| ಯೋಗೇಂದ್ರ ಯಾದವ್ |
ಲೇಖಕರು ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು
ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿ ಹತ್ತಿಕ್ಕುವ ಪ್ರಯತ್ನದಲ್ಲಿ ಕರ್ನಾಟಕವು ಉತ್ತರ ಭಾರತವನ್ನು ಅನುಸರಿಸಲು ಶುರು ಮಾಡಿದೆಯೇ? ಇದು ಇಂತಹ ಕ್ರಮಗಳ ಸರಣಿಯಲ್ಲಿ ಮೊದಲನೆಯದೆಂದು ಮುಂದೆ ಗೊತ್ತಾಗುವುದೇ? ಇಲ್ಲಿ ನಮ್ಮ ಕಣ್ಣಿಗೆ ಕಾಣುತ್ತಿರುವುದಷ್ಟೇ ಇದೆಯೋ, ಅಥವಾ ಇದರಾಳದಲ್ಲಿ ಮತ್ತೇನಾದರೂ ಹುದುಗಿದೆಯೋ? ದೊಡ್ಡಿಪಾಳ್ಯ ನರಸಿಂಹಮೂರ್ತಿ ಯವರನ್ನು ಮೊದಲು ವಶಕ್ಕೆ ತೆಗೆದುಕೊಂಡು ನಂತರ ಬಂಧಿಸಿದ ಸುದ್ದಿ ಕೇಳಿದ ತಕ್ಷಣ ತನ್ನ ತಲೆಯೊಳಗೆ ಉದ್ಭವಿಸಿದ ಪ್ರಶ್ನೆಗಳಿವು.
ನರಸಿಂಹಮೂರ್ತಿ ಯನ್ನು ನಾನು ಸುಮಾರು 7 ವರ್ಷಗಳಿಂದ ಬಲ್ಲೆ. ನನಗನಿಸುವಂತೆ ಆಮ್ ಆದ್ಮಿ ಪಾರ್ಟಿಯನ್ನು ರಚಿಸುವ ಆರಂಭಿಕ ಹಂತದಲ್ಲಿ ಕರ್ನಾಟಕದಲ್ಲಿಯ ರಾಜಕೀಯ ಕಾರ್ಯಕರ್ತರನ್ನು ಭೇಟಿ ಮಾಡುತ್ತಿರುವಾಗ ನಾನು ಅವರನ್ನು ಮೊದಲ ಬಾರಿ ಭೇಟಿಯಾದೆ. ಕರ್ನಾಟಕದ ಚಳವಳಿಗಳ ಮತ್ತು ಕಾರ್ಯಕರ್ತರ ಆಳ ಹಾಗೂ ಅಲ್ಲಿಯ ತಿಳುವಳಿಕೆಯ ಶ್ರೀಮಂತಿಕೆಯನ್ನು ನಾನು ಯಾವಾಗಲೂ ಮೆಚ್ಚಿದ್ದೇನೆ.
ರೈತ ಚಳವಳಿಗಳಿಂದ ದಲಿತ ಚಳವಳಿಗಳವರೆಗೆ, ಉದಾರವಾದಿ ಪ್ರಗತಿಪರ ಮಾನವ ಹಕ್ಕುಗಳ ಗುಂಪುಗಳಿಂದ ಎಡಪಂಥೀಯ ಗುಂಪುಗಳವರೆಗೆ, ಹೀಗೆ ಇಡೀ ರಾಜಕೀಯ ಮತ್ತು ಸೈದ್ಧಾಂತಿಕ ಉದ್ದಗಲಗಳ ಬಗ್ಗೆ ತಿಳುವಳಿಕೆ ಹೊಂದಿರುವ ಮತ್ತು ಅವುಗಳನ್ನು ಉದಾರವಾಗಿ ಒಪ್ಪಿಕೊಳ್ಳುವ ವಿರಳ ವ್ಯಕ್ತಿಗಳಲ್ಲಿ ನರಸಿಂಹಮೂರ್ತಿ ಒಬ್ಬರಾಗಿದ್ದರು. ನನಗೆ ಅವರ ಬಗ್ಗೆ ಅಚ್ಚರಿಗೊಳಿಸಿದ್ದೇನೆಂದರೆ, ಯಾವುದೇ ವೈಯಕ್ತಿಕ ಒಲವು, ಪೂರ್ವಗ್ರಹಿಕೆಗಳು ಕಿಂಚಿತ್ತೂ ಕಾಣಿಸಿಕೊಳ್ಳದ ಅವರ ರಾಜಕೀಯ ತಿಳುವಳಿಕೆಯ ಪ್ರಬುದ್ಧತೆ.

ಅವರು ಎಡಪಂಥದಿಂದ ಬಂದವರಾಗಿದ್ದರು. ಆದರೆ ಪ್ರಜಾತಾಂತ್ರಿಕ ಪ್ರಕ್ರಿಯೆಗಳಲ್ಲಿ ಅವರ ಬದ್ಧತೆ ಇತರರಿಗಿಂತ ಹೆಚ್ಚು ಕಾಣುತ್ತಿತ್ತು. ಹಿಂಸೆಯನ್ನಂತೂ ಮರೆತೇಬಿಡಿ, ರಾಜಕೀಯ ಅಥವಾ ಸಾಮಾಜಿಕ ಚಳವಳಿಗಳಲ್ಲಿ ಅವರು ಎಂದೂ ಸಾಹಸಗಳಿಗೆ ಪ್ರೋತ್ಸಾಹಿಸಲಿಲ್ಲ. ಅವರು ಗೌರಿ ಲಂಕೇಶ್ ಟ್ರಸ್ಟ್‌ನ ಕೆಲಸಗಳಲ್ಲಿ ನಿರತರಾಗಿ, ಪಕ್ಷದ ಅಥವಾ ಯಾವುದೇ ಪದಾಧಿಕಾರಿಯಾಗಲು ಹಿಂಜರಿಕೆ ತೋರಿದರೂ ಕರ್ನಾಟಕದ ಎಲ್ಲಾ ಸಂಗಾತಿಗಳು ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಬೇಕೆಂದು ಸೂಚಿಸಿದ್ದು ನನಗೆ ಸ್ವಲ್ಪ ಆಶ್ಚರ್ಯ ಉಂಟುಮಾಡಿತ್ತು.
ನರಸಿಂಹಮೂರ್ತಿ ಅವರ ಬಗ್ಗೆ ನನಗೆ ಗೊತ್ತಿರುವುದನ್ನು ಪರಿಗಣಿಸಿದಲ್ಲಿ, ಅವರ ಮೇಲೆ ಪೊಲೀಸರು ಹೊರೆಸಿರುವ ಆರೋಪಗಳನ್ನು ಕೇಳಿ ನನಗೆ ಆಘಾತವಾಯಿತು. ಅವರು ಉಲ್ಲೇಖಿಸಿರುವ ಪ್ರಕರಣಗಳು ತುಂಬಾ ಹಳೆಯ ಪ್ರಕರಣಗಳಾಗಿದ್ದರಿಂದ, ಅವುಗಳ ಬಗ್ಗೆ ನನಗೆ ತಿಳುವಳಿಕೆ ಇದೆಯೆಂದೋ ಅಥವಾ ಅವರು ಮುಗ್ಧ ಎಂದು ನಾನು ತೀರ್ಪು ನೀಡುವುದು ಸರಿಯಾಗುವುದಿಲ್ಲ. ಆದರೆ, ಕೆಲವು ತುಂಬಾ ಸರಳವಾದ ಮತ್ತು ಸ್ಪಷ್ಟವಾದ ಪ್ರಶ್ನೆಗಳಿವೆ. ಈ ಸರಳ ಪ್ರಶ್ನೆಗಳಿಗೆ ಪೊಲೀಸರು ಉತ್ತರಿಸುವಲ್ಲಿ ವಿಫಲವಾಗಿದ್ದಾರೆ. ಪೊಲೀಸರು ಹೇಳುವಂತೆ, ಅವರು ಕಳೆದ ಎರಡು ದಶಕಗಳಿಂದ ತಲೆಮರೆಸಿಕೊಂಡಿದ್ದೇ ಆದರೆ ಸಾರ್ವಜನಿಕ ಜೀವನದಲ್ಲಿ ಇಷ್ಟೊಂದು ಸಕ್ರಿಯರಾಗಿ, ಎಲ್ಲೆಡೆಯೂ ಕಾಣಿಸಿಕೊಳ್ಳುತ್ತಿದ್ದು ಹೇಗೆ? ಒಂದು ವೇಳೆ ಅವರು ಅಪರಾಧ ಪ್ರಕರಣದಲ್ಲಿ ವಾಂಟೆಡ್ ಆಗಿದ್ದರು ಎಂದರೆ, ತಾವು ಹುಡುಕುತ್ತಿರುವ ವ್ಯಕ್ತಿ ನರಸಿಂಹಮೂರ್ತಿ ಎಂದು ಸಂಶಯವಿದ್ದರೆ ಪೊಲೀಸರಿಗೆ ಅವರನ್ನು ಈ ಮೊದಲೇ ಏಕೆ ಬಂಧಿಸಲು ಆಗಲಿಲ್ಲ? ಪೊಲೀಸರು ಅವರ ವಿಚಾರಣೆ ಮಾಡಿ, ತಮ್ಮ ತನಿಖೆಯನ್ನು ಪೂರ್ಣಗೊಳಿಸಿದ ನಂತರ ಅವರನ್ನು ಬಂಧಿಸಬಹುದಿತ್ತಲ್ಲವೇ? ಪೊಲೀಸರು ಹೇಳುವ ಅಪರಾಧೀ ಕೃತ್ಯಗಳು ನಡೆದ ಸಮಯದಲ್ಲಿ ನರಸಿಂಹಮೂರ್ತಿ ಅವರು ತಮ್ಮ ಬಿಸಿನೆಸ್‍ನಲ್ಲಿ ತೊಡಗಿದ್ದರು ಎನ್ನುವ ನರಸಿಂಹಮೂರ್ತಿ ಅವರ ಆವೃತ್ತಿಯನ್ನು ಪೊಲೀಸರು ಏಕೆ ಪರಿಶೀಲಿಸಲು ಹೋಗಲಿಲ್ಲ? ನರಸಿಂಹಮೂರ್ತಿ ಅವರು ತನಿಖೆಗೆ ಸಂಪೂರ್ಣವಾಗಿ ಸಹಕರಿಸುವುದಕ್ಕೆ ಇಚ್ಛೆ ವ್ಯಕ್ತಪಡಿಸಿದಾಗ ಹಾಗೂ ಅವರು ಇಷ್ಟೊಂದು ಸುಲಭವಾಗಿ ಹಾಗೂ ಸಾರ್ವಜನಿಕವಾಗಿ ಲಭ್ಯವಾಗಿರುವಾಗ ಅವರನ್ನು ಬಂಧಿಸುವ ಅವಸರ ಏಕೆ?
ನನಗೆ ಕಾಣಿಸಿದಂತೆ, ಈ ಪ್ರಶ್ನೆಗಳಿಗೆ ಯಾವುದೇ ಉತ್ತರಗಳಿಲ್ಲ. ಹಾಗಾಗಿ, ನರಸಿಂಹಮೂರ್ತಿ ಅವರನ್ನು ಬಂಧಿಸುವ ಈ ಹಠಾತ್ ಕ್ರಮವನ್ನು ಐಸ್‍ಬರ್ಗ್‍ನ ಒಂದು ತುದಿ ಎಂತಲೂ, ಮುಂದಿನ ದಿನಗಳಲ್ಲಿ ಕಾಣಬಹುದಾದ ದೊಡ್ಡ ಕ್ರಮಗಳ ಒಂದು ಸಂಕೇತವೆಂದು ಪರಿಗಣಿಸುವುದನ್ನು ಬಿಟ್ಟರೆ ನಮಗೆ ಬೇರೆ ಆಯ್ಕೆಗಳಿಲ್ಲ. ಕರ್ನಾಟಕದ ಅತ್ಯಂತ ಜೀವಂತಿಕೆಯುಳ್ಳ ನಾಗರಿಕ ಸಮಾಜವು ಇದಕ್ಕೆ ಅಗತ್ಯವಿರುವ ತ್ವರಿತತೆ ಮತ್ತು ದೃಢತೆಯಿಂದ ಪ್ರತಿಕ್ರಿಯೆ ನೀಡುತ್ತಿರುವುದು ಅತ್ಯಂತ ಹೃದಯಸ್ಪರ್ಶಿಯಾಗಿದೆ. ನರಸಿಂಹಮೂರ್ತಿ ಅವರ ಮೇಲೆ ಹೊರೆಸಲಾದ ಆರೋಪಗಳನ್ನು ಹಿಂತೆಗೆದುಕೊಂಡು, ಅವರ ಬಿಡುಗಡೆಯಾಗಿ ನಮ್ಮೊಂದಿಗೆ ಹೋರಾಟದಲ್ಲಿ ಜೊತೆಗೂಡುವರೆಂದು ನಾನು ಆಶಿಸುತ್ತಿರುವಾಗಲೇ, ನಾವೆಲ್ಲರೂ ಒಂದು ದೀರ್ಘ ಪ್ರಜಾತಾಂತ್ರಿಕ ಸಮರಕ್ಕಾಗಿ ತಯಾರಿ ಮಾಡಿಕೊಳ್ಳಬೇಕು ಎನ್ನುವ ಸಂದೇಶ ಸ್ಪಷ್ಟವಾಗಿ ತೇಲಿಬರುತ್ತಿದೆ.
ಅನುವಾದ: ರಾಜಶೇಖರ್ ಅಕ್ಕಿ


