ರಾಜ್ಯದ ದಲಿತ ಚಳವಳಿಯ ಹಿರಿಯ ನಾಯಕ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾಗಿದ್ದ ಲಕ್ಷ್ಮಿನಾರಾಯಣ ನಾಗವಾರ ಅವರು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಅವರು ಕಳೆದ ಎರಡು ವರ್ಷಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಕೆಲ ದಿನಗಳಿಂದ ಅವರ ಆರೋಗ್ಯ ಕ್ಷೀಣಿಸುತ್ತಲೇ ಇತ್ತು ಎನ್ನಲಾಗಿದೆ.
2022ರ ಡಿಸೆಂಬರ್ 6ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ‘ದಲಿತ ಸಾಂಸ್ಕೃತಿಕ ಪ್ರತಿರೋಧ’ದಲ್ಲಿ ಸಾರ್ವಜನಿಕವಾಗಿ ಭಾಗಿಯಾಗಿದ್ದೇ ಕೊನೆ. ಆ ನಂತರದಲ್ಲಿ ಹೋರಾಟದಿಂದ ದೂರ ಉಳಿದಿದ್ದ ಅವರು, ತಮ್ಮ ಆನಾರೋಗ್ಯದ ನಡುವೆಯೂ ‘ದಲಿತ ಚಳವಳಿಗಳ ಐಕ್ಯ ಹೋರಾಟ ಸಮಿತಿ’ ಹೋರಾಟಗಳಿಗೆ ತಮ್ಮ ಕಾರ್ಯಕರ್ತರನ್ನು ತೊಡಗಿಸಿಕೊಳ್ಳುವ ಹಾಗೆ ನೋಡಿಕೊಂಡಿದ್ದರು.
ದಲಿತ ಚಳವಳಿಗೆ ಅರಗಿಸಿಕೊಳ್ಳಲಾಗದ ವಿಷಯ: ಮಾವಳ್ಳಿ ಶಂಕರ್
ವಿದ್ಯಾರ್ಥಿ ದಿನಗಳಿಂದಲೂ ಲಕ್ಷ್ಮಿನಾರಾಯಣ ನಾಗಾವರ ಅವರ ಆಪ್ತರಾಗಿರುವ ದಸಂಸ ಹಿರಿಯ ನಾಯಕ ಮಾವಳ್ಳಿ ಶಂಕರ್ ನಾನುಗೌರಿ.ಕಾಮ್ ಜೊತೆಗೆ ಮಾತನಾಡಿ, ‘ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ದುರ್ದಿನ ಬರುತ್ತಿರುವ ಈ ಕಾಲದಲ್ಲಿ, ನಾಗವಾರ ಅವರ ಅಗಲಿಗೆ ತುಂಬಲಾರದ ನಷ್ಟ. ಚಳವಳಿಗಳಿಗೆ ಅರಗಿಸಿಕೊಳ್ಳಲಾಗದ ವಿಷಯ’ ಎಂದು ಬೇಸರ ವ್ಯಕ್ತಪಡಿಸಿದರು.
“ಮೂರು ದಶಕಗಳಿಗೂ ಹೆಚ್ಚು ಕಾಲ ಚಳವಳಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು. ಸಾಕಷ್ಟು ಬದ್ಧತೆಯಿಂದ ದಲಿತ ಚಳವಳಿ ಸೇರಿದಂತೆ ಜನಪರ ಸಂಘಟನೆಗಳ ಜೊತೆಗೆ ಇರುತ್ತಿದ್ದ ಅವರು, ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಬೇಕು ಎಂಬ ದೂರದೃಷ್ಠಿ ಇಟ್ಟುಕೊಂಡಿದ್ದ ನಾಯಕರಾಗಿದ್ದರು. ವಿಶೇಷವಾಗಿ, ತಳ ಸಮುದಾಯಗಳ ಬಗ್ಗೆ ಅವರಿಗೆ ವಿಶೇಷ ಕಳಕಳಿ ಇತ್ತು; ಅವರ ಬದಲಾವಣೆ ಬಗ್ಗೆ ಅಪಾರವಾದ ನಂಬಿಕೆ ಇಟ್ಟುಕೊಂಡಿದ್ದರು. ಸೈದ್ಧಾಂತಿಕವಾಗಿಯೂ ಕೂಡ ಗಟ್ಟಿತನ ಇತ್ತು” ಎಂದರು.
“ಅವರ ಅಗಲಿಕೆಯಿಂದ ದಲಿತ ಚಳವಳಿಗೆ ಶೂನ್ಯ ಆವರಿಸಿದಂತೆ ಆಗಿದೆ. ಇವತ್ತಿನ ಕಾಲಘಟ್ಟದಲ್ಲಿ ನಾಗವಾರ ಅವರ ನಾಯಕತ್ವ ಅನಿವಾರ್ಯವಾಗಿದೆ. ಇಡೀ ರಾಜ್ಯದಲ್ಲಿ ಅವರು ಬಹಳಷ್ಟು ಸಕ್ರಿಯವಾಗಿ ಸಂಘಟನೆ ಕೆಲಸ ಮಾಡುತ್ತಿದ್ದರು. ನಮ್ಮ ಪಾಲಿಗೆ ಇದು ಕೆಟ್ಟ ಪರಿಸ್ಥಿತಿ, ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ದುರ್ದಿನ ಬರುತ್ತಿರುವ ಈ ಕಾಲದಲ್ಲಿ ಅವರ ಅಗಲಿಗೆ ತುಂಬಲಾರದ ನಷ್ಟ. ಚಳವಳಿಗಳಿಗೆ ಅರಗಿಸಿಕೊಳ್ಳಲಾಗದ ವಿಷಯ” ಎಂದು ಹೇಳಿದರು.
ಹೆಬ್ಬಾಳ ನಿವಾಸದಲ್ಲಿ ದರ್ಶನ
ಲಕ್ಷ್ಮಿನಾರಾಯಣ ಅವರ ಮೃತದೇಹವನ್ನು ಬೆಂಗಳೂರಿನ ಹೆಬ್ಬಾಳದ ಕನಕನಗರದಲ್ಲಿನ ಅವರ ನಿವಾಸದಲ್ಲಿ ಇರಿಸಲಾಗಿದೆ.
ಅವರು ಬೆಂಗಳೂರು ಉತ್ತರ ತಾಲೂಕಿನ ನಾಗವಾರ ಗ್ರಾಮದವರು. ತಮ್ಮ ವಿದ್ಯಾರ್ಥಿ ದಿನಗಳಲ್ಲೇ ದಲಿತ ಹಕ್ಕುಗಳ ಬಗ್ಗೆ ಧ್ವನಿಯನ್ನು ಎತ್ತುತ್ತಾ ಬಂದವರು. ಸಾಹಿತ್ಯ ಮಾತ್ರವಲ್ಲದೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಅತ್ಯಂತ ಉತ್ಸುಕರಾಗಿ ಭಾಗವಹಿಸುತ್ತಿದ್ದರು. ಕಾಲೇಜು ಜೀವನದಲ್ಲೇ ಸಮಾಜ ವಿಜ್ಞಾನ, ಅರ್ಥಶಾಸ್ತ್ರ ವಿಷಯಗಳ ಅಧ್ಯಾಪಕರಿಗೆ ಪ್ರೀತಿಯ ವಿದ್ಯಾರ್ಥಿಯಾಗಿ ‘ದಲಿತ ವಿದ್ಯಾರ್ಥಿ ಒಕ್ಕೂಟ’ದ ಮುಖಂಡರಾಗಿದ್ದರು.
ದಲಿತ ಹಿರಿಯ ನೇತಾರ ಬಿ. ಬಸವಲಿಂಗ ಅವರು ನಡೆಸಿದ ಬೂಸಾ ಚಳವಳಿಗೆ ಇಪ್ಪತ್ತೈದು ವರ್ಷಗಳಾದ ಸಂದರ್ಭದಲ್ಲಿ ‘ಬಿ. ಬಸವಲಿಂಗಪ್ಪ ಮತ್ತು ಬೂಸಾ ಚಳವಳಿ: ಕಾಲು ಶತಮಾನ’ ಪುಸ್ತಕವನ್ನು ಸಂಪಾದಿಸಿ ದಲಿತ ಚಳವಳಿಯ ಕುರಿತು ಹಲವು ಒಳನೋಟಗಳನ್ನು ಓದುಗರಿಗೆ ಒದಗಿಸಿದ್ದರು.
ಇದನ್ನೂ ಓದಿ; ತೆಲಂಗಾಣ| ದಲಿತ ಮುಖ್ಯೋಪಾಧ್ಯಾಯರ ಮೇಲೆ ಅಯ್ಯಪ್ಪ ಭಕ್ತರಿಂದ ಹಲ್ಲೆ


