ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಕಳೆದ 20 ದಿನಗಳ ಹಿಂದೆ ಅಂತರ್ಜಾತಿ ವಿವಾಹವಾಗಿದ್ದ ಯುವಜೋಡಿಗಳ ಪ್ರಕರಣ ಸಿನಿಮಿಯ ರೀತಿಯಲ್ಲಿ ಕೊನೆಗೊಂಡಿದೆ. ಕೊನೆಗೂ ಆ ಪ್ರಕರಣದಲ್ಲಿ ಊರ ಹಿರಿಯರು ಎನಿಸಿಕೊಳ್ಳುವ ನೈತಿಕತೆಯ ವಾರಸುದಾರರು ಹುಡುಗ ಹುಡುಗಿಯನ್ನು ಬೇರ್ಪಡಿಸಿ ದುರಂತ ಅಂತ್ಯದ ಷರಾ ಬರೆದಿದ್ದಾರೆ.
ಹುಡುಗ ಗಾಣಿಗ ಸಮುದಾಯದವ. ಹುಡುಗಿ ಮಾದರ ಜಾತಿಗೆ ಸೇರಿದವಳು. ಈ ಯುವಪ್ರೇಮಿಗಳು ಕಳೆದ ಅಕ್ಟೋಬರ್ 24ರಂದು ಕಾನೂನುಬದ್ಧವಾಗಿಯೇ ರಜಿಸ್ಟರ್ ಮದುವೆಯಾಗಿದ್ದರು. ಕೇವಲ ಮದುವೆಯಾಗಿ 19 ದಿನಗಳಲ್ಲೆ ಮುರಿದು ಬಿದ್ದಿದೆ. ಮತ್ತು ಈ ಪ್ರಕರಣ ಗೊತ್ತಿದ್ದರೂ ಏನು ಮಾಡಲಿಕ್ಕಾಗದೇ ಹಲವಾರು ಜೀವಪರ ಮನಸ್ಸುಗಳು ದಲಿತಪರ ಸಂಘಟನೆಗಳು ಏನೂ ಮಡಲಾಗದೇ ಕೈ ಚೆಲ್ಲಿ ಕುಳಿತಿವೆ.

ನಿಮ್ಮ ಮದುವೆಯನ್ನು ಮಾನ್ಯ ಮಾಡುತ್ತೇವೆ ಬನ್ನಿ ಎಂದು ಊರಿಂದ ತಪ್ಪಿಸಿಕೊಂಡು ದೂರ ಹೋಗಿದ್ದ ಯುವಪ್ರೇಮಿಗಳನ್ನು ಊರಿನ ನೈತಿಕತೆಯ ವಾರಸುದಾರರು ವಾಪಸ್ ಕರೆಸಿಕೊಂಡಿದ್ದರು. ಆದರೆ, ಆದದ್ದೇ ಬೇರೆ. ಹುಡುಗಿಯದ್ದು ಕೀಳುಜಾತಿಯಾದ್ದರಿಂದ ಹುಡುಗಿಯನ್ನು ಮರೆತುಬಿಡಬೇಕೆಂದು ಹುಡುಗನಿಗೆ ವಾರ್ನಿಂಗ್ ಮಾಡಿದ್ದಾರೆ. ಹುಡುಗ ಒಪ್ಪದಿದ್ದುದ್ದಕ್ಕೆ ಅವನನ್ನು ಮೈ ಬಾಯುವ ಹಾಗೆ ಮುಖ ಮೋತಿಯನ್ನದೇ ಬಡಿದು ಹೆದರಿಸಿದ್ದಾರೆ. ಇದು ಗೊತ್ತಾಗುತ್ತಿದ್ದಂತೆ ಕೆಲವು ದಲಿತಪರ ಹೋರಾಟಗಾರರಾದ ನಾಗಮ್ಮ, ರಮೇಶ ಕೋಳೂರು ಮತ್ತಿತರರು ಧಾವಿಸಿ ಬಂದು ಹುಡುಗನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಜೊತೆಗೆ ಎರಡು ಕಡೆಯವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಪ್ರಕರಣಕ್ಕೆ ಸುಖಾಂತ್ಯ ಹಾಡಲು ನೋಡಿದ್ದಾರೆ.
ಆದರೆ, ಅಷ್ಟೊತ್ತಿಗೆಗಾಗಲೇ ನೈತಿಕ ವಾರಸುದಾರರು ಹೆದರಿಸುವಿಕೆ ಮತ್ತು ಪುಸಲಾಯಿಸುವಿಕೆ ಎಷ್ಟರಮಟ್ಟಿಗೆ ಇತ್ತೆಂದರೆ ಸಂಜೆ ಅಷ್ಟೊತ್ತಿಗೆ ನಾನು ಆ ಹುಡುಗನೊಂದಿಗೆ ಬಾಳ್ವೆ ಮಾಡಲು ಸುತಾರಂ ಇಷ್ಟವಿಲ್ಲ. ನನಗೆ ಡೈವೋರ್ಸ್ ಕೊಡಿಸಿ ಎಂದು ಪೊಲೀಸರ ಮುಂದೆಯೇ ಹುಡುಗಿ ಉಲ್ಟಾ ಹೊಡೆದಿದ್ದಾಳೆ. “ನೀನು ಅವನನ್ನು ಬಿಟ್ಟರೆ ನಿನ್ನನ್ನು ಇವನೊಂದಿಗೆ ಮದುವೆಯ ಮಾಡುತ್ತೇವೆ ಬಿಡು” ಎಂದು ನೈತಿಕತೆಯ ವಾರಸುದಾರರು ಮೊದಲೇ ರೆಡಿ ಇಟ್ಟುಕೊಂಡಿದ್ದ ಸಜಾತಿಯ ವರನನ್ನು ಹುಡುಗಿ ಮುಂದೆ ನಿಲ್ಲಿಸಿದ್ದಾರೆ. “ಇವನೊಂದಿಗೆ ಮದವೆ ಮಾಡುವ ಜವಾಬ್ಧಾರಿ ನಮ್ಮದು” ಎಂದು ಹುಡುಗಿಗೆ ಧೈರ್ಯ ತುಂಬಿದ್ದಾರೆ. ಕೋಲೆ ಬಸವನಂತ ಆ ಹುಡುಗ ಕೂಡ ತಲೆಯಾಡಿಸಿದ್ದಾನೆ.
ಹೀಗೆ ಸಂಜೆಯ ಹೊತ್ತಿಗೆ ಪೊಲೀಸ್ ಠಾಣೆಯಲ್ಲೆ ಸಿನಿಮಿಯ ರೀತಿಯಲ್ಲಿ ಉಲ್ಟಾ ಹೊಡೆದ ಪ್ರಕರಣ ನೋಡಿದ ಪೊಲೀಸ್ ಇನ್ಸಪೆಕ್ಟರ್ ಸಹ “ಆ ಹುಡುಗ ಹುಡುಗಿಯ ಬದುಕನ್ನು ಬಲಿಪಶು ತೊಗೊತ್ತಿದ್ದಿರಲ್ಲ ನೀವು, ನಾಚಿಕೆಯಾಗಲ್ವಾ, ಈ ಹೊಸ ಹುಡುಗ ಈ ಹುಡುಗಿಯನ್ನು ಮುಂದೆ ಚನ್ನಾಗಿ ಬಾಳಿಸದಿದ್ದರೆ, ಅನುಮಾನಪಡತೊಡಗಿದರೆ ಏನ್ ಮಾಡ್ತಿರಿ ಎಂದು ಎರಡೂ ಕಡೆಯವರನ್ನು ಹತಾಶೆಯಿಂದ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಂತೂ ಬೆಳಗ್ಗೆ ನನ್ನ ಗಂಡನನ್ನು ಕಾಪಾಡಿ ಎಂದು ಬೊಬ್ಬಿರಿಯುತ್ತಿದ್ದ ಹುಡುಗಿ ಸಂಜೆ ಅಷ್ಟೊತ್ತಿಗೆ ಆ ಹುಡುಗನೇ ಬೇಡ ಎಂದು ರೋಧಿಸತೊಡಗಿದ್ದಾಳೆ. ಇತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ, ಭಯಮಿಶ್ರಿತ ಗೊಂದಲದಲ್ಲಿದ್ದ ಹುಡುಗನ ಕಣ್ಣಂಚು ತೇವ ತೇವ. ನನ್ನ ಹುಡುಗಿಯನ್ನು ನನಗೆ ಕೊಡಿಸಿದರೆ ಸಾಕು ಎಂದು ಆತ ಅಳತೊಡಗಿದ್ದಾನೆ.
ಗದಗ ಜಿಲ್ಲೆಯ ಲಕ್ಕಲಕಟ್ಟಿ ಗ್ರಾಮದಲ್ಲಿ ಕಳೆದ ಒಂದು ವಾರದ ಹಿಂದೆ ಅಷ್ಟೆ ಅಂತರ್ಜಾತಿ ವಿವಾಹವಾಗಿದ್ದ ಯುವ ದಂಪತಿಗಳ ಜೋಡಿ ಕೊಲೆ ನಡೆದಿತ್ತು. ಅದು ನಡೆದ ಒಂದೇ ವಾರದಲ್ಲಿ ಈಗ ಈ ಪ್ರಕರಣ ನಡೆದಿದೆ. ಹಾಗೆ ನೋಡಿದರೆ ಜಾತಿ ಗೋಡೆಯನ್ನು ಕಿತ್ತೆಸೆದು, ಧರ್ಮದ ಬೇಲಿಗೆ ಕಿವಿಗೊಡದೇ ಹಲವಾರು ಯುವ ಜೋಡಿಗಳು ಪ್ರೀತಿಸಿ ಮದುವೆಯಾಗುವ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಆದರೆ, ಆ ಜೋಡಿಗಳು ನೆಮ್ಮದಿಯಿಂದ ಬಾಳುವೆ ಮಾಡುವ ವಾತಾವರಣ ಉತ್ತರ ಕರ್ನಾಟಕ ಭಾಗದಲ್ಲಿ ಕಂಡು ಬರುವುದಿಲ್ಲ. ಈ ಭಾಗದಲ್ಲಿ ದಲಿತ ಸಂಘರ್ಷ ಸಮಿತಿಗಳು ಸಹ ಅಷ್ಟೊಂದು ಸಕ್ರಿಯವಾಗಿಲ್ಲ.
ಮಾಡದ ತಪ್ಪಿಗೆ ಆತ ತನ್ನ ಹುಡುಗಿಯನ್ನು ಇನ್ನೊಂದು ಹುಡುಗನೊಂದಿಗ ಮದುವೆ ಮಾಡಿಸಲು ಖರ್ಚಿನ ಬಾಬ್ತು ಎಂದು ಮೂರು ಲಕ್ಷ ರೂಪಾಯಿ ತಪ್ಪುದಂಡ ಕೊಡಬೇಕು. ಈ ಹಣದಲ್ಲಿ ಒಂದಿಷ್ಟು ಪಾಲು ಎರಡು ಕಡೆಯ ನೈತಿಕ ವಾರಸುದಾರರಿಗೂ ಹಂಚಿಕೆಯಾಗುತ್ತದೆ ಎಂಬ ಆರೋಪವೂ ಸ್ಥಳಿಯರಿಂದ ಕೇಳಿ ಬಂದಿದೆ.
ಈ ಎರಡು ಪ್ರಕರಣಗಳ ಹಿಂದೆ ನಾವು ನಿಮ್ಮ ಹಿಂದೆ ಇದ್ದೇವೆ ಎಂದು ಧೈರ್ಯ ತುಂಬುವ, ಕರೆತಂದು ಮದುವೆ ಮಾಡಿಸುವ, ಇಂಥ ಯುವಜೋಡಿಗಳ ಮೇಲೆ ಹಲ್ಲೆಗಳು ನಡೆದಾಗ ಬೀದಿಗಿಳಿದು ಪ್ರತಿಭಟನೆ ಮಾಡುವ ಸಂಘಟನೆಗಳ, ಜೀವಪರ ಮನಸ್ಸುಗಳ ಕೊರತೆ ಇದೆ. ಹೀಗಾಗಿ ಇಲ್ಲಿನ ಅಂತರ್ಜಾತಿ ವಿವಾಹಗಳು ದುರಂತ ಅಂತ್ಯ ಕಾಣುತ್ತವೆ ಎಂದು ಗದಗದ ದಲಿತಪರ ಹೋರಾಟಗಾರ ರಮೇಶ ಕೋಳೂರು ನೋವಿನಿಂದ ಹೇಳುತ್ತಿದ್ದಾರೆ.



ಜಾತೀಯತೆ ಎನ್ನುವುದು ಮೇಲ್ಜಾತಿಯ ಜನರಲ್ಲಿ ಮಾತ್ರವಲ್ಲ, ಬಹುತೇಕ ಜಾತಿಗಳಲ್ಲಿ ತುಂಬಿ ತುಳುಕುತ್ತಿದೆ. ಇದೇ ಈ ದೇಶದ ದುರಂತ.