ಮೀಸಲಾತಿ ಕಣ್ಣಗಾಯಕ್ಕೊಂದು ಕನ್ನಡಿ
ಸರಣಿ ಸಂಪಾದಕರು: ವಿಕಾಸ್ ಆರ್ ಮೌರ್ಯ
ನಮ್ಮ ದೇಶದಲ್ಲಿ ಹೆಣ್ಣನ್ನು ದೇವಿ ಎಂದು ಅಟ್ಟಕ್ಕೇರಿಸುತ್ತಿರುವಾಗಲೇ ಆಕೆಯನ್ನು ಕನಿಷ್ಟ ಮನುಷ್ಯಳಾಗಿಯೂ ನಡೆಸಿಕೊಂಡಿಲ್ಲ ಎಂಬುದು ಕಣ್ಣಿಗೆ ರಾಚುತ್ತದೆ. ಮನೆಯ ಒಳಗೇ ಇದ್ದುಕೊಂಡು ಗೃಹಕೃತ್ಯಗಳನ್ನು ನಿರ್ವಹಿಸುತ್ತಾ ದೇಶಸೇವೆ ಮಾಡುವ ವೀರಪುರುಷರಿಗೆ ಬೆಂಬಲವಾಗಿ ನಿಲ್ಲುವ ಹಿನ್ನೆಲೆಯ ಕೆಲಸ ಅವಳದಾಗಿತ್ತೇ ವಿನಃ ನೇರವಾಗಿ ಅವಳೇ ವಿವಿಧ ಕ್ಷೇತ್ರಗಳಲ್ಲಿ, ಕಾಣಿಸಿಕೊಳ್ಳುವಂತಹ ಸ್ಥಿತಿ ಇರಲಿಲ್ಲ.
ಆದರೆ ಸಮಾಜದ ಅರ್ಧಭಾಗದಷ್ಟಿರುವ ಮಹಿಳೆಯರ ಭಾಗವಹಿಸುವಿಕೆ ಹಾಗೂ ಪ್ರಾತಿನಿಧ್ಯ ಸಮ ಪ್ರಮಾಣದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಇಲ್ಲದೇ ಹೋದರೆ ದೇಶ ಮುನ್ನಡೆಯುವುದು ಸಾಧ್ಯವಿಲ್ಲ. ಮನೆಯ ಒಳಗೆ ಹಾಗೂ ಹೊಲಗದ್ದೆಗಳಲ್ಲಿ ಬಿಡುವಿಲ್ಲದ ಕೆಲಸ ಮಾಡುವ ಮಹಿಳೆಯರ ಕೆಲಸಕ್ಕೆ ಮಾನ್ಯತೆಯೂ ಇಲ್ಲ, ಆರ್ಥಿಕ ಮೌಲ್ಯವೂ ಇಲ್ಲ. ಇದು ಮಹಿಳೆಯರ ವ್ಯಕ್ತಿತ್ವ ವಿಕಸನದ ದೃಷ್ಟಿಯಿಂದ ಹಾಗೂ ದೇಶದ ಮುನ್ನಡೆಯ ದೃಷ್ಟಿಯಿಂದ ಅಪೇಕ್ಷಣೀಯವಲ್ಲ. ಹೀಗಾಗಿ ಶಿಕ್ಷಣ ಮತ್ತು ವಿವಿಧ ಔದ್ಯೋಗಿಕ, ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಮಹಿಳೆಯರು ಭಾಗವಹಿಸಲು ಅನುವು ಮಾಡಿಕೊಡುವ ಬಗೆಯಲ್ಲಿ ಒಂದಷ್ಟು ಕ್ರಮಗಳನ್ನು ಕೈಗೊಳ್ಳಬೇಕೆಂಬ ಚಿಂತನೆ ಭಾರತ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲೇ ಮೈದಾಳಿತು.
ಮಹಿಳಾ ಮೀಸಲಾತಿ ಏಕೆ?
ಮಹಿಳಾ ಮೀಸಲಾತಿಯ ಅಗತ್ಯವೇನು? ಎಂಬುದನ್ನು ಮೊದಲು ಮನವರಿಕೆ ಮಾಡಿಕೊಂಡು ಮುಂದುವರೆಯಬೇಕಾಗುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ಮಹಿಳಾ ಸಾಕ್ಷರತಾ ಪ್ರಮಾಣ ಶೇಕಡಾ 8ಕ್ಕಿಂತ ಕಡಿಮೆ ಇತ್ತು. ಅದರ ಜೊತೆಗೆ ಬಾಲ್ಯವಿವಾಹ, ವರದಕ್ಷಿಣೆ, ತಾಯಿ ಮರಣ ಪ್ರಮಾಣ, ಲಿಂಗ ತಾರತಮ್ಯ ಮುಂತಾದವು ಮಹಿಳೆಯರ ಪ್ರಗತಿಗೆ ಅಡ್ಡಿಯಾಗಿದ್ದವು. ಹೆಣ್ಣುಮಗುವನ್ನು ಹುಟ್ಟುವ ಮೊದಲೇ ಕೊಲ್ಲುವುದು ಒಂದೆಡೆಯಾದರೆ ಹುಟ್ಟಿದ ಹೆಣ್ಣುಮಕ್ಕಳೂ ಅಪೌಷ್ಟಿಕತೆಯಿಂದ ಬಳಲುವ ದುರವಸ್ಥೆ ಇತ್ತು.
ಇದನ್ನೂ ಓದಿ: ದಲಿತರ ಮೀಸಲಾತಿ: ಬೆಳಕಾಗಬೇಕಾಗಿದೆ ಬೆಂಕಿ – ಡಾ.ರವಿಕುಮಾರ್ ನೀಹ
ಸಾಕ್ಷರತಾ ಪ್ರಮಾಣ ಕಡಿಮೆ ಇದ್ದು, ಅದರಲ್ಲೂ ವಿಜ್ಞಾನ-ತಂತ್ರಜ್ಞಾನ, ವೈದ್ಯಕೀಯ ಮೊದಲಾದ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಅತ್ಯಂತ ಕನಿಷ್ಠ ಪ್ರಮಾಣದಲ್ಲಿತ್ತು. ಗೃಹಕೃತ್ಯಗಳು, ಮಕ್ಕಳ ಪಾಲನೆ ಪೋಷಣೆಯಾಚೆಗೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಕೊಳ್ಳಲು ಮಹಿಳೆಯರ ಕುರಿತಾದ ನಮ್ಮ ದೃಷ್ಟಿಕೋನವೇ ಅಡ್ಡಿಯಾಗಿತ್ತು. ‘ಸ್ತ್ರೀಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ’ ಎಂಬುದನ್ನು ಬಲವಾಗ ನಂಬಿದ್ದ ಸಮಾಜದಲ್ಲಿ ಮಹಿಳೆಯರು ಹೊರಬರುವುದು ಕಷ್ಟವೇ ಆಗಿತ್ತು.
ಆದರೆ ದೇಶದ ಅರ್ಧದಷ್ಟಿರುವ ಮಹಿಳೆಯರ ಪಾಲ್ಗೊಳ್ಳುವಿಕೆ ಇಲ್ಲದಿರುವುದು ದೇಶದ ಪ್ರಗತಿಗೆ ದೊಡ್ಡ ಅಡ್ಡಿ. ಜೊತೆಗೆ, ಪ್ರಜಾಸತ್ತಾತ್ಮಕವಾದ ಭಾರತ ದೇಶದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಎಲ್ಲ ಪ್ರಜೆಗಳ ಸಕ್ರಿಯ ಪಾಲ್ಗೊಳ್ಳುವಿಕೆ ಬೇಕೇಬೇಕು. ಈ ಎಲ್ಲ ದೃಷ್ಟಿಯಿಂದ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರ ಪಾಲುದಾರಿಕೆ ಸಾಧ್ಯವಾಗುವಂತೆ ಮಹಿಳೆಯರ ಪ್ರಾತಿನಿಧ್ಯ ಇರುವಂತೆ ಒಂದಿಷ್ಟು ಸ್ಥಾನಗಳನ್ನು ಮಹಿಳೆಯರಿಗಾಗಿಯೇ ಮೀಸಲಿಡಬೇಕೆಂಬ ಚಿಂತನೆ ಮೈದಾಳಿತು.
ಶತಮಾನಗಳ ಕಾಲ ಮಹಿಳೆಯರ ಪ್ರವೇಶವೇ ಇಲ್ಲದ ಕ್ಷೇತ್ರಗಳಿಗೆ ಅವರು ಒಮ್ಮಿಂದೊಮ್ಮೆಲೆ ಪ್ರವೇಶ ಪಡೆಯುವುದು ಕಷ್ಟಸಾಧ್ಯ. ಈ ದಿಸೆಯಲ್ಲಿ ಅವರಿಗೆ ಉತ್ತೇಜನ ನೀಡುವಂತೆ ಕೆಲವು ಸ್ಥಾನಗಳನ್ನು ಅವರಿಗಾಗಿಯೇ ಇಡುವ ಬಗೆ ಚಾರಿತ್ರಿಕವಾಗಿ ಆದ ಲೋಪವನ್ನು ಸರಿಪಡಿಸಿಕೊಳ್ಳುವ ಬಗೆಯದ್ದಾಗಿದೆ. ಸ್ವಾತಂತ್ರ್ಯ ಗಳಿಸಿ 72 ವರ್ಷಗಳಾದ ಬಳಿಕವೂ ವರದಕ್ಷಿಣೆ ಸಾವುಗಳು, ಸ್ತ್ರೀಭ್ರೂಣ ಹತ್ಯೆ, ಕೌಟುಂಬಿಕ ದೌರ್ಜನ್ಯ, ಅರ್ಧದಲ್ಲೇ ಶಾಲೆ ಬಿಡುವ ಪ್ರಮಾಣ ಹಿಂದೆ ಇದ್ದ ಪ್ರಮಾಣದಲ್ಲಿ ಅಲ್ಲವಾದರೂ ಗಣನೀಯ ಪ್ರಮಾಣದಲ್ಲಿ ಇದ್ದೇ ಇದೆ. 2011ರ ಗಣತಿಯ ಪ್ರಕಾರ ಭಾರತದ ಮಹಿಳಾ ಸಾಕ್ಷರತಾ ಪ್ರಮಾಣ 65.46% ಇದೆ. ಇದು ಇನ್ನೂ ಸಾಗಬೇಕಾದ ದಾರಿಯನ್ನು ತಿಳಿಸುತ್ತದೆ.
ಇದನ್ನೂ ಓದಿ: ಮೀಸಲಾತಿಯ ಮೂಲ, ಋಗ್ವೇದ ಕಾಲ: ವಿಕಾಸ್ ಆರ್. ಮೌರ್ಯ
ಇಲ್ಲಿ ತುಂಬಾ ಜನ ಗೊಂದಲ ಮಾಡಿಕೊಳ್ಳುವ ಒಂದು ವಿಷಯವನ್ನು ಸ್ಪಷ್ಟಪಡಿಸಿಕೊಂಡು ಮುಂದೆ ಸಾಗಬೇಕಾಗುತ್ತದೆ. ಅದು ಸಮಾನ ಅವಕಾಶ, ಮೀಸಲಾತಿ ಮತ್ತು ಪ್ರತಿನಿಧೀಕರಣದ ಪ್ರಶ್ನೆ. ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ಇದೆ ಎಂದರೂ ಹಿಂದಿನಿಂದಲೂ ಜಾತಿ, ಲಿಂಗ ಮೊದಲಾದ ಕಾರಣಕ್ಕೆ ಕೆಲವು ಕ್ಷೇತ್ರಗಳಿಂದ ದೂರವೇ ಇಡಲ್ಪಟ್ಟ ಸಮುದಾಯಗಳು ತಕ್ಷಣ ಅವಕಾಶ ದೊರೆತರೂ ಮುಂದೆ ಬರದೇ ಇರಬಹುದು. ಹೀಗಾಗಿ ಅವರಿಗಾಗಿಯೇ ನಿರ್ದಿಷ್ಟ ಸ್ಥಾನಗಳನ್ನು ಇರಿಸಿದಾಗ ಸೂಕ್ತ ಅರ್ಹತೆ ಪಡೆದ ಆಯಾ ವರ್ಗದ ಪ್ರತಿನಿಧಿಗಳು ಬರುವುದು ಸಾಧ್ಯ. ಜೊತೆಗೆ, ಹಲವು ಸಮುದಾಯಗಳಿಂದ ಸಂಘಟಿತವಾದ ದೇಶದಲ್ಲಿ ಯಾವುದೇ ರಂಗವಾಗಲೀ ಆ ಸಮುದಾಯಗಳ ಪ್ರತಿನಿಧಿಗಳನ್ನು ಒಳಗೊಂಡಾಗ ಮಾತ್ರ ಅದು ಎಲ್ಲರ ಹಿತಾಸಕ್ತಿಗಳನ್ನು ಪರಿಗಣಿಸುವುದು ಸಾಧ್ಯ. ಹೀಗಾಗಿ ಇಲ್ಲಿ ಆರ್ಥಿಕವಾಗಿ ಹಿಂದುಳಿದವರೋ ಅಲ್ಲವೋ ಎನ್ನುವುದಕ್ಕಿಂತ ಒಂದು ಕ್ಷೇತ್ರದಲ್ಲಿ ವಿವಿಧ ಸಮುದಾಯಗಳ ಭಾಗವಹಿಸುವಿಕೆ ಎಷ್ಟು ಇದೆ ಎನ್ನುವುದು ಮುಖ್ಯವಾಗುತ್ತದೆ.
ಹೆಜ್ಜೆಗುರುತುಗಳು:
ಮಹಿಳೆಯರು ಉದ್ಯೋಗ, ಆಡಳಿತ ಮುಂತಾದ ರಂಗಗಳಲ್ಲಿ ಸಮಾನ ಅವಕಾಶ ಪಡೆಯಬೇಕಾದರೆ ಮೊದಲಿಗೆ ಬೇಕಾಗಿರುವುದು ಶಿಕ್ಷಣ. ಮಹಿಳೆಯರ ಹಿಂದುಳಿದ ಸ್ಥಿತಿ, ಜಾತಿವ್ಯವಸ್ಥೆಯ ಜೊತೆಗೂ ತಳುಕುಹಾಕಿಕೊಂಡಿದೆ. ಹೀಗಾಗಿ ಸಮಾಜದಲ್ಲಿ ದಮನಕ್ಕೆ ಒಳಗಾಗಿರುವ ದಲಿತರು, ಮಹಿಳೆಯರು, ಅಲ್ಪಸಂಖ್ಯಾತ ಸಮುದಾಯಗಳು ತಮ್ಮ ಸ್ಥಿತಿಯಿಂದ ಹೊರಗೆ ಬರಬೇಕಾದರೆ ಅವರು ಮೊದಲು ವಿದ್ಯಾವಂತರಾಗಬೇಕು ಎಂದು ಮನಗಂಡ ಜ್ಯೋತಿ ಬಾ ಫುಲೆ, ತಮ್ಮ ಪತ್ನಿ ಸಾವಿತ್ರಿ ಬಾ ಅವರೊಂದಿಗೆ ಎಷ್ಟೆಲ್ಲ ವಿರೋಧಗಳ ಮಧ್ಯೆಯೂ ಶಾಲೆಗಳನ್ನು ಆರಂಭಿಸುತ್ತಾರೆ. 1848ರಲ್ಲಿ ಇವರಿಬ್ಬರೂ ಜೊತೆಗೂಡಿ ಹೆಣ್ಣುಮಕ್ಕಳಿಗಾಗಿ ಶಾಲೆ ಆರಂಭಿಸುತ್ತಾರೆ. ಇಂದು ಪ್ರತಿಯೊಂದು ಶೈಕ್ಷಣಿಕ ರಂಗದಲ್ಲೂ ಮಹಿಳೆಯರು ಕಾಣುತ್ತಿರುವುದು, ಇವರು ಬಿತ್ತಿದ ಬೀಜದ ಪರಿಣಾಮ.
ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಭಾಗವಾಗಿಯೇ ಮಹಿಳಾ ಸಮಾನತೆಯ ಪ್ರಶ್ನೆಯನ್ನು ಕೈಗೆತ್ತಿಕೊಳ್ಳಲಾಯಿತು. ರಾಜಾರಾಮ್ ಮೋಹನ್ ರಾಯ್ ಸತಿ ಪದ್ಧತಿಯ ನಿಷೇಧಕ್ಕಾಗಿ ಹೋರಾಟ ನಡೆಸಿದರೆ, ಅಂದಿನ ನೇತಾರರು ಬಾಲ್ಯವಿವಾಹವನ್ನು ವಿರೋಧಿಸಿದರು, ವಿಧವಾ ಮರುವಿವಾಹವನ್ನು ಪ್ರತಿಪಾದಿಸಿದರು, ಮಹಿಳೆಯರು ಶಿಕ್ಷಣ ಪಡೆಯುವ ಅಗತ್ಯವನ್ನು ಎತ್ತಿಹಿಡಿದರು. ಸ್ವತಂತ್ರ ಭಾರತ ಅಳವಡಿಸಿಕೊಂಡ ಸಂವಿಧಾನ, ಸಮಾನತೆಯ ಹಕ್ಕನ್ನು ಪ್ರತಿಪಾದಿಸುತ್ತಾ ಜಾತಿ, ಲಿಂಗ, ವರ್ಗದ ಆಧಾರದಲ್ಲಿ ಯಾವುದೇ ತಾರತಮ್ಯ ಕೂಡದು ಎನ್ನುತ್ತದೆ. ಸ್ತ್ರೀಯರಿಗೆ ಆಸ್ತಿಯ ಹಕ್ಕು, ವಿಚ್ಛೇದನದ ಹಕ್ಕು ಮೊದಲಾದ ಹಕ್ಕುಗಳನ್ನು ಕೊಡಮಾಡುವ ಹಿಂದೂ ಕೋಡ್ ಬಿಲ್ ಪರಿಚಯಿಸಿದಾಗ ಅಂಬೆಡ್ಕರ್ ಅವರು ತೀವ್ರ ಪ್ರತಿಭಟನೆ ಎದುರಿಸಬೇಕಾಯಿತು. ಅವುಗಳಲ್ಲಿ ಕೆಲವು ಒಂದಷ್ಟು ತಿದ್ದುಪಡಿಗಳೊಂದಿಗೆ ಜಾರಿಗೊಂಡವು.
ದಮನಿತ ಸಮುದಾಯಗಳು ಮುಖ್ಯ ವಾಹಿನಿಗೆ ಬರಲು ಅನುವು ಮಾಡಿಕೊಡುವಂತೆ ಎಲ್ಲ ಕ್ಷೇತ್ರಗಳಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಸೇರಿದ ಸಮುದಾಯಗಳ ಭಾಗವಹಿಸುವಿಕೆ ಇರುವ ಹಾಗೆ ಮೀಸಲಾತಿಯನ್ನು ಸಂವಿಧಾನದ ಮೂಲಕ ಜಾರಿಗೆ ತರಲಾಯಿತು. ಇವುಗಳಲ್ಲಿ ಮಹಿಳೆಯರಿಗೂ ಸ್ಥಾನ ಲಭಿಸುವಂತೆ ಪ್ರತಿ ವರ್ಗೀಕರಣದೊಳಗೂ ಮತ್ತೆ ಮಹಿಳೆಯರಿಗೆ ಅವಕಾಶ ಕಲ್ಪಿಸಲಾಯಿತು. ಇದರಿಂದಾಗಿ ಅನೇಕ ಮಹಿಳೆಯರಿಗೆ ಅವಕಾಶ ದೊರೆತು ಅವರು ತಮ್ಮೊಳಗೆ ಹುದುಗಿದ್ದ ಪ್ರತಿಭೆ ಪ್ರಕಟಪಡಿಸಲು ಸಾಧ್ಯವಾಯಿತು. ಮಹಿಳೆಯರ ಪಾಲ್ಗೊಳ್ಳುವಿಕೆಯಿಂದಾಗಿ ನಿಧಾನವಾಗಿ ಪೂರ್ವಾಗ್ರಹಗಳನ್ನು ಮೀರುವ ಪ್ರಕ್ರಿಯೆ ಶುರುವಾಯಿತು.
ಮೈಲುಗಲ್ಲುಗಳು:
ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಎರಡು ಮಹತ್ವದ ಮೈಲುಗಲ್ಲುಗಳಲ್ಲಿ ಮೊದಲನೆಯದು, 1990ರಲ್ಲಿ ಜಾರಿಗೊಂಡ ಮಂಡಲ್ ಆಯೋಗದ ವರದಿ. ಇದರ ಶಿಫಾರಸ್ಸಿನ ಪ್ರಕಾರ ಅಂದಿನ ಪ್ರಧಾನ ಮಂತ್ರಿಗಳಾದ ವಿ.ಪಿ.ಸಿಂಗ್ ಅವರ ಸರ್ಕಾರ ಹಿಂದುಳಿದ ವರ್ಗಗಳಿಗೆ 27% ಮೀಸಲಾತಿ ಜಾರಿ ಮಾಡಿದಾಗ ದೇಶದಾದ್ಯಂತ ಪ್ರತಿಭಟನೆ ವ್ಯಕ್ತವಾಯಿತು. ಇದರ ಪರವಾಗಿ ಮಾತನಾಡುವುದರ ಜೊತೆಗೆ ಹಿಂದಿನಿಂದಲೂ ಅವಕಾಶವಂಚಿತರಾಗಿ ಸಾಗಿಬಂದ ಹಲವು ಮಹಿಳೆಯರೂ ಇದನ್ನು ತೀವ್ರವಾಗಿ ಪ್ರತಿಭಟಿಸಿದರು. ನಮ್ಮಲ್ಲಿ ಮಹಿಳಾ ಸಮಾನತೆಯ ಪ್ರಶ್ನೆ ಜಾತಿಯ ಪ್ರಶ್ನೆಯನ್ನು ಒಳಗೊಳ್ಳದೇ ಇರುವುದನ್ನು ಇದು ಎತ್ತಿ ತೋರಿಸಿತು.
ಇದರಿಂದಾಗಿ ತಮಗೆ ಯೋಗ್ಯ ವರ ಸಿಗದಂತಾಗುತ್ತದೆ ಎಂಬ ಕೂಗು, ತಾವು ಮುಖ್ಯವಾದ ನೆಲೆಯಲ್ಲಿ ನಿಲ್ಲುವುದಕ್ಕಿಂತ ಅವರ ಸ್ಥಾನಮಾನ ಸೂಕ್ತ ಉದ್ಯೋಗದಲ್ಲಿರುವ ಪುರುಷನನ್ನು ವರಿಸುವುದರಲ್ಲಿದೆ ಎಂಬ ಮನೋಭಾವ ಇಲ್ಲಿ ವ್ಯಕ್ತವಾಗುವುದನ್ನು ಗಮನಿಸಬೇಕು. ಆದರೆ ಹಿಂದುಳಿದ ವರ್ಗಗಳ ಮೀಸಲಾತಿಯೊಳಗೆ ಮಹಿಳೆಯರೂ ಪಾಲು ಪಡೆದು ಮುಂದೆ ಬರಲು ಕಾರಣವಾಯಿತು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.
ಎರಡನೆಯದು, ಸ್ಥಳೀಯ ಸಂಸ್ಥೆಗಳಲ್ಲಿ ಶೇಕಡಾ 33ರಷ್ಟು ಮಹಿಳಾ ಪ್ರಾತಿನಿಧ್ಯ ಇರಬೇಕು ಎಂಬ ಮಸೂದೆಯನ್ನು 1993ರಲ್ಲಿ ಸಂವಿಧಾನದ 73ನೇ ತಿದ್ದುಪಡಿಯ ಮೂಲಕ ಜಾರಿಗೆ ತರಲಾಯಿತು. ಇದು ಗ್ರಾಮ, ತಾಲೂಕು, ಜಿಲ್ಲಾಮಟ್ಟಗಳಲ್ಲಿ ಆಡಳಿತದಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿತು. ಇದು ನಂತರದಲ್ಲಿ ಶೇಕಡಾ 50ಕ್ಕೆ ವಿಸ್ತರಿಸಿಕೊಂಡಿತು. ಇಲ್ಲಿ ಆಯ್ಕೆಯಾದ ಮಹಿಳೆಯರು ಪತಿಯ, ಕುಟುಂಬದ ಸದಸ್ಯರ ಕೈಗೊಂಬೆಗಳಾಗಿ ವರ್ತಿಸುತ್ತಾರೆ, ದುರ್ಬಲ ಸಮುದಾಯದವರು ಪ್ರಬಲ ಸಮುದಾಯದವರ ಮಾತಿನಂತೆ ನಡೆಯಬೇಕಾಗುತ್ತದೆ ಎಂಬೆಲ್ಲ ವಿಮರ್ಶೆಗಳಾಚೆಗೆ ಒಂದಷ್ಟು ಮಂದಿ ಮಹಿಳೆಯರು ನಿಜಕ್ಕೂ ಇದರಿಂದ ಬಲ ಪಡೆದಿದ್ದಾರೆ, ಮಹಿಳಾ ಪ್ರಶ್ನೆಗಳಿಗೆ ಜಾಗ ಸಿಕ್ಕಿದೆ ಎಂಬುದು ಗಮನಿಸಬೇಕಾದ ವಿಚಾರ.
ಇನ್ನೊಂದು ಮುಖ್ಯ ಸಂಗತಿ, ಭಾಗವಹಿಸುವಿಕೆ ಇದ್ದ ಮಾತ್ರಕ್ಕೆ ಮಹಿಳೆಯರಿಗೆ ಸಂಬಂಧಿಸಿದ ವಿಚಾರಗಳಿಗೆ ಸೂಕ್ತ ಸ್ಪಂದನೆ ಸಿಕ್ಕಿದಂತಾಗುತ್ತದೆಯೇ ಎಂಬುದು. ಒಂದು ಆಡಳಿತಾಂಗದಲ್ಲಿ ಮಹಿಳೆಯರು ಇದ್ದ ಮಾತ್ರಕ್ಕೆ ಅವರ ದನಿಗೆ ಬೆಲೆ ಸಿಕ್ಕಿತು ಎಂದು ಹೇಳುವುದು ಎಷ್ಟೋ ಸಂದರ್ಭಗಳಲ್ಲಿ ಸಾಧ್ಯವಾಗುವುದಿಲ್ಲ. ತಮಗೆ ಈ ದೊರೆತ ಈ ಅವಕಾಶಕ್ಕಾಗಿ ಅವರು ತಮ್ಮ ಪಕ್ಷಗಳ ಪ್ರಬಲ ನಾಯಕರನ್ನು ಮೆಚ್ಚಿಸಬೇಕಾಗಿರುತ್ತದೆ. ಹೀಗಾಗಿ ಎಷ್ಟೋ ಸಂದರ್ಭಗಳಲ್ಲಿ ಅವರು ಮಹಿಳೆಯರಾಗಿದ್ದೂ ಮಹಿಳೆಯರ ಪರ ದನಿ ಎತ್ತಲು ಸಾಧ್ಯವಾಗದೇ ಹೋಗಿರಬಹುದು. ಇಲ್ಲಿ ಮುಖ್ಯವಾಗಿ ಬದಲಾಗಬೇಕಾಗಿರುವುದು ನಮ್ಮ ಮನಸ್ಥಿತಿ.
ಇದೇ ರೀತಿಯಲ್ಲಿ ಮಹಿಳಾ ಪ್ರಾತಿನಿಧ್ಯ ಲೋಕಸಭೆ, ರಾಜ್ಯಸಭೆ ಹಾಗೂ ರಾಜ್ಯಗಳ ವಿಧಾನ ಮಂಡಲಗಳಲ್ಲಿ ದೊರೆಯುವಂತಾಗಬೇಕು ಎಂದು ಮಂಡಿಸಲಾದ ‘ಮಹಿಳಾ ಮೀಸಲಾತಿ ಮಸೂದೆ’ ಇನ್ನೂ ನೆನಗುದಿಗೆ ಬಿದ್ದಿದೆ. ಈ ವಿಚಾರದಲ್ಲಿ ಎಲ್ಲ ಪಕ್ಷಗಳೂ ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ಇದನ್ನು ಸಾರಿದರೂ ಕಾರ್ಯಗತಗೊಳಿಸುವಲ್ಲಿ ವಿಫಲವಾಗಿವೆ. ಭಾರತದ ಸಂಸತ್ತು ಮತ್ತು ರಾಜ್ಯಗಳ ವಿಧಾನ ಮಂಡಲಗಳಲ್ಲಿ ಮಹಿಳೆಯರ ಗಣನೀಯವಾಗಿ ಕಡಿಮೆ ಇದೆ. ಕರ್ನಾಟಕದ ವಿಧಾನ ಸಭೆಯಲ್ಲಿನ ಒಟ್ಟು 225 ಸ್ಥಾನಗಳ ಪೈಕಿ ಕೇವಲ 7 ಮಹಿಳೆಯರಿದ್ದಾರೆ. ಲೋಕಸಭೆಯಲ್ಲಿ ಈ ಪ್ರಮಾಣ 12.6% ಇದ್ದರೆ, ರಾಜ್ಯಸಭೆಯಲ್ಲಿ ಇದು 10.6%ರಷ್ಟಿದೆ. ಈ ನಿಟ್ಟಿನಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿ.ಎಂ.ಸಿ, ಬಿ.ಜೆ.ಡಿ ಪಕ್ಷಗಳು ಚುನಾವಣೆಗೆ ಅಭ್ಯರ್ಥಿಯನ್ನು ನಿಲ್ಲಿಸುವ ಸಂದರ್ಭದಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಸ್ಥಾನ ನೀಡಿರುವುದನ್ನು ಗಮನಿಸಬೇಕು. ಇದು ಮೇಲ್ಮನೆ, ಕೆಳಮನೆಗಳಲ್ಲೂ ಜಾರಿಯಾಗಬೇಕಿದೆ.
ಸಾಗಬೇಕಾದ ಹಾದಿ:
ಸ್ವಾತಂತ್ರ್ಯ ಸಿಕ್ಕಿದ ಸಂದರ್ಭದಲ್ಲಿ ಮಹಿಳೆಯರಿಗೆ ಅತ್ಯಂತ ಕನಿಷ್ಟ ಪ್ರಮಾಣದಲ್ಲಿದ್ದ ಅವಕಾಶ ಈಗ ಇಷ್ಟು ವಿಸ್ತರಿಸಿಕೊಳ್ಳಲು ಮಹಿಳಾ ಮೀಸಲಾತಿ ಪ್ರಮುಖ ಕಾರಣ. ಇಂದು ಶಿಕ್ಷಣ, ವಿಜ್ಞಾನ-ತಂತ್ರಜ್ಞಾನ, ಕಾನೂನು, ಆರೋಗ್ಯ ಹೀಗೆ ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರನ್ನು ಗುರುತಿಸುವುದು ಸಾಧ್ಯ. ಹೀಗಿದ್ದರೂ ಶಾಲಾ ಕಾಲೇಜುಗಳಿಗೆ ಸೇರಿದ ಹೆಣ್ಣುಮಕ್ಕಳು ಅರ್ಧದಲ್ಲೇ ಬಿಟ್ಟು ಹೋಗುವುದು, ವಿಜ್ಞಾನ, ಕಾನೂನು ಕ್ಷೇತ್ರಗಳಲ್ಲಿ ಇನ್ನೂ ಮಹಿಳೆಯರ ಭಾಗವಹಿಸುವಿಕೆ ಕಡಿಮೆ ಪ್ರಮಾಣ ಇರುವುದು ನಾವಿನ್ನೂ ಸಾಕಷ್ಟು ಪ್ರಗತಿ ಸಾಧಿಸಿಲ್ಲ ಎಂಬುದನ್ನು ತಿಳಿಸುತ್ತದೆ. ಜೊತೆಗೆ, ಮುಂದುವರೆಯುತ್ತಿರುವ ಮಹಿಳೆಯರೂ, ಸಾಧಕಿಯರೂ ಬೇರೆ ಬೇರೆ ಬಗೆಯಲ್ಲಿ ಕಿರುಕುಳ ಅನುಭವಿಸುತ್ತಿದ್ದಾರೆ. ಅವರು ಎಷ್ಟೇ ಸಾಧನೆ ಮಾಡಲಿ, ಅವರನ್ನು ನೋಡುವ ನಮ್ಮ ಕಣ್ಣುಗಳು ಬದಲಾಗಿಲ್ಲ. ಸಾಂವಿಧಾನಿಕವಾಗಿ ಸಮಾನ ಅವಕಾಶ ದೊರೆತರೂ ಮಹಿಳೆಯರನ್ನು ಕೀಳಾಗಿ ಕಾಣುವ, ಅಸಮರ್ಥಳಾಗಿ ನೋಡುವ ಸಾಂಪ್ರದಾಯಿಕ ಮನೋಭಾವ ಹಾಗೇ ಇದೆ ಎನ್ನುವುದಕ್ಕೆ ಇವು ನಿದರ್ಶನಗಳಾಗಿವೆ.
ಸ್ವಾತಂತ್ರ್ಯ ದೊರೆತ ಕಳೆದ ಕೆಲವು ದಶಕಗಳಲ್ಲಿ ಮಹಿಳೆಯರ ಮುನ್ನಡೆಯಲ್ಲಿ ಕಂಡುಬಂದ ಪ್ರಗತಿ ಕಳೆದ ಕೆಲವು ವರ್ಷಗಳಲ್ಲಿ ಹಿಮ್ಮುಖವಾಗಿ ಸಾಗುತ್ತಿರುವುದು ಆತಂಕದ ವಿಚಾರ. ದಿ ಹಿಂದು ಪತ್ರಿಕೆಯ ವರದಿಯ ಪ್ರಕಾರ 2005ರಲ್ಲಿ ಭಾರತದ ಒಟ್ಟು ದುಡಿಯುವ ವರ್ಗದಲ್ಲಿ ಮಹಿಳೆಯರ ಪ್ರಮಾಣ 36.7% ಆಗಿದ್ದರೆ, 2018ರಲ್ಲಿ ಇದು 26% ಕ್ಕೆ ಕುಸಿದಿದೆ. ಇತ್ತು. ಗುಣಮಟ್ಟದ ಶಿಕ್ಷಣಾವಕಾಶ ದೊರೆಯದಿರುವುದು, ಮಹಿಳೆಯರ ಕುರಿತಾದ ನಮ್ಮ ಸಾಂಪ್ರದಾಯಿಕ ಚಿಂತನೆ ಬದಲಾಗದಿರುವುದು ಇದಕ್ಕೆ ಮುಖ್ಯ ಕಾರಣ. ಮಹಿಳೆಯರು ಹೆಚ್ಚು ತೊಡಗಿಕೊಳ್ಳುವ ಹಾಗೆ, ಅವರಿಗೆ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಉದ್ಯೋಗ ಪಡೆಯಲು ಪೂರಕವಾದ ಕೌಶಲಗಳನ್ನು ಅವರಲ್ಲಿ ಬೆಳೆಸುವ ಅಗತ್ಯವಿದೆ.
ಎಷ್ಟೋ ಸಂದರ್ಭಗಳಲ್ಲಿ ಒಂದಷ್ಟು ಮಹಿಳೆಯರು ಸಂವಿಧಾನದ ಮೂಲಕ ದತ್ತವಾದ ಮೀಸಲಾತಿ, ಸಮಾನ ಅವಕಾಶಗಳನ್ನು ಪಡೆದೂ ಅದರ ವಿರುದ್ಧ ಅಪಸ್ವರ ಎತ್ತುತ್ತಿರುವುದು ವ್ಯಂಗ್ಯ. ತಾವು ನಿಂತ ನೆಲೆಯನ್ನು ಇವರು ನೋಡಿದರೆ ಈ ಬಗೆಯ ತಪ್ಪುಗ್ರಹಿಕೆಗಳಿಂದ ಹೊರಬರಬಹುದು. ಸಾಮಾನ್ಯ ವರ್ಗದಿಂದ ಹಿಡಿದು ಎಲ್ಲ ವರ್ಗಗಳಲ್ಲಿಯೂ ಮಹಿಳೆಯರಿಗೆ ಪ್ರತ್ಯೇಕ ಅವಕಾಶ ಕಲ್ಪಿಸಲಾಗಿದೆ, ಅದರ ಪ್ರಯೋಜನ ಅವರು ಪಡೆದೂ ಇದ್ದಾರೆ. ಆದರೆ ದಮನಿತ ವರ್ಗಗಳು ದನಿ ಪಡೆಯುವುದನ್ನು ಸಹಿಸಲಾಗದ ಶಕ್ತಿಗಳು ತಮ್ಮ ವಿರುದ್ಧವೇ ಇರುವ ಮಾತುಗಳನ್ನು ಇವರ ಬಾಯಲ್ಲಿ ಆಡಿಸುತ್ತಿವೆ. ಮಹಿಳೆಯರು ಈ ಬಗ್ಗೆ ಎಚ್ಚೆತ್ತು ಒಳಗೊಳ್ಳುವಿಕೆಯ ಮೂಲಕ ಇದನ್ನು ಗ್ರಹಿಸುವ ಅಗತ್ಯವಿದೆ.
ದಶಕಗಳ ಕಾಲ ಹಲವು ಸೌಲಭ್ಯಗಳು, ಮಸೂದೆಗಳು ಎಲ್ಲ ಬಂದರೂ ಮಹಿಳೆಯರನ್ನು ನೋಡುವ ದೃಷ್ಟಿಕೋನ ಇನ್ನೂ ಸಾಕಷ್ಟು ಬದಲಾಗಬೇಕಾಗಿದೆ. ಬೆರಳೆಣಿಕೆಯಷ್ಟು ಮಹಿಳೆಯರು ಉನ್ನತ ಸ್ಥಾನಕ್ಕೇರಿರುವುದನ್ನು ಉದಾಹರಣೆಯಾಗಿ ಕೊಟ್ಟು ಮಹಿಳೆಯರು ಮುಂದುವರೆದಿದ್ದಾರೆ ಎನ್ನುವುದು ವಾಸ್ತವವನ್ನು ಪರಿಗಣಿಸದೇ ಆಡುವ ಮಾತಾಗುತ್ತದೆ.
ಹಳ್ಳಿಗಳಲ್ಲಿ ಬಾಲ್ಯವಿವಾಹ ಎಗ್ಗಿಲ್ಲದೆ ನಡೆಯುತ್ತಿದೆ. ಈಗಾಗಲೇ ಚಚಿಸಿದಂತೆ ಬೇರೆ ಬೇರೆ ಬಗೆಯ ದೌರ್ಜನ್ಯಗಳಿಗೆ ಹೆಣ್ಣುಮಕ್ಕಳು ಒಳಗಾಗುತ್ತಿದ್ದಾರೆ. ಶಬರಿಮಲೆಯಂತಹ ಪ್ರಕರಣಗಳು ಹೆಣ್ಣಿನ ಬಗೆಗಿನ ನಮ್ಮ ಗ್ರಹಿಕೆಗೆ ಕನ್ನಡಿ ಹಿಡಿದಿವೆ. ‘ಮಹಿಳೆಯರು ಮನೆಯಿಂದ ಹೊರಗೆ ಬರುವುದೇ ಅತ್ಯಾಚಾರಕ್ಕೆ ಕಾರಣ’, ‘ಹೆಚ್ಚು ಓದಿದ ಮಹಿಳೆ ಅಹಂಕಾರಿಯಾಗಿರುತ್ತಾಳೆ’ ಎಂಬ ಸಾಮಾನ್ಯ ಅಭಿಪ್ರಾಯಗಳಿಂದ ಹಿಡಿದು, ಅತ್ಯಾಚಾರ, ಉದ್ಯೋಗ ಪರಿಸರದಲ್ಲಿ ಲೈಂಗಿಕ ಕಿರುಕುಳ, ಜಾತಿ ತಾರತಮ್ಯ, ಕೌಟುಂಬಿಕ ಕಿರಿಕಿರಿ ಇವೆಲ್ಲವೂ ಮಹಿಳೆಯರ ಭಾಗವಹಿಸುವಿಕೆಗೆ ಅಡೆತಡೆಗಳಾಗಿವೆ.
ಮೀಸಲಾತಿಯ ವಿರುದ್ಧ ದನಿಯೆತ್ತುವ ಮೊದಲು ಪ್ರಸ್ತುತ ಸ್ಥಿತಿಯನ್ನು ಅವಲೋಕಿಸುವುದು ಮುಖ್ಯ. ಮೀಸಲಾತಿ ಸಮರ್ಪಕವಾಗಿ ಜಾರಿಯಾಗಿ, ನಮ್ಮ ಮನಸ್ಥಿತಿಗಳು ಬದಲಾಗಿದ್ದೇ ಆದಲ್ಲಿ ದಲಿತ ಹುಡುಗ ವಾಚು ಕಟ್ಟಿದರೆ ಕೈ ಕತ್ತರಿಸುವ, ಗರ್ಭಾ ನೃತ್ಯ ನೋಡಿದ್ದಕ್ಕೆ ಕೊಲ್ಲುವ, ಅತ್ಯಾಚಾರ ಮಾಡಿ ಹತ್ಯೆಗೈಯ್ಯುವ ಸ್ಥಿತಿ ಇಂದಿನವರೆಗೂ ಮುಂದುವರೆದು ಬರುತ್ತಿರಲಿಲ್ಲ. ದಲಿತರು, ಮಹಿಳೆಯರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರನ್ನು ನೋಡುವ ದೃಷ್ಟಿ ಬದಲಾಗುವ ಅಗತ್ಯವಿದೆ. ಆಗಲೇ ನಮ್ಮಲ್ಲಿ ಉಂಟಾಗಿರುವ ಗೊಂದಲ, ಮತ್ತು ನಮ್ಮೊಳಗೇ ಇರುವ ವೈರುಧ್ಯ-ಇವೆರಡರಿಂದಲೂ ಹೊರಬರುವುದು ಸಾಧ್ಯ.


