ಪ್ರಗ್ಯಾ ಠಾಕೂರ್ ಭಯೋತ್ಪಾದಕಿ, ಹಾಗಾಗಿಯೇ ಭಯೋತ್ಪಾದಕ ನಾಥೂರಾಂ ಗೋಡ್ಸೆಯನ್ನು ದೇಶಭಕ್ತ ಎಂದಿದ್ದಾರೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು ಗೋಡ್ಸೆಯನ್ನು ದೇಶಭಕ್ತ ಎಂದು ಸಂಸತ್ತಿನಲ್ಲಿ ಪ್ರಗ್ಯಾ ಹೇಳಿದ್ದಕ್ಕೆ, “ಭಾರತೀಯ ಸಂಸತ್ತಿನ ಇತಿಹಾಸದಲ್ಲಿ ಅತ್ಯಂತ ದುಃಖದ ದಿನ” ಎಂದು ಸಹ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
Terrorist Pragya calls terrorist Godse, a patriot.
A sad day, in the history of
India’s Parliament.— Rahul Gandhi (@RahulGandhi) November 28, 2019
ನಿನ್ನೆ ಸಂಸತ್ತಿನಲ್ಲಿ ಎಸ್‌ಪಿಜಿ ಕಾಯ್ದೆ ತಿದ್ದುಪಡಿ ಕುರಿತ ಚರ್ಚೆಯಲ್ಲಿ ಡಿಎಂಕೆ ಸಂಸದ ಎ.ರಾಜಾ ರವರು ಗಾಂಧೀಜಿಯವರನ್ನು ಗೋಡ್ಸೆ ಕೊಂದಿದ್ದು ಹೇಗೆ ಎಂದು ವಿವರಿಸುತ್ತಿದ್ದರು. ಆಗ ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್ ದೇಶಭಕ್ತ ಗೋಡ್ಸೆಯನ್ನು ನೀವು ಉದಾಹರಣೆಯಾಗಿ ಕೊಡಬಾರದು ಎಂದು ಆಗ್ರಹಿಸಿದ್ದರು.
ಪ್ರಗ್ಯಾರವರ ಈ ಹೇಳಿಕೆಗೆ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ಮಧ್ಯಪ್ರದೇಶ ಸಿಎಂ ಕಮಲ್ ನಾಥ್ ಶೀಘ್ರ ಕ್ರಮಕ್ಕೆ ಆಗ್ರಹಿಸಿದ್ದರು.
ಗಾಂಧಿ ಕೊಂದ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದ ಪ್ರಗ್ಯಾ ಠಾಕೂರ್‌ರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದರು. ಈಗ ಆಕೆ ಮತ್ತೆ ಮತ್ತೆ ಅದನ್ನೇ ಪುನರುಚ್ಚರಿಸುತ್ತಿದ್ದರೂ ಮೋದಿ ಏಕೆ ಮೌನವಾಗಿದ್ದಾರೆ ಎಂದು ಕಮಲ್ ನಾಥ್ ಸರಣಿ ಟ್ವೀಟ್‌ಗಳನ್ನು ಮಾಡಿದ್ದರು.
ನಂತರ ಸಂಸತ್ತಿನಲ್ಲಿ ಗಾಂಧಿ ಹಂತಕ ನಾಥೂರಾಂ ಗೊಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದ ಬಿಜೆಪಿಯ ವಿವಾದಾತ್ಮಕ ಸಂಸದೆ ಪ್ರಗ್ಯಾ ಠಾಕೂರ್‌ರವರನ್ನು ಉಳಿದ ಚಳಿಗಾಲದ ಅಧಿವೇಶನಕ್ಕಾಗಿ ಪಕ್ಷದ ಸಂಸದರ ನಿಯಮಿತ ಸಭೆಯಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸಿದೆ ಎಂದು ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ಅಷ್ಟು ಮಾತ್ರವಲ್ಲದೇ ಪ್ರಜ್ಞಾ ಠಾಕೂರ್ ಅವರನ್ನು ಇತ್ತೀಚೆಗೆ ಸೇರಿಸಿಕೊಂಡಿದ್ದ ರಕ್ಷಣಾ ಸಂಸದೀಯ ಸಮಿತಿಯಿಂದಲೂ ಸಹ ಹೊರಹಾಕಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
“ನಿನ್ನೆ ಸಂಸತ್ತಿನಲ್ಲಿ ಅವರು ನೀಡಿದ ಹೇಳಿಕೆ ಖಂಡನೀಯ. ಅಂತಹ ಹೇಳಿಕೆ ಅಥವಾ ಸಿದ್ಧಾಂತವನ್ನು ಬಿಜೆಪಿ ಎಂದಿಗೂ ಬೆಂಬಲಿಸುವುದಿಲ್ಲ ”ಎಂದು ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಎಎನ್‌ಐಗೆ ತಿಳಿಸಿದ್ದಾರೆ.


