಿ ಒಂಟಿಯಾಗಿ ಇರುತ್ತವೆ. ಅದೇ ಕಾರಣಕ್ಕೆ ’ಒಂಟಿ ಸಲಗ’ ಎಂಬ ಹೆಸರು ಹುಟ್ಟಿಕೊಂಡಿದೆ.

ಆನೆಗಳ ಆಹಾರಾಭ್ಯಾಸ

ಪ್ರತಿ ಆನೆಗೆ ದಿನವೊಂದಕ್ಕೆ 150ರಿಂದ 200 ಕಿಲೋಗ್ರಾಂ ಆಹಾರ ಬೇಕು. ಸುಮಾರು 400 ಜಾತಿಯ ಮರಗಿಡಗಳ ಎಲೆಗಳನ್ನು ಆನೆಗಳು ತಿನ್ನುತ್ತವೆ. ಮರದ ತೊಗಟೆಯು ಆನೆಗಳಿಗೆ ಬೇಕಾದ ಕ್ಯಾಲ್ಶಿಯಂ ಅನ್ನು ಒದಗಿಸುತ್ತದೆ. ಲವಣಗಳ ಕೊರತೆಯಾದರೆ ಆನೆಗಳು ಮಣ್ಣು ತಿನ್ನುತ್ತವೆ. ಇದನ್ನು ’ಜಿಯೋಫೇಜಿಯಾ’ ಎಂದು ಕರೆಯಲಾಗಿದೆ. ದಿನದ 16ರಿಂದ 20 ಗಂಟೆಗಳ ಕಾಲ ಆಹಾರ ಸೇವಿಸುವುದರಲ್ಲೇ ಕಳೆಯುತ್ತವೆ. ದಿನಕ್ಕೆ 70ರಿಂದ 200 ಲೀಟರಿನಷ್ಟು ನೀರು ಕುಡಿಯುತ್ತವೆ. ಕೇವಲ ಐದು ನಿಮಿಷದಲ್ಲೇ 200 ಲೀಟರ್ ನೀರನ್ನು ಗಂಡಾನೆಯೊಂದು ಹೀರಿಬಿಡುತ್ತದೆ. ಸೊಂಡಿಲಿನಲ್ಲಿ 8ರಿಂದ 10 ಲೀಟರ್ ನೀರು ಹಿಡಿಸುತ್ತದೆ.

ಆನೆಗಳಲ್ಲಿ ಸಂವಹನ

ಆನೆಗಳಲ್ಲಿ ಶ್ರವಣ ಮತ್ತು ಆಘ್ರಾಣ ಶಕ್ತಿ ಅತ್ಯಂತ ಪ್ರಬಲ. ಆನೆಯೊಂದರ ಪಕ್ಕದಲ್ಲೇ ಮನುಷ್ಯನೊಬ್ಬ ನಿಂತಿದ್ದರೂ ಆತನಿಗೆ ಕೇಳಿಸದ ಆನೆಯ ಇನ್‌ಫ್ರಾಸೋನಿಕ್ ಶಬ್ದ (ಅವಶ್ರವ್ಯ ಧ್ವನಿ) ಸುಮಾರು ಎಂಟು ಕಿಲೋಮೀಟರುಗಳ ಆಚೆಗೆ ನಿಂತಿರುವ ಮತ್ತೊಂದು ಆನೆಗೆ ಕೇಳಿಸುತ್ತದೆ. ಹೀಗೆ ಪ್ರಬಲವಾದ ಶ್ರವಣಶಕ್ತಿ ಆನೆಗಳ ಕಿವಿಗಳಲ್ಲಿದೆ. ಸೊಂಡಿಲ ಮೂಲಕ ಆನೆಗಳು ವಾಸನೆಯನ್ನು ಆಘ್ರಾಣಿಸುತ್ತವೆ. ವಾಸನೆಯ ಗ್ರಹಿಕಾಶಕ್ತಿ ತುಂಬಾ ಪ್ರಬಲವಾಗಿರುತ್ತದೆ. ಹೇಗೆಂದರೆ, ಮದಗಜವು ತನ್ನ ಕಾಮತೃಷೆಯನ್ನು ತೀರಿಸಿಕೊಳ್ಳಲು ಎಲ್ಲೋ ದೂರದಲ್ಲಿ ಬೆದೆಯಲ್ಲಿರುವ ಹೆಣ್ಣಾನೆಯನ್ನು ಹುಡುಕಿಕೊಳ್ಳುತ್ತದೆ. ಹಾಗೆಯೇ, ಬೇಸಿಗೆ ಕಾಲದಲ್ಲಿ ಕಾಡಿನಲ್ಲಿ ಕುಡಿಯಲು ನೀರು ಸಿಗದಿದ್ದಾಗ ತನ್ನ ಸೊಂಡಿಲನ್ನು ಗಾಳಿಯಲ್ಲಿ ತೇಲಾಡಿಸಿ ಸುಮಾರು 50 ಕಿಲೋಮೀಟರುಗಳಷ್ಟು ದೂರದಲ್ಲಿ ನೀರಿನ ಲಭ್ಯತೆಯನ್ನು ಕಂಡುಕೊಳ್ಳುತ್ತದೆ. ಆಹಾರವನ್ನು ಹುಡುಕಿಕೊಳ್ಳುತ್ತವೆ. ಈ ಕಾರಣದಿಂದಲೇ ಆನೆಗಳು ಹೊಲಗದ್ದೆ ಕೆರೆಗಳ ಕಡೆಗೆ ಬರುತ್ತವೆ. ಆಗ ಆನೆ-ಮಾನವ ಸಂಘರ್ಷ ಏರ್ಪಡುತ್ತದೆ. ಆನೆಗಳ ಓಡಾಟದ ಸರಹದ್ದು ಬಲು ದೊಡ್ಡದು. ಆನೆ ನಡೆದದ್ದೇ ಹಾದಿ ಎನ್ನುವಂತೆ.

ಆನೆಗಳು ಮಣ್ಣನ್ನು ಮೈಮೇಲೆ ಎರಚಿಕೊಳ್ಳುತ್ತವೆ. ಚರ್ಮವನ್ನು ಹೊಳೆಯುವಂತೆ ಇಟ್ಟುಕೊಳ್ಳಲು ಇದು ಸಹಕಾರಿ. ಇದರಿಂದ ಕೀಟಗಳ ನಿವಾರಣೆಯೂ ಸಾಧ್ಯ. ನೀರಿನಲ್ಲಿ ಮುಳುಗಿ ಶೆಖೆಯನ್ನು ನಿವಾರಿಸಿಕೊಳ್ಳುತ್ತವೆ. ತಾಪಮಾನ ಹೆಚ್ಚಾದಾಗ ಕಿವಿಗಳನ್ನು ಅಲ್ಲಾಡಿಸಿ ಗಾಳಿ ಬೀಸಿಕೊಂಡು ತಂಪಾಗುತ್ತವೆ.

ಇವಿಷ್ಟು ಆನೆ ವಿಜ್ಞಾನದ ವಿಸ್ಮಯಕಾರಿ ಅಂಶಗಳು. ಜನಸಾಮಾನ್ಯರಿಗೆ ಈ ವಿಷಯಗಳ ಅರಿವಿರಲಿ. ಆನೆಗಳ ಪಾಡಿಗೆ ಆನೆಗಳಿರಲಿ. ಆನೆಗಳ ಜೀವನ ಕ್ರಮದ ಬಗ್ಗೆ ಕೊಂಚ ಅರಿವಿರಲಿ. ಆನೆಗಳೊಂದಿಗೆ ಮಾನವನ ಸಂಘರ್ಷ ಬೇಡ. ಅವುಗಳ ಉಪಟಳದ ಸಂದರ್ಭ ಎದುರಾದಾಗ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ಕೊಡಿ. ಸಂಪರ್ಕದ ಟೋಲ್ ಫ್ರೀ ದೂರವಾಣಿ ಸಂಖ್ಯೆ 18004251314.

ಪ್ರೊ. ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ
ಹಿರಿಯ ಪ್ರಾಧ್ಯಾಪಕರು ಪಶುವೈದ್ಯಕೀಯ ಮಹಾವಿದ್ಯಾಲಯ ಹೆಬ್ಬಾಳ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...