ರಷ್ಯಾ-ಉಕ್ರೇನ್ ನಡುವಿನ ಯುದ್ಧ ಮೂರು ವರ್ಷ ಪೂರೈಸಿರುವ ಹಿನ್ನೆಲೆ, ಶಾಂತಿ ಸ್ಥಾಪಿಸುವ ಸಂಬಂಧ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುನ್‌ಜಿಎ) ಮಂಡಿಸಿದ ನಿರ್ಣಯದ ಮೇಲಿನ ಮತದಾನ ಸೋಮವಾರ (ಫೆ.24) ನಾಟಕೀಯ ಬೆಳವಣಿಗೆಗೆ ಕಾರಣವಾಯಿತು.
ಉಕ್ರೇನ್ ಮೇಲಿನ ದಾಳಿಗೆ ರಷ್ಯಾವನ್ನು ದೂಷಿಸಲು ನಿರಾಕರಿಸಿದ ಡೊನಾಲ್ಡ್ ಟ್ರಂಪ್ ಆಡಳಿತ, ಈ ಹಿಂದೆ ಬೈಡೆನ್ ಆಡಳಿತದಲ್ಲಿ ರಷ್ಯಾ ವಿರುದ್ದ ನೀಡಿದ್ದ ಹೇಳಿಕೆಯನ್ನು ಹಿಂಪಡೆಯಿತು.
ವರದಿಗಳ ಪ್ರಕಾರ, ರಷ್ಯಾಗೆ ಪೂರಕವಾದ ರೀತಿಯಲ್ಲಿ ಯುದ್ಧ ಕೊನೆಗೊಳಿಸಲು ಅಮೆರಿಕ ಮುಂದಾಗಿದೆ. ಉಕ್ರೇನ್ ಹೊರಗಿಟ್ಟು ರಷ್ಯಾ ಜೊತೆ ಮಾತ್ರ ಚರ್ಚಿಸಿ ಏಕಪಕ್ಷೀಯ ನಿರ್ಣಯ ತೆಗೆದುಕೊಳ್ಳುತ್ತಿದೆ. ಇದಕ್ಕೆ ಯುರೋಪಿಯನ್ ಒಕ್ಕೂಟದ ಅದರ ಮಿತ್ರ ರಾಷ್ಟ್ರಗಳೇ ವಿರೋಧ ವ್ಯಕ್ತಪಡಿಸಿವೆ.
ಸೋಮವಾರ ವಿಶ್ವಸಂಸ್ಥೆಯಲ್ಲಿ, ಅಮೆರಿಕ ಮತ್ತು ರಷ್ಯಾ ಎರಡೂ ಯುರೋಪಿಯನ್ ಒಕ್ಕೂಟ ಬೆಂಬಲಿತ ನಿರ್ಣಯವನ್ನು ವಿರೋಧಿಸಿದವು. ಏಕೆಂದರೆ, ಆ ನಿರ್ಣಯದಲ್ಲಿ ಉಕ್ರೇನ್ ಮೇಲಿನ ದಾಳಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ನೇರವಾಗಿ ದೂಷಿಸಲಾಗಿದೆ.
ರಷ್ಯಾ-ಉಕ್ರೇನ್ ಯುದ್ಧದ ಕುರಿತಾದ ಹಿಂದಿನ ನಿರ್ಣಯಗಳಿಗೆ ಹೋಲಿಸಿದರೆ ಕಡಿಮೆ ಬೆಂಬಲವನ್ನು ಗಳಿಸಿದ ಈ ನಿರ್ಣಯವು, ರಷ್ಯಾವನ್ನು ಬಲವಾಗಿ ಟೀಕಿಸಿದೆ ಮತ್ತು ಉಕ್ರೇನ್‌ನ ಪ್ರಾದೇಶಿಕ ಸಮಗ್ರತೆ ಮತ್ತು ಅದರ ಗಡಿಗಳ ಉಲ್ಲಂಘನೆಯನ್ನು ಒತ್ತಿ ಹೇಳಿದೆ.
ಅಮೆರಿದಕ ದ್ವಂದ್ವ ನೀತಿಯ ಕಾರಣ, ಉದ್ವಿಗ್ನತೆ ಕಡಿಮೆ ಮಾಡಲು, ಬೇಗನೆ ಕದನ ವಿರಾಮವನ್ನು ಘೋಷಿಸಲು ಮತ್ತು ಯುದ್ಧಕ್ಕೆ ಶಾಂತಿಯುತ ಪರಿಹಾರವನ್ನು ಕೋರುವ ಪ್ರತ್ಯೇಕ ನಿರ್ಣಯದಿಂದ ಭಾರತ ಮತ್ತು ಚೀನಾ ದೂರ ಉಳಿದವು.
ಭಾರತ ಮತ್ತು ಚೀನಾ ಜೊತೆಗೆ, ಬ್ರೆಝಿಲ್, ಇರಾನ್, ಇರಾಕ್, ಪಾಕಿಸ್ತಾನ, ಬಾಂಗ್ಲಾದೇಶ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಯುಎಇ, ವಿಯೆಟ್ನಾಂ ಸೇರಿದಂತೆ 65 ಯುಎನ್ ಸದಸ್ಯ ರಾಷ್ಟ್ರಗಳು ನಿರ್ಣಯದಿಂದ ದೂರ ಉಳಿದವು.
ನಂತರ, ಅಮೆರಿಕ ಮತ್ತು ರಷ್ಯಾ ಎರಡೂ ರಾಷ್ಟ್ರಗಳು ರಷ್ಯಾದ ಕಡೆಗೆ ಬೆರಳು ತೋರಿಸದೆ ಯುದ್ಧವನ್ನು ತ್ವರಿತವಾಗಿ ಕೊನೆಗೊಳಿಸಲು ಕರೆ ನೀಡುವ ಭದ್ರತಾ ಮಂಡಳಿಯ ನಿರ್ಣಯವನ್ನು ಬೆಂಬಲಿಸಿದವು.
ರಷ್ಯಾವನ್ನು ದೂಷಿಸುವ ನಿರ್ಣಯವನ್ನು ಅಮೆರಿಕ ಮತ್ತು ರಷ್ಯಾ ವಿರೋಧಿಸಿದ ಬಳಿಕ, ಜಿ-7 ರಾಷ್ಟ್ರಗಳು ನಿರ್ಣಯ ತೆಗೆದುಕೊಳ್ಳಲು ಹೆಣಗಾಡಿದವು. ಅದರ ಪರಿಣಾಮವಾಗಿ ತಟಸ್ಥ ನಿಲುವು ಅನುಸರಿವೆ.
ಯುರೋಪಿಯನ್ ರಾಷ್ಟ್ರಗಳು ಮತ್ತು ಯುರೋಪಿಯನ್ ಒಕ್ಕೂಟದಿಂದ ಯಾವುದೇ ಸಲಹೆ ಪಡೆಯದೆ, ಕೇವಲ ರಷ್ಯಾದ ವಿಷಯಗಳನ್ನು ಪರಿಣಿಸಿ ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಟ್ರಂಪ್ ಅತ್ಯಂತ ವೇಗದಿಂದು ಮುಂದುವರಿಯುತ್ತಿದ್ದಾರೆ. ” ಸೋಮವಾರ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದ ಅವರು ” ಯುದ್ದ ಕೊನೆಗೊಳಿಸುವ ನಿಟ್ಟಿನಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ನಾನು ಗಂಭೀರ ಚರ್ಚೆಗಳಲ್ಲಿ ತೊಡಗಿದ್ದೇನೆ” ಎಂದಿದ್ದರು.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈ ವಾರದಲ್ಲೇ ವಾಷಿಂಗ್ಟನ್‌ಗೆ ಪ್ರಯಾಣಿಸಿ ನೈಸರ್ಗಿಕ ಸಂಪನ್ಮೂಲಗಳ ಒಪ್ಪಂದಕ್ಕೆ ಸಹಿ ಹಾಕಬಹುದು ಎಂದು ಟ್ರಂಪ್ ಶ್ವೇತಭವನದಲ್ಲಿ ಹೇಳಿದ್ದರು. ಯುದ್ಧವನ್ನು ಕೊನೆಗೊಳಿಸಲು ಮತ್ತು ಅಮೆರಿಕ ನೀಡಿದ ಬೆಂಬಲದ ಋಣ ತೀರಿಸಲು ಟ್ರಂಪ್ ಈ ಒಪ್ಪಂದ ಅಗತ್ಯವೆಂದು ಹೇಳಿದ್ದಾರೆ.
ಆದರೆ, ಟ್ರಂಪ್ ಅವರ ಈ ನಡೆ ಉಕ್ರೇನ್ ಮೇಲೆ ಬೆದರಿಕೆ ಹಾಕಿ, ಯುದ್ಧ ನಿಲ್ಲಿಸುವ ನೆಪದಲ್ಲಿ ಲಾಭ ಪಡೆಯುವುದು ಮತ್ತು ರಷ್ಯಾ ಪರ ವಕಾಲತ್ತು ವಹಿಸಿದಂತೆ ಕಾಣುತ್ತಿದೆ.
ಜರ್ಮನಿ ಚುನಾವಣೆ | ಕನ್ಸರ್ವೇಟಿವ್ ಮೈತ್ರಿಕೂಟಕ್ಕೆ ಗೆಲುವು : ಫ್ರೆಡ್ರಿಕ್ ಮರ್ಝ್ ಹೊಸ ಚಾನ್ಸೆಲರ್


