ವಿವಾದಿತ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟಿಸಲು ಇನ್ನು ಮುಂದೆ ಅನುಮತಿಸುವುದಿಲ್ಲ ಎಂದು ಮಂಗಳವಾರ (ಏ.30) ರಾಜ್ಯ ಸರ್ಕಾರ ಹೈಕೋರ್ಟ್‌ಗೆ ವಾಗ್ದಾನ ನೀಡಿದೆ ಎಂದು barandbench.com ವರದಿ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಫರಂಗಿಪೇಟೆ ನಿವಾಸಿ ಎ. ರಾಜೇಶ್ ಎಂಬವರು ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 72ರಲ್ಲಿ ಬರುವ ಪಡೀಲ್‌ನಿಂದ ಬಿಸಿ ರೋಡ್ ರಸ್ತೆಯನ್ನು ಏಪ್ರಿಲ್ 18ರಂದು ಮಧ್ಯಾಹ್ನ 12ರಿಂದ ರಾತ್ರಿ 9ರವರೆಗೆ ನಿರ್ಬಂಧಿಸಿ ಪೊಲೀಸ್ ಆಯುಕ್ತರು ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು “ನ್ಯಾಯಾಲಯದ ಆದೇಶವನ್ನು ಪೊಲೀಸರು ಪಾಲಿಸಿಲ್ಲ. ರಾಷ್ಟ್ರೀಯ ಹೆದ್ದಾರಿ 72 ಅನ್ನು ನಿರ್ಬಂಧಿಸಿರಲಿಲ್ಲ. ಇದಕ್ಕೆ ಪೂರಕವಾಗಿ ವಿಡಿಯೋ, ಫೋಟೊಗ್ರಾಫ್ ಇದೆ” ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, “ಪ್ರತಿಭಟನೆ ನಡೆದಿರುವುದರಿಂದ ಅರ್ಜಿ ಅನೂರ್ಜಿತವಾಗಿದೆ” ಎಂದಿದೆ ಎಂದು barandbench.com ವರದಿ ವಿವರಿಸಿದೆ.
ರಾಜ್ಯ ಸರ್ಕಾರದ ಪರ ವಕೀಲರು ವಾದ ಮಂಡಿಸಿ “ಪೊಲೀಸರು ಸ್ಥಳದಲ್ಲಿ ಇದ್ದರು, ಎಲ್ಲವೂ ಸುಗಮವಾಗಿ ನಡೆದಿದೆ. ನಾವು ಮುಂದೆ ಯಾವುದೇ ಅನುಮತಿ ನೀಡುವುದಿಲ್ಲ” ಎಂದಿದ್ದಾರೆ. ಈ ಹೇಳಿಕೆಯನ್ನು ಆದೇಶದಲ್ಲಿ ದಾಖಲಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರದ ವಿರುದ್ದ ಕುಪಿತಗೊಂಡ ಪೀಠವು “ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಪರಿಗಣನೆಯಲ್ಲಿರುವಾಗ ನೀವು ಅನುಮತಿ ನೀಡುವುದನ್ನು ನಿಲ್ಲಿಸಬೇಕು. ಎಷ್ಟು ಹೇಳಿದರೂ ನೀವು ಕೇಳುವುದಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಪರಿಗಣಿಸಲ್ಪಟ್ಟಿಲ್ಲವೇ? ನೀವೇಕೆ ಅನುಮತಿ ನೀಡಿದಿರಿ?” ಎಂದು ಏರುಧ್ವನಿಯಲ್ಲಿ ಸರ್ಕಾರದ ವಕೀಲರನ್ನು ತರಾಟೆಗೆ ತೆಗೆದುಕೊಂಡಿದೆ.
ಅಲ್ಲದೆ, ಪ್ರಕರಣವು ಸುಪ್ರೀಂ ಕೋರ್ಟ್ ಪರಿಗಣನೆಯಲ್ಲಿರುವುದರಿಂದ ಯಾವುದೇ ಪ್ರತಿಭಟನೆಗೆ ಮುಂದೆ ಅನುಮತಿ ನೀಡುವುದಿಲ್ಲ ಎಂದು ಸರ್ಕಾರ ತಿಳಿಸಿದೆ ಎಂದು ಆದೇಶದಲ್ಲಿ ನ್ಯಾಯಾಲಯ ದಾಖಲಿಸಿದೆ. “ಪ್ರತಿಭಟನೆಗೆ ಅವಕಾಶ ನೀಡಬಾರದು” ಎಂದು ನ್ಯಾಯಾಲಯ ಮೌಖಿಕವಾಗಿ ಹೇಳಿದೆ ಎಂದು ವರದಿ ತಿಳಿಸಿದೆ.
ಸೌಜನ್ಯ : barandbench.com
ಪಾಕಿಸ್ತಾನ ಪರ ಘೋಷಣೆ ಕೂಗುವುದು ‘ದೇಶದ್ರೋಹ’ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ


