ಜಾಗತಿಕ ವ್ಯಾಪಾರ ಸಮರಕ್ಕೆ ಕಾರಣವಾಗಿರುವ ‘ಪ್ರತಿ ಸುಂಕ’ ಜಾರಿಗೆ ಬಂದ 24 ಗಂಟೆಯೊಳಗೆ ಚೀನಾ ಹೊರತುಪಡಿಸಿ, ಇತರ ದೇಶಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 90 ದಿನಗಳ ಸುಂಕ ವಿನಾಯಿತಿ ಘೋಷಿಸಿದ್ದಾರೆ.
ಇದೇ ವೇಳೆ ಚೀನಾ ಮೇಲಿನ ಸುಂಕವನ್ನು ಶೇಕಡ 125ರಷ್ಟು ಹೆಚ್ಚಿಸಿರುವುದಾಗಿ ಟ್ರಂಪ್ ಹೇಳಿದ್ದಾರೆ. ಈ ಮೂಲಕ ಚೀನಾ ಮೇಲೆ ಪ್ರತೀಕಾರ ತೀರಿಸಲು ಟ್ರಂಪ್ ಮುಂದಾಗಿದ್ದಾರೆ.
“ನಮ್ಮ ಪ್ರತಿಸುಂಕ ನೀತಿಗೆ ಪ್ರತೀಕಾರ ತೀರಿಸದ ದೇಶಗಳಿಗೆ ನಾವು 90 ದಿನಗಳ ವಿನಾಯಿತಿ ನೀಡಿದ್ದೇವೆ. ಪ್ರತೀಕಾರಕ್ಕೆ ಮುಂದಾದವರ ಮೇಲಿನ ಸುಂಕವನ್ನು ದ್ವಿಗುಣಗೊಳಿಸಿದ್ದೇವೆ”ಎಂದು ಚೀನಾ ಮೇಲೆ ಹೆಚ್ಚುವರಿ ಸುಂಕ ಘೋಷಣೆ ಮಾಡುವಾಗ ಟ್ರಂಪ್ ಹೇಳಿದ್ದಾರೆ.
ಭಾರತ, ಚೀನಾ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ಅಮೆರಿಕಕ್ಕೆ ಆಮದಾಗುವ ಉತ್ಪನ್ನಗಳ ಮೇಲೆ ಏಪ್ರಿಲ್ 2ರಂದು ಟ್ರಂಪ್ ಪ್ರತಿ ಸುಂಕ ಘೋಷಣೆ ಮಾಡಿದ್ದರು. ಭಾರತದ ಮೇಲೆ ಶೇ.26 ಮತ್ತು ಚೀನಾ ಮೇಲೆ ಶೇ.34 ಪ್ರತಿಸುಂಕ ವಿಧಿಸಿದ್ದಾರೆ. ಹೊಸ ಸುಂಕ ನೀತಿ ಏಪ್ರಿಲ್ 9ರಿಂದ ಜಾರಿಗೆ ಬಂದಿದೆ.
ಚೀನಾದ ಮೇಲೆ ಅಮೆರಿಕದ ಸುಂಕ ಶೇ.20ರಷ್ಟು ಮೊದಲೇ ಇತ್ತು. ಟ್ರಂಪ್ ಶೇ.34ರಷ್ಟು ಪ್ರತಿ ಸುಂಕ ವಿಧಿಸಿದ್ದರಿಂದ ಚೀನಾದ ಮೇಲಿನ ಅಮೆರಿಕದ ಸುಂಕ ಶೇ. 54ರಷ್ಟು ಆಗಿತ್ತು. ಇದಕ್ಕೆ ಪ್ರತಿಯಾಗಿ ಚೀನಾ ಸರ್ಕಾರ ಅಮೆರಿಕದ ಮೇಲೆ ಶೇ.34ರಷ್ಟು ಪ್ರತಿಸುಂಕ ವಿಧಿಸಿತ್ತು. ಅದನ್ನು ಹಿಂತೆಗೆದುಕೊಳ್ಳಲು ಅಮೆರಿಕ ಮಂಗಳವಾರದವರೆಗೆ ಗಡುವು ನೀಡಿತ್ತು. ಇಲ್ಲದಿದ್ದರೆ ಶೇ. 50ರಷ್ಟು ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿತ್ತು.
ಚೀನಾ ಅಮೆರಿಕದ ಬೆದರಿಕೆಗೆ ಸೊಪ್ಪು ಹಾಕದ ಕಾರಣ ಟ್ರಂಪ್ ಚೀನಾ ಮೇಲೆ ಬುಧವಾರದಿಂದಲೇ ಹೆಚ್ಚುವರಿ ಶೇ. 50ರಷ್ಟು ಸುಂಕ ವಿಧಿಸಿದ್ದರು. ಇದರಿಂದ ಚೀನಾ ಮೇಲಿನ ಅಮೆರಿಕದ ಸುಂಕ ಶೇ.104 ಆಗಿತ್ತು. ಚೀನಾ ಜೊತೆ ಪ್ರತೀಕಾರಕ್ಕೆ ಮುಂದಾಗಿರುವ ಟ್ರಂಪ್ ಸುಂಕವನ್ನು ಬುಧವಾರ ಶೇ.125ಕ್ಕೆ ಏರಿಸಿದ್ದಾರೆ ಎಂದು ವರದಿಯಾಗಿದೆ.
ಟ್ರಂಪ್ ಚೀನಾ ಮೇಲೆ ಭಾರೀ ಪ್ರಮಾಣದ ಸುಂಕ ವಿಧಿಸಿದ ಬಳಿಕ “ಪ್ರತೀಕಾರಕ್ಕೆ ಮುಂದಾಗಬೇಡಿ, ಪ್ರತಿಫಲ ಸಿಗುತ್ತದೆ” ಎಂದು ಶ್ವೇತ ಭವನ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದೆ.
ಟ್ರಂಪ್ ಸುಂಕ ವಿನಾಯಿತಿ ಘೋಷಿಸಿದ್ದು ಏಕೆ?
“ನಾವು ಪ್ರತಿ ಸುಂಕ ವಿಧಿಸಿದರೂ ಸುಮಾರು 75 ರಾಷ್ಟ್ರಗಳು ಪ್ರತಿಕಾರಕ್ಕೆ ಮುಂದಾಗಿಲ್ಲ. ಹಾಗಾಗಿ, ಅವರಿಗೆ 90 ದಿನಗಳ ವಿನಾಯಿತಿ ನೀಡಲಾಗಿದೆ. ಅಮೆರಿಕದ ಜೊತೆಗಿನ ವ್ಯಾಪಾರದ ಅಸಮತೋಲನ ಪರಿಹರಿಸಲು ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಟ್ರಂಪ್ ಹೇಳಿದ್ದಾರೆ.
“ಪ್ರತಿ ಸುಂಕ ವಿಧಿಸಿದ ಬಳಿಕ 75 ರಾಷ್ಟ್ರಗಳು ಯುಎಸ್ ಪ್ರತಿನಿಧಿಗಳೊಂದಿಗೆ ವ್ಯಾಪಾರ ಅಡೆತಡೆಗಳು, ಕರೆನ್ಸಿ ಮೌಲ್ಯ, ಹೊಸ ಸುಂಕ ನೀತಿಯಿಂದ ಆದ ವ್ಯತ್ಯಾಸಗಳ ಬಗ್ಗೆ ಚರ್ಚಿಸಿವೆ. ಯಾವುದೇ ರಾಷ್ಟ್ರಗಳು ನಮ್ಮೊಂದಿಗೆ ಪ್ರತೀಕಾರಕ್ಕೆ ಮುಂದಾಗಿಲ್ಲ. ಹಾಗಾಗಿ, ಅವರಿಗೆ 90 ದಿನಗಳ ವಿರಾಮ ನೀಡಿದ್ದೇನೆ” ಎಂದು ಟ್ರಂಪ್ ಸಾಮಾಜಿಕ ಮಾಧ್ಯಮ ಟ್ರುತ್ ಸೋಶಿಯಲ್‌ನಲ್ಲಿ ಬರೆದುಕೊಂಡಿದ್ದಾರೆ.
“ಜಾಗತಿಕ ಮಾರುಕಟ್ಟೆಗೆ ಚೀನಾ ಅಗೌರವ ತೋರಿದೆ. ಅದಕ್ಕಾಗಿ ಅವರಿಗೆ ನಾವು ಶೇ. 125 ಸುಂಕ ವಿಧಿಸುತ್ತಿದ್ದೇವೆ. ಅಮೆರಿಕ ಸೇರಿದಂತೆ ಇತರ ದೇಶಗಳನ್ನು ಎದುರು ಹಾಕಿಕೊಂಡು ಮಾರುಕಟ್ಟೆಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂಬುವುದನ್ನು ಚೀನಾಕ್ಕೆ ಅರಿವಾಗಲಿದೆ” ಎಂದು ಟ್ರಂಪ್ ಹೇಳಿದ್ದಾರೆ.
ತಾನು ವಿಧಿಸಿದ ಪ್ರತಿ ಸುಂಕಕ್ಕೆ ಪ್ರತೀಕಾರ ತೋರದ ದೇಶಗಳಿಗೆ 90 ದಿನಗಳ ಸುಂಕ ವಿನಾಯಿತಿ ನೀಡಿದ್ದೇನೆ ಎಂದು ಟ್ರಂಪ್ ಹೇಳಿದ್ದರೂ, ತನ್ನ ವಿರುದ್ದ ಸಮರ ಸಾರಿರುವ ಚೀನಾಗೆ ಬುದ್ದಿ ಕಲಿಸಲು, ಇತರ ದೇಶಗಳಿಂದ ಅದನ್ನು ಒಬ್ಬಂಟಿಯಾಗಿಸಲು ಅಥವಾ ಅಮೆರಿಕ ವಿರುದ್ದದ ಹೋರಾಟಕ್ಕೆ ಚೀನಾಗೆ ಯಾವುದೇ ರಾಷ್ಟ್ರಗಳು ಬೆಂಬಲ ನೀಡದಂತೆ ತಡೆಯಲು ಇತರ ದೇಶಗಳಿಗೆ ಟ್ರಂಪ್ ಸುಂಕ ವಿರಾಮ ಘೋಷಿಸಿದಂತೆ ಕಾಣುತ್ತಿದೆ.
ಏಕೆಂದರೆ, ಅಮೆರಿಕ ಚೀನಾ ಮೇಲೆ ಹೆಚ್ಚುವರಿ ಸುಂಕ ವಿಧಿಸಿದ ಬಳಿಕ, “ಅಮೆರಿಕದ ಸುಂಕ ಹೇರಿಕೆ ವಿರುದ್ದ ಜೊತೆಯಾಗಿ ಹೋರಾಡೋಣ” ಎಂದು ಚೀನಾ ಭಾರತಕ್ಕೆ ಹೇಳಿತ್ತು.
ಅಮೆರಿಕದ ‘ಸುಂಕ ಹೇರಿಕೆ’ಯನ್ನು ಜೊತೆಯಾಗಿ ಎದುರಿಸೋಣ: ಭಾರತಕ್ಕೆ ಚೀನಾ ಕರೆ


