ಇಸ್ರೇಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ಯಾಲೆಸ್ತೀನಿಯರು ಭಾರತದ ಧ್ವಜ ಹಿಡಿಯುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ.
ಹೈದರಾಬಾದ್‌ನ ಬಿಜೆಪಿ ಶಾಸಕ ಹಾಗೂ ಹಿಂದುತ್ವವಾದಿ ಟೈಗರ್ ರಾಜಾ ಸಿಂಗ್ ಹೆಸರಿನಲ್ಲಿರುವ ಎಕ್ಸ್ ಖಾತೆಯಲ್ಲಿ ಅಕ್ಟೋಬರ್ 4ರಂದು ವಿಡಿಯೋ ಹಂಚಿಕೊಂಡು “ಪ್ಯಾಲೆಸ್ತೀನಿಯರು ಭಾರತದ ತ್ರಿವರ್ಣ ಧ್ವಜ ಹಿಡಿದು ದೇಶದಿಂದ ಪಲಾಯನ ಮಾಡುತ್ತಿದ್ದಾರೆ. ಏಕೆಂದರೆ, ಇಸ್ರೇಲ್ ಭಾರತದ ತ್ರಿವರ್ಣ ಧ್ವಜದ ಮೇಲೆ ದಾಳಿ ಮಾಡುವುದಿಲ್ಲ. ಇಸ್ರೇಲ್ ಮಾತ್ರವಲ್ಲ, ಈಗ ಜಗತ್ತಿನಲ್ಲಿ ಯಾವ ದೇಶಕ್ಕೂ ತ್ರಿವರ್ಣ ಧ್ವಜದ ಮೇಲೆ ದಾಳಿ ಮಾಡಲು ಧೈರ್ಯ ಇಲ್ಲ. ಇದು ತ್ರಿವರ್ಣ ಧ್ವಜದ ಮತ್ತು ಮೋದಿಯವರ ಶಕ್ತಿ” ಎಂದು ಬರೆದುಕೊಳ್ಳಲಾಗಿತ್ತು.

ಇನ್ನೂ ಕೆಲ ಎಕ್ಸ್, ಫೇಸ್‌ಬುಕ್ ಖಾತೆಗಳಲ್ಲಿ ಇದೇ ಬರಹದೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದೆ.
ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋ ಪ್ಯಾಲೆಸ್ತೀನಿಯರು ಭಾರತದ ಧ್ವಜ ಹಿಡಿದಿರುವುದಲ್ಲ. ಅದು 2023ರಲ್ಲಿ ಭಾರತೀಯ ಯಾತ್ರಾರ್ಥಿಗಳು ಇರಾಕ್‌ನ ಮುಸ್ಲಿಮರ ಪವಿತ್ರ ಸ್ಥಳ ಕರ್ಬಲಾಗೆ ನಡೆದುಕೊಂಡು ಹೋದ ಅಥವಾ ‘ಅರ್ಬಯೀನ್ ವಾಕ್’ನ ದೃಶ್ಯವಾಗಿದೆ.
‘ಅರ್ಬಯೀನ್ ವಾಕ್’ ಎಂದರೆ ನಲ್ವತ್ತನೇ ನಡಿಗೆ ಎಂದರ್ಥ. ಮುಸ್ಲಿಮರು, ವಿಶೇಷವಾಗಿ ಶಿಯಾ ಮುಸ್ಲಿಮರು ಇಮಾಮ್ ಹುಸೇನ್ ಅವರು ಹುತಾತ್ಮರಾದ 40ನೇ ದಿನದಂದು, ಇರಾಕ್‌ನ ಕರ್ಬಾಲಾದಲ್ಲಿರುವ ಅವರ ಸಮಾಧಿಯ ಬಳಿಗೆ ನಡೆದುಕೊಂಡು ಹೋಗುತ್ತಾರೆ.
ವೈರಲ್ ವಿಡಿಯೋ ಕುರಿತು ನಾವು ಇನ್ನಷ್ಟು ಮಾಹಿತಿ ಹುಡುಕಿದಾಗ, ನಮಗೆ ಅದು ಅರ್ಬಯೀನ್ ವಾಕ್‌ನ ದೃಶ್ಯ ಎಂಬುವುದು ಖಚಿತವಾಗಿದೆ.
ಆಗಸ್ಟ್ 31, 2023ರಂದು ಭಾರತದ ಮೂಲದ ಇನ್‌ಸ್ಟಾಗ್ರಾಂ ಖಾತೆ ಫಲಕ್ ಹಕ್‌ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿತ್ತು. ಅದರಲ್ಲಿ ‘ನಜಾಫ್-ಅಲ್-ಅಶ್ರಾ’ ಎಂದು ಸ್ಥಳವನ್ನು ಉಲ್ಲೇಖಿಸಲಾಗಿತ್ತು. ‘ಅರ್ಬಯೀನ್ ವಾಕ್-2023’ ಎಂದು ವಿಡಿಯೋಗೆ ಕ್ಯಾಪ್ಶನ್ ಕೊಡಲಾಗಿತ್ತು. ಇಲ್ಲಿ ನಜಾಫ್ ಎಂಬುವುದು ಇರಾಕ್‌ನಲ್ಲಿರುವ ಮುಸ್ಲಿಮರ ಮತ್ತೊಂದು ಪವಿತ್ರ ಸ್ಥಳವಾಗಿದೆ.

ಈ ನಜಾಫ್‌ನಲ್ಲಿ ಪ್ರವಾದಿ ಮುಹಮ್ಮದ್ ಅವರ ಅಳಿಯಾ ಹಾಗೂ ಇಸ್ಲಾಮಿನ ನಾಲ್ಕನೇ ಖಲೀಫಾ ಇಮಾಮ್ ಅಲೀ ಅವರ ಸಮಾಧಿಯಿದೆ. ಇಲ್ಲಿಂದ ಸುಮಾರು 70 ಕಿ.ಮೀ ದೂರದಲ್ಲಿ ಕರ್ಬಲಾದಲ್ಲಿ ಅಲೀ ಅವರ ಮಗ ಹಝ್ರತ್ ಹುಸೇನ್ ಅವರ ಸಮಾಧಿಯಿದೆ. ಹಝ್ರತ್ ಹುಸೇನ್ ಮುಹಮ್ಮದ್ ಪೈಗಂಬರ್ ಅವರ ಮೊಮ್ಮಗ. ಅವರು ಹುತಾತ್ಮರಾದ ದಿನದಂದು ಮೊಹರಂ ಆಚರಣೆ ಮಾಡಲಾಗುತ್ತದೆ. ಶಿಯಾ ಮುಸ್ಲಿಮರಿಗೆ ನಜಾಫ್ ಮತ್ತು ಕರ್ಬಲಾ ಎರಡೂ ಜಾಗಗಳು ಅತ್ಯಂತ ಪವಿತ್ರವಾಗಿದೆ.
ಸೆಪ್ಟೆಂಬರ್ 8, 2023 ರಲ್ಲಿ ಎನ್‌ಡಿಟಿವಿ ಪ್ರಕಟಿಸಿದ್ದ ವರದಿಯಲ್ಲಿ, “2023ರ ಅರ್ಬಯೀನ್ ವಾಕ್ ಸೆಪ್ಟೆಂಬರ್ 6ರಂದು ಕರ್ಬಲಾದಲ್ಲಿ ಕೊನೆಗೊಂಡಿದ್ದು, ಭಾರತದಿಂದ ಸುಮಾರು 1 ಲಕ್ಷ ಶಿಯಾ ಮುಸ್ಲಿಮರು ನಡಿಗೆಯಲ್ಲಿ ಪಾಲ್ಗೊಳ್ಳಲು ಕರ್ಬಲಾಕ್ಕೆ ತೆರಳಿದ್ದರು” ಎಂದು ಹೇಳಲಾಗಿತ್ತು.

ಎನ್‌ಡಿವಿ ಸುದ್ದಿಯ ಜೊತೆ ವ್ಯಕ್ತಿಯೊಬ್ಬರು ಮಗುವನ್ನು ಹಿಡಿದುಕೊಂಡಿರುವುದು ಮತ್ತು ಆ ಮಗು ಭಾರತದ ತ್ರಿವರ್ಣ ಧ್ವಜ ಹೊದ್ದುಕೊಂಡಿದ್ದ ಫೋಟೋ ಸೇರಿಸಿತ್ತು.

ಅಲ್ಲದೆ, 6 ಸೆಪ್ಟೆಂಬರ್ 2023ರಂದು ಎನ್‌ಡಿವಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ನಜಾಫ್‌ನಿಂದ ಗ್ರೌಂಡ್ ರಿಪೋರ್ಟ್ ಕುರಿತ ವಿಡಿಯೋ ಅಪ್ಲೋಡ್ ಮಾಡಿತ್ತು. ಅದರಲ್ಲಿ ದೆಹಲಿ ಮೂಲದ ವ್ಯಕ್ತಿಯೊಬ್ಬರು ಭಾರತದ ತ್ರಿವರ್ಣ ಧ್ವಜ ಹಿಡಿದು ಮಾತನಾಡಿರುವುದು ಇದೆ.
ಭಾರತದ ಧ್ವಜ ಏಕೆ?
ಜಗತ್ತಿನಲ್ಲಿ ನಾಲ್ಕೈದು ಮುಸ್ಲಿಮರ ಪ್ರಮುಖ ಪವಿತ್ರ ಸ್ಥಳಗಳಿವೆ. ಅಲ್ಲಿಗೆ ವಿಶ್ವದ ಮೂಲೆ ಮೂಲೆಗಳಿಂದ ಮುಸ್ಲಿಮರು ತೆರಳುತ್ತಾರೆ. ಮಕ್ಕಾ, ಮದೀನಾ, ಕರ್ಬಲಾ, ನಜಾಫ್ ಮತ್ತು ಬೈತುಲ್ ಮುಕದ್ದಸ್ ಅಥವಾ ಜೆರುಸಲೇಂನ ಮಸ್ಜಿದುಲ್ ಅಕ್ಸಾ ಆ ಪ್ರಮುಖ ಧಾರ್ಮಿಕ ಕೇಂದ್ರಗಳಾಗಿವೆ.
ಸಾಮಾನ್ಯವಾಗಿ ಮಕ್ಕಾಗೆ ಹಜ್-ಉಮ್ರಾಗೆ ತೆರಳಿದಾಗ, ನಜಾಫ್-ಕರ್ಬಲಾಗೆ ತೆರಳಿದಾಗ ಆಯಾ ದೇಶದ ಜನರು ತಮ್ಮ ದೇಶದ ಮೇಲಿನ ಪ್ರೀತಿಯಿಂದ ಮತ್ತು ಜನರ ನಡುವೆ ಒಬ್ಬರಿಗೊಬ್ಬರನ್ನು ಸುಲಭವಾಗಿ ಗುರುತಿಸಲು ರಾಷ್ಟ್ರ ಧ್ವಜಗಳನ್ನು ಹಿಡಿಯುತ್ತಾರೆ. ಅದೇ ರೀತಿ ಭಾರತೀಯರು ಕೂಡ ತಮ್ಮ ದೇಶದ ತ್ರಿವರ್ಣ ಧ್ವಜ ಹಿಡಿದು ನಡೆಯುತ್ತಾರೆ.
ಆದ್ದರಿಂದ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಇಸ್ರೇಲ್ ದಾಳಿಯಿಂದ ರಕ್ಷಿಸಿಕೊಳ್ಳಲು ಪ್ಯಾಲೆಸ್ತೀಯರು ಭಾರತ ಧ್ವಜ ಹಿಡಿದಿರುವುದಕ್ಕೆ ಸಂಬಂಧಿಸಿದ್ದಲ್ಲ. ಅದು ಅರ್ಬಯೀನ್ ನಡಿಗೆಯ ವೇಳೆ ಭಾರತೀಯ ಶಿಯಾ ಮುಸ್ಲಿಮರು ಇರಾಕ್‌ನ ಕರ್ಬಲಾ ಕಡೆಗೆ ಧ್ವಜ ಹಿಡಿದು ಸಾಗಿದ ದೃಶ್ಯವಾಗಿದೆ.
ಇದನ್ನೂ ಓದಿ : FACT CHECK : ಶಿವಲಿಂಗ ಧ್ವಂಸ ಘಟನೆಗೆ ಕೋಮು ಬಣ್ಣ ಬಳಿದ ಬಲಪಂಥೀಯರು


