ಯಾದಗಿರಿ ಜಿಲ್ಲೆಯ ಗ್ರಾಮವೊಂದರಲ್ಲಿ ಚಿಂದಿ ಆಯಲು ಹೋಗಿದ್ದ ಬುಡ್ಗ ಜಂಗಮ ಅಲೆಮಾರಿ ಸಮುದಾಯದ ಇಬ್ಬರು ಹೆಣ್ಣು ಮಕ್ಕಳ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಂಗಳವಾರ (ಫೆ.25) ಸಂಜೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ದಲಿತ ಮುಖಂಡ ವಡ್ಡಗೆರೆ ನಾಗರಾಜಯ್ಯ ಅವರು, “ಇಬ್ಬರು ಹೆಣ್ಣು ಮಕ್ಕಳ ಅತ್ಯಾಚಾರ ಕೊಲೆ ನಡೆದು ಹತ್ತು ದಿನಗಳಾಗಿವೆ. ಆದರೆ, ಈವರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸದಿರುವುದು ಖಂಡನೀಯ. ಇದು ಹಲವು ಅನುಮಾನಗಳಿವೆ ಎಡೆ ಮಾಡಿಕೊಟ್ಟಿದೆ. ಕರ್ನಾಟಕ ಎಂದಲ್ಲ, ಇಡೀ ದೇಶದಲ್ಲಿ ಪ್ರಸ್ತುತ ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ನಡೆಯುತ್ತಿದೆ. ಆದರೆ, ಸರ್ಕಾರಗಳು, ಪೊಲೀಸರು ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬಗಳ ಪರ ನಿಲ್ಲಬೇಕು. ಅತ್ಯಾಚಾರವೆಸಗಿ, ಕೊಲೆಗೈದವರನ್ನು ತಕ್ಷಣ ಬಂಧಿಸಬೇಕು” ಎಂದು ಒತ್ತಾಯಿಸಿದರು.
ಬರಹಗಾರ, ದಲಿತ ಮುಖಂಡ ಹುಲಿಕುಂಟೆ ಮೂರ್ತಿ ಮಾತನಾಡಿ, “ಆರೋಪಿಗಳು ಸಂತ್ರಸ್ತರ ಮನೆಗಳ ಬಳಿ ಹೋಗಿ ಧಮ್ಕಿ ಹಾಕಿರುವುದು ಗೊತ್ತಾಗಿದೆ. ಆದರೆ, ಪೊಲೀಸರು ಆರೋಪಿಗಳು ಸಿಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಮಗೆ ಬಾಬಾ ಸಾಹೇಬರ ಮೇಲೆ ನಿಜಕ್ಕೂ ಗೌರವ ಇದ್ದರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದರು.
ಹಿರಿಯ ಚಿಂತಕ ಜಿ ರಾಮಕೃಷ್ಣ ಅವರು ಮಾತನಾಡಿ, “ಈ ದೇಶದಲ್ಲಿ ನಡೆಯುತ್ತಿರುವ ಅನಾಚಾರ, ಅತ್ಯಾಚಾರ ಗಮನಿಸಿದರೆ ನಾವು ಮನುಷ್ಯರಾಗಿ ಬದುಕುತ್ತಿದ್ದೇವಾ ಎಂಬ ಅನುಮಾನ ಮೂಡುತ್ತಿದೆ. ಉತ್ತರ ಪ್ರದೇಶದಲ್ಲಿ ದಲಿತ ಹೆಣ್ಣು ಮಗಳು ನದಿಯಲ್ಲಿ ಸ್ನಾನ ಮಾಡಲು ಇಳಿದಳೆಂದು ಕ್ರೂರಿಗಳು ಆಕೆಯನ್ನು ಬಡಿಗೆಗಳಿಂದ ಹೊಡೆದು ಸಾಯಿಸಿದ್ದರು. ಇಂಥವರಿಗೆ ರಕ್ಷಣೆ ಕೊಡುವ ಸಂಸ್ಕೃತಿ ನಮ್ಮ ದೇಶದಲ್ಲಿ ಇದೆ. ಇಂತಹ ಸಮಾಜದಲ್ಲಿ ನಾವಿನ್ನೂ ಫ್ಯಾಸಿಸ್ಟ್ ಆಗಿದ್ದೀವಾ, ಅರೆ ಫ್ಯಾಸಿಸ್ಟ್ ಆಗಿದ್ದೀವಾ, ಸೆಮಿ ಫ್ಯಾಸಿಸ್ಟ್ ಆಗಿದ್ದೀವಾ ಎಂದು ಚರ್ಚೆ ಮಾಡುತ್ತಿದ್ದೇವೆ. ದೇಶದೆಲ್ಲೆಡೆ ಈಗ ಪುನೀತರಾದ ಜನರೇ ಇರುವುದು. ಯಮುನೆಯಲ್ಲಿ ಸ್ನಾನ ಮಾಡಿ ಬಂದಿದ್ದಾರೆ. ಐವತ್ತು ಕೋಟಿ ಜನರಲ್ಲಿ ನಲುವತ್ತು ಕೋಟಿ ಜನರಿಗೆ ಒಂದು ತರಹದ ನೀರು, ಇನ್ನು ಹತ್ತು ಕೋಟಿ ಜನರಿಗೆ ಒಂದು ತರಹದ ನೀರು. ನಾರಾಯಣ ಮೂರ್ತಿ, ಸುಧಾಮೂರ್ತಿ ತರದವರಿಗೆ ಬೇಲಿ ಕಟ್ಟಿ ಚೆನ್ನಾಗಿ ನೀರು ಹರಿಯುವ ಜಾಗ, ಸಾಮಾನ್ಯ ಜನರಿಗೆ ಚರಂಡಿ ನೀರು ಸೇರುವ ಜಾಗ. ಇದೇ ರೀತಿ ಈ ಅತ್ಯಾಚಾರ ವಿಚಾರದಲ್ಲೂ ಬಡವರಿಗೆ ಒಂದು ನ್ಯಾಯ, ಉಳ್ಳವರಿಗೆ ಮತ್ತೊಂದು ನ್ಯಾಯ ಎಂಬಂತಾಗಿದೆ. ಯಾದಗಿರಿಯೇನು ಬೆಂಗಳೂರಲ್ಲ, ಪುಟ್ಟ ಹಳ್ಳಿ. ಆರೋಪಿಗಳನ್ನು ಪತ್ತೆ ಹಚ್ಚುವುದು ಅಷ್ಟೇನೂ ಕಷ್ಟ ಅಲ್ಲ. ಆದರೆ, ಇದು ಅಧಿಕಾರಿಗಳಿಗೆ ಬಡವರ ಮೇಲೆ ಇರುವ ಅಸಡ್ಡೆ ತೋರಿಸುತ್ತದೆ” ಎಂದು ಹೇಳಿದರು.
“ಇಡೀ ದೇಶದಲ್ಲಿ ಯಾವುದೇ ಸರ್ಕಾರ, ಅಲೆಮಾರಿಗಳಿಗೆ ಇದುವರೆಗೆ ಯಾವುದೇ ರೀತಿಯಲ್ಲಿ ರಕ್ಷಣೆ ಕೊಟ್ಟಿಲ್ಲ, ಮನೆ ಕೊಟ್ಟಿಲ್ಲ. ಯಾಕೆ ಅಲೆಮಾರಿಗಳಾಗಿದ್ದಾರೆ ಎಂಬ ಮೂಲ ಪ್ರಶ್ನೆ ಕೇಳಬೇಕಾಗಿದೆ. ಯಾರೂ ಸರ್ಕಾರಗಳ ಮೇಲೆ ಒತ್ತಡ ಹಾಕುತ್ತಿಲ್ಲ. ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ನಾವು ಯಾಕೆ ಹೀಗಿದ್ದೇವೆ? ನಾವೀಗ ಒಟ್ಟಾಗಿ ಅಲೆಮಾರಿಗಳಿಗೆ ಭೂಮಿ ಕೊಡಿ ನೌಕರಿ ಕೊಡಿ ಎಂದು ಕೇಳಬೇಕಿದೆ. ಯಾದಗಿರಿಯ ಅತ್ಯಾಚಾರ ಪ್ರಕರಣದಲ್ಲಿ ಅರೋಪಿಗಳ ಬಂಧನ ಸರ್ಕಾರದ ಕೈಯಲ್ಲಿ ಆಗಲ್ಲ ಅಂತಲ್ಲ, ಪೊಲೀಸರು ಮನಸ್ಸು ಮಾಡಿದರೆ ಆರೋಪಿಗಳನ್ನು ಬಂಧಿಸುವುದು ಕಷ್ಟವೇನಲ್ಲ. ಹಾಗಾಗಿ, ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು” ಎಂದು ಅಲೆಮಾರಿ ಸಮುದಾಯಗಳ ಹೋರಾಟಗಾರರು ಎಚ್ಚರಿಸಿದರು.
‘ತಮಟೆ ಮೀಡಿಯಾ’ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕರ್ನಾಟಕ ಅಲೆಮಾರಿ ಬಡಕಟ್ಟು ಮಹಾಸಭಾ, ಸಫಾಯಿ ಕರ್ಮಚಾರಿ ಕಾವಲು ಸಮಿತಿ ಕರ್ನಾಟ, ಸುಡುಗಾಡು ಸಿದ್ದ ಮಹಾಸಂಘ, ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ದಲಿತ ವಿದ್ಯಾರ್ಥಿ ಪರಿಷತ್ತು, ಕರ್ನಾಟಕ ಜನಶಕ್ತಿ, ನಾವೆದ್ದು ನಿಲ್ಲದಿದ್ದರೆ, ಜಾಗೃತ ಕರ್ನಾಟಕ, AICCTU, AIPWA ಸೇರಿದಂತೆ ಹಲವು ಸಂಘಟನೆಯವರು ಪಾಲ್ಗೊಂಡಿದ್ದರು.
ಕರ್ನಾಟಕಕ್ಕೆ ಸಂಚರಿಸುವ ಬಸ್‌ಗಳಲ್ಲಿ ಪೊಲೀಸ್ ನಿಯೋಜನೆಗೆ ಮುಂದಾದ ಮಹಾರಾಷ್ಟ್ರ


