ಕೃತಕ ಬುದ್ಧಿಮತ್ತೆ (Artificial Intelligence) ಸಂಸ್ಥೆ ಓಪನ್ ಎಐ (OpenAi) ಕಾರ್ಯಾಚಟುವಟಿಕೆಗಳು ಕಾನೂನನ್ನು ಉಲ್ಲಂಘಿಸುತ್ತಿವೆ ಎಂದು ಆರೋಪಿಸಿದ್ದ ಸಂಸ್ಥೆಯ ಮಾಜಿ ಉದ್ಯೋಗಿ ಸುಚಿರ್ ಬಾಲಾಜಿ ಸ್ಯಾನ್ ಫ್ರಾನ್ಸಿಸ್ಕೋದ ಅವರ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಭಾರತ ಮೂಲದ 26 ವರ್ಷದ ಸುಚಿರ್ ಬಾಲಾಜಿ ನವೆಂಬರ್ 26ರಂದು ಮೃತಪಟ್ಟಿದ್ದು, ತಡವಾಗಿ ವಿಷಯ ಬೆಳಕಿಗೆ ಬಂದಿದೆ ಎಂದು ಕೆಲ ಮಾಧ್ಯಮ ವರದಿಗಳು ಹೇಳಿವೆ.
ಬಾಲಾಜಿ ಅವರು ಇತ್ತೀಚೆಗೆ ಓಪನ್ ಎಐಯ ಕಾರ್ಯಚಟುವಟಿಕೆಗಳ ಬಗ್ಗೆ ಬಹಿರಂಗ ಟೀಕೆ ಮಾಡಿ ಗಮನ ಸೆಳೆದಿದ್ದರು. ವಿಶೇಷವಾಗಿ ಚಾಟ್‌ಜಿಪಿಟಿಯಂತಹ ಅದರ ಎಐ ವ್ಯವಸ್ಥೆಗಳ ತರಬೇತಿಯಲ್ಲಿ ಹಕ್ಕುಸ್ವಾಮ್ಯ ಉಲ್ಲಂಘನೆಗಳ ಬಗ್ಗೆ ಆರೋಪಿಸಿದ್ದರು. ಈ ಬೆನ್ನಲ್ಲೇ ಅವರು ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಸುಚಿರ್ ಬಾಲಾಜಿಯವರ ಸಾವಿಗೆ ಹಲವು ಟೆಕ್ ಗಣ್ಯರು ಸಂತಾಪ ಸೂಚಿಸಿದ್ದಾರೆ. ಉದ್ಯಮಿ ಹಾಗೂ ಟೆಸ್ಲಾ ಕಂಪನಿಯ ಮುಖ್ಯಸ್ಥ ಎಲಾನ್ ಮಸ್ಕ್ ಕೂಡ ಪ್ರತಿಕ್ರಿಯಿಸಿದ್ದಾರೆ. ಎಲಾನ್ ಮಸ್ಕ್ ಕೂಡ ಓಪನ್ ಎಐ ವಿರುದ್ದ ಈ ಹಿಂದೆ ಕೆಲವು ಆರೋಪಗಳನ್ನು ಮಾಡಿದ್ದರು.
ಓಪನ್ ಎಐ ಸಂಸ್ಥೆಯಲ್ಲಿ ಸಂಶೋಧಕರಾಗಿದ್ದ ಸುಚಿರ್ ಬಾಲಾಜಿಯವರು ಕಳೆದ ಆಗಸ್ಟ್‌ನಲ್ಲಿ ಕಂಪನಿಯನ್ನು ತೊರೆದಿದ್ದರು. ಆ ಬಳಿಕ ಅವರು ನ್ಯೂಯಾರ್ಕ್ ಟೈಮ್ಸ್‌ಗೆ ಬರೆದ ಲೇಖನದಲ್ಲಿ ಓಪನ್ ಎಐ ‘ಚಾಟ್‌ಜಿಪಿಟಿ’ಗೆ ತರಬೇತಿ ನೀಡಲು ಕಾಪಿ ರೈಟ್ ವಸ್ತುಗಳನ್ನು ಬಳಸುತ್ತಿದೆ ಎಂದು ಆರೋಪಿಸಿದ್ದರು. ಅಮೆರಿಕದ ಕಾಪಿ ರೈಟ್ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದಿದ್ದರು.
ವರದಿಗಳ ಪ್ರಕಾರ, ಸುಚಿರ್ ಬಾಲಾಜಿಯ ಶವ ದೊರೆತಿರುವ ಅಪಾರ್ಟ್‌ಮೆಂಟ್‌ನಲ್ಲಿ ಮಹಜರು ನಡೆಸಿರುವ ಸ್ಯಾನ್ ಫ್ರಾನ್ಸಿಸ್ಕೋ ಪೊಲೀಸರು, ಬಾಲಾಜಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿನ ಹಿಂದೆ ಯಾವುದೇ ಅಪರಾಧ ಕೃತ್ಯ ನಡೆದಿರುವುದಕ್ಕೆ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಆಂತರಿಕ, ಬಾಹ್ಯ ಕಲಹ : ನಿರಾಶ್ರಿತರಾದ 1.1 ಮಿಲಿಯನ್ ಸಿರಿಯಾ ಜನತೆ


