ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಹಿನ್ನೆಲೆ, ಔಷಧ ಖರೀದಿ ಮತ್ತು ಪ್ರಯೋಗಾಲಯಗಳಲ್ಲಿ ಔಷಧಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸುವಾಗ ಆಗಿರುವ ಲೋಪಗಳ ಕುರಿತು ತನಿಖೆಗೆ ತಂಡ ರಚಿಸಲಾಗಿದೆ.
ಟೆಂಡರ್ ಮೂಲಕ ಔಷಧಗಳ ಖರೀದಿ ಮತ್ತು ಎಂಪ್ಯಾನಲ್ಡ್ ಪ್ರಯೋಗಾಲಯಗಳಲ್ಲಿ ಔಷಧಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸುವಾಗ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಲ್ಲಿ (ಕೆಎಸ್‌ಎಂಎಸ್‌ಸಿಎಲ್) ಆಗಿರುವ ಲೋಪಗಳ ಕುರಿತು ಪರಿಶೀಲಿಸಿ ವರದಿ ನೀಡಲು ಕರ್ನಾಟಕ ಕೌಶಲ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಎಂ.ಕನಗವಲ್ಲಿ ನೇತೃತ್ವದ ಪರಿಶೀಲನಾ ತಂಡವನ್ನು ರಾಜ್ಯ ಸರ್ಕಾರ ರಚಿಸಿದೆ.
ತಂಡದಲ್ಲಿ ಔಷಧ ನಿಯಂತ್ರಣ ಇಲಾಖೆಯ ಕೇಂದ್ರ ಕಚೇರಿಯ ಸಹಾಯಕ ಔಷಧ ನಿಯಂತ್ರಕ ವೆಂಕಟೇಶ್, ಬೆಂಗಳೂರು ವೈದ್ಯಕೀಯ ಕಾಲೇಜಿನ ಮೈಕ್ರೋ ಬಯೋಲಜಿಸ್ಟ್ ಡಾ.ಅಸೀಮಾ ಬಾನು, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಕುಲಪತಿಯಿಂದ ನಾಮನಿರ್ದೇಶಿತರಾದ ಹಿರಿಯ ಫಾರ್ಮಾಲಜಿ ಪ್ರಾಧ್ಯಾಪಕರು ಇರಲಿದ್ದಾರೆ.
ಬಳ್ಳಾರಿ ಬಾಣಂತಿಯರ ಸಾವಿಗೆ ಕಾರಣವಾಗಿದೆ ಎನ್ನಲಾದ ಐವಿ ದ್ರಾವಣವನ್ನು ಪಶ್ಚಿಮ್ ಬಂಗಾ ಫಾರ್ಮಾಸ್ಯುಟಿಕಲ್ಸ್ ಕಂಪನಿಯಿಂದ ಖರೀದಿಸಲಾಗಿದೆ. ನ.30ರವರೆಗೆ 196 ಬ್ಯಾಚ್‌ಗಳಲ್ಲಿ ಈ ದ್ರಾವಣ ಖರೀದಿಸಲಾಗಿದೆ. ಇದರಲ್ಲಿ ಲೋಪಗಳಾಗಿದೆಯಾ? ಎಂಬ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಸರ್ಕಾರ ಆದೇಶದಲ್ಲಿ ಸೂಚಿಸಿದೆ.
5 ಲಕ್ಷ ರೂ. ಪರಿಹಾರ
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಝಮೀರ್ ಅಹ್ಮದ್ ತಿಳಿಸಿದ್ದಾರೆ. ಭಾನುವಾರ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ನಡೆದ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿದ ಅವರು, ಈಗಾಗಲೇ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ ಆಗಿದೆ. ಮುಖ್ಯಮಂತ್ರಿಗಳು ಇನ್ನೂ 3 ಲಕ್ಷ ಸೇರಿಸಲು ಹೇಳಿದ್ದಾರೆ. ಹಾಗಾಗಿ 5 ಲಕ್ಷ ಪರಿಹಾರ ನೀಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ.
ಪ್ರಕರಣದ ಹಿನ್ನೆಲೆ : ಹೆರಿಗೆಗೆಂದು ಬಳ್ಳಾರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಒಂಬತ್ತು ಮಂದಿ ಗರ್ಭಿಣಿಯರಾದ ನಂದಿನಿ, ಲಲಿತಮ್ಮ, ಸುಮಯ್ಯಾ, ರೋಜಾ, ಮುಸ್ಕಾನ್, ಅಮೃತಾ, ಮಹಾಲಕ್ಷ್ಮೀ, ರಾಜೇಶ್ವರಿ, ಸುಮಲತಾ ಎಂಬುವರಿಗೆ ನವೆಂಬರ್ 9ರಂದು ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು. ಇವರಲ್ಲಿ ನಂದಿನಿ, ಲಲಿತಮ್ಮ, ರೋಜಾ, ಮುಸ್ಕಾನ್ ಹಾಗೂ ಸುಮಯ್ಯಾ ಮೃತಪಟ್ಟಿದ್ದಾರೆ. ಇನ್ನುಳಿದ ನಾಲ್ವರು ಬಾಣಂತಿಯರು ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. ಹೆರಿಗೆ ಬಳಿಕ ನೀಡಲಾದ ಐವಿ ದ್ರಾವಣ ಬಾಣಂತಿಯರ ಸಾವಿಗೆ ಕಾರಣ ಎನ್ನಲಾಗಿದೆ.
ಇದನ್ನೂ ಓದಿ : ಇಂದಿನಿಂದ ಚಳಿಗಾಲದ ಅಧಿವೇಶನ : ಅಭಿವೃದ್ದಿ ಚರ್ಚೆ ಅನುಮಾನ


