ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿಯನ್ನು ಮರುಸ್ಥಾಪಿಸಲು ಆಗ್ರಹಿಸಿ ವಿಧಾನಸಭೆಯಲ್ಲಿ ಬುಧವಾರ (ನ.6) ನಿರ್ಣಯ ಅಂಗೀಕರಿಸಲಾಗಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ಸದಸ್ಯರು, ನಿರ್ಣಯ ಹಿಂಪಡೆಯುವವರೆಗೂ ಕಲಾಪ ನಡೆಸಲು ಬಿಡುವುದಿಲ್ಲ ಎಂದಿದ್ದಾರೆ.
ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ ಪಡೆಯುತ್ತಿದ್ದಂತೆ, ಅದರ ಪ್ರತಿಗಳನ್ನು ಹರಿದು ಬಿಸಾಕಿದ ಬಿಜೆಪಿ ಸದಸ್ಯರು, ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ನೇತೃತ್ವದ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
“ಆಗಸ್ಟ್ 5 ಝಿಂದಾಬಾದ್”, “ಜೈ ಶ್ರೀ ರಾಮ್”, “ವಂದೇ ಮಾತರಂ”, “ದೇಶ ವಿರೋಧಿ ಅಜೆಂಡಾ ನಡೆಯುವುದಿಲ್ಲ”, “ಜಮ್ಮು ವಿರೋಧಿ ಅಜೆಂಡಾ ನಡೆಯುವುದಿಲ್ಲ”, “ಪಾಕಿಸ್ತಾನಿ ಅಜೆಂಡಾ ನಡೆಯುವುದಿಲ್ಲ” ಇತ್ಯಾದಿ ಘೋಷಣೆಗಳನ್ನು ಕೂಗುತ್ತಾ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ತೀವ್ರ ಪ್ರತಿಭಟನೆ ನಡೆಸಿದರು. ಇದರಿಂದ ಕಲಾಪ ನಡೆಸಲು ಅಡ್ಡಿಯಾಯಿತು. ಆದ್ದರಿಂದ ಸ್ಪೀಕರ್ ಕಲಾಪವನ್ನು ಮುಂದೂಡಿದರು.
“ಸ್ಪೀಕರ್ ಪಕ್ಷಪಾತ ಮಾಡುತ್ತಿದ್ದಾರೆ” ಎಂದು ಪ್ರತಿಪಕ್ಷ ನಾಯಕ ಸುನೀಲ್ ಶರ್ಮಾ ಆರೋಪಿಸಿದ್ದಾರೆ. “ನೀವು (ಸ್ಪೀಕರ್) ನಿನ್ನೆ ಸಚಿವರ ಸಭೆಯನ್ನು ಕರೆದಿದ್ದೀರಿ ಮತ್ತುನೀವೇ ನಿರ್ಣಯವನ್ನು ರಚಿಸಿದ್ದೀರಿ” ಎಂದು ನಮಗೆ ಮಾಹಿತಿ ದೊರೆತಿದೆ” ಎಂದಿದ್ದಾರೆ.
ಮತ್ತೊಬ್ಬ ಬಿಜೆಪಿ ಶಾಸಕ ಶಾಮ್ ಲಾಲ್ ಶರ್ಮಾ ಮಾತನಾಡಿ, “ಅತಿಥಿ ಗೃಹದಲ್ಲಿ ಸ್ಪೀಕರ್ ಜೊತೆ ಒಪ್ಪಂದ ಮಾಡಿಕೊಂಡು ನಿರ್ಣಯವನ್ನು ಸಿದ್ಧಪಡಿಸಲಾಗಿದೆ” ಎಂದು ಹೇಳಿದ್ದಾರೆ.
“ಜನಾದೇಶ (ವಿಧಾನಸಭಾ ಚುನಾವಣೆ) 370ನೇ ವಿಧಿಯ ರದ್ದತಿಯ ಪರವಾಗಿತ್ತು. ಏಕೆಂದರೆ, ನಾವು (ಬಿಜೆಪಿ) ಶೇ.26 ರಷ್ಟು ಮತಗಳನ್ನು ಪಡೆದಿದ್ದೇವೆ. ನ್ಯಾಷನಲ್ ಕಾನ್ಫರೆನ್ಸ್ 23 ಶೇ. ಮತಗಳನ್ನಷ್ಟೇ ಪಡೆದಿದೆ. ಸ್ಪೀಕರ್ ವಿಧಾನಸಭೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ನಾಯಕರಂತೆ ವರ್ತಿಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಉಪಮುಖ್ಯಮಂತ್ರಿ ಸುರೀಂದರ್ ಚೌಧರಿ ಅವರು ಆಗಸ್ಟ್ 5, 2019 ರಂದು ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿರುವ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿಯನ್ನು ಪುನಃಸ್ಥಾಪಿಸುವ ನಿರ್ಣಯವನ್ನು ಮಂಡಿಸಿದ್ದಾರೆ.
“ಈ ಕಲಾಪವು ಜಮ್ಮು ಮತ್ತು ಕಾಶ್ಮೀರದ ಜನರ ಗುರುತು, ಸಂಸ್ಕೃತಿ ಮತ್ತು ಹಕ್ಕುಗಳನ್ನು ರಕ್ಷಿಸುವ ವಿಶೇಷ ಸ್ಥಾನಮಾನ ಮತ್ತು ಸಾಂವಿಧಾನಿಕ ಖಾತರಿಗಳ ಪ್ರಾಮುಖ್ಯತೆಯನ್ನು ಪುನರುಚ್ಚರಿಸುತ್ತದೆ. 370ನೇ ವಿಧಿಯನ್ನು ಏಕಪಕ್ಷೀಯವಾಗಿ ತೆಗೆದು ಹಾಕಿದ್ದರ ಬಗ್ಗೆ ಕಳವಳ ವ್ಯಕ್ತಪಡಿಸುತ್ತದೆ” ಎಂದು ನಿರ್ಣಯ ಹೇಳಿದೆ.
ವಿಶೇಷ ಸ್ಥಾನಮಾನ ಮತ್ತು ಸಾಂವಿಧಾನಿಕ ಖಾತರಿಗಳ ಮರುಸ್ಥಾಪನೆಗಾಗಿ ಜಮ್ಮು ಮತ್ತು ಕಾಶ್ಮೀರದ ಚುನಾಯಿತ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಬೇಕು ಮತ್ತು 370ನೇ ವಿಧಿಯನ್ನು ಪುನಃಸ್ಥಾಪಿಸಲು ಸಾಂವಿಧಾನಿಕ ಕಾರ್ಯವಿಧಾನಗಳನ್ನು ರೂಪಿಸಲು ಕೇಂದ್ರ ಸರ್ಕಾರ ಅಧಿವೇಶನ ಕರೆಯಬೇಕು” ಎಂದು ನಿರ್ಣಯ ಆಗ್ರಹಿಸಿದೆ.
370ನೇ ವಿಧಿಯ ಪುನಃಸ್ಥಾಪನೆಗಾಗಿ ನಡೆಸುವ ಯಾವುದೇ ಪ್ರಕ್ರಿಯೆ ರಾಷ್ಟ್ರೀಯ ಏಕತೆ ಮತ್ತು ಜಮ್ಮು ಕಾಶ್ಮೀರದ ಜನರ ನ್ಯಾಯಸಮ್ಮತ ಆಕಾಂಕ್ಷೆಗಳನ್ನು ರಕ್ಷಿಸಬೇಕು ಎಂದು ನಿರ್ಣಯ ಒತ್ತಿ ಹೇಳಿದೆ.
ಇದನ್ನೂ ಓದಿ : ಅಕ್ರಮವಾಗಿ ಮನೆ ಧ್ವಂಸ : ಯುಪಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್


