“ಭಾರತದ ಸಂವಿಧಾನದ ಶಿಲ್ಪಿ ರೂಪಿಸಿದ ವಿಚಾರಗಳು ಜನರ ಭಾವನೆಗಳನ್ನು ಕೆರಳಿಸಲು ದುರುಪಯೋಗಪಡಿಸಿಕೊಳ್ಳುವ ಬದಲು ಪ್ರಗತಿಗೆ ಪ್ರೇರೇಪಿಸಬೇಕು” ಎಂದು ನಟ ಕಮಲ್ ಹಾಸನ್ ಅವರು ಹೇಳಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯ ಕುರಿತು ಎದ್ದಿರುವ ವಿರೋಧದ ನಡುವೆ, ಅವರ ಈ ಪ್ರತಿಕ್ರಿಯೆ ಬಂದಿದೆ.
ಸಂವಿಧಾನವನ್ನು ಅಂಗೀಕರಿಸಿ 75 ವರ್ಷಗಳನ್ನು ಪೂರೈಸುತ್ತಿರುವ ಸ್ಮರಣಾರ್ಥವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳ ಕುರಿತು ಚರ್ಚೆ ನಡೆಸುವಂತೆ ಕಮಲ್ ಹಾಸನ್ ಸಂಸತ್ತಿನಲ್ಲಿ ಒತ್ತಾಯಿಸಿದರು.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಅಂಬೇಡ್ಕರ್ ಅವರ ಕೊಡುಗೆಗಳನ್ನು ಆಧುನಿಕ ಭಾರತದ ಅಡಿಪಾಯ ಎಂದು ವಿವರಿಸಿದ್ದಾರೆ. “ಗಾಂಧೀಜಿ ಭಾರತವನ್ನು ವಿದೇಶಿ ದಬ್ಬಾಳಿಕೆಯಿಂದ ಮುಕ್ತಗೊಳಿಸಿದರೆ, ಡಾ. ಅಂಬೇಡ್ಕರ್ ಭಾರತವನ್ನು ತನ್ನದೇ ಆದ ಪ್ರಾಚೀನ ಸಾಮಾಜಿಕ ಅನ್ಯಾಯದ ಸಂಕೋಲೆಯಿಂದ ಬಿಡುಗಡೆ ಮಾಡಿದರು” ಎಂದು ಅವರು ಹೇಳಿದ್ದಾರೆ.
Ambedkar’s ideas are the building block on which modern India is built. While Gandhiji freed India from foreign oppression, Dr. Ambedkar liberated India from its own ancient shackles of social injustice.
Every Indian who proudly believes and fights for Babasaheb's vision of…
— Kamal Haasan (@ikamalhaasan) December 19, 2024
ಅಂಬೇಡ್ಕರ್ ಅವರ ಪರಂಪರೆಯನ್ನು ರಕ್ಷಿಸುವ ಮಹತ್ವವನ್ನು ಅವರು ಒತ್ತಿ ಹೇಳಿ, ಅದರ ದುರುಪಯೋಗದ ವಿರುದ್ಧ ಎಚ್ಚರಿಕೆ ನೀಡಿದರು. “ಎಲ್ಲರೂ ಸಮಾನವಾಗಿ ಹುಟ್ಟಿರುವ ಮುಕ್ತ ಮತ್ತು ನ್ಯಾಯಯುತ ಭಾರತಕ್ಕಾಗಿ ಬಾಬಾಸಾಹೇಬರ ದೃಷ್ಟಿಕೋನವನ್ನು ಹೆಮ್ಮೆಯಿಂದ ನಂಬುವ, ಹೋರಾಡುವ ಪ್ರತಿಯೊಬ್ಬ ಭಾರತೀಯನು ಎಂದಿಗೂ ಮಹಾನ್ ವ್ಯಕ್ತಿಯ ಪರಂಪರೆಗೆ ಕಳಂಕವಾಗುವುದನ್ನು ಸಹಿಸುವುದಿಲ್ಲ” ಎಂದು ಅವರು ಬರೆದುಕೊಂಡಿದ್ದಾರೆ.
ಅಂಬೇಡ್ಕರ್ ಅವರ ವಿಚಾರಗಳ ಕುರಿತು ಸಂಸತ್ತಿನಲ್ಲಿ ಅರ್ಥಪೂರ್ಣ ಚರ್ಚೆಗೆ ಕರೆ ನೀಡಿದ ಹಾಸನ್, ಇಂತಹ ಚರ್ಚೆಗಳು ಪ್ರಗತಿಗೆ ಪ್ರೇರಣೆಯಾಗಬೇಕು ಎಂದರು. “ಆಧುನಿಕ ಮತ್ತು ನೈತಿಕ ಜಾಗತಿಕ ಶಕ್ತಿಯಾಗಿ, ನಾವು ಸಂಸತ್ತಿನ ಗೌರವಾನ್ವಿತ ಸಭಾಂಗಣಗಳಲ್ಲಿ ಅಂಬೇಡ್ಕರ್ ಅವರ ವಿಚಾರಗಳ ಅರ್ಥಪೂರ್ಣ ಚರ್ಚೆಯೊಂದಿಗೆ ನಮ್ಮ ಸಂವಿಧಾನದ 75 ವರ್ಷಗಳ ಅಂಗೀಕಾರವನ್ನು ಸ್ಮರಿಸಬೇಕು” ಎಂದು ಅವರು ಹೇಳಿದರು.
ಇದನ್ನೂ ಓದಿ; ಅಮಿತ್ ಶಾ ಹೇಳಿಕೆ ವಿರೋಧಿಸಿ ಪ್ರತಿಭಟನೆ; ಅಂಬೇಡ್ಕರ್ ಚಿತ್ರಗಳಿಂದ ಕಂಗೊಳಿಸಿದ ಸುವರ್ಣ ವಿಧಾನಸೌಧ


