ಭಾರತದಲ್ಲಿನ ಓವರ್-ದ-ಟಾಪ್ (ಒಟಿಟಿ) ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿನ ವಿಡಿಯೋಗಳನ್ನು ನಿಯಂತ್ರಿಸಲು, ವಿಷಯವನ್ನು ಮೇಲ್ವಿಚಾರಣೆ ಮತ್ತು ಫಿಲ್ಟರ್ ಮಾಡಲು ಸ್ವಾಯತ್ತ ಸಂಸ್ಥೆಯನ್ನು ಸ್ಥಾಪಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಲು ಕೋರಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, ಈ ವಿಷಯವು ಕಾರ್ಯಾಂಗದ ವ್ಯಾಪ್ತಿಗೆ ಬರುತ್ತದೆ. ಹಲವರೊಂದಿಗೆ ಚರ್ಚೆಯ ಅಗತ್ಯವಿದೆ ಎಂದು ಹೇಳಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ವಕೀಲ ಶಶಾಂಕ್ ಶೇಖರ್ ಝಾ ಅವರಿಗೆ ಅರ್ಜಿಯನ್ನು ಹಿಂಪಡೆಯಲು ಮತ್ತು ಕೇಂದ್ರ ಸರ್ಕಾರವನ್ನು ಸಂಪರ್ಕಿಸಲು ನ್ಯಾಯಾಲಯ ಅನುಮತಿ ನೀಡಿದೆ.
ಪಿಐಎಲ್‌ನಲ್ಲಿ, ‘ಕಂದಹಾರ್ ಹೈಜಾಕ್’ಎಂದೇ ಕುಖ್ಯಾತಿ ಪಡೆದಿರುವ 1999ರಲ್ಲಿ ನಡೆದ ಭಾರತದ ವಿಮಾನ ‘ಐಸಿ-814’ರ ಅಪಹರಣ ಘಟನೆ ಆಧರಿಸಿ ಒಟಿಟಿ ಫ್ಲ್ಯಾಟ್ ಫಾರ್ಮ್ ನೆಟ್‌ಫ್ಲಿಕ್ಸ್‌ನ‘ಐಸಿ-814’ಎಂಬ ವೆಬ್ ಸೀರಿಸ್ ಅನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿತ್ತು. ಇಂತಹ ಸೀರಿಸ್‌ಗಳು ನೈಜ ಘಟನೆಯ ಆಧರಿತವಾಗಿತ್ತು. ಇವುಗಳನ್ನು ಫಿಲ್ಟರ್ ಮಾಡುವ ಅಗತ್ಯವಿದೆ ಎಂದು ಅರ್ಜಿದಾರರು ಹೇಳಿದ್ದರು.
ಸಿನಿಮಾಟೋಗ್ರಾಫ್ ಆಕ್ಟ್ ಅಡಿಯಲ್ಲಿ ಚಲನಚಿತ್ರಗಳ ಸಾರ್ವಜನಿಕ ಪ್ರದರ್ಶನವನ್ನು ನಿಯಂತ್ರಿಸುವ ಕಾರ್ಯವನ್ನು ಹೊಂದಿರುವ ಶಾಸನಬದ್ಧ ಚಲನಚಿತ್ರ ಪ್ರಮಾಣೀಕರಣ ಸಂಸ್ಥೆ – ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ಅಸ್ತಿತ್ವದಲ್ಲಿದೆ. ಸಿನಿಮಾಟೋಗ್ರಾಫ್ ಕಾನೂನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲಾಗುವ ವಾಣಿಜ್ಯ ಚಲನಚಿತ್ರಗಳಿಗೆ ಪ್ರಮಾಣ ಪತ್ರವನ್ನು ನೀಡುತ್ತದೆ ಎಂದು ವಿವರಿಸಿದ್ದರು.
ಆದರೆ, ಒಟಿಟಿ ವಿಷಯಗಳನ್ನು ಮೇಲ್ವಿಚಾರಣೆ ಮಾಡಲು/ನಿಯಂತ್ರಿಸಲು ಅಂತಹ ಯಾವುದೇ ಸಂಸ್ಥೆಗಳು ಇಲ್ಲ. ಪ್ರಸ್ತುತ ಅವುಗಳು ಸ್ವಯಂ-ನಿಯಂತ್ರಣಗಳಿಗೆ ಮಾತ್ರ ಒಳಗೊಂಡಿದೆ. ವಿವಾದಾತ್ಮಕ ವಿಷಯಗಳನ್ನು ಯಾವುದೇ ಪರಿಶೀಲನೆ ಇಲ್ಲದೆ ಸಾರ್ವಜನಿಕರಿಗೆ ತೋರಿಸಲಾಗುತ್ತದೆ” ಎಂದಿದ್ದರು
ದೇಶದಲ್ಲಿ ಸುಮಾರು 40 ಕ್ಕೂ ಹೆಚ್ಚು ಒಟಿಟಿ ಮತ್ತು ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ನಾಗರಿಕರಿಗೆ ಪಾವತಿಸಿದ, ಜಾಹೀರಾತುಗಳನ್ನು ಒಳಗೊಂಡಿರುವ ಮತ್ತು ಉಚಿತ ವಿಷಯವನ್ನು ಒದಗಿಸುತ್ತಿವೆ. ಆರ್ಟಿಕಲ್ 19ರಲ್ಲಿ ನೀಡಲಾದ ಅಭಿವ್ಯಕ್ತಿಯ ಹಕ್ಕನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ಅರ್ಜಿದಾರರು ವಾದಿಸಿದ್ದರು.
ಇದನ್ನೂ ಓದಿ : ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿಗೆ ಅಗೌರವ; ಐಪಿಎಸ್ ಅಧಿಕಾರಿ ಪಾಂಡಿಯನ್ ವಿರುದ್ಧ ದಲಿತರ ಪ್ರತಿಭಟನೆ


