ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಅಲಹಾಬಾದ್ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಮಾಡಿರುವ ಭಾಷಣದ ಕುರಿತು ಸುಪ್ರೀಂ ಕೋರ್ಟ್ ಮಾಹಿತಿ ಕೇಳಿದೆ ಎಂದು ವರದಿಯಾಗಿದೆ.
ನ್ಯಾಯಮೂರ್ತಿ ಯಾದವ್ ವಿವಾದಾತ್ಮಕ ಭಾಷಣ ಮಾಡಿರುವ ಕುರಿತು ಪ್ರಕಟಗೊಂಡಿರುವ ಸುದ್ದಿಗಳನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್, ಯಾದವ್ ಮಾಡಿರುವ ಭಾಷಣದ ಪೂರ್ಣಪಾಠ ಪಡೆದು ಮಾಹಿತಿ ನೀಡುವಂತೆ ಅಲಹಾಬಾದ್ ಹೈಕೋರ್ಟ್‌ಗೆ ನಿರ್ದೇಶನ ನೀಡಿದೆ.
ನ್ಯಾ.ಯಾದವ್ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರು ಹಲವು ದೂರುಗಳನ್ನು ಸ್ವೀಕರಿಸಿದ ಬಳಿಕ ಸುಪ್ರೀಂ ಕೋರ್ಟ್ ಮಾಹಿತಿ ಕೋರಿದೆ.
ನ್ಯಾ. ಯಾದವ್ ಅವರ ಭಾಷಣದ ಕುರಿತು ಕಳವಳ ವ್ಯಕ್ತಪಡಿಸಿ ಸೋಮವಾರ (ಡಿ.9) ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್ ಮತ್ತು ಕ್ಯಾಂಪೇನ್ ಫಾರ್ ಜುಡೀಶಿಯಲ್ ಅಕೌಂಟೆಬಿಲಿಟಿ ಅಂಡ್ ರಿಫಾರ್ಮ್ಸ್ (ಸಿಜೆಎಆರ್) ಸಿಜೆಐ ಸಂಜೀವ್ ಖನ್ನಾ ಅವರಿಗೆ ಪತ್ರ ಬರೆದಿದ್ದರು.
ನ್ಯಾ. ಶೇಖರ್ ಕುಮಾರ್ ಯಾದವ್ ವಿರುದ್ಧ ಆಂತರಿಕ ತನಿಖೆ ನಡೆಸುವಂತೆ ಮತ್ತು ವಿಚಾರಣೆಗೆ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಅವರಿಂದ ವಾಪಸ್ ಪಡೆಯುವಂತೆ ಸಿಜೆಎಆರ್ ತನ್ನ ಪತ್ರದಲ್ಲಿ ಒತ್ತಾಯಿಸಿತ್ತು. ಯಾದವ್ ಅವರ ಹೇಳಿಕೆಗಳು ಅವರ ನ್ಯಾಯಾಂಗ ಕಾರ್ಯಗಳ ನಿರ್ವಹಣೆಯಲ್ಲಿ ನಿಷ್ಪಕ್ಷಪಾತ, ನ್ಯಾಯಸಮ್ಮತತೆ ಮತ್ತು ತಟಸ್ಥತೆಯ ಕೊರತೆಯನ್ನು ಸೂಚಿಸುತ್ತದೆ ಎಂದಿತ್ತು.
ನ್ಯಾ. ಯಾದವ್ ಅವರ ಹೇಳಿಕೆ ಇಡೀ ನ್ಯಾಯಾಂಗ ವ್ಯವಸ್ಥೆಗೆ ಕಳಂಕ ತರುತ್ತವೆ. ಇಂತಹ ಪಕ್ಷಪಾತ ಪ್ರದರ್ಶಿಸುವ ವ್ಯಕ್ತಿಗಳಿಗೆ ನ್ಯಾಯಾಂಗದಲ್ಲಿ ಸ್ಥಾನವಿಲ್ಲ ಎಂದು ರಾಜ್ಯಸಭೆಯ ಮಾಜಿ ಸಂಸದೆಯೂ ಆಗಿರುವ ಬೃಂದಾ ಕಾರಟ್ ಸಿಜೆಐಗೆ ಬರೆದ ಪತ್ರದಲ್ಲಿ ಹೇಳಿದ್ದರು.
ನ್ಯಾಯಾಧೀಶರು ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಪೂರ್ವಾಗ್ರಹ ಪೀಡಿತ ಅಭಿಪ್ರಾಯಗಳನ್ನು ಹೊಂದಿರುವ ಕಾರಣ ಅವರಿಂದ ಯಾವುದೇ ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ನ್ಯಾಯಮೂರ್ತಿ ಯಾದವ್ ಅವರ ಭಾಷಣವು ಸಂವಿಧಾನದ ಮೇಲಿನ ದಾಳಿಯಾಗಿದೆ ಭಾರತ ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ತತ್ವಗಳಿಗೆ ಅವಮಾನವಾಗಿದೆ ಎಂದು ಸಿಪಿಐ(ಎಂ) ಪಾಲಿಟ್‌ಬ್ಯುರೊ ಸದಸ್ಯ ಬೃಂದಾ ಕಾರಟ್ ಅಸಮಧಾನ ವ್ಯಕ್ತಪಡಿಸಿದ್ದರು.
ನ್ಯಾ. ಯಾದವ್ ಅವರ ವಿವಾದಾತ್ಮಕ ಭಾಷಣ ಲೋಕಸಭೆಯಲ್ಲೂ ಪ್ರತಿಧ್ವನಿಸಿದೆ. ಸಂಸದ ಅಸಾದುದ್ದೀನ್ ಓವೈಸಿ ಅವರು ಯಾದವ್ ಅವರನ್ನು ಪದಚ್ಯುತಿಗೊಳಿಸುವ ನೋಟಿಸ್‌ಗೆ ಸಹಿ ಹಾಕಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಓವೈಸಿ, “ನ್ಯಾಯಾಧೀಶರ ನಡವಳಿಕೆಯು ಸುಪ್ರೀಂ ಕೋರ್ಟ್‌ನ ‘ನ್ಯಾಯಾಂಗ ಜೀವನದ ಮೌಲ್ಯಗಳ ಮರುಸ್ಥಾಪನೆ’ ನಿಯಮ ಸೇರಿದಂತೆ ಸಾಂವಿಧಾನಿಕ ಮೌಲ್ಯಗಳನ್ನು ಉಲ್ಲಂಘಿಸಿದೆ” ಎಂದಿದ್ದಾರೆ.
I have signed a notice seeking removal proceedings against Shekhar Yadav, judge of Allahabad High Court. The process was initiated by @RuhullahMehdi. The judge’s behaviour violates constitutional norms, including the Supreme Court's “Restatement of Values of Judicial Life.”
The…
— Asaduddin Owaisi (@asadowaisi) December 10, 2024
“ನನ್ನ ನೋಟಿಸ್ ಅನ್ನು ಲೋಕಸಭಾ ಸ್ಪೀಕರ್ ಪರಿಗಣಿಸಬೇಕಾದರೆ 100 ಲೋಕಸಭಾ ಸದಸ್ಯರ ಸಹಿ ಬೇಕಾಗಿದೆ” ಎಂದು ಓವೈಸಿ ತಿಳಿಸಿದ್ದಾರೆ.
ನ್ಯಾ. ಶೇಖರ್ ಕುಮಾರ್ ಯಾದವ್ ಭಾಷಣಕ್ಕೆ ಅಖಿಲ ಭಾರತ ವಕೀಲರ ಒಕ್ಕೂಟ ಕೂಡ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ರಾಷ್ಟ್ರಪತಿ ಮತ್ತು ಸಿಜೆಐಗೆ ಪತ್ರ ಬರೆದಿರುವ ಒಕ್ಕೂಟ, “ಯಾದವ್ ಅವರ ಭಾಷಣ ಮುಸ್ಲಿಂ ಅಲ್ಪಸಂಖ್ಯಾತರರ ವಿರುದ್ದದ ದ್ವೇಷ ಭಾಷಣವಾಗಿದೆ”ಎಂದಿದೆ. ಯಾದವ್ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
1/2 This morning, AILAJ has written a complaint to the Chief Justice of India seeking for immediate action against Jst. Shekhar Kumar Yadav, Allahabad High Court, for his open bigotry, prejudice and unconstitutional conduct unbecoming of a judge of the High Court. pic.twitter.com/O0Jub78gYA
— AILAJ_HQ (@AilajHq) December 10, 2024
ಇದನ್ನೂ ಓದಿ : ಬಹು ಸಂಖ್ಯಾತರ ಇಚ್ಛೆಯಂತೆ ದೇಶ ನಡೆಯಲಿದೆ ; ‘ಕಠ್‌ಮುಲ್ಲಾಗಳು’ ದೇಶ ವಿರೋಧಿಗಳು : ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ!


