ಲೋಕಸಭೆಯಲ್ಲಿ ವಕ್ಫ್ ಮಸೂದೆ (ತಿದ್ದುಪಡಿ) ಅಂಗೀಕಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ತಮ್ಮ ಪಕ್ಷವು ಮಸೂದೆಯ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೊಕದ್ದಮೆ ಹೂಡಲಿದೆ ಗುರುವಾರ ಹೇಳಿದ್ದಾರೆ. ಮಸೂದೆ ಅಂಗೀಕಾರದ ವಿರುದ್ಧ ಪ್ರತಿಭಟಿಸಿ ಡಿಎಂಕೆ ಮತ್ತು ಅದರ ಮಿತ್ರ ಪಕ್ಷಗಳ ಸದಸ್ಯರು ಗುರುವಾರ ವಿಧಾನಸಭೆ ಕಲಾಪದಲ್ಲಿ ಕಪ್ಪು ಬ್ಯಾಡ್ಜ್ ಧರಿಸಿ ಭಾಗವಹಿಸಿದ್ದರು.
ಕಳೆದ ವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯವನ್ನು ನೆನಪಿಸಿಕೊಂಡ ಸ್ಟಾಲಿನ್, “2025 ರ ಮಾರ್ಚ್ 27 ರಂದು ಕೇಂದ್ರ ಸರ್ಕಾರವು ವಕ್ಫ್ ಮಸೂದೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುವ ನಿರ್ಣಯವನ್ನು ವಿಧಾನಸಭೆ ಅಂಗೀಕರಿಸಿತು. ಬಿಜೆಪಿ ಹೊರತುಪಡಿಸಿ, ಉಳಿದ ಎಲ್ಲಾ ಸದಸ್ಯರು ಅದನ್ನು ಬೆಂಬಲಿಸಿದರು” ಎಂದು ಹೇಳಿದ್ದಾರೆ.
ವಕ್ಫ್ ಮಸೂದೆ (ತಿದ್ದುಪಡಿ) ದೇಶದಲ್ಲಿ ಧಾರ್ಮಿಕ ಸಾಮರಸ್ಯವನ್ನು ಕದಡಬಹುದು ಮತ್ತು ಮುಸ್ಲಿಂ ಸಮುದಾಯದ ಮೇಲೆ ಪರಿಣಾಮ ಬೀರಬಹುದು ಎಂದು ಒತ್ತಿ ಹೇಳಿದ ಸ್ಟಾಲಿನ್, “ನಾವು ನಿರ್ಣಯವನ್ನು ಅಂಗೀಕರಿಸಿದ್ದೇವೆ ಮತ್ತು ಬಹುಪಾಲು ರಾಜಕೀಯ ಪಕ್ಷಗಳು ಅದನ್ನು ವಿರೋಧಿಸಿದರೂ, ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಇದು ಅತ್ಯಂತ ಖಂಡನೀಯ.” ಎಂದು ಹೇಳಿದ್ದಾರೆ.
ಲೋಕಸಭೆಯಲ್ಲಿ ಮಸೂದೆಯ ವಿರುದ್ಧ 232 ಮತಗಳು ಮತ್ತು ಅದನ್ನು ಬೆಂಬಲಿಸಿದ 288 ಮತಗಳನ್ನು ಎತ್ತಿ ತೋರಿಸಿದ ಸಿಎಂ ಸ್ಟಾಲಿನ್, ಮಸೂದೆಯ ಪರವಾಗಿ ಹೆಚ್ಚಿನ ಜನರು ಮತ ಚಲಾಯಿಸಿದರೂ, ವಿರೋಧಿಸಿದ 232 ಸದಸ್ಯರು ಸಾಮಾನ್ಯ ಸಂಖ್ಯೆಯಲ್ಲ ಎಂದು ಹೇಳಿದ್ದಾರೆ. “ಈ ಮಸೂದೆಯನ್ನು ಕೇವಲ ವಿರೋಧಿಸಬಾರದು, ಸಂಪೂರ್ಣವಾಗಿ ಹಿಂಪಡೆಯಬೇಕು ಎಂಬುದು ನಮ್ಮ ನಿಲುವು” ಎಂದು ಅವರು ಹೇಳಿದ್ದಾರೆ.
ಬಹುಪಾಲು ಪಕ್ಷಗಳ ವಿರೋಧದ ಹೊರತಾಗಿಯೂ ಮತ್ತು ಕೆಲವೇ ಕೆಲವು ಸಮ್ಮಿಶ್ರ ಪಕ್ಷಗಳ (ಬಿಜೆಪಿಯ) ಬೆಂಬಲದೊಂದಿಗೆ ಬೆಳಗಿನ ಜಾವ 2 ಗಂಟೆಗೆ ಮಸೂದೆಯನ್ನು ಅಂಗೀಕರಿಸುವುದು ಸಂವಿಧಾನದ ಮೇಲಿನ “ದಾಳಿ” ಎಂದು ಅವರು ಬಣ್ಣಿಸಿದ್ದಾರೆ. “ಈ ನಡೆಯು ಕೋಮು ಸಾಮರಸ್ಯವನ್ನು ಕದಡುತ್ತದೆ” ಎಂದು ಹೇಳಿದ ಅವರು, ಇದಕ್ಕಾಗಿಯೇ ತಾನು ಮತ್ತು ಇತರ ಸದಸ್ಯರು ಕಪ್ಪು ಬ್ಯಾಡ್ಜ್ ಧರಿಸಿದ್ದಾಗಿ ವಿವರಿಸಿದ್ದಾರೆ.
ಮಸೂದೆಯು ವಕ್ಫ್ ಮಂಡಳಿಯ ಸ್ವಾಯತ್ತತೆಯನ್ನು ನಾಶಪಡಿಸುತ್ತದೆ ಮತ್ತು ಮುಸ್ಲಿಂ ಸಮುದಾಯಕ್ಕೆ ಬೆದರಿಕೆಯಾಗಿ ಪರಿಣಮಿಸುತ್ತದೆ ಎಂದು ಆರೋಪಿಸಿದ ಅವರು, ತಮಿಳುನಾಡು ಅದರ ವಿರುದ್ಧ ಹೋರಾಟ ನಡೆಸಲಿದ್ದು, ಅದರಲ್ಲಿ ತಮಿಳುನಾಡು ಗೆಲ್ಲುತ್ತದೆ ಎಂದು ಅವರು ಘೋಷಿಸಿದ್ದಾರೆ. “ನಾವು ಕಾನೂನು ಕ್ರಮಗಳ ಮೂಲಕ ಮಸೂದೆಯನ್ನು ತಡೆಯುತ್ತೇವೆ” ಎಂದು ಅವರು ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಒಬ್ಬ ಮುಸ್ಲಿಂ ಸಂಸದನಿಲ್ಲದ ಬಿಜೆಪಿ ವಕ್ಫ್ ಆಸ್ತಿ ರಕ್ಷಣೆ ಮಾಡುತ್ತದೆ ಎನ್ನುವುದು ವಿಪರ್ಯಾಸ: ಡಿಎಂಕೆ ಸಂಸದ ಎ. ರಾಜ
ಒಬ್ಬ ಮುಸ್ಲಿಂ ಸಂಸದನಿಲ್ಲದ ಬಿಜೆಪಿ ವಕ್ಫ್ ಆಸ್ತಿ ರಕ್ಷಣೆ ಮಾಡುತ್ತದೆ ಎನ್ನುವುದು ವಿಪರ್ಯಾಸ: ಡಿಎಂಕೆ ಸಂಸದ ಎ. ರಾಜ

