ಜಮ್ಮು: ಹಿಂದುತ್ವ ಒಂದು ಕಾಯಿಲೆ. ಇದು ಹಿಂದುತ್ವವನ್ನು ಅವಮಾನಿಸುತ್ತದೆ. ಇದು ಅಲ್ಪಸಂಖ್ಯಾತರಿಗೆ ಅದರಲ್ಲೂ ಮುಸ್ಲಿಂರಿಗೆ ಕಿರುಕುಳ ಮತ್ತು ಅವರನ್ನು ಥಳಿಸಿ ಹತ್ಯೆ ಮಾಡುವುದಕ್ಕೆ ಕಾರಣವಾಗುತ್ತಿದೆ. ಬಿಜೆಪಿಯು ತನ್ನ ಮತಬ್ಯಾಂಕ್ ಅನ್ನು ಗಟ್ಟಿ ಮಾಡುವುದಕ್ಕೊಸ್ಕರ ಇದನ್ನು ಉಪಯೋಗಿಸುತ್ತಿದೆ ಎಂದು ಪಿಡಿಪಿ ಮುಖ್ಯಸ್ಥ ಮೆಹಬೂಬ್ ಮುಪ್ತಿಯ ಪುತ್ರಿ ಇಲ್ತಿಜಾ ಆರೋಪಿಸಿದ್ದಾರೆ.
ಇತ್ತೀಚೆಗೆ ಮಧ್ಯಪ್ರದೇಶದ ರತ್ನಂ ಜಿಲ್ಲೆಯಲ್ಲಿ ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಒತ್ತಾಯಿಸಿ ಮೂವರು ಮುಸ್ಲಿಂ ಮಕ್ಕಳಿಗೆ ಚಪ್ಪಲಿಯಲ್ಲಿ ಥಳಿಸಿದ ಪ್ರಕರಣಕ್ಕೆ ಲಿಂಕ್ ಮಾಡಿ ಈ “ಕಾಯಿಲೆ’ ಹೇಳಿಕೆಯನ್ನು ತನ್ನ ಎಕ್ಸ್ ಪೋಸ್ಟಿನಲ್ಲಿ ಬರೆದುಕೊಂಡಿದ್ದಾರೆ..
ನಂತರ ವರದಿಗಾರರೊಂದಿಗೆ ಮಾತನಾಡಿ, ತಮ್ಮ’ಹಿಂದುತ್ವ ಕಾಯಿಲೆ’ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಹಿಂದುತ್ವ ಮತ್ತು ಹಿಂದೂ ಧರ್ಮದ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಹಿಂದುತ್ವವು ದ್ವೇಷದ ತತ್ವವಾಗಿದೆ. 1940 ರ ದಶಕದಲ್ಲಿ ವೀರ್ ಸಾವರ್ಕರ್ ಅವರು ಹಿಂದೂಗಳ ಪ್ರಾಬಲ್ಯವನ್ನು ಸ್ಥಾಪಿಸಲು ಭಾರತದಲ್ಲಿ ಈ ಹಿಂದುತ್ವ ಸಿದ್ಧಾಂತವನ್ನು ಹರಡಿದರು ಮತ್ತು ಭಾರತವು ಹಿಂದೂಗಳಿಗೆ ಸೇರಿದ್ದು ಮತ್ತು ಹಿಂದೂಗಳಿಗೆ ಎಂಬುದನ್ನು ಈ ತತ್ವ ಒಳಗೊಂಡಿದೆ. ಇಸ್ಲಾಂನಂತೆ, ಹಿಂದೂ ಧರ್ಮವು ಜಾತ್ಯತೀತತೆ, ಪ್ರೀತಿ ಮತ್ತು ಸಹಾನುಭೂತಿಯನ್ನು ಉತ್ತೇಜಿಸುವ ಒಂದು ಧರ್ಮವಾಗಿದೆ. ಹಿಂದೂ ಧರ್ಮವನ್ನು ವಿರೂಪಗೊಳಿಸುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ನಾನು ಹಿಂದುತ್ವವನ್ನು ಒಂದು ಕಾಯಿಲೆ ಎಂದು ಟೀಕಿಸಿದ್ದೇನೆ ಎಂದು ಇಲ್ತಿಜಾ ಮುಫ್ತಿ ಹೇಳಿದ್ದಾರೆ.
ಇಲ್ತಿಜಾ ಮುಫ್ತಿ ಬಳಸಿರುವ ಭಾಷೆ ತುಂಬಾ ಅವಹೇಳನಕಾರಿ ಎಂದು ಬಿಜೆಪಿ ನಾಯಕ ರವೀಂದ್ರ ರೈನಾ ಹೇಳಿದ್ದಾರೆ. ಪಿಡಿಪಿ ನಾಯಕಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಪಿಡಿಪಿ ನಾಯಕಿ ಅತ್ಯಂತ ಅವಹೇಳನಕಾರಿ ಭಾಷೆಯನ್ನು ಬಳಸಿದ್ದಾರೆ. ಈ ರೀತಿಯ ಭಾಷೆಯನ್ನು ಬಳಸಬಾರದು. ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಅವಹೇಳನಕಾರಿ ಭಾಷೆಯನ್ನು ಬಳಸಬಾರದು. ಪಿಡಿಪಿ ನಾಯಕಿ ಇಲ್ತಿಜಾ ಮುಫ್ತಿ ಅವರ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ….‘ಜೈ ಶ್ರೀರಾಮ್’ ಕೂಗುವಂತೆ ಒತ್ತಾಯಿಸಿ ಮೂವರು ಮುಸ್ಲಿಂ ಮಕ್ಕಳಿಗೆ ಚಪ್ಪಲಿಯಿಂದ ಥಳಿತ : ಓರ್ವನ ಬಂಧನ


