ನವದೆಹಲಿ: ಅಂಬೇಡ್ಕರ್ ಕುರಿತು ಅಮಿತ್ ಶಾ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಮತ್ತು ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಆಮ್ ಆದ್ಮಿ ಪಕ್ಷ (ಎಎಪಿ)ವು ಬಿಜೆಪಿ ಪ್ರಧಾನ ಕಚೇರಿಯ ಹೊರಗೆ ಬುಧವಾರ ಪ್ರತಿಭಟನೆ ನಡೆಸಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್ ಅವರು, ಅಮಿತ್ ಶಾ ಅವರ ಹೇಳಿಕೆ ಡಾ.ಬಿ.ಆರ್.ಅಂಬೇಡ್ಕರ್ ಗೆ ಅವಮಾನ ಮಾಡಿದಂತೆ ಎಂದು ಹೇಳಿದ್ದಾರೆ.
ಅಂಬೇಡ್ಕರ್, ಅಂಬೇಡ್ಕರ್ ಎಂದು ಪಠಿಸುವುದು ನಮಗೆ ಏನೂ ಸಹಾಯ ಮಾಡುವುದಿಲ್ಲ; ದೇವರನ್ನು ಸ್ತುತಿಸುವುದೇ ಉತ್ತಮ. ಇದರಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಅಮಿತ್ ಶಾ ಅವರು ಡಾ. ಅಂಬೇಡ್ಕರ್ ಅವರ ಕುರಿತು ಲೇವಡಿ ಮಾಡಿದ್ದರು. ಈ ದೇಶದ ಬಡವರು, ತುಳಿತಕ್ಕೊಳಗಾದವರಿಗೆ, ಅಂಚಿನಲ್ಲಿರುವವರಿಗೆ ಮತ್ತು ಹಿಂದುಳಿದವರಿಗ ಡಾ. ಅಂಬೇಡ್ಕರ್ ದೇವರಿಗಿಂತ ಕಡಿಮೆಯಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಜನ ಸಾವಿನ ನಂತರ ಸ್ವರ್ಗವನ್ನು ತಲುಪುತ್ತಾರೆಯೇ ಎಂದು ನಾವು ಹೇಳಲು ಸಾಧ್ಯವಿಲ್ಲ, ಆದರೆ ಭೂಮಿಯ ಮೇಲೆ, ಲಕ್ಷಾಂತರ ಹಿಂದುಳಿದ ಜನರು ತಮ್ಮ ಘನತೆ ಮತ್ತು ಹಕ್ಕುಗಳಿಗೆ ಸಂವಿಧಾನವನ್ನು ನೀಡಿದ ಡಾ. ಅಂಬೇಡ್ಕರ್ ಅವರಿಗೆ ಋಣಿಯಾಗಿದ್ದಾರೆ. ಅಮಿತ್ ಶಾ ಅವರ ಹೇಳಿಕೆಯು ಲಕ್ಷಾಂತರ ಭಾರತೀಯ ಜನರ ಭಾವನೆಗಳನ್ನು ತೀವ್ರವಾಗಿ ಘಾಸಿಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ.
ಅಮಿತ್ ಶಾ ಅವರನ್ನು ಪ್ರಧಾನಿ ಮೋದಿ ಸಮರ್ಥಿಸಿಕೊಂಡ ರೀತಿ ನೋಡಿದರೆ ಇದು ಸ್ವಯಂಪ್ರೇರಿತ ಹೇಳಿಕೆಯಲ್ಲ ಎಂದು ತೋರುತ್ತದೆ. ಸಂಸತ್ತಿನಲ್ಲಿ ಡಾ. ಅಂಬೇಡ್ಕರ್ ಅವರನ್ನು ಅವಮಾನಿಸಲು ಬಿಜೆಪಿ ನಡೆಸಿದ ವ್ಯವಸ್ಥಿತ ತಂತ್ರವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ನಾವು ಇದನ್ನು ಬಲವಾಗಿ ಖಂಡಿಸುತ್ತೇವೆ ಎಂದು ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಈಗ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಅದು ಡಾ. ಅಂಬೇಡ್ಕರ್ ಅವರು ನಮಗೆ ನೀಡಿದ ಸಂವಿಧಾನದ ವಿರುದ್ಧವಾಗಿದ್ದಾರೆ. ಡಾ. ಅಂಬೇಡ್ಕರ್ ಜೊತೆ ನಿಲ್ಲುತ್ತಾರೆಯೇ ಅಥವಾ ಬಿಜೆಪಿಯೊಂದಿಗೆ ನಿಲ್ಲುತ್ತಾರೆಯೇ? ಎಂಬುದನ್ನು ಬಿಜೆಪಿ ಬೆಂಬಲಿಗರು ಈಗ ಆಯ್ಕೆ ಮಾಡಬೇಕು. ಅವರು ಎರಡನ್ನೂ ಬೆಂಬಲಿಸಲು ಸಾಧ್ಯವಿಲ್ಲ. ಬಿಜೆಪಿಯ ನಾಯಕತ್ವವು ಡಾ. ಅಂಬೇಡ್ಕರ್ ಬಗ್ಗೆ ತಮ್ಮ ತಿರಸ್ಕಾರವನ್ನು ತೋರಿಸಿದೆ ಮತ್ತು ನಾವು ಗೃಹ ಸಚಿವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸುತ್ತೇವೆ. ಯಾವುದೇ ಕ್ರಮವು ಅಮಿತ್ ಶಾ ಮಾಡಿದ ಹಾನಿಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಾಧ್ಯವಿಲ್ಲ. ಆದರೆ ಶಾರ ಇಂತಹ ಅಗೌರವವನ್ನು ನಾವ ಸಹಿಸುವುದಿಲ್ಲ ಎಂಬ ಸಂದೇಶವನ್ನು ಕಳುಹಿಸುವುದು ಅತ್ಯಗತ್ಯ ಎಂದು ಅವರು ಹೇಳಿದರು.
ಬಿಜೆಪಿಯ ಉನ್ನತ ನಾಯಕತ್ವವು ಡಾ. ಅಂಬೇಡ್ಕರ್ ಅವರನ್ನು ಹೇಗೆ ಅವಮಾನಿಸಿದೆ ಎಂಬುದನ್ನು ನಾವು ಪ್ರತಿ ಮನೆಗೂ ಕೊಂಡೊಯ್ಯುತ್ತೇವೆ. ದೆಹಲಿ ಮತ್ತು ದೇಶದಾದ್ಯಂತ, ಬಿಜೆಪಿಯು ನಮ್ಮ ಸಂವಿಧಾನ ಶಿಲ್ಪಿಯನ್ನು ಹೇಗೆ ಅಗೌರವಗೊಳಿಸುತ್ತಿದೆ ಎಂಬುದರ ಬಗ್ಗೆ ಜನತೆ ತಿಳಿದುಕೊಳ್ಳಬೇಕಿದೆ ಎಂದು ಎಎಪಿಯ ಮಾಜಿ ಮುಖ್ಯಮಂತ್ರಿ ಪ್ರತಿಪಾದಿಸಿದರು.
ಏತನ್ಮಧ್ಯೆ, ಹಿರಿಯ ಆಪ್ ನಾಯಕ ಮನೀಶ್ ಸಿಸೋಡಿಯಾ ಮಾತನಾಡಿ, “ಡಾ. ಅಂಬೇಡ್ಕರ್ ಅವರ ಬಗ್ಗೆ ಹೆಚ್ಚುತ್ತಿರುವ ಗೌರವದಿಂದ ಗೃಹ ಸಚಿವ ಅಮಿತ್ ಶಾ ಸಿಟ್ಟಿಗೆದ್ದಿದ್ದಾರೆ. ಇಂದು ಇಡೀ ರಾಷ್ಟ್ರವು ‘ಅಂಬೇಡ್ಕರ್, ಅಂಬೇಡ್ಕರ್’ ಎಂದು ಜಪಿಸುತ್ತಿದೆ ಎಂದು ಅವರು ಹೇಳಿದರು.
ಸಂಸದ ಸಂಜಯ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಡಾ. ಸಂದೀಪ್ ಪಾಠಕ್, ಮುಖ್ಯಮಂತ್ರಿ ಅತಿಶಿ ಮತ್ತು ಕ್ಯಾಬಿನೆಟ್ ಸಚಿವ ಸೌರಭ್ ಭಾರದ್ವಾಜ್ ಸೇರಿದಂತೆ ಹಲವು ಶಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ….ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ : ಮಂಡ್ಯದಲ್ಲಿ ಕುರಿ, ಕೋಳಿ ಸಂಗ್ರಹಕ್ಕೆ ಚಾಲನೆ


