ರೈತರ ಹಕ್ಕುಗಳಿಗಾಗಿ ಕಳೆದ 29 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಜಗಜಿತ್ ಸಿಂಗ್ ದಲ್ಲೆವಾಲ್, 15 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಅವರು, “ತಮ್ಮ ಬೇಡಿಕೆಗಳನ್ನು ಅಂಗೀಕರಿಸುವವರೆಗೆ ಅಥವಾ ನನ್ನ ಕೊನೆ ಉಸಿರೆಳೆಯುವವರೆಗೆ ಹೋರಾಟವನ್ನು ಮುಂದುವರಿಸುತ್ತೇನೆ” ಎಂದು ಮಂಗಳವಾರ ಪುನರುಚ್ಚರಿಸಿದರು.
ಫೆಬ್ರವರಿ 13 ರಿಂದ ರೈತರು ಧರಣಿ ಸತ್ಯಾಗ್ರಹ ನಡೆಸುತ್ತಿರುವ ಹರಿಯಾಣದ ಗಡಿಭಾಗದಲ್ಲಿರುವ ಖಾನೌರಿ ಪ್ರತಿಭಟನಾ ಸ್ಥಳದಲ್ಲಿ ವೇದಿಕೆಯ ಮೇಲೆ ಹಾಸಿಗೆಯ ಮೇಲೆ ಮಲಗಿರುವಾಗಲೇ ಹೇಳಿಕೆ ನೀಡಿದ್ದಾರೆ. ಉಪವಾಸ ಮತ್ತು ವಯಸ್ಸಾದ ಕಾರಣದಿಂದ ದಲ್ಲೇವಾಲ್ ಪ್ರಮುಖ ಅಂಗಗಳು ಕ್ಷೀಣಿಸುತ್ತಿವೆ ಎಂದು ವೈದ್ಯರು ಹೇಳಿದರು. “ರೈತರ ಪ್ರತಿಭಟನೆಯ ಕರೆಗೆ ಇತರ ರಾಜ್ಯಗಳು ಸಹ ಸೇರಬೇಕು, ಈ ಹೋರಾಟವು ಒಗ್ಗಟ್ಟಿನಿಂದ ಹೋರಾಡಬೇಕು” ಎಂದು ದಲ್ಲೇವಾಲ್ ಮನವಿ ಮಾಡಿದ್ದಾರೆ.
“ನಾನು ಕ್ಷೇಮವಾಗಿದ್ದೇನೆ.. ನಾವು ಈ ಯುದ್ಧವನ್ನು ಒಗ್ಗಟ್ಟಿನಿಂದ ಗೆಲ್ಲಬೇಕು” ಎಂದು 70 ವರ್ಷದ ದಲ್ಲೆವಾಲ್ ಹೇಳಿದರು. ಅವರ ಆರೋಗ್ಯವನ್ನು 24 ಗಂಟೆಗಳ ಕಾಲ ವೈದ್ಯರ ತಂಡವು ಮೇಲ್ವಿಚಾರಣೆ ಮಾಡುತ್ತಿದೆ. ರೈತ ನಾಯಕನಿಗೆ ಹೃದಯ ಸ್ತಂಭನದ ಅಪಾಯವಿದೆ ಎಂದು ಈಗಾಗಲೇ ಎಚ್ಚರಿಸಿದ್ದಾರೆ.
29 ದಿನಗಳ ಉಪವಾಸ ಸತ್ಯಾಗ್ರಹದಿಂದಾಗಿ ಅವರ ರೋಗನಿರೋಧಕ ಶಕ್ತಿ ದಿನದಿಂದ ದಿನಕ್ಕೆ ದುರ್ಬಲವಾಗುತ್ತಿದ್ದು, ಸೋಂಕಿನ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ವೈದ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ಅವರ ಪ್ರಮುಖ ಅಂಗಗಳಾದ ಯಕೃತ್ತು ಮತ್ತು ಮೂತ್ರಪಿಂಡಗಳು ದುರ್ಬಲಗೊಳ್ಳುತ್ತಿವೆ. ಸ್ಥಿತಿಯು ಹದಗೆಡುತ್ತಿದೆ” ಎಂದು ಖಾನೌರಿ ಗಡಿಯಲ್ಲಿ ದಲ್ಲೆವಾಲ್ ಅವರನ್ನು ಪರೀಕ್ಷಿಸಿದ ವೈದ್ಯರು ಹೇಳಿದರು. ಇತ್ತೀಚಿನ ಪರೀಕ್ಷಾ ವರದಿಯ ಪ್ರಕಾರ, ಅವರ ದೇಹದಲ್ಲಿ ಕೀಟೋನ್ ಮಟ್ಟಗಳು ಸಾಕಷ್ಟು ಹೆಚ್ಚಾಗಿದ್ದು, ಅವರು ದುರ್ಬಲರಾಗಿದ್ದಾರೆ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕೇಂದ್ರದಿಂದ ಕಾನೂನು ಖಾತ್ರಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ನವೆಂಬರ್ 26 ರಂದು ಉಪವಾಸ ಸತ್ಯಾಗ್ರಹ ಆರಂಭಿಸಿದ 70 ವರ್ಷದ ದಲ್ಲೆವಾಲ್, “ರೈತರನ್ನು ಪ್ರತಿಭಟನಾ ಸ್ಥಳದಿಂದ ಕಳುಹಿಸುವುದಕ್ಕೆ ಸರ್ಕಾರಕ್ಕೆ ಅವಕಾಶ ನೀಡಬಾರದು” ಎಂದು ಹೇಳಿದರು.
“ಒಂದೋ ನಾವು ನಮ್ಮ ಬೇಡಿಕೆಗಳಿಗಾಗಿ ಹೋರಾಡುತ್ತೇವೆ ಅಥವಾ ನಾವು ಇಲ್ಲಿಯೇ ಸಾಯುತ್ತೇವೆ” ಎಂದು ಧ್ವನಿವರ್ಧಕದಲ್ಲಿ ಸಂಕ್ಷಿಪ್ತ ಭಾಷಣದಲ್ಲಿ ಅವರು ತಮ್ಮ ಕ್ಷೀಣವಾದ ಧ್ವನಿಯೊಂದಿಗೆ ಹೇಳಿದರು. “ಈಗ ದೊಡ್ಡಣ್ಣ (ಹರಿಯಾಣ) ಪ್ರತಿಭಟನೆಗೆ ಸೇರಿಕೊಂಡಿದ್ದಾರೆ” ಎಂದು ಹೇಳುವ ಮೂಲಕ ಆತ್ಮವಿಶ್ವಾಸವನ್ನು ಪ್ರತಿಧ್ವನಿಸಿದರು.
2020-21ರಲ್ಲಿ ಈಗ ರದ್ದಾದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರ ಆಂದೋಲನದ ಹಿಂದೆ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ ದಲ್ಲೆವಾಲ್, ಪಂಜಾಬ್ ರೈತರ ಇತ್ತೀಚಿನ ‘ದೆಹಲಿ ಚಲೋ’ ಮೆರವಣಿಗೆಯ ಹಿಂದಿನ ಮುಖವೂ ಹೌದು.
ಫೆಬ್ರವರಿ 13 ರಿಂದ ಪಂಜಾಬ್ ಮತ್ತು ಹರಿಯಾಣದ ನಡುವಿನ ಶಂಭು ಮತ್ತು ಖಾನೌರಿ ಗಡಿಯಲ್ಲಿ ರೈತರು ರಾಷ್ಟ್ರೀಯ ರಾಜಧಾನಿಗೆ ತಮ್ಮ ಮೆರವಣಿಗೆಯನ್ನು ಭದ್ರತಾ ಪಡೆಗಳು ವಿಫಲಗೊಳಿಸಿದ ನಂತರ ಬಿಡಾರ ಹೂಡಿದ್ದಾರೆ.
ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ, ಪಂಜಾಬ್ ಸರ್ಕಾರವು ಪಟಿಯಾಲ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಹಿರಿಯ ವೈದ್ಯರನ್ನು ಒಳಗೊಂಡ ವೈದ್ಯಕೀಯ ಮಂಡಳಿಯನ್ನು ಇಡೀ ದಿನದ ಮೇಲ್ವಿಚಾರಣೆಗಾಗಿ ಸ್ಥಾಪಿಸಿದೆ. ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಪ್ರತಿಭಟನಾ ಸ್ಥಳದಲ್ಲಿ ತಾತ್ಕಾಲಿಕ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ.
ರೈತರ ಹೋರಾಟವನ್ನು ಬೆಂಬಲಿಸಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಹಠಮಾರಿತನವನ್ನು ಬಿಟ್ಟು ರೈತರೊಂದಿಗೆ ಮಾತನಾಡಬೇಕೆಂದು ಕೇಳಿಕೊಂಡರು.
“ಕೇಂದ್ರ ಸರ್ಕಾರ ತನ್ನ ಮೊಂಡುತನ ಬಿಟ್ಟು ರೈತ ಸಂಘಟನೆಗಳ ಜತೆ ಮಾತುಕತೆಗೆ ದಾರಿ ಮಾಡಿಕೊಡಬೇಕು.. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಮೋದಿಜೀ ತಡೆಯಲು ಸಾಧ್ಯವಾದರೆ, 200 ಕಿ.ಮೀ ದೂರದಲ್ಲಿ ಕೂತು ಅನ್ನದಾತರೊಂದಿಗೆ ಮಾತನಾಡಬಹುದಲ್ಲವೇ? ನೀವು ಕಾಯುತ್ತಿದ್ದೀರಾ..?” ಸಿಎಂ ಮಾನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ; ಚಳಿಗಾಲದ ಅಧಿವೇಶನ ರದ್ದುಗೊಳಿಸಿದ ಮಣಿಪುರ ಸರ್ಕಾರ; ‘ಸಂವಿಧಾನ ನಿಯಮ ಉಲ್ಲಂಘಿಸಿಲ್ಲ’ ಎಂದ ಕಾನೂನು ಸಚಿವ


