ಸಿಡ್ನಿ: 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಖಾತೆಯನ್ನು ನಿಷೇಧಗೊಳಿಸುವ ಮಸೂದೆಗೆ ಅಸ್ಟ್ರೇಲಿಯಾದ ಜನಪ್ರತಿನಿಧಿಗಳ ಸಭೆಯು ಇಂದು ಅಂಗೀಕರಿಸಿದೆ.
ಪ್ರಮುಖ ಜಾಲತಾಣಗಳಾದ ಟಿಕ್‌ಟಾಕ್, ಫೇಸ್‌ಬುಕ್, ಸ್ನ್ಯಾಪ್‌ಚಾಟ್, ರೆಡ್ಡಿಟ್, ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್ ಮುಂತಾದವುಗಳು ತಮ್ಮ ಜಾಲತಾಣದಲ್ಲಿ ಚಿಕ್ಕ ಮಕ್ಕಳು ಖಾತೆಗಳನ್ನು ಹೊಂದುವುದನ್ನು ನಿಷೇಧಿಸುವುದು ಕಡ್ಡಾಯವಾಗಿದೆ. ಇದಕ್ಕೆ ತಪ್ಪಿದ ಜಾಲತಾಣಗಳಿಗೆ 50 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್‌ಗಳವರೆಗೆ ($ 33 ಮಿಲಿಯನ್) ದಂಡ ತೆತ್ತಾಬೇಕಿದೆ.
ಜನ ಪ್ರತಿನಿಧಿಗಳ ಸಭೆಯು ಇದನ್ನು ಮಸೂದೆಗೊಳಿಸಲು ಸೆನೆಟ್‌ಗೆ ವರ್ಗಾಯಿಸಿದೆ.
ಕಾಯ್ದೆಯ ಪರ 102 ಮತಗಳು ಬಿದ್ದರೆ ವಿರುದ್ಧವಾಗಿ 13 ಮತಗಳು ಚಲಾವಣೆಯಾಗಿದ್ದವು. ಜಾಲತಾಣಗಳಿಗೆ ವಯಸ್ಸಿನ ನಿರ್ಬಂಧವನ್ನು ಹೇಎ ಕಾರ್ಯಾಚರಣೆಗೆ ತರಬೇಕೆಂದು ಖಚಿತಪಡಿಸಲು ಒಂದು ವರ್ಷಗಳ ಕಾಲಾವಕಾಶವನ್ನು ನೀಡಲಾಗುತ್ತದೆ ಎಂದು ಜನ ಪ್ರತಿನಿಧಿಗಳ ಸಭೆಯು ಹೇಳಿದೆ.
ಈ ಮಸೂದೆ ಕುರಿತು ಸೆನೆಟ್ ಚರ್ಚಿಸಲಿದೆ ಎಂದು ಸಂವಹನ ಸಚಿವ ಮಿಚೆಲ್ ರೋಲ್ಯಾಂಡ್ ಹೇಳಿದ್ದಾರೆ.
ನಿಷೇಧವು ಮಕ್ಕಳನ್ನು ಪ್ರತ್ಯೇಕಿಸುತ್ತದೆ, ಸಾಮಾಜಿಕ ಮಾಧ್ಯಮದ ಸಕಾರಾತ್ಮಕ ಅಂಶಗಳಿಂದ ವಂಚಿತರನ್ನಾಗಿಸುತ್ತದೆ ಎಂದು ವಿಮರ್ಶಕರು ವಾದಿಸುತ್ತಿದ್ದಾರೆ.
ಆಧುನಿಕತೆ ಹೆಚ್ಚಾಗುತ್ತಾ ಹೋದಂತೆ ಜನರು ಹೊಸ ಹೊಸ ತಂತ್ರಜ್ಞಾನಕ್ಕೆ ತೆರೆದುಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಬಳಕೆಯೂ ಅಧಿಕವಾಗಿದ್ದು, ಮಕ್ಕಳು ಆನ್ಲೈನ್ ಪೋರ್ಟಲ್ ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂದು ಜನಪ್ರತಿನಿಧಿಗಳ ಸಭೆಯು ಹೇಳಿದೆ.
ಇತ್ತೀಚೆಗಿನ ದಿನಗಳಲ್ಲಿ ಮಕ್ಕಳು ಅತಿಯಾಗಿ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಈ ಸಾಮಾಜಿಕ ಜಾಲತಾಣಗಳು ಮಕ್ಕಳ ಮೇಲೆ ಸಾಕಷ್ಟು ಗಂಭೀರ ಪರಿಣಾಮಗಳನ್ನು ಬೀರುತ್ತಿದೆ. ಇದು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು ಎಲ್ಲರಿಗೂ ತಿಳಿದಿದೆ. ಈ ಹಿನ್ನಲೆಯಲ್ಲಿ ಆಸ್ಟ್ರೇಲಿಯಾದಲ್ಲಿ ಇದೀಗ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳ ಬಳಕೆ ಮಾಡುವುದನ್ನು ನಿಷೇಧಿಸಲಾಗುತ್ತಿದೆ ಎಂದು ಅದು ಹೇಳಿದೆ.
ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟೋನಿ ಆಲ್ಬನೀಸ್ ಈ ಬಗ್ಗೆ ಮಾತನಾಡಿ, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಲು ಕಾನೂನು ರೂಪಿಸುತ್ತೇವೆ. ಈ ಹಿನ್ನಲೆಯಲ್ಲಿ ವಯಸ್ಸಿನ ಮಿತಿಯನ್ನು ಪರಿಶೀಲಿಸುತ್ತಿದ್ದೇವೆ. ಎಂದು ಅವರು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮ ನಮ್ಮ ಮಕ್ಕಳಿಗೆ ಹಾನಿ ಮಾಡುತ್ತಿದೆ. ಇದರ ಅತಿಯಾದ ಬಳಕೆಯಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ. ಮೋಸ, ವಂಚನೆ ಸೇರಿದಂತೆ ಮಕ್ಕಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಸೋಶಿಯಲ್ ಮೀಡಿಯಾದಿಂದ ಮಕ್ಕಳನ್ನು ದೂರವಿಡುವ ಸಲುವಾಗಿ ಈ ಮಸೂದೆಗೆ ಅಂಗೀಕರ ನೀಡಲಾಗಿದೆ.. ನಾವು ಅಂಗೀಕರಿಸಿದ 12 ತಿಂಗಳ ನಂತರವೇ ಈ ಕಾನೂನು ಜಾರಿಗೆ ಬರಲಿವೆ ಎಂದು ಜನಪ್ರತಿನಿಧಿ ಸಭೆ ತಿಳಿಸಿದೆ.
ಮಕ್ಕಳು ಜಾಲತಾಣಗಳ ಬಳಕೆ ಮಾಡದಂತೆ ನಿರ್ಬಂಧಿಸುವ ಜವಾಬ್ದಾರಿ ಸಾಮಾಜಿಕ ಜಾಲತಾಣಗಳ ಸಂಸ್ಥೆಗಳ ಮೇಲಿದೆ. ಈ ಜವಾಬ್ದಾರಿ ಪೋಷಕರಾಗಲಿ ಅಥವಾ ಯುವಜನತೆಯ ಮೇಲೆ ಇರುವುದಿಲ್ಲ ಎಂದು ಪ್ರಧಾನಿ ಸ್ಪಷ್ಟ ಪಡಿಸಿದ್ದಾರೆ.
ಕಳೆದ ವರ್ಷ ಫ್ರಾನ್ಸ್ 15 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿಷೇಧ ಪ್ರಸ್ತಾಪಿಸಿತ್ತು. ಅಮೆರಿಕದಲ್ಲಿ 13 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ಪ್ರವೇಶಿಸಲು ಪೋಷಕರ ಒಪ್ಪಿಗೆಯನ್ನು ಪಡೆಯುವುದು ಕಡ್ಡಾಯವಾಗಿದೆ.
ಇದನ್ನೂ ಓದಿ...ಇಸ್ರೇಲ್-ಹಿಜ್ಬುಲ್ಲಾ ನಡುವೆ ಕದನ ವಿರಾಮ ಘೋಷಣೆ


