ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್ ನೇತೃತ್ವದ ಪಂಚ ಸದಸ್ಯರ ಪೀಠ ಅಯೋಧ್ಯ ಭೂವಿವಾದಕ್ಕೆ ಸಂಬಂಧಿಸಿದ ತೀರ್ಪು ಪ್ರಕಟಿಸಿದೆ. ರಾಮ ಮಂದಿರ ನಿರ್ಮಾಣಕ್ಕೆ ಸಲ್ಲಬೇಕೊ, ಬಾಬರಿ ಮಸೀದಿಯ ತಾಣವಾಗಿ ಉಳಿಯಬೇಕೊ ಎಂಬ ವಿವಾದಕ್ಕೆ ಕಾರಣವಾಗಿದ್ದ ಜಮೀನಿಗೆ ಸಂಬಂಧಪಟ್ಟಂತೆ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ಈ ವಿವಾದಿತ 2.77 ಎಕರೆ ಜಮೀನನ್ನು ಮೂರು ಭಾಗಗಳಾಗಿ ವಿಂಗಡಿಸಿ ಸುನ್ನಿ ವಕ್ಫ್ ಬೋರ್ಡ್, ರಾಮ್ ಲಲ್ಲಾ ಮತ್ತು ನಿರ್ಮೋಹಿ ಅಖಾಡಗಳಿಗೆ ಸಮನಾಗಿ ಹಂಚಿತ್ತು. ಆದರೆ ಅದರ ವಿರುದ್ಧ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಈಗ ತೀರ್ಪು ಹೊರಬಿದ್ದಿದೆ.
ಸುಮಾರು 1045 ಪುಟಗಳಿರುವ ತೀರ್ಪಿನ ಪ್ರಮುಖ ಅಂಶಗಳು ಇಲ್ಲಿವೆ….
* ಅಯೋಧ್ಯೆಯ ವಿವಾದಿತ 2.77 ಎಕರೆ ಜಾಗವನ್ನು ಸಂಪೂರ್ಣವಾಗಿ ಮಂದಿರ ನಿರ್ಮಾಣಕ್ಕೆ ಬಿಟ್ಟುಕೊಡಲಾಗಿದೆ.
* ಮಸೀದಿಯನ್ನು ನಿರ್ಮಿಸಲು ಸುನ್ನಿ ವಕ್ಫ್ ಬೋರ್ಡಿಗೆ ಅಯೋಧ್ಯೆಯ ಬೇರೆಡೆ ಪ್ರಮುಖ ಜಾಗದಲ್ಲಿ ಐದು ಎಕರೆ ಜಮೀನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.
* ನಿಗದಿತ ಸ್ಥಳದಲ್ಲಿ ಮಂದಿರವನ್ನು ನಿರ್ಮಿಸುವ ಸಲುವಾಗಿ ಒಂದು ಟ್ರಸ್ಟ್ ಅನ್ನು ರಚಿಸಲು ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಮೂರು ತಿಂಗಳ ಕಾಲಮಿತಿ ನಿಗದಿಪಡಿಸಿದೆ. ವಿವಾದಿತ ಜಾಗವನ್ನು ಟ್ರಸ್ಟ್ ಗೆ ವರ್ಗಾಯಿಸಲಾಗುವುದು. ಟ್ರಸ್ಟ್ ಅಸ್ತಿತ್ವಕ್ಕೆ ಬರುವವರೆಗೂ ಜಾಗ ಕೇಂದ್ರ ಸರ್ಕಾರದ ಒಡೆತನಕ್ಕೆ ಒಳಪಡಲಿದೆ.
* ಹಿಂದೂಗಳ ನಂಬಿಕೆಯ ಪ್ರಕಾರ ರಾಮನು ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ಹುಟ್ಟಿದ್ದನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ನಂಬಿಕೆಗಳ ನಡುವೆ ನ್ಯಾಯಾಲಯ ಮಧ್ಯ ಪ್ರವೇಶಿಸಲಾಗದು ಎಂದಿದೆ. ಮಸೀದಿಯು ಮುಸ್ಲೀಮರಿಂದ ಪರಿತ್ಯಜಿಸಲ್ಪಟ್ಟಿರಲಿಲ್ಲ ಅಥವಾ ಅನಾಥಗೊಂಡಿರಲಿಲ್ಲ ಎಂಬುದನ್ನೂ ನ್ಯಾಯಾಲಯ ಎತ್ತಿ ಹಿಡಿದಿದೆ.
* “ವಿವಾದಿತ ಸ್ಥಳದಲ್ಲಿರುವ ಕಬ್ಬಿಣದ ಕಂಬಿಗಳನ್ನು 1856-1857ರಲ್ಲೇ ನಿರ್ಮಿಸಲಾಗಿತ್ತು, ಹಿಂದೂಗಳು ಈ ಜಾಗಕ್ಕೆ ಪ್ರಾರ್ಥಿಸಲು ಆಗಲೇ ಬರುತ್ತಿದ್ದರು ಎಂಬುದು ಇದರಿಂದ ಸಾಬೀತಾಗಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
* “ಧ್ವಂಸಗೊಳಿಸಲ್ಪಟ್ಟ ಗುಮ್ಮಟದ ಕೆಳಗೆ ಇನ್ನೊಂದು ರಚನೆಯಿರುವುದನ್ನು ಭಾರತೀಯ ಪ್ರಾಚ್ಯ ಸರ್ವೇಕ್ಷಣಾ ಸಂಸ್ಥೆಯು (ಎ.ಎಸ್.ಐ) ದೃಢಪಡಿಸಿದೆ. ಆದರೆ ಮಸೀದಿಯನ್ನು ನಿರ್ಮಿಸಲು ಧ್ವಂಸಗೊಳಿಸಲಾದ ಮಂದಿರವೇ ಅದು ಎಂಬ ನಿರ್ಧಾರಕ್ಕೆ ಎ.ಎಸ್.ಐ ಬರಲಾಗಿಲ್ಲ” ಎಂದಿರುವ ಸರ್ವೋಚ್ಛ ನ್ಯಾಯಾಲಯ ಪ್ರಾಚ್ಯ ಸರ್ವೇಕ್ಷಣಾ ಪುರಾವೆಗಳನ್ನು ಕೇವಲ ಅಭಿಪ್ರಾಯಗಳಷ್ಟೇ ಎಂದು ಪರಿಗಣಿಸಿಬಿಟ್ಟರೆ ಅದು ಎ.ಎಸ್.ಐ.ಗೆ ದೊಡ್ಡ ಅಪಚಾರ ಮಾಡಿದಂತೆ ಎಂದಿದೆ.
* ಸುನ್ನಿ ವಕ್ಫ್ ಬೋರ್ಡ್ ಹಕ್ಕು ಮಂಡಿಸಿದ್ದಂತೆ, ಆ ವಿವಾದಿತ ಜಾಗದ ಮೇಲೆ ತನಗೂ ಹಕ್ಕಿದೆ ಎಂದಿದ್ದ ಶಿಯಾ ವಕ್ಫ್ ಮಂಡಳಿಯ ವಾದವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.
* ಅಯೋಧ್ಯ ವಿವಾದಿತ ಜಾಗದಲ್ಲಿ ತನ್ನ ಹಕ್ಕನ್ನು ಸಾಬೀತುಪಡಿಸುವ ಪುರಾವೆಗಳನ್ನು ಒದಗಿಸುವಲ್ಲಿ ಉತ್ತರ ಪ್ರದೇಶದ ಸುನ್ನಿ ವಕ್ಫ್ ಬೋರ್ಡ್ ವಿಫಲವಾಗಿದೆ; ವಿವಾದಿತ ಸ್ಥಳದ ಮೇಲೆ ತಮಗೆ ವಿಶೇಷ ಒಡೆತನವಿದೆ ಎಂಬುದನ್ನು ಸಾಬೀತುಪಡಿಸುವ ಸಾಕ್ಷ್ಯಾಧಾರಗಳನ್ನು ಮುಸ್ಲಿಮರು ಒದಗಿಸಿಲ್ಲ” ಎಂದಿದೆ ಸುಪ್ರೀಂ ಕೋರ್ಟ್.
* ಬಾಬರಿ ಮಸೀದಿಯು ಖಾಲಿ ಜಾಗದಲ್ಲಿ ನಿರ್ಮಿಸಿದ ಕಟ್ಟಡವಲ್ಲ. ವಿವಾದಿತ ಕಟ್ಟಡದ ಕೆಳಗಿರುವ ಕಟ್ಟಡದ ರಚನೆಯು ಇಸ್ಲಾಂಮಿಕ್ ರಚನೆಯದ್ದಲ್ಲ” ಎಂದಿರುವ ಸುಪ್ರೀಂ ಕೋರ್ಟ್ “ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ್ದು ಕೂಡಾ ಕಾನೂನು ಉಲ್ಲಂಘನೆಯಾಗಿದೆ” ಎಂದಿದೆ.
* ನಿರ್ಮೋಹಿ ಅಖಾರ ವಿವಾದಿತ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಗಿದ್ದ ರಾಮಲಲ್ಲಾದ ಪಾರುಪತ್ಯೆ ಹಕ್ಕು ತನಗೆ ಸಲ್ಲಬೇಕೆಂದು ಮುಂದಿಟ್ಟಿದ್ದ ವಾದವನ್ನು ಕಾಲಮಿತಿ ಮೀರಿದ ವಾದವೆಂದು ನ್ಯಾಯಾಲಯ ತಳ್ಳಿಹಾಕಿದೆ. ಆದರೆ ಮಂದಿರ ನಿರ್ಮಾಣದ ಕುರಿತು ಕೇಂದ್ರ ಸರ್ಕಾರದ ಸ್ಥಾಪಿಸಲಿರುವ ಟ್ರಸ್ಟ್ ನಲ್ಲಿ ಅಖಾರದ ಪ್ರತಿನಿಧಿಗೆ ಅವಕಾಶ ಇರಬೇಕೆಂದು ಹೇಳಿದೆ.
* ಸರ್ವೋಚ್ಛ ನ್ಯಾಯಾಲಯವು `ಪ್ರಾರ್ಥನಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆಯನ್ನು ತೀರ್ಪಿನಲ್ಲಿ ಉಲ್ಲೇಖಿಸಿದೆ. ಎಲ್ಲಾ ಧರ್ಮಗಳು ಸಮಾನ ಎಂಬುದನ್ನು ಹೇಳಲು ಈ ಕಾಯ್ದೆಯು ಯಾವುದೇ ಪ್ರಾರ್ಥನಾ ಸ್ಥಳವನ್ನು ಮಾರ್ಪಡಿಸುವ /ರೂಪಾಂತರಿಸುವುದನ್ನು ನಿಷೇಧಿಸುತ್ತದೆ.
* `ನಮ್ಮ ಸಂವಿಧಾನದ ಆತ್ಮವೇ ಸಮಾನತೆಗೆ ಬದ್ಧರಾಗಿರುವುದು. ನಮ್ಮ ಸಂವಿಧಾನ ಒಬ್ಬರ ನಂಬಿಕೆ, ಮತ್ತೊಬ್ಬರ ನಂಬಿಕೆ ನಡುವೆ ಯಾವುದೇ ಬೇಧ ಮಾಡುವುದಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.


