ಗೊಂಡ್ವಾನ ಎಕ್ಸ್‌ಪ್ರೆಸ್ ರೈಲಿನ ಜನರಲ್ ಕೋಚ್‌ನಲ್ಲಿ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಕಾನ್‌ಸ್ಟೆಬಲ್‌ಗಳು ಥಳಿಸಿದ್ದರಿಂದ 50 ವರ್ಷದ ಕಾರ್ಮಿಕ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.
ಮಧ್ಯಪ್ರದೇಶದ ಟಿಕಮ್‌ಗಢ ಜಿಲ್ಲೆಯ ಪಲೇರಾ ನಿವಾಸಿ ರಾಮದಯಾಳ್ ಅಹಿರ್ವಾರ್ ಸಾವಿಗೀಡಾದ ವ್ಯಕ್ತಿ. ಇವರು ತನ್ನ ಮಗನೊಂದಿಗೆ ಕೆಲಸದ ನಿಮಿತ್ತ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಆಗ್ರಾ ಮತ್ತು ಮಥುರಾ ನಡುವೆ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
ಮೃತ ವ್ಯಕ್ತಿಯ ಮಗ ವಿಶಾಲ್ ಅಹಿರ್ವಾರ್ ಹೇಳಿದ ಪ್ರಕಾರ, ಅಪ್ಪ ಮಗ ಇಬ್ಬರು ಸೋಮವಾರ (ಏ.21) ಗೀತಾ ಜಯಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಲಲಿತ್‌ಪುರ ತಲುಪಿ, ಅಲ್ಲಿಂದ ಗೊಂಡ್ವಾನ ಎಕ್ಸ್‌ಪ್ರೆಸ್ ರೈಲಿನ ಜನರಲ್ ಕೋಚ್ ಹತ್ತಿದರು. ಅವರು ತಲುಪಬೇಕಾದ ಸ್ಥಳ ದೆಹಲಿಯ ಹಝ್ರತ್ ನಿಝಾಮುದ್ದೀನ್ ರೈಲು ನಿಲ್ದಾಣವಾಗಿತ್ತು. ಅಲ್ಲಿಂದ ಅವರು ವಿಶಾಲ್ ಕೆಲಸ ಮಾಡುವ ಪಾಲಂ ಗ್ರಾಮಕ್ಕೆ ಹೋಗಬೇಕಿತ್ತು.
ಗೊಂಡ್ವಾನ ಎಕ್ಸ್‌ಪ್ರೆಸ್ ಆಗ್ರಾ ನಿಲ್ದಾಣ ದಾಟಿ ಸಂಚರಿಸುತ್ತಿದ್ದಾಗ ರಾಮದಯಾಳ್ ಅಹಿರ್ವಾರ್ ಬೀಡಿ ಹಚ್ಚಿದ್ದರು. ರೈಲಿನಲ್ಲಿದ್ದ ಜಿಆರ್‌ಪಿ ಕಾನ್‌ಸ್ಟೆಬಲ್‌ಗಳು ಇದನ್ನು ವಿರೋಧಿಸಿ ರಾಮದಯಾಳ್ ಅವರಿಗೆ ಹೊಡೆಯಲು ಪ್ರಾರಂಭಿಸಿದರು ಎಂದು ಮಗ ವಿಶಾಲ್ ವಿವರಿಸಿದ್ದಾರೆ.
“ನಾನು ರೈಲಿನಲ್ಲಿ ನಿದ್ರೆಗೆ ಜಾರಿದ್ದೆ. ಗದ್ದಲದಿಂದ ಎಚ್ಚರಗೊಂಡಾಗ ನನ್ನ ತಂದೆಗೆ ಥಳಿಸುತ್ತಿದ್ದಾರೆ ಎಂದು ಸಹ ಪ್ರಯಾಣಿಕರು ಹೇಳಿದರು. ಅಪ್ಪನಿಗೆ ಹೊಡೆಯಬೇಡಿ ಎಂದು ನಾನು ಪೊಲೀಸರಲ್ಲಿ ಎಷ್ಟೇ ಮನವಿ ಮಾಡಿದರೂ ಅವರು ಕೇಳಲಿಲ್ಲ. ಅವರು ಹೊಡೆಯುತ್ತಲೇ ಇದ್ದರು” ಎಂದು ವಿಶಾಲ್ ತಿಳಿಸಿದ್ದಾರೆ.
ಕಾನ್‌ಸ್ಟೆಬಲ್‌ಗಳು ರಾಮದಯಾಳ್ ಅವರನ್ನು ಜನರಲ್ ಕೋಚ್‌ನಿಂದ ಸ್ಲೀಪರ್ ಕೋಚ್‌ಗೆ ಎಳೆದುಕೊಂಡು ಹೋಗಿ, ಅಲ್ಲಿಯೂ ಹೊಡೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ. ತೀವ್ರ ಹಲ್ಲೆಗೊಳಗಾದ ರಾಮದಯಾಳ್ ಅವರ ಆರೋಗ್ಯ ಹದಗೆಟ್ಟಾಗ, ಮಥುರಾ ರೈಲ್ವೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲಾಗಿತ್ತು.
ರೈಲು ಮಥುರಾ ಜಂಕ್ಷನ್ ತಲುಪಿದಾಗ, ಕಾನ್‌ಸ್ಟೆಬಲ್‌ಗಳು ರಾಮದಯಾಳ್ ಅವರ ಮೃತದೇಹದೊಂದಿಗೆ ರೈಲಿನಿಂದ ಇಳಿದು, ನಂತರ ತಮ್ಮ ಪ್ರಯಾಣವನ್ನು ಮುಂದುವರೆಸಿದರು. ಬಳಿಕ ಸ್ಥಳಕ್ಕೆ ವೈದ್ಯಕೀಯ ತಂಡ ಕರೆಸಲಾಯಿತು. ವೈದ್ಯರು ಪರೀಕ್ಷಿಸಿ ರಾಮದಯಾಳ್ ಸ್ಥಳದಲ್ಲೇ ಮೃತಪಟ್ಟಿದ್ದಾಗಿ ಎಂದು ಘೋಷಿಸಿದರು ಎಂದು ವರದಿಗಳು ಹೇಳಿವೆ.
ಮಥುರಾದ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಶವವನ್ನು ವಶಕ್ಕೆ ತೆಗೆದುಕೊಂಡು ಪಂಚನಾಮ ನಡೆಸಿದ ನಂತರ ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಬಲಿಪಶುವಿನ ಮಗ ಗಂಭೀರ ಆರೋಪಗಳನ್ನು ಮಾಡಿದ ಬಳಿಕ ಅಧಿಕೃತ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ವರದಿಯಾಗಿದೆ.


