4ನೇ ತರಗತಿಯ ಬಾಲಕಿಗೆ ಲೈಂಗಿಕ ದೌರ್ಜನ್ಯದಿಂದ ಸಿಟ್ಟಿಗೆದ್ದ ಪೋಷಕರು ಮತ್ತು ಸಂಬಂಧಿಕರು ಶಾಲೆಗೆ ನುಗ್ಗಿ ಧ್ವಂಸಗೊಳಿಸಿರುವ ಘಟನೆ ತಮಿಳುನಾಡಿನ ತಿರುಚಿಯಲ್ಲಿರುವ ಖಾಸಗಿ ಶಾಲೆಯುಲ್ಲಿ ನಡೆದಿದೆ.
ಮೂಲಗಳ ಪ್ರಕಾರ, ಜಿಲ್ಲೆಯ ಮನಪ್ಪರೈ ಪ್ರದೇಶದ ಖಾಸಗಿ ಶಾಲೆಯಲ್ಲಿ ಓದುತ್ತಿರುವ ಬಾಲಕಿ, ಶಾಲಾ ಸಿಬ್ಬಂದಿಯ ಪತಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ತನ್ನ ಪೋಷಕರಿಗೆ ತಿಳಿಸಿದ್ದಾಳೆ.
ಇದರಿಂದ ಆಘಾತಗೊಂಡ ಪೋಷಕರು ಮತ್ತು ಮಗುವಿನ ಸಂಬಂಧಿಕರು, ಗುರುವಾರ ರಾತ್ರಿ ಶಾಲಾ ಆವರಣಕ್ಕೆ ನುಗ್ಗಿ ಆಸ್ತಿಪಾಸ್ತಿಗಳನ್ನು ಧ್ವಂಸ ಮಾಡಿದರು. ಪ್ರತ್ಯಕ್ಷದರ್ಶಿಗಳು ಹೇಳುವಂತೆ ಗುಂಪು ಕಲ್ಲುಗಳನ್ನು ಎಸೆದು ಶಾಲಾ ಕೋಣೆಯ ಕಿಟಕಿಗಳನ್ನು ಒಡೆದರು ಮತ್ತು ಹತ್ತಿರದಲ್ಲಿ ನಿಲ್ಲಿಸಿದ್ದ ವಾಹನದ ಗಾಜುಗಳನ್ನು ಸಹ ಹಾನಿಗೊಳಿಸಿದರು.
ನಂತರ ಅವರು ಶಾಲಾ ಸಿಬ್ಬಂದಿಯ ಪತಿ ವಸಂತ ಕುಮಾರ್ ಎಂದು ಗುರುತಿಸಲಾದ ಆರೋಪಿ ಮೇಲೆ ಹಲ್ಲೆ ನಡೆಸಿದರು.
ಪೊಲೀಸರ ಮಧ್ಯಪ್ರವೇಶದ ನಂತರ ಕುಮಾರ್ ಅವರನ್ನು ರಕ್ಷಿಸಲಾಯಿತು; ನಂತರ ಚಿಕಿತ್ಸೆಗಾಗಿ ಮನಪ್ಪರೈ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದರ ಹೊರತಾಗಿಯೂ, ಘಟನೆಗೆ ಸಂಬಂಧಿಸಿದಂತೆ ಬಂಧನಕ್ಕೆ ಒತ್ತಾಯಿಸಿ ಅನೇಕರು ಪ್ರತಿಭಟನೆ ಮುಂದುವರೆಸಿದರು. ನೊಚಿಮೇಡು ಪ್ರದೇಶದ ಬಳಿ ರಸ್ತೆ ತಡೆ ನಡೆಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಸೆಲ್ವನಾಗರಥಿನಂ ಪ್ರತಿಭಟನಾಕಾರರಿಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪ್ರಕರಣದಲ್ಲಿ ಕುಮಾರ್ ಮತ್ತು ಇತರ ಮೂವರನ್ನು ಬಂಧಿಸಲಾಗಿದ್ದು, ಪೊಲೀಸರು ಶಾಲಾ ಸಿಬ್ಬಂದಿಗಾಗಿ ಹುಡುಕಾಟ ನಡೆಸಿದ್ದಾರೆ.
“ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು, ನಾವು ಇನ್ನೂ ಒಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಶಾಲೆಗಳಲ್ಲಿ ಮತ್ತು ಅದರ ಮೂಲಕ ಮಕ್ಕಳು ಯಾವುದೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗದಂತೆ ನೋಡಿಕೊಳ್ಳಲು ಅಧಿಕಾರಿಗಳು, ಶಾಲಾ ಆಡಳಿತ ಮಂಡಳಿಯನ್ನು ಒಳಗೊಂಡ ಸಮಗ್ರ ಜಾಗೃತಿ ಶಿಬಿರವನ್ನು ರಚಿಸಲು ಪ್ರಯತ್ನಿಸಲಾಗುವುದು. ಈ ಪ್ರಕ್ರಿಯೆಯಲ್ಲಿ ನಾವು ಶಾಲೆಯ ಸಿಸಿಟಿವಿಗಳನ್ನು ಸಹ ಪರಿಶೀಲಿಸುತ್ತೇವೆ” ಎಂದು ಸೆಲ್ವನಾಗರಥಿನಂ ಹೇಳಿದರು.
ಇದನ್ನೂ ಓದಿ; ರ‍್ಯಾಗಿಂಗ್ ವಿರೋಧಿ ಮಾನದಂಡ ಪಾಲಿಸದ 18 ವೈದ್ಯಕೀಯ ಕಾಲೇಜುಗಳು; ಯುಜಿಸಿಯಿಂದ ಶೋಕಾಸ್ ನೋಟಿಸ್


