69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುಷ್ಪ: ದಿ ರೈಸ್ ಚಿತ್ರಕ್ಕೆ ಸಿಕ್ಕಿರುವ ಮನ್ನಣೆ, ಜೈ ಭೀಮ್‌ನಂತಹ ಸಾಮಾಜಿಕ ಪರಿಣಾಮ ಬೀರುವ ಚಿತ್ರಗಳಿಗೆ ಸಿಕ್ಕಿಲ್ಲ ಎಂದು ಸೀತಕ್ಕ ಎಂದೇ ಖ್ಯಾತರಾಗಿರುವ ತೆಲಂಗಾಣ ಸಚಿವೆ ದನಸಾರಿ ಅನಸೂಯಾ ಸೀತಕ್ಕ ಬೇಸರ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್‌ನಲ್ಲಿ ಪುಷ್ಪ 2: ದಿ ರೂಲ್‌ನ ಪ್ರದರ್ಶನದ ವೇಳೆ ಥಿಯೇಟರ್‌ನಲ್ಲಿ ನೂಕುನುಗ್ಗಲು ಉಂಟಾದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಅವರ ಮಗನ ಸ್ಥಿತಿ ಗಂಭೀರವಾಗಿದೆ. ಚಿತ್ರದ ನಾಯಕ ನಟ ಅಲ್ಲು ಅರ್ಜುನ ಬಂಧನದ ವಿವಾದ ಸುದ್ದಿಯಲ್ಲಿರುವಾಗಲೇ ಅವರ ಈ ಹೇಳಿಕೆಗಳು ಬಂದಿವೆ.
ಕಳ್ಳಸಾಗಾಣಿಕೆದಾರನನ್ನು ನಾಯಕನನ್ನಾಗಿ ಚಿತ್ರಿಸುವ ಬಗ್ಗೆ ಸೀತಕ್ಕ ತನ್ನ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಅಂತಹ ಚಲನಚಿತ್ರಗಳು ತಿಳಿಸುವ ಮೌಲ್ಯಗಳು ಏನು ಎಂದು ಅವರು ಪ್ರಶ್ನಿಸಿದ್ದಾರೆ.
ಮುಳುಗು ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೀತಕ್ಕ, “ಜೈ ಭೀಮ್‌ನಂತಹ ದಮನಿತರ ಹಕ್ಕುಗಳನ್ನು ಪ್ರದರ್ಶಿಸಿದ, ದೀನದಲಿತರಿಗೆ ಸ್ಫೂರ್ತಿ ನೀಡಿದ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದಿಲ್ಲ. ಅಂತಹ ಅರ್ಥಪೂರ್ಣ ಚಿತ್ರಗಳಿಗೆ ಕೇಂದ್ರದ ಪ್ರೋತ್ಸಾಹವಿಲ್ಲ. ಬದಲಾಗಿ, ಒಬ್ಬ ಕಳ್ಳಸಾಗಣೆದಾರನಿಗೆ, ಪೋಲೀಸ್‌ನನ್ನು ವಿವಸ್ತ್ರಗೊಳಿಸಿ ಪ್ರಶಸ್ತಿ ನೀಡಲಾಯಿತು.. ಇದು ಯಾವ ಸಂದೇಶವನ್ನು ಕಳುಹಿಸುತ್ತದೆ” ಎಂದು ಅವರು ಪ್ರಶ್ನಿಸಿದ್ದಾರೆ.
ಪುಷ್ಪಾ ಚಿತ್ರದ ನಿರೂಪಣೆಯನ್ನು ಅವರು ಟೀಕಿಸಿದರು. ಅಲ್ಲಿ ಕಳ್ಳಸಾಗಾಣಿಕೆದಾರನನ್ನು ವೈಭವೀಕರಿಸಲಾಗುತ್ತದೆ ಮತ್ತು ಕಾನೂನು ಜಾರಿಯ ಸಂಕೇತವಾದ ಪೊಲೀಸ್ ಅಧಿಕಾರಿಯನ್ನು ಖಳನಾಯಕನಂತೆ ಚಿತ್ರಿಸಲಾಗಿದೆ. “ಕಾನೂನುಬದ್ಧವಾಗಿ ಅಪರಾಧವನ್ನು ತಡೆಯುವ ಪೋಲೀಸ್ ಅಧಿಕಾರಿ ಶೂನ್ಯವಾಗುವುದು ಹೇಗೆ” ಎಂದು ಅವರು ಕೇಳಿದರು.

ಸಮಾಜವನ್ನು ರೂಪಿಸುವಲ್ಲಿ ಮತ್ತು ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುವಲ್ಲಿ ಸಿನಿಮಾದ ಪಾತ್ರವನ್ನು ಒತ್ತಿ ಹೇಳಿದ ಸೀತಕ್ಕ, ಬಲವಾದ ಸಾಮಾಜಿಕ ಮೌಲ್ಯಗಳನ್ನು ಹೊಂದಿರುವ ಚಲನಚಿತ್ರಗಳಿಗೆ ಅವರು ಕರೆ ನೀಡಿದರು. “ಚಲನಚಿತ್ರಗಳು ಸಮಾಜವನ್ನು ಉನ್ನತೀಕರಿಸುವ ಮತ್ತು ಇತರರ ಘನತೆಯನ್ನು ಕಾಪಾಡುವ ಗುಣಗಳನ್ನು ಹೊಂದಿರಬೇಕು. ಸಂವಿಧಾನ ಸ್ಥಾಪಿಸಿದ ಸಂಸ್ಥೆಗಳನ್ನು ಗೌರವಿಸಿದರೆ ಮಾತ್ರ ಸಮಾಜ ಪ್ರಗತಿ ಹೊಂದುತ್ತದೆ” ಎಂದರು.
ಸಕಾರಾತ್ಮಕ ಸಂದೇಶಗಳನ್ನು ನೀಡುವ ಮತ್ತು ಸಮಾಜದ ಪ್ರಗತಿಯನ್ನು ಉತ್ತೇಜಿಸುವ ಚಲನಚಿತ್ರಗಳನ್ನು ಸೀತಕ್ಕ ಒತ್ತಾಯಿಸಿದರು. “ಪ್ರಶಸ್ತಿಗಳು ಸಮಾಜವನ್ನು ಪ್ರೇರೇಪಿಸುವ, ಮುಂದಕ್ಕೆ ಕೊಂಡೊಯ್ಯುವ ಚಲನಚಿತ್ರಗಳಿಗೆ ಹೋಗಬೇಕು. ಕಳ್ಳಸಾಗಣೆಯನ್ನು ವೈಭವೀಕರಿಸುವ ಅಥವಾ ಕಾನೂನುಬದ್ಧ ಅಧಿಕಾರವನ್ನು ದುರ್ಬಲಗೊಳಿಸುವ ಚಿತ್ರಗಳಿಗಲ್ಲ” ಎಂದು ಅವರು ಹೇಳಿದರು.
ಪುಷ್ಪ: ದಿ ರೈಸ್ (2021) ಚಿತ್ರದಲ್ಲಿನ ಶೀರ್ಷಿಕೆಯ ಪಾತ್ರದ ಚಿತ್ರಣಕ್ಕಾಗಿ ನಟ ಅಲ್ಲು ಅರ್ಜುನ್ ಅತ್ಯುತ್ತಮ ನಟ (ಪುರುಷ) ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದರು. ಆದರೆ, ದಮನಿತರ ನ್ಯಾಯಕ್ಕಾಗಿ ಹೋರಾಡುವ ವಕೀಲರಾಗಿ ಸೂರ್ಯ ನಟಿಸಿದ ತಮಿಳು ಚಲನಚಿತ್ರ ಜೈ ಭೀಮ್ ರಾಷ್ಟ್ರೀಯ ಪ್ರಶಸ್ತಿಗಳ ಮನ್ನಣೆಯಿಂದ ಹೊರಗುಳಿದಿದೆ.
ಇದನ್ನೂ ಓದಿ; ಛತ್ತೀಸ್‌ಗಢ| ಅಕ್ಕಿ ಕದ್ದ ಆರೋಪದ ಮೇಲೆ ದಲಿತ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು; ಮೂವರ ಬಂಧನ


