2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ನಂತರ ಹಲವಾರು ಹಿನ್ನಡೆಗಳನ್ನು ಅನುಭವಿಸಿದ್ದ ಡೊನಾಲ್ಡ್ ಟ್ರಂಪ್, 2024ರ ಚುನಾವಣೆಯಲ್ಲಿ ವಿಜಯಿಯಾಗಿದ್ದು, ಶ್ವೇತಭವನಕ್ಕೆ ಮತ್ತೆ ಪುನರಾಗಮಿಸಲಿದ್ದಾರೆ. ತನ್ನ ಮೊದಲ ವಿಜಯ ಭಾಷಣದಲ್ಲಿ ಮಾತನಾಡಿದ ಟ್ರಂಪ್ “ನಾವು ತೀವ್ರ ಸುರಕ್ಷಿತ ಮತ್ತು ಸಮೃದ್ಧ ಅಮೇರಿಕಾ ನಿರ್ಮಿಸುವವರೆಗೆ ವಿಶ್ರಾಂತಿ ಪಡೆಯುವುದಿಲ್ಲ” ಎಂದು ಹೇಳಿದ್ದಾರೆ. US Elections 2024
ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಮಯದಲ್ಲಿ ತಮ್ಮ ಪರವಾಗಿ ಗಣನೀಯವಾಗಿ ಪ್ರಚಾರ ಮಾಡಿದ ಎಕ್ಸ್(ಟ್ವಿಟರ್) ಮಾಲಿಕ ಎಲೋನ್ ಮಸ್ಕ್ ಅವರನ್ನು ಟ್ರಂಪ್ ಭಾಷಣದಲ್ಲಿ ನೆನಪಿಸಿಕೊಂಡಿದ್ದಾರೆ. ಎಲೋನ್ ಮಸ್ಕ್ ಅವರು ರಿಪಬ್ಲಿಕ್ ಪಕ್ಷದ ಮುಖವಾಣಿಯಂತೆ X ಮತ್ತು ಅವರ ಖಾತೆಯನ್ನು ಚುನಾವಣಾ ಪ್ರಚಾರದಲ್ಲಿ ಬಳಸಿಕೊಂಡಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅವರ ಬೆಂಬಲಿಗರು “ಎಲೋನ್! ಎಲೋನ್!” ಎಂದು ಕೂಗಲು ಪ್ರಾರಂಭಿಸಿದಾಗ, “ಸ್ಟಾರ್ ಒಬ್ಬರು ಹುಟ್ಟಿದ್ದಾರೆ; ಎಲೋನ್ ಮಸ್ಕ್” ಎಂದು ಟ್ರಂಪ್ ಹೇಳಿದ್ದಾರೆ. ಜೊತೆಗೆ ಯುಎಫ್‌ಸಿಯ ಸಿಇಒ ಡಾನಾ ವೈಟ್ ಮತ್ತು ಪಾಡ್‌ಕಾಸ್ಟರ್ ಜೋ ರೋಗನ್ ಅವರ ಬೆಂಬಲಕ್ಕಾಗಿ ಕೂಡಾ ಟ್ರಂಪ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಅಮೆರಿಕದ ಎಲ್ಲಾ ರಾಜ್ಯಗಳಲ್ಲಿ ಬಿರುಸಿನ ಜಟಾಪಟಿ ನಡೆದಿದ್ದರೂ, ಸ್ವಿಂಗ್ ರಾಜ್ಯಗಳ ಬಹುತೇಕ ಮತದಾರರ ಮನಸ್ಸು ಗೆಲ್ಲಲು ಕಮಲಾ ಹ್ಯಾರಿಸ್‌ಗೆ ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ. ಸ್ವಿಂಗ್ ರಾಜ್ಯಗಳ ಮತದಾರರು ಟ್ರಂಪ್ ಅವರ ಪರವಾಗಿ ಮತ ಹಾಕಿದ್ದಾರೆ. ಕಮಲಾ ಮತ್ತು ಟ್ರಂಪ್ ನಡುವಿನ ಸ್ಪರ್ಧೆಯು ವಿಶ್ವದಾದ್ಯಂತ ತೀವ್ರ ಕುತೂಹಲ ಹುಟ್ಟುಹಾಕಿತ್ತು. US Elections 2024
ತನ್ನ ಕೊನೆಯ ಭಾಷಣಗಳಲ್ಲಿ ಕಮಲಾ ಅವರು ಭರವಸೆ, ಏಕತೆ ಮತ್ತು ಮಹಿಳಾ ಹಕ್ಕುಗಳ ವಿಷಯಗಳನ್ನು ಒತ್ತಿಹೇಳಿದ್ದರು. ಅದಾಗ್ಯೂ ಮತದಾರರು ಅವರನ್ನು ಕೈ ಹಿಡಿಯಲಿಲ್ಲ. ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ಟ್ರಂಪ್ ಪ್ರಸ್ತುತ ಹ್ಯಾರಿಸ್ ವಿರುದ್ಧ 267-224 ಮುನ್ನಡೆ ಸಾಧಿಸಿದ್ದಾರೆ.
78 ವರ್ಷಗಳ ಟ್ರಂಪ್ ಜುಲೈನಲ್ಲಿ ರಿಪಬ್ಲಿಕನ್ ನ್ಯಾಷನಲ್ ಕನ್ವೆನ್ಷನ್ (RNC)ನಲ್ಲಿ ಅಧ್ಯಕ್ಷೀಯ ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಈ ಮೂಲಕ ಅಪರಾಧಕ್ಕಾಗಿ ಶಿಕ್ಷೆ ಅನುಭವಿಸಿದ ನಂತರ ಕೂಡಾ ಅಧ್ಯಕ್ಷೀಯ ಚುನಾವಣೆಗೆ ಆಯ್ಕೆಯಾದ ಮೊದಲ ಮಾಜಿ ಅಧ್ಯಕ್ಷರಾಗಿ ಅವರು ಹೊರಹೊಮ್ಮಿದ್ದಾರೆ.
ಕಮಲಾ ಹ್ಯಾರಿಸ್ ಅವರ ಔಪಚಾರಿಕ ಆಯ್ಕೆ ಆಗಸ್ಟ್ 2024 ರಲ್ಲಿ ಡೆಮಾಕ್ರಟಿಕ್ ನ್ಯಾಷನಲ್ ಕನ್ವೆನ್ಷನ್‌ನಲ್ಲಿ ನಡೆಯಿತು. ಒಂದು ವೇಳೆ ಈ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಅವರು ಗೆಲುವು ಕಂಡಿದ್ದರೆ, ಅವರು ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರದ ಅಧ್ಯಕ್ಷೆಯಾಗಿ ಅಧಿಕಾರ ಪಡೆದ ಮೊದಲ ಕಪ್ಪು ಮತ್ತು ಏಷ್ಯನ್ ಮೂಲದ ಮೊದಲ ಮಹಿಳೆಯಾಗುತ್ತಿದ್ದರು.
ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆ ವಿಶೇಷ: ನಾಂದೇಡ್ ಉತ್ತರ ಕ್ಷೇತ್ರಕ್ಕೆ ಬರೋಬ್ಬರಿ 33 ಸ್ಪರ್ಧಿಗಳು!
ಮಹಾರಾಷ್ಟ್ರ ಚುನಾವಣೆ ವಿಶೇಷ: ನಾಂದೇಡ್ ಉತ್ತರ ಕ್ಷೇತ್ರಕ್ಕೆ ಬರೋಬ್ಬರಿ 33 ಸ್ಪರ್ಧಿಗಳು!


