ಕಾಶ್ಮೀರವು 1947ರಲ್ಲೇ ಪಾಕಿಸ್ತಾನಕ್ಕೆ ಸೇರದಿರಲು ನಿರ್ಧರಿಸಿತ್ತು ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಶುಕ್ರವಾರ ಹೇಳಿದ್ದಾರೆ. “ಅವರೊಂದಿಗೆ ಅಂದು ಸೇರಿಕೊಳ್ಳದ ಕಾರಣಕ್ಕಾಗಿ ಅವರು ನಮ್ಮ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಪಾಕಿಸ್ತಾನವು ಇದನ್ನು ಇನ್ನೂ ಮುಂದುವರಿಸಿದರೆ, ಯುದ್ಧ ನಡೆಯುವ ದಿನ ಬರುತ್ತದೆ” ಎಂದು ಅವರು ಪ್ರತಿಪಾದಿಸಿದ್ದಾರೆ.
“ನಾನು ಈ ಉಗ್ರಗಾಮಿತ್ವವನ್ನು 30 ವರ್ಷಗಳಿಂದ ನೋಡುತ್ತಿದ್ದೇನೆ. ಅದು ಮುಗಿಯಲಿಲ್ಲ, ಇನ್ನೂ ಮುಂದುವರಿಯುತ್ತಿದೆ. ಅದು ಜಮ್ಮು ಕಾಶ್ಮೀರವನ್ನು ನಾಶಪಡಿಸಿದೆ. ನಮ್ಮ ಸಮಾಜವು ಸಂಕಷ್ಟಕ್ಕೆ ಸಿಲುಕಿದೆ ಮತ್ತು ಬಡತನ ಹೆಚ್ಚಾಗಿದೆ. ಇದು ಪಾಕಿಸ್ತಾನಕ್ಕೆ ಕಾಣುತ್ತಿಲ್ಲವೇ? ಅವರ ಜೊತೆ ಸೇರದೆ ನಮ್ಮ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ?” ಎಂದು ಅವರು ಹೇಳಿದ್ದಾರೆ.
ಗುಲ್ಮಾರ್ಗ್‌ನಲ್ಲಿ ಸೇನಾ ವಾಹನದ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಅನಂತನಾಗ್‌ನ ರೈಫಲ್‌ಮ್ಯಾನ್ ಕೈಸರ್ ಅಹ್ಮದ್ ಶಾ ಮತ್ತು ಸಿರ್ಸಾದ ರೈಫಲ್‌ಮ್ಯಾನ್ ಜೀವನ್ ಸಿಂಗ್ ಎಂಬ ಇಬ್ಬರು ಸೇನಾ ಯೋಧರು ಮತ್ತು ಇಬ್ಬರು ಪೋರ್ಟರ್‌ಗಳಾದ ಜಹೂರ್ ಅಹ್ಮದ್ ಮಿರ್ ಮತ್ತು ಮುಷ್ತಾಕ್ ಅಹ್ಮದ್ ಚೌಧರಿ ಸಾವನ್ನಪ್ಪಿದ್ದಾರೆ. ಜೊತೆಗೆ ಇಬ್ಬರು ಸೈನಿಕರು ಮತ್ತು ಒಬ್ಬ ಪೋರ್ಟರ್ ಸಹ ಗಾಯಗೊಂಡಿದ್ದಾರೆ. ಕಾಶ್ಮೀರವು 47ರಲ್ಲೇ ಪಾಕಿಸ್ತಾನಕ್ಕೆ ಸೇರದಿರಲು ನಿರ್ಧರಿಸಿತ್ತು: ಫಾರೂಕ್ ಅಬ್ದುಲ್ಲಾ
ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ನಿಲ್ಲಿಸುವಂತೆ ಪಾಕಿಸ್ತಾನಕ್ಕೆ ಆಗ್ರಹಿಸಿದ ಫಾರೂಕ್ ಅಬ್ದುಲ್ಲಾ, “ಅವರು ನಾಶವಾಗುತ್ತಾರೆ ಮತ್ತು ನಮ್ಮನ್ನೂ ಹಾಳುಮಾಡುತ್ತಾರೆ. ಇವೆಲ್ಲಾ ಸಾಕಾಗಿದೆ, ಅವರು ಇದನ್ನು ಇನ್ನಾದರೂ ನಿಲ್ಲಿಸಬೇಕು. ಜಮ್ಮು ಕಾಶ್ಮೀರದಲ್ಲಿ ಸಾಕಷ್ಟು ಅಮಾಯಕರ ಹತ್ಯೆಗಳು ನಡೆದಿವೆ. ಈ ಹಿಂಸಾಚಾರ ಮತ್ತು ಹತ್ಯೆಗಳು ನಿಲ್ಲಬೇಕು” ಎಂದು ಹೇಳಿದರು.
ಪಾಕಿಸ್ತಾನದ ಬಗ್ಗೆ ವ್ಯಂಗ್ಯವಾಡಿದ ಫಾರೂಕ್ ಅಬ್ದುಲ್ಲಾ, “ಅವರು ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ಮಾಡುವ ಮೂಲಕ ಕಾಶ್ಮೀರವನ್ನು ಪಾಕಿಸ್ತಾನದೊಂದಿಗೆ ವಿಲೀನಗೊಳಿಸಲು ಸಾಧ್ಯವಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ, ಕಾಶ್ಮೀರವು 1947 ರಲ್ಲಿ ಪಾಕಿಸ್ತಾನಕ್ಕೆ ಸೇರದಿರಲು ನಿರ್ಧರಿಸಿತ್ತು” ಎಂದು ಹೇಳಿದ್ದಾರೆ.
ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಅವರು, ಅವರು ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ಉತ್ತೇಜಿಸುವುದನ್ನು ಮುಂದುವರೆಸಿದರೆ, ಯುದ್ಧ ನಡೆಯುವ ದಿನ ಬರುತ್ತದೆ. ಆಗ ಏನನ್ನೂ ಉಳಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
“ಅವರು ಯುದ್ಧವನ್ನು ಬಯಸಿದರೆ, ಅದಕ್ಕೆ ಸಿದ್ಧರಾಗಿರಬೇಕು. ಈ ದಿನಗಳಲ್ಲಿ ಉಕ್ರೇನ್, ಸಿರಿಯಾ, ಇರಾನ್, ಪ್ಯಾಲೆಸ್ಟೈನ್ ಮತ್ತು ಲೆಬನಾನ್‌ನಲ್ಲಿ ಏನಾಗುತ್ತಿದೆ ಮತ್ತು ಅಲ್ಲಿ ವಿನಾಶ ಹೇಗೆ ನಡೆಯುತ್ತಿದೆ ಎಂಬುದನ್ನು ಪಾಕಿಸ್ತಾನ ನೋಡಬೇಕು. ಇಲ್ಲೂ ಅದೇ ನಾಶವನ್ನು ಪಾಕಿಸ್ತಾನ ಬಯಸುತ್ತದೆಯೇ. ಅವರು ಅದನ್ನು ದೇವರ ಸಲುವಾಗಿ ನಿಲ್ಲಿಸಬೇಕು” ಎಂದು ಅವರು ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಜನರು ಎದುರಿಸುತ್ತಿರುವ ಕುಂದುಕೊರತೆಗಳನ್ನು ಪರಿಹರಿಸೋಣ ಎಂದ ಅವರು, ರಾಜ್ಯದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ ಮತ್ತು ಬಡತನ ಹೆಚ್ಚಾಗಿದೆ, ಈ ಸಮಸ್ಯೆಗಳನ್ನು ಪರಿಹರಿಸಲು ನಾವು ಕೆಲಸ ಮಾಡೋಣ ಎಂದು ಅವರು ಹೇಳಿದ್ದಾರೆ.
ಕಾಶ್ಮೀರವು 47ರಲ್ಲೇ ಪಾಕಿಸ್ತಾನಕ್ಕೆ ಸೇರದಿರಲು ನಿರ್ಧರಿಸಿತ್ತು: ಫಾರೂಕ್ ಅಬ್ದುಲ್ಲಾ
ಇದನ್ನೂ ಓದಿ: ಉತ್ತರ ಪ್ರದೇಶ: ಮುಸುಕುಧಾರಿಗಳಿಂದ ಖಾಸಗಿ ಶಾಲಾ ವ್ಯಾನ್ ಮೇಲೆ ಗುಂಡಿನ ದಾಳಿ, ಅಪಾಯದಿಂದ ಪಾರಾದ ಮಕ್ಕಳು


