ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಮಹಾ ಕುಂಭವನ್ನು ‘ಅರ್ಥಹೀನ’ ಎಂದು ಕರೆದಿರುವುದು ವಿವಾದಕ್ಕೆ ಕಾರಣವಾಗಿದೆ. ಮಹಾಕುಂಭಕ್ಕೆ ತೆಳುತ್ತಿದ್ದ 18 ಜನರು ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಬಲಿಯಾದ ಘಟನೆಗೆ ರೈಲ್ವೆ ಇಲಾಖೆಯನ್ನು ದೂಷಿಸಿದ ಆರ್‌ಜೆಡಿ ಮುಖ್ಯಸ್ಥರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ನಡೆದ ಘಟನೆಯ ಬಗ್ಗೆ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವನ್ನು ಅವರು ತರಾಟೆಗೆ ತೆಗೆದುಕೊಂಡರು, ರೈಲ್ವೆ ಸಚಿವರ ರಾಜೀನಾಮೆಗೆ ಒತ್ತಾಯಿಸಿದರು.
“ಕಾಲ್ತುಳಿತದ ಪ್ರಸಂಗವು ತುಂಬಾ ತೊಂದರೆದಾಯಕವಾಗಿದೆ; ಇದು ಕೇಂದ್ರ ಸರ್ಕಾರ ಮಾಡಿದ ಅಸಮರ್ಪಕ ವ್ಯವಸ್ಥೆಗಳನ್ನು ಬಹಿರಂಗಪಡಿಸಿದೆ. ಈ ಘಟನೆಯ ನಂತರ ರೈಲ್ವೆ ಸಚಿವರು ರಾಜೀನಾಮೆ ನೀಡಬೇಕು. ಇದು ರೈಲ್ವೆಯ ಸಂಪೂರ್ಣ ವೈಫಲ್ಯ” ಎಂದು ಅವರು ಪ್ರತಿಪಾದಿಸಿದರು.
ಜನಸಂದಣಿಯಿಂದ ಕೂಡಿದ ರೈಲ್ವೆ ನಿಲ್ದಾಣದಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದರು. ಒಂದು ಡಜನ್‌ಗೂ ಹೆಚ್ಚು ಜನರು ಗಾಯಗೊಂಡಿದ್ದು, ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಬಿಹಾರದ ಜನರ ನಿಖರ ಸಂಖ್ಯೆ ಮತ್ತು ಗಾಯಗೊಂಡವರ ಬಗ್ಗೆ ವಿವರಗಳನ್ನು ನಿರೀಕ್ಷಿಸಲಾಗಿದೆ.
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರು ಧಾರ್ಮಿಕ ಮೇಳಕ್ಕಾಗಿ ಲಕ್ಷಾಂತರ ಜನರು ಪ್ರಯಾಗ್‌ರಾಜ್‌ಗೆ ಹೋಗುವ ಬಗ್ಗೆ ಕೇಳಿದಾಗ, “ಕುಂಭಕ್ಕೆ ಯಾವುದೇ ಅರ್ಥವಿಲ್ಲ… ಇದು ಕೇವಲ ಅರ್ಥಹೀನ” ಎಂದು ಹೇಳಿದರು. ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಬಿಹಾರ ಬಿಜೆಪಿ ವಕ್ತಾರ ಮನೋಜ್ ಶರ್ಮಾ, ಇದು ಹಿಂದೂ ಧರ್ಮದ ಬಗ್ಗೆ ಆರ್‌ಜೆಡಿಯ ಮನಸ್ಥಿತಿಯನ್ನು ಬಹಿರಂಗಪಡಿಸಿದೆ ಎಂದು ಹೇಳಿದರು.
“ಅವರು ತಮ್ಮ ತುಷ್ಟೀಕರಣ ರಾಜಕೀಯದಿಂದಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆರ್‌ಜೆಡಿ ನಾಯಕರು ಯಾವಾಗಲೂ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಅವಮಾನಿಸಿದ್ದಾರೆ. ಮಹಾ ಕುಂಭಮೇಳವನ್ನು ಅರ್ಥಹೀನ ಎಂದು ಕರೆದ ಲಾಲು ಪ್ರಸಾದ್ ಅವರ ಇತ್ತೀಚಿನ ಹೇಳಿಕೆಯು ಹಿಂದೂ ಧರ್ಮದ ಬಗ್ಗೆ ಪಕ್ಷದ ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ” ಎಂದು ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ; ಪ್ರಧಾನಿ ಮೋದಿ ವ್ಯಂಗ್ಯಚಿತ್ರ ಪ್ರಕಟಿಸಿದ ವೆಬ್‌ಸೈಟ್ ನಿರ್ಬಂಧ; ಕೇಂದ್ರ ಸರ್ಕಾರದ ನಡೆ ಖಂಡಿಸಿದ ಸ್ಟಾಲಿನ್


