‘ಉಮ್ರಾ ಯಾತ್ರೆ’ಗೆಂದು ಜನರನ್ನು ಕರೆದೊಯ್ದ ಮಂಗಳೂರು ಮೂಲದ ಟ್ರಾವೆಲ್ಸ್ ಏಜೆನ್ಸಿಯೊಂದು, ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಡದೆ ಅರ್ಧ ದಾರಿಯಲ್ಲೆ ಕೈಬಿಟ್ಟ ಪರಿಣಾಮ ಸುಮಾರು 160ಕ್ಕೂ ಹೆಚ್ಚು ಜನರು ಸೌದಿ ಅರೇಬಿಯಾದ ಮದೀನದಲ್ಲೆ ಸಂಕಷ್ಟಕ್ಕೀಡಾಗಿದ್ದಾರೆ ಎಂದು ವರದಿಯಾಗಿದೆ. ಟ್ರಾವೆಲ್ ಏಜೆನ್ಸಿಯ ಮುಖ್ಯಸ್ಥ ತಮ್ಮೊಂದಿಗೆ ತೆರಳಿದ್ದ ಜನರನ್ನು ಅಲ್ಲಿಯೆ ಬಿಟ್ಟು ಪರಾರಿಯಾಗಿದ್ದು, ಸಂತ್ರಸ್ತ ಜನರು ಭಾರತಕ್ಕೆ ಹಿಂತಿರುಗಲು ಪರದಾಡುವಂತಾಗಿದೆ. ಟ್ರಾವೆಲ್ ಏಜೆನ್ಸಿ ವಂಚನೆ
‘ಉಮ್ರಾ ಯಾತ್ರೆ’ ಎನ್ನುವುದು ‘ಹಜ್ ಯಾತ್ರೆ’ ಮಾದರಿಯ ಪವಿತ್ರ ಯಾತ್ರೆಯಾಗಿದ್ದು, ಈ ಯಾತ್ರೆಯಲ್ಲಿ ಮುಸ್ಲಿಮರು ಸೌದಿ ಅರೇಬಿಯಾದ ಮಕ್ಕಾ ಮತ್ತು ಮದೀನಾ ನಗರಕ್ಕೆ ಭೇಟಿ ನೀಡಿ ವಿವಿಧ ಆರಾಧನಾ ಕರ್ಮಗಳನ್ನು ನಿರ್ವಹಿಸುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಬಕದಲ್ಲಿ ಇರುವ ಮೊಹಮ್ಮದೀಯ ಹಜ್ ಆಂಡ್ ಉಮ್ರಾ ಟ್ರಾವೆಲ್ಸ್ ಅಡಿಯಲ್ಲಿ ಡಿಸೆಂಬರ್ 13 ಮತ್ತು 15 ನಡುವೆ ಸುಮಾರು 160 ಜನರನ್ನು ಉಮ್ರಾ ಯಾತ್ರೆಗೆಂದು ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಈ ವೇಳೆ ಯಾತ್ರಾರ್ಥಿಗಳು ಕೇರಳದ ಕಣ್ಣೂರು, ಕ್ಯಾಲಿಕಟ್ ವಿಮಾನ ನಿಲ್ದಾಣಗಳ ಮೂಲಕ ಸೌದಿ ಅರೇಬಿಯಾಕ್ಕೆ ಪ್ರಯಾಣ ಮಾಡಿದ್ದರು. ಯಾತ್ರಾರ್ಥಿಗಳಲ್ಲಿ ಮಂಗಳೂರು, ಹಾಸನ, ಕೊಡಗು ಸೇರಿದಂತೆ ಹಲವಾರು ಜಿಲ್ಲೆಗಳ ಜನರು ಇದ್ದರು ಎಂದು ತಿಳಿದು ಬಂದಿದೆ. ಟ್ರಾವೆಲ್ ಏಜೆನ್ಸಿ ವಂಚನೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅದಾಗ್ಯೂ, ಯಾತ್ರಾರ್ಥಿಗಳು ಮಕ್ಕಾ ಮತ್ತು ಮದೀನಾದಲ್ಲಿ ‘ಉಮ್ರಾ’ ಆರಾಧನೆಯನ್ನು ಮುಗಿಸಿ ಡಿಸೆಂಬರ್ 28ರ ನಂತರ ಭಾರತಕ್ಕೆ ವಾಪಾಸಾಗಬೇಕಾಗಿತ್ತು. ಆದರೆ ಈ ನಡುವೆ ಯಾತ್ರಾರ್ಥಿಗಳನ್ನು ಕರೆದುಕೊಂಡು ಹೋಗಿರುವ ಟ್ರಾವೆಲ್ಸ್ ಏಜೆನ್ಸಿಯ ಮುಖ್ಯಸ್ಥ ಅಶ್ರಫ್ ಸಖಾಫಿ ಪರ್ಪುಂಜ ನಾಪತ್ತೆಯಾಗಿದ್ದಾರೆ ಎಂದು ನಾನುಗೌರಿ.ಕಾಮ್‌ಗೆ ಸಂತ್ರಸ್ತ ಯಾತ್ರಾರ್ಥಿಯೊಬ್ಬರು ದೂರಿದರು. ಟ್ರಾವೆಲ್ ಏಜೆನ್ಸಿಯು ಪ್ರತಿ ಯಾತ್ರಾರ್ಥಿಯಿಂದ 65 ಸಾವಿರದಿಂದ 70 ಸಾವಿರದ ವರೆಗೆ ಪೂರ್ಣ ಹಣವನ್ನು ಪಡೆದಿದೆ ಎಂದು ಯಾತ್ರಾರ್ಥಿಗಳು ತಿಳಿಸಿದರು.
ಡಿಸೆಂಬರ್ 28ರಂದು ಟ್ರಾವೆಲ್ಸ್ ಏಜನ್ಸಿಯ ಮುಖ್ಯಸ್ಥ ನಾಪತ್ತೆಯಾದ ನಂತರ, ಅವರ ಅವರ ಇಬ್ಬರು ಸಹಾಯಕರು, ವಿಮಾನದ ಟಿಕೆಟ್ ಬೆಲೆ ಏರಿಕೆಯಾಗಿದೆ ಎಂದು ಸಬೂಬು ನೀಡಿ ಭಾರತಕ್ಕೆ ಹಿಂತಿರುಗುವ ದಿನವನ್ನು ಮುಂದೂಡುತ್ತಲೆ ಬಂದಿದ್ದರು. ಕೊನೆಗೆ ಅವರು ಯಾತ್ರಾರ್ಥಿಗಳಿಗೆ ವಿಷಯವನ್ನು ತಿಳಿಸಿದ್ದು, ತಮ್ಮ ಕೈಯ್ಯಿಂದಲೆ ಹಣವನ್ನು ಹಾಕಿ ಟಿಕೆಟ್ ಖರೀದಿಸುವಂತೆ ಕೇಳಿಕೊಂಡಿದ್ದಾರೆ ಎಂದು ನಾನುಗೌರಿ.ಕಾಮ್‌ಗೆ ಯಾತ್ರಾರ್ಥಿಯೊಬ್ಬರು ತಿಳಿಸಿದರು.
ನಾನುಗೌರಿ.ಕಾಮ್ ಜೊತೆಗೆ ಮಾತನಾಡಿದ ಯಾತ್ರಾರ್ಥಿ ಖಾದರ್ ರಂತಡ್ಕ ಅವರು, “ನಮ್ಮ ತಂಡದಲ್ಲಿ ಸುಮಾರು 160 ಜನರು ಇದ್ದಾರೆ. ನಮ್ಮ ತಂಡದಲ್ಲಿ ವೃದ್ಧರೇ ಹೆಚ್ಚಾಗಿದ್ದು, ಅವರಿಗೆ ಬಿಪಿ, ಡಯಬಿಟೀಸ್, ಹೃದ್ರೋಗ ಇರುವವರು ಇದ್ದಾರೆ. ಭಾನುವಾರ ರಾತ್ರಿಯಿಂದ ಯಾರೂ ಕೂಡಾ ಊಟ ಮಾಡಿಲ್ಲ. ಸೋಮವಾರ ಬೆಳಿಗ್ಗೆ ಚಹಾ ಮತ್ತು ಉಪ್ಪಿಟ್ಟುಕೊಟ್ಟಿದ್ದಾರೆ. ಮಧ್ಯಾಹ್ನದ ಊಟ ಇನ್ನೂ ಸಿಕ್ಕಿಲ್ಲ. ಇಂದು ಮಧ್ಯಾಹ್ನದ ವರೆಗೆ ನಾವು ಇರುವ ವಸತಿಯಲ್ಲಿ ಇರಬಹುದು. ನಂತರ ಅದನ್ನು ಕೂಡಾ ತೆರವು ಮಾಡಬೇಕಾಗುತ್ತದೆ. ಎಲ್ಲರೂ ದುಃಖದಲ್ಲಿದ್ದು, ಮುಂದಕ್ಕೇನು ಮಾಡಬೇಕು ಎಂದು ತಿಳಿಯುತ್ತಿಲ್ಲ” ಎಂದು ಹೇಳಿದರು.
”ಪವಿತ್ರ ಯಾತ್ರೆಗೆಂದು ಹೊರಟು ಬಂದಿರುವ ನಾವು ಯಾತ್ರೆ ಮುಗಿಸಿ ಸಂತೋಷದಿಂದ ಭಾರತಕ್ಕೆ ಹಿಂತಿರುಗಬೇಕಿತ್ತು. ನಾವೇನೂ ತುಂಬಾ ಶ್ರೀಮಂತರಲ್ಲ, ಪವಿತ್ರ ಯಾತ್ರೆಗಾಗಿ ಅಲ್ಪ ಸ್ವಲ್ಪ ಕೂಡಿಟ್ಟ ಹಣವನ್ನು ಟ್ರಾವೆಲ್ಸ್ ಏಜೆನ್ಸಿಗೆ ಕೊಟ್ಟು ನಾವು ಯಾತ್ರೆಗೆ ಬಂದಿದ್ದೇವೆ. ಇರುವ ಹಣ ಎಲ್ಲವೂ ಖಾಲಿಯಾಗಿದೆ. ಟ್ರಾವೆಲ್ಸ್ ಏಜೆನ್ಸಿ ಅವರು, ನಾವೇ ಟಿಕೆಟ್ ಮಾಡಿ ಭಾರತಕ್ಕೆ ಹಿಂತಿರುಗುವಂತೆ ಹೇಳುತ್ತಿದ್ದಾರೆ. ಅಷ್ಟೊಂದು ಹಣವನ್ನು ನಾವು ಈಗ ಎಲ್ಲಿಂದ ತರಲಿ” ಎಂದು ಮತ್ತೊಬ್ಬ ಯಾತ್ರಾರ್ಥಿ ನಾನುಗೌರಿ.ಕಾಮ್‌ಗೆ ಹೇಳಿದರು.
ಟ್ರಾವೆಲ್ ಏಜೆನ್ಸಿ ವಂಚನೆ – ಉಳ್ಳಾಲದ ಮುಡಿಪು ಬಳಿಯ ಟ್ರಾವೆಲ್ ಏಜೆನ್ಸಿಯ ಕಚೇರಿಗೆ ಯಾತ್ರಾರ್ಥಿಗಳ ಸಂಬಂಧಿಕರಿಂದ ಮುತ್ತಿಗೆ.
ಮದೀನಾದಲ್ಲಿ ಪರದಾಡುತ್ತಿರುವ ಕರಾವಳಿಯ 160 ಉಮ್ರಾ ಯಾತ್ರಾರ್ಥಿಗಳು➣➣ https://t.co/7XtizRjkWF
ನಾನುಗೌರಿ ವಾಟ್ಸಾಪ್ ಗುಂಪಿಗೆ ಸೇರಿ➣➣ https://t.co/hUuHv0Efs2 pic.twitter.com/uQRmauv8bR
— Naanu Gauri (@naanugauri) December 30, 2024
ಈ ನಡುವೆ ಟ್ರಾವೆಲ್ಸ್ ಏಜೆನ್ಸಿಯ ಪುತ್ತೂರಿನ ಕಬಕದಲ್ಲಿ ಮತ್ತು ಉಳ್ಳಾಲದ ಮುಡಿಪುವಿನ ಕಚೇರಿಗಳಲ್ಲಿ ಯಾತ್ರಾರ್ಥಿಗಳ ಸಂಬಂಧಿಕರು ತೆರಳಿ ಗಲಾಟೆ ಮಾಡಿದ್ದಾರೆ ಎಂದು ವರದಿಯಾಗಿವೆ. ಅದಾಗ್ಯೂ, ಟ್ರಾವೆಲ್ಸ್ ಏಜೆನ್ಸಿಯ ಮುಖ್ಯಸ್ಥ ಅಶ್ರಫ್ ಸಖಾಫಿಯ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಅವರು ಮೂರು ದಿನಗಳ ಹಿಂದೆಯೆ ಭಾರತಕ್ಕೆ ಹಿಂತಿರುಗಿದ್ದಾರೆ ಎಂದು ತಿಳಿದುಬಂದಿದೆ. ಪರಾರಿಯಾಗಿರುವ ಏಜೆನ್ಸಿ ಮುಖ್ಯಸ್ಥ ಈ ಹಿಂದೆ ಕೂಡಾ ಇದೇ ರೀತಿ ಜನರಿಗೆ ವಂಚನೆ ಮಾಡಿದ್ದರು ಎಂದು ಮೂಲವೊಂದು ನಾನುಗೌರಿ.ಕಾಮ್‌ಗೆ ಹೇಳಿದೆ.
ಈ ನಡುವೆ ಸೌದಿ ಅರೇಬಿಯಾದಲ್ಲಿ ಇರುವ ಅನಿವಾಸಿ ಭಾರತೀಯರ ಸಂಘಟನೆಯಾದ ಕೆಸಿಎಫ್ ಸಂತ್ರಸ್ತ ಯಾತ್ರಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಿದೆ ಎಂದು ಅದರ ಪದಾದಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ನಾನುಗೌರಿ.ಕಾಮ್ ಜೊತೆಗೆ ಮಾತನಾಡಿದ ಕೆಸಿಎಫ್ ಪದಾಧಿಕಾರಿಯೊಬ್ಬರು ಅವರು,”ನಮಗೆ ವಿಷಯ ತಿಳಿದ ನಂತರ 160 ಜನರಿಗೆ ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆ ಮಾಡಿದ್ದೇವೆ. ಈ ನಡುವೆ ಸೌದಿ ಸರ್ಕಾರಕ್ಕೆ ಯಾತ್ರಾರ್ಥಿಗಳು ದೂರು ನೀಡಿದ್ದಾರೆ. ಅವರಿಗೆ ವಂಚನೆ ಮಾಡಿರುವ ಟ್ರಾವೆಲ್ ಏಜೆನ್ಸಿ ಮುಖ್ಯಸ್ಥ ಅಶ್ರಫ್ ಸಖಾಫಿ ವಿರುದ್ಧ ಇಲ್ಲಿನ ಸರ್ಕಾರ ಕ್ರಮಕೈಗೊಳ್ಳುತ್ತದೆ. ಒಂದು ವೇಳೆ ಅವರು ಸೌದಿಯಲ್ಲಿ ಇರದೆ ಇದ್ದರೆ, ಅವರ ಸಂಸ್ಥೆಯ ಮೇಲೆ ಸರ್ಕಾರ ಕ್ರಮಕೈಗೊಳ್ಳಲಿದೆ” ಎಂದು ತಿಳಿಸಿದರು.
ಇದನ್ನೂ ಓದಿ: ಈಶ್ವರ ಅಲ್ಲಾ ತೇರೋ ನಾಮ್ ವಿವಾದ: ಈ ಭಜನೆ ಹಾಡುವುದನ್ನು ಮುಂದುವರಿಸುತ್ತೇನೆ; ಜನಪದ ಗಾಯಕಿ ದೇವಿ
ಈಶ್ವರ ಅಲ್ಲಾ ತೇರೋ ನಾಮ್ ವಿವಾದ: ಈ ಭಜನೆ ಹಾಡುವುದನ್ನು ಮುಂದುವರಿಸುತ್ತೇನೆ; ಜನಪದ ಗಾಯಕಿ ದೇವಿ


