ಬಹುನಿರೀಕ್ಷಿತವಾಗಿದ್ದ ಅನರ್ಹ ಶಾಸಕರ ಕುರಿತಾದ ಮೊಕದ್ದಮೆಯಲ್ಲಿ ಇಂದು ಸುಪ್ರೀಂಕೋರ್ಟು ನಿರೀಕ್ಷಿತ ತೀರ್ಪನ್ನು ನೀಡಿದೆ. ಅವರು ಅನರ್ಹರೇ, ಆದರೆ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ಸುಪ್ರೀಂಕೋರ್ಟಿನ ತೀರ್ಪಿನ ಹಿಂದಿರಬಹುದಾದ ಸದುದ್ದೇಶವೇನಿರಬಹುದು? ಅನರ್ಹರು ಎನ್ನುವ ಟ್ಯಾಗ್ ಕೊಡೋಣ. ಆದರೆ, ಜನತಾ ನ್ಯಾಯಾಲಯಕ್ಕೆ ಹೋಗಿ ಸ್ಪರ್ಧೆ ಮಾಡಲಿ. ಜನರು ತೀರ್ಮಾನ ಮಾಡಲಿ ಎಂಬ ಸದುದ್ದೇಶವನ್ನು ಆರೋಪಿಸಬಹುದು.
ನಮ್ಮ ಸಂವಿಧಾನದ ಪ್ರಕಾರ ತೀವ್ರ ಸ್ವರೂಪದ ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಯಾಗಿರುವವರು ಸ್ಪರ್ಧೆ ಮಾಡುವಂತಿಲ್ಲ. ಆದರೆ, ಅಂತಹ ವ್ಯಕ್ತಿಗಳು ಸ್ಪರ್ಧೆ ಮಾಡಿದರೆ ಜನರು ಅವರನ್ನು ಚುನಾಯಿಸುವುದಿಲ್ಲವೇ? ಚುನಾಯಿಸುವ ಸಾಧ್ಯತೆ ಹೆಚ್ಚೇ ಇರಬಹುದು. ಅಲ್ಲಿ ಒಂದು ನೈತಿಕ ನಿರ್ಬಂಧವನ್ನು ಸಂವಿಧಾನವು ಒಡ್ಡಿದೆ. ಈ ಹಿನ್ನೆಲೆಯಲ್ಲಿ ಒಂದು ವಿಶ್ಲೇಷಣೆ ಮಾಡುವ ಅಗತ್ಯ ಇದೆ.
ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತಂದಾಗ ಎಲ್ಲಾ ಪಕ್ಷಗಳ ನಡುವೆ ಸಹಮತ ಇತ್ತು. ಹಾಗೆ ನೋಡಿದರೆ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಬಹುಮತವಿದ್ದು, ಯಾವ ಪಕ್ಷಾಂತರವೂ ಅಲುಗಾಡಿಸಲು ಸಾಧ್ಯವಿರದ ಸರ್ಕಾರವು (ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ) ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತ್ತು. ನಂತರದ ದಿನಗಳಲ್ಲಿ ಸುಪ್ರೀಂಕೋರ್ಟು ಸಹಾ ಅದಕ್ಕೆ ತನ್ನದೇ ರೀತಿಯಲ್ಲಿ ಮಾನ್ಯತೆಯನ್ನು ನೀಡಿತ್ತು.
ಮೂರನೇ ಒಂದು ಭಾಗದಷ್ಟು ಶಾಸಕರು ಒಟ್ಟಿಗೆ ಹೋದರೆ ಅದು ಪಕ್ಷಾಂತರವಾಗದು ಎಂಬುದು ನಂತರ ಮೂರನೇ ಎರಡು ಭಾಗ ಆದದ್ದಕ್ಕೂ ಕಾರಣವಿತ್ತು. ‘ಪಕ್ಷಾಂತರವನ್ನು ನಿಷೇಧಿಸಬೇಕು; ಏಕೆಂದರೆ ಇದು ಅನೈತಿಕವಾದುದು; ಗೆದ್ದ ಜನಪ್ರತಿನಿಧಿಗಳು ತಮ್ಮ ಸ್ವಂತ ಹಿತಾಸಕ್ತಿಗಾಗಿ ಮಾಡುತ್ತಿರುವ ಪಕ್ಷಾಂತರವಿದು’ ಎಂಬ ಕುರಿತು ಯಾರಿಗೂ ಅಸಮ್ಮತಿಯಿರಲಿಲ್ಲ. ಹೀಗಾಗಿ ಪಕ್ಷಾಂತರ ನಿಷೇಧ ಕಾನೂನನ್ನು ಗಟ್ಟಿ ಮಾಡುವ ಕೆಲಸ ನಡೆಯಿತು.
ಅದನ್ನೂ ಉಲ್ಲಂಘಿಸಲು ಕೆಲವು ದಾರಿಗಳನ್ನು ಅನೈತಿಕ ರಾಜಕಾರಣದಲ್ಲಿ ತೊಡಗಿರುವ ರಾಜಕೀಯ ಪಕ್ಷಗಳು ಕಂಡುಕೊಂಡವು. ಅದರಲ್ಲಿ ಒಂದು – ಸ್ಪೀಕರ್ ಅವರು ಪಕ್ಷಾಂತರಿಗಳ ಪರ ಇದ್ದರೆ, ವಿಳಂಬ ನೀತಿಯನ್ನು ಅನುಸರಿಸಿ ಶಾಸನಸಭೆಯ ಅವಧಿ ಮುಗಿಯುವತನಕ ಎಳೆದು ಅನರ್ಹಗೊಳಿಸಲು ಕೋರಿದ ದೂರೇ ಅಪ್ರಸ್ತುತವಾಗುವಂತೆ ಮಾಡುವುದು. ಎರಡು- ಆಡಳಿತ ಪಕ್ಷಕ್ಕೆ ಪಕ್ಷಾಂತರ ಮಾಡಿಸಲು ಶಾಸನಸಭೆಯ ಸದಸ್ಯರ ಕೈಯ್ಯಲ್ಲಿ ರಾಜೀನಾಮೆ ಕೊಡಿಸುವುದು. ನಂತರ ಅವರಿಗೆ ಅಧಿಕಾರ ನೀಡಿ, ಆಡಳಿತದ ಬಲದೊಂದಿಗೆ ಆಡಳಿತ ಪಕ್ಷದ ಟಿಕೆಟ್ ಮೇಲೆ ಸ್ಪರ್ಧಿಸಿ ಗೆಲ್ಲಿಸಿಕೊಂಡು ಬರುವುದು. ಇದನ್ನು ಬಿಜೆಪಿಯೇ ಶುರು ಮಾಡಿದ್ದರಿಂದ ಮತ್ತು ಹೆಚ್ಚು ಬಳಸಿದ್ದರಿಂದ ‘ಆಪರೇಷನ್ ಕಮಲ’ ಎಂಬ ಹೆಸರಿನಲ್ಲಿ ಚಾಲ್ತಿಯಲ್ಲಿದೆ.
ಅಂತಹ ಆಪರೇಷನ್ ಕಮಲಕ್ಕೆ ಮದ್ದು ಕಂಡುಕೊಳ್ಳುವುದು ಬಹಳ ಅಗತ್ಯವಿತ್ತು. ಆದರೆ, ಸ್ವತಃ ಬಿಜೆಪಿ (ಅಥವಾ ಇನ್ನಾವುದೋ ಪಕ್ಷ) ಅಧಿಕಾರದಲ್ಲಿದ್ದಾಗ ಅವರದ್ದೇ ಸ್ಪೀಕರ್ ಇರುವುದರಿಂದ ಅನರ್ಹತೆ ಆಗುತ್ತಿರಲಿಲ್ಲ. ಈ ಸಾರಿ ಕರ್ನಾಕಟದಲ್ಲಿ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿತ್ತು. ಅಧಿಕಾರದಲ್ಲಿದ್ದ ಸಮ್ಮಿಶ್ರ ಸರ್ಕಾರದ ಶಾಸಕರನ್ನು ಸೆಳೆದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದು ರಾಜ್ಯದಲ್ಲಿ ವಿರೋಧ ಪಕ್ಷದಲ್ಲಿದ್ದ ಪಕ್ಷವಾದ ಬಿಜೆಪಿಯು ಪಕ್ಷಾಂತರ ಮಾಡಿಸಿತ್ತು. ಹೀಗಾಗಿ ಸಮ್ಮಿಶ್ರ ಸರ್ಕಾರದ ಪಕ್ಷಗಳ ಬೆಂಬಲದೊಂದಿಗೆ (ವಾಸ್ತವದಲ್ಲಿ ಸರ್ವಾನುಮತದಿಂದ) ಆಯ್ಕೆಯಾಗಿದ್ದ ಸ್ಪೀಕರ್ ರಮೇಶ್ ಕುಮಾರ್ ಅವರು ತೀರ್ಮಾನ ತೆಗೆದುಕೊಳ್ಳುವ ಸ್ಥಾನದಲ್ಲಿದ್ದರು. ಅವರು ಸದರಿ ಶಾಸಕರನ್ನು ಅನರ್ಹಗೊಳಿಸಿದರು ಮತ್ತು ಷೆಡ್ಯೂಲ್ 10ರ ಪ್ರಕಾರ ವಿಧಾನಸಭೆಯ ಈ ಅವಧಿ ಮುಗಿಯುವವರೆಗೆ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ತೀರ್ಪಿತ್ತಿದ್ದರು. ಒಂದು ರೀತಿಯಲ್ಲಿ ಅದು ಆಪರೇಷನ್ ಕಮಲಕ್ಕೆ ಮದ್ದಾಗಿತ್ತು.
ಅದು ನಂತರ ಸುಪ್ರೀಂಕೋರ್ಟಿನ ಮೆಟ್ಟಿಲೇರಿತ್ತು. ಇವೆಲ್ಲದರಿಂದ ಶಾಸಕರುಗಳು ಗುಂಪಾಗಿ, ಒಂದು ನಿರ್ದಿಷ್ಟ ಯೋಜನೆಯ ಭಾಗವಾಗಿ ವಿರೋಧ ಪಕ್ಷವನ್ನು ಸ್ವಂತ ಹಿತಾಸಕ್ತಿಗಾಗಿ ಅಧಿಕಾರಕ್ಕೆ ತರಲೆಂದೇ (ಅಂದರೆ ಪಕ್ಷಾಂತರ ಮಾಡಲೆಂದೇ) ರಾಜೀನಾಮೆಗೆ ಮುಂದಾಗಿದ್ದಾರೆ ಎಂಬುದು ಸ್ಪಷ್ಟವಿತ್ತು. ಅದಕ್ಕೆ ಯಡಿಯೂರಪ್ಪನವರ ಆಡಿಯೋ ಕಡೆಯ ಸಾಕ್ಷಿಯಾಗಿತ್ತೇ ಹೊರತು, ಬೇಕಾದಷ್ಟು ಸಾಂದರ್ಭಿಕ ಸಾಕ್ಷಿಗಳಿತ್ತು. ಹೀಗಿದ್ದುದರಿಂದ, ಸದರಿ ಶಾಸಕರನ್ನು ಹಾಲಿ ವಿಧಾನಸಭೆಯ ಅವಧಿ ಮುಗಿಯುವವರೆಗೂ ಚುನಾವಣೆಗೆ ಸ್ಪರ್ಧಿಸಲು ಸುಪ್ರಿಂಕೋರ್ಟು ಯಾವ ನಿರ್ಬಂಧ ವಿಧಿಸುತ್ತದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಒಂದು ವೇಳೆ ಅದು ಸರಿ ಇಲ್ಲ ಎನ್ನುವುದಾದರೂ ಬೇರೆ ಯಾವ ಮದ್ದು ನೀಡಲಿದೆ ಎಂಬುದು ಪ್ರಜಾತಂತ್ರದ ಉಳಿವಿನ ದೃಷ್ಟಿಯಿಂದ ಮಹತ್ವದ್ದಾಗಿತ್ತು.
ರಾಜೀನಾಮೆ ನೀಡಿ ಬೇರೆ ಪಕ್ಷಕ್ಕೆ ಹೋಗಲು ತುದಿಗಾಲಿನಲ್ಲಿ ನಿಂತಿದ್ದ ಗುಂಪಿಗೆ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎನ್ನುವುದು ಉಡುಗೊರೆಯೇ ಹೊರತು ಶಿಕ್ಷೆಯಲ್ಲ. ಹೀಗಿರುವಾಗ ಅನರ್ಹತೆಯನ್ನು ಎತ್ತಿ ಹಿಡಿದಿದ್ದೇವೆ ಎನ್ನುವುದಕ್ಕೆ ಯಾವ ಅರ್ಥವೂ ಇದ್ದಂತಿಲ್ಲ.
ಅನೈತಿಕ ಪಕ್ಷಾಂತರವನ್ನು ತಡೆಯಬಲ್ಲ ಯಾವ ಮದ್ದನ್ನು ನೀಡುವಲ್ಲಿಯೂ ಸುಪ್ರೀಂಕೋರ್ಟು ಸಫಲವಾಗಿಲ್ಲ ಎಂಬುದು ವಿಷಾದದ ಸಂಗತಿಯಾಗಿದೆ. ಅನರ್ಹಗೊಂಡ ಬಹುತೇಕ ಶಾಸಕರು ಈಗ ಬಿಜೆಪಿ ಟಿಕೆಟ್ ಮೇಲೆ ಸ್ಪರ್ಧಿಸಲಿದ್ದಾರೆ ಎನ್ನುವುದು ಸುಪ್ರೀಂಕೋರ್ಟು ವಿಫಲವಾದದ್ದಕ್ಕೆ ಸಾಕ್ಷಿಯಾಗಲಿದೆ. ಒಂದು ರೀತಿಯಲ್ಲಿ ಬಿಜೆಪಿಯಿಂದ ಅನರ್ಹರಿಗೆ ಟಿಕೆಟ್ ನೀಡುವುದು ಮತ್ತು ಪಡೆಯುವುದು ಸುಪ್ರೀಂಕೋರ್ಟನ್ನೇ ಅಣಕ ಮಾಡಿದಂತೆಯೂ ಆಗುವ ಸಾಧ್ಯತೆ ಇದೆ. ಯಾವುದಕ್ಕೂ ಉಪಚುನಾವಣೆಯಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು.


