ಸಂವಿಧಾನ ಶಿಲ್ಪಿ ಡಾ.ಬಿಆರ್. ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ಖಂಡಿಸಿ ತಮಿಳುನಾಡಿನ ಆಡಳಿತರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷ ನಿರ್ಣಯ ಅಂಗೀಕರಿಸಿದೆ.
ಚೆನ್ನೈನ ಪಕ್ಷದ ಪ್ರಧಾನ ಕಚೇರಿ ಅಣ್ಣಾ ಅರಿವಾಲಯಂನಲ್ಲಿ ಭಾನುವಾರ (ಡಿ.22) ನಡೆದ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.
ಡಿಎಂಕೆ ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದ ‘ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆಯನ್ನು ತೀವ್ರವಾಗಿ ವಿರೋಧಿಸಲಾಗಿದೆ. ಅಲ್ಲದೆ, ಮಧುರೈ ಜಿಲ್ಲೆಯಲ್ಲಿ ಉದ್ದೇಶಿತ ಟಂಗ್‌ಸ್ಟನ್ ಗಣಿಗಾರಿಕೆ ಯೋಜನೆಯ ವಿರುದ್ಧ ನಿರ್ಣಯ ಅಂಗೀಕರಿಸಲಾಗಿದೆ.
ಮುಂಬರುವ 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 234 ವಿಧಾನಸಭಾ ಸ್ಥಾನಗಳ ಪೈಕಿ 200 ಸ್ಥಾನಗಳನ್ನು ಗೆಲ್ಲುವ ಮಹತ್ವಾಕಾಂಕ್ಷೆಯ ಗುರಿಯನ್ನು ಡಿಎಂಕೆ ಹೊಂದಿದೆ. ಅದರ ಕಾರ್ಯತಂತ್ರದ ಭಾಗವಾಗಿ, ಮುಖ್ಯಮಂತ್ರಿ ಸ್ಟಾಲಿನ್ ಅವರ ನಾಯಕತ್ವದಲ್ಲಿ ಜಾರಿಗೊಳಿಸಲಾದ ಸರ್ಕಾರದ ಕಲ್ಯಾಣ ಯೋಜನೆಗಳನ್ನು ಪ್ರಚಾರಪಡಿಸುವಂತೆ ಸಭೆಯಲ್ಲಿ ಪಕ್ಷದ ಸದಸ್ಯರಿಗೆ ಸೂಚನೆ ನೀಡಲಾಗಿದೆ.
ಪಕ್ಷವು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಪೂರ್ಣಾವಧಿಯ ಪ್ರತಿನಿಧಿಗಳನ್ನು ನಿಯೋಜಿಸಿದೆ. ಅವರು ಪಕ್ಷದ ಕೇಂದ್ರ ಕಚೇರಿಗೆ ಕ್ಷೇತ್ರದಲ್ಲಿ ನಡೆಯುವ ಚುನಾವಣಾ ಸಂಬಂಧಿತ ಬೆಳವಣಿಗೆಗಳ ಕುರಿತು ನೇರವಾಗಿ ವರದಿ ನೀಡಲಿದ್ದಾರೆ. ಜನರೊಂದಿಗೆ ಸಂಪರ್ಕ ಸಾಧಿಸಿ, ತಳಮಟ್ಟದಲ್ಲಿ ಸರ್ಕಾರದ ಯೋಜನೆಗಳ ಕುರಿತು ಪ್ರಚಾರ ನಡೆಸಲಿದ್ದಾರೆ.
ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆಯ ಸಂಘಟನಾ ಕಾರ್ಯದರ್ಶಿ ಆರ್‌ಎಸ್ ಭಾರತಿ ಮತ್ತು ಸಚಿವರಾದ ತಂಗಂ ತೇನರಸು, ಇವಿ ವೇಲು ಮತ್ತು ಕೆಎನ್ ನೆಹರು ಸೇರಿದಂತೆ ಹಿರಿಯ ನಾಯಕರು ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ತಮಿಳುನಾಡು ವಿಧಾನಸಭೆಯ 159 ಸ್ಥಾನಗಳ ಪೈಕಿ ಆಡಳಿತರೂಢ ಡಿಎಂಕೆ ತನ್ನ ಮಿತ್ರಪಕ್ಷಗಳಾದ ಕಾಂಗ್ರೆಸ್ (18), ವಿಡುದಲೈ ಚಿರುತೈಗಲ್ ಕಚ್ಚಿ (ವಿಸಿಕೆ) (4), ಸಿಪಿಐ (2), ಮತ್ತು ಸಿಪಿಐ(ಎಂ) (2), ಸೇರಿ ಒಟ್ಟು 133 ಸ್ಥಾನಗಳನ್ನು ಹೊಂದಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟ 45.38% ಮತಗಳನ್ನು ಗಳಿಸಿತ್ತು.
ಇದನ್ನೂ ಓದಿ : ನಿತೀಶ್, ಮೋದಿ ನೇತೃತ್ವದಲ್ಲಿ ಬಿಹಾರ ಚುನಾವಣೆ ಎದುರಿಸುತ್ತೇವೆ – ಬಿಜೆಪಿ


