ಕರ್ನಾಟಕದ ಮಾಜಿ ಮುಖ್ಯಮಂತ್ರಿ, ದೇಶದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ ಎಸ್.ಎಂ ಕೃಷ್ಣ ಅವರು ಬೆಂಗಳೂರಿನ ಸದಾಶಿವನಗರದ ತಮ್ಮ ಮನೆಯಲ್ಲಿ ಇಂದು (ಡಿ.10) ನಿಧನರಾಗಿದ್ದಾರೆ.
ಮಾಜಿ ರಾಜ್ಯಪಾಲ, ಕೇಂದ್ರದ ಮಾಜಿ ಸಚಿವರೂ ಆಗಿದ್ದ ಎಸ್.ಎಂ ಕೃಷ್ಣ ಅವರಿಗೆ 93 ವರ್ಷ ವಯಸ್ಸಾಗಿತ್ತು. ಅವರು ಕಳೆದ 6 ತಿಂಗಳಿನಿಂದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಇಂದು ಬೆಳಗಿನ ಜಾವ 2.30 ಸುಮಾರಿಗೆ ವಿಧಿವಶರಾಗಿದ್ದಾರೆ.
ಎಸ್.ಎಂ ಕೃಷ್ಣ ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದವರು. ಎಸ್.ಸಿ ಮಲ್ಲಯ್ಯ ಮತ್ತು ತಾಯಮ್ಮ ದಂಪತಿಯ ಪುತ್ರನಾಗಿ ಮೇ 1, 1932ರಲ್ಲಿ ಜನಿಸಿದ್ದರು.
ರಾಜಕೀಯ ಜೀವನದಲ್ಲಿ ಅವರು ಕರ್ನಾಟಕದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವಿಧಾನಸಭೆ ಸ್ಪೀಕರ್, ವಿದೇಶಾಂಗ ವ್ಯವಹಾರಗಳ ಸಚಿವ ಹಾಗೂ ಮಹಾರಾಷ್ಟ್ರದ ರಾಜ್ಯಪಾಲರಾಗಿ ಉನ್ನತ ಹುದ್ದೆಗಳನ್ನು ನಿಭಾಯಿಸಿದ್ದರು.
ಮೃತರ ಪಾರ್ಥೀವ ಶರೀರವನ್ನು ಇಂದು (ಮಂಗಳವಾರ) ಇಡೀ ದಿನ ಸದಾಶಿವನಗರದ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುವುದು. ನಾಳೆ (ಬುಧವಾರ) ಅವರ ಹುಟ್ಟೂರು ಮಂಡ್ಯ ಜಿಲ್ಲೆಯ ಮದ್ದೂರಿನ ಸೋಮನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : 2025ರ ಫೆಬ್ರವರಿ ಕೊನೆಯಲ್ಲಿ ಪ್ರೌಢಶಾಲಾ ಸಹ ಶಿಕ್ಷಕರಿಗೆ ಬಡ್ತಿ ಪೂರ್ಣ – ಸಚಿವ ಮಧು ಬಂಗಾರಪ್ಪ


