ಕರ್ನಾಟಕವು ನಕ್ಸಲ್ ಮುಕ್ತವಾಗಿರುವುದರಿಂದ ನಕ್ಸಲ್ ನಿಗ್ರಹ ಪಡೆಯನ್ನು ವಿಸರ್ಜಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಮಾ.7) ಘೋಷಿಸಿದ್ದಾರೆ.
2025-26ನೇ ಸಾಲಿನ ರಾಜ್ಯ ಆಯವ್ಯಯ (ಬಜೆಟ್) ಮಂಡಿಸಿದ ಸಿದ್ದರಾಮಯ್ಯ, “ನಮ್ಮ ಸರ್ಕಾರದ ಅವಧಿಯಲ್ಲಿ ಆರು ಜನ ಭೂಗತ ನಕ್ಸಲರು ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಯೋಜನೆ ಸಮಿತಿ ಶರಣಾಗಿದ್ದಾರೆ. ಇದರೊಂದಿಗೆ ರಾಜ್ಯವು ನಕ್ಸಲ್ ಮುಕ್ತವಾಗಿದೆ. ಆದ್ದರಿಂದ ನಕ್ಸಲ್ ನಿಗ್ರಹ ಪಡೆಯನ್ನು ವಿಸರ್ಜಿಸಲಾಗುವುದು ಎಂದು ಹೇಳಿದ್ದಾರೆ.
ಶರಣಾಗಿರುವ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಗೊಳಿಸಲು ಹಾಗೂ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮೂಲಸೌಕರ್ಯ ಒದಗಿಸಲು 10 ಕೋಟಿ ರೂ. ವಿಶೇಷ ಪ್ಯಾಕೇಜ್ ರೂಪಿಸಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.
ಇದಲ್ಲದೆ, ಬೆಂಗಳೂರು ಸೇಫ್ ಸಿಟಿ ಯೋಜನೆಯನ್ನು 667 ಕೋಟಿ ರೂ. ವೆಚ್ಚದಲ್ಲಿ ಜಾರಿಗೆ ತರಲಾಗಿದೆ. ಯೋಜನೆಯ ಭಾಗವಾಗಿ, ನಗರದಾದ್ಯಂತ 7,500 ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, 10 ಡ್ರೋನ್‌ಗಳು ಮತ್ತು 560 ಬಾಡಿ-ವೋರ್ನ್ ಕ್ಯಾಮರಾಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಹಿಳೆಯರಲ್ಲಿ ಸಾರ್ವಜನಿಕ ಸುರಕ್ಷತಾ ಪ್ರಜ್ಞೆಯನ್ನು ಬೆಳೆಸಲು ಮತ್ತು ಅಪರಾಧಕ್ಕೆ ಬಲಿಯಾದ ಮಹಿಳೆಯರು ಮತ್ತು ಮಕ್ಕಳಿಗೆ ತ್ವರಿತ ಪೊಲೀಸ್ ನೆರವು ಒದಗಿಸಲು ಬೆಂಗಳೂರು ನಗರದಾದ್ಯಂತ ಒಟ್ಟು 60 ಮಹಿಳಾ ಔಟ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಏಳು ಪೊಲೀಸ್ ಠಾಣೆ ಕಟ್ಟಡಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಸಮರ್ಪಿಸಲಾಗುವುದು ಎಂದು ಹೇಳಿದ್ದಾರೆ.
ಸಂಚಾರ ಹೆಚ್ಚಿಸುವ ಉದ್ದೇಶದಿಂದ, ಗೃಹ ಇಲಾಖೆಗೆ ಅನುಕೂಲವಾಗುವಂತೆ ಪೊಲೀಸ್ ಸಂಚಾರ ಯೋಜನೆಯಡಿ 1000 ಹೊಸ ವಾಹನಗಳ ಖರೀದಿಗೆ 50 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಹೆಚ್ಚುತ್ತಿರುವ ಸೈಬರ್ ಅಪರಾಧಗಳು ಮತ್ತು ಮಾದಕ ದ್ರವ್ಯಗಳ ಸೇವನೆ ಮತ್ತು ಮಾರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ, 5 ಕೋಟಿ ರೂ. ಅನುದಾನದೊಂದಿಗೆ ಸೈಬರ್ ಅಪರಾಧ ವಿಭಾಗವನ್ನು ಬಲಪಡಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನಂದಿ ಬೆಟ್ಟದ ಬಳಿಯ ಕುಡುಗುರ್ಕಿ ಮತ್ತು ಕೆಜಿಎಫ್‌ನಲ್ಲಿ ಎರಡು ಭಾರತೀಯ ಮೀಸಲು ಬೆಟಾಲಿಯನ್‌ಗಳನ್ನು ಸ್ಥಾಪಿಸಲಾಗುವುದು. ಈ ಉದ್ದೇಶಕ್ಕಾಗಿ 80 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಸಿಎಂ ಹೇಳಿದ್ದಾರೆ.
ಬೆಂಗಳೂರು ನಗರದ ಪರಿಣಾಮಕಾರಿ ಪೊಲೀಸ್ ವ್ಯವಸ್ಥೆಗಾಗಿ ಪೊಲೀಸ್ ವಿಭಾಗಗಳ ಸಂಖ್ಯೆಯನ್ನು 8 ರಿಂದ 11 ಕ್ಕೆ ಹೆಚ್ಚಿಸಲಾಗುವುದು. ಬಳ್ಳಾರಿ, ದಾವಣಗೆರೆ, ಮೈಸೂರು ಮತ್ತು ಬೆಂಗಳೂರು ಕೇಂದ್ರ ವಲಯಗಳಲ್ಲಿ ಇನ್ನೂ ನಾಲ್ಕು ಬಾಂಬ್ ಪತ್ತೆ ಮತ್ತು ವಿಲೇವಾರಿ ದಳಗಳನ್ನು ಸ್ಥಾಪಿಸಲಾಗುವುದು. ಕಾರಾಗೃಹ ಇಲಾಖೆಯಡಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 100 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.
ಅಲ್ಲದೆ, 15ನೇ ಹಣಕಾಸು ಆಯೋಗದ ಅನುದಾನದಡಿಯಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ವಿಸ್ತರಣೆ ಮತ್ತು ಆಧುನೀಕರಣವನ್ನು 330 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಸಿಎಂ ಹೇಳಿದರು.
Karnataka Budget 2025-26 | ಶಿಕ್ಷಣ ಕ್ಷೇತ್ರದ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ


