ಸಂಗೀತಗಾರ ಟಿಎಂ ಕೃಷ್ಣ ಅವರಿಗೆ ಎಂ.ಎಸ್ ಸುಬ್ಬುಲಕ್ಷ್ಮಿ ಅವರ ಹೆಸರಿನಲ್ಲಿ ‘ಸಂಗೀತ ಕಲಾನಿಧಿ ಪ್ರಶಸ್ತಿ’ ನೀಡುವುದಕ್ಕೆ ಮದ್ರಾಸ್ ಹೈಕೋರ್ಟ್ ದಿ ಹಿಂದೂ ಪತ್ರಿಕೆಗೆ ಇಂದು (ನ.19) ನಿರ್ಬಂಧ ವಿಧಿಸಿದೆ.
ಸಂಗೀತ ಕಲಾನಿಧಿ ಪ್ರಶಸ್ತಿ ಮತ್ತು ನಗದು ಬಹುಮಾನವನ್ನು ಟಿಎಂ ಕೃಷ್ಣ ಅವರಿಗೆ ನೀಡಬಹುದು. ಆದರೆ, ಎಂ.ಎಸ್ ಸುಬ್ಬುಲಕ್ಷ್ಮಿ ಹೆಸರಿನಲ್ಲಿ ನೀಡಬಾರದು ಎಂದು ಕೋರ್ಟ್ ಹೇಳಿದೆ.
ಟಿಎಂ ಕೃಷ್ಣ ಅವರಿಗೆ ಎಂ.ಎಸ್ ಸುಬ್ಬುಲಕ್ಷ್ಮಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವುದು ಸುಬ್ಬುಲಕ್ಷ್ಮಿ ಅವರ ಆಶಯಕ್ಕೆ ವಿರುದ್ದವಾಗಿದೆ. ಹಾಗಾಗಿ, ಪ್ರಶಸ್ತಿ ನೀಡಲು ಅವಕಾಶ ಕೊಡಬಾರದು ಎಂದು ಸುಬ್ಬುಲಕ್ಷ್ಮಿ ಅವರ ಮೊಮ್ಮಗ ಶ್ರೀನಿವಾಸನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ ಜಯಚಂದ್ರನ್ ಅವರು ಮಧ್ಯಂತರ ಆದೇಶ ನೀಡಿದ್ದಾರೆ.
ಶ್ರೀನಿವಾಸನ್ ಅವರ ಅರ್ಜಿಯನ್ನು ಪ್ರಶ್ನಿಸಿ ಮ್ಯೂಸಿಕ್ ಅಕಾಡೆಮಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಾಲಯ, ಶ್ರೀನಿವಾಸನ್ ಅವರು ಸುಬ್ಬುಲಕ್ಷ್ಮಿ ಅವರ ಉಯಿಲಿನ ಫಲಾನುಭವಿಯಾಗಿರುವುದರಿಂದ ಅವರು ಅರ್ಜಿ ಸಲ್ಲಿಸಲು ಅರ್ಹರು ಎಂದಿದೆ.
ಟಿಎಂ ಕೃಷ್ಣ ಸುಬ್ಬುಲಕ್ಷ್ಮಿ ಅವರ ವಿರುದ್ದ ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದ್ದಾಗಿ ಬರೆದುಕೊಂಡಿದ್ದರು. ಅವರು ಸುಬ್ಬುಲಕ್ಷ್ಮಿಅವರ ಗೌರವ ಹಾಳು ಮಾಡಿದ್ದಾರೆ. ಸುಬ್ಬುಲಕ್ಷ್ಮಿ ಮಾಡಿರುವ ಸಾಧನೆಗಳನ್ನು ‘ಬ್ರಾಹ್ಮಣತ್ವ’ ಅಳವಡಿಸಿಕೊಂಡದಕ್ಕೆ ದೊರೆತ ಪ್ರತಿಫಲ ಎಂದು ಲೇವಡಿ ಮಾಡಿದ್ದಾರೆ ಎಂದು ಶ್ರೀನಿವಾಸನ್ ತನ್ನ ಅರ್ಜಿಯಲ್ಲಿ ಆರೋಪಿಸಿದ್ದರು.
ಅಲ್ಲದೆ, ಅಕ್ಟೋಬರ್ 30, 1997ರಂದು ಸುಬ್ಬುಲಕ್ಷ್ಮಿ ಅವರು ಬರೆದ ಕೊನೆಯ ಉಯಿಲಿನಲ್ಲಿ ತನ್ನ ಹೆಸರಿನಲ್ಲಿ ಯಾವುದೇ ಟ್ರಸ್ಟ್, ಪ್ರತಿಷ್ಠಾನ, ಸ್ಮಾರಕ ಸ್ಥಾಪಿಸಬಾರದು. ತನ್ನ ಹೆಸರಿನಲ್ಲಿ ನಿಧಿ/ದೇಣಿಗೆ ಪಡೆಯಬಾರದು ಎಂದು ಹೇಳಿದ್ದಾರೆ. ಹಾಗಾಗಿ, ಅವರ ಹೆಸರಿನಲ್ಲಿ ಪ್ರಶಸ್ತಿ ಕೊಡುವುದು ಅವರ ಆದೇಶಕ್ಕೆ ವಿರುದ್ದವಾಗಿದೆ ಎಂದು ಶ್ರೀನಿವಾಸನ್ ಹೇಳಿದ್ದರು.
ಇದನ್ನೂ ಓದಿ : ನರ್ಸಿಂಗ್ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವು : ತನಿಖೆಗೆ ಆದೇಶಿಸಿದ ಸರ್ಕಾರ


