ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಮುಂದೆ ಪ್ರಧಾನಿ ನರೇಂದ್ರ ಮೋದಿ ಅವರು “ಒಟ್ಟಾಗಿ ಕೆಲಸ ಮಾಡುವ” ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಆದರೆ ಒಟ್ಟಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿಯವರಿಗೆ ಸ್ಪಷ್ಟಪಡಿಸಿದೆ ಎಂದು ಶರದ್ ಪವಾರ್ ಹೇಳಿದ್ದಾರೆ.
ಸೋಮವಾರ ಮರಾಠಿ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ಬಹಿರಂಗಪಡಿಸಿರುವ ಶರದ್ ಪವಾರ್, “ನಾವು ಒಟ್ಟಿಗೆ ಕೆಲಸ ಮಾಡಬೇಕೆಂದು ಮೋದಿ ಪ್ರಸ್ತಾಪಿಸಿದರು. ನಮ್ಮ ವೈಯಕ್ತಿಕ ಸಂಬಂಧಗಳು ತುಂಬಾ ಚೆನ್ನಾಗಿವೆ ಮತ್ತು ಅವುಗಳು ಹಾಗೇ ಉಳಿಯಬೇಕು, ಹಾಗಾಗಿ ನಾವು ಒಟ್ಟಿಗೆ ಕೆಲಸ ಮಾಡಲು ಸಾಧ್ಯವಿಲ್ಲ” ಎಂದು ನಾನು ಅವರಿಗೆ ಹೇಳಿದೆ ಎಂದಿದ್ದಾರೆ.
ಮೋದಿ ಸರ್ಕಾರವು ಅವರನ್ನು ಭಾರತದ ರಾಷ್ಟ್ರಪತಿಗಳನ್ನಾಗಿ ಮಾಡಲು ಮುಂದಾಗಿದೆ ಎಂಬ ವರದಿಗಳನ್ನು ಶರದ್ ಪವಾರ್ ತಳ್ಳಿಹಾಕಿದ್ದಾರೆ. “ಆದರೆ ಮೋದಿ ನೇತೃತ್ವದ ಸಂಪುಟದಲ್ಲಿ ಪವಾರ್ ಮಗಳಾದ ಸುಪ್ರಿಯ ಸುಳೆಯವರನ್ನು ಮಂತ್ರಿಯನ್ನಾಗಿ ಮಾಡುವ ಪ್ರಸ್ತಾಪವಿತ್ತು” ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಬೆಳವಣಿಗೆಗಳ ಮಧ್ಯೆಯೇ ಪವಾರ್ ಕಳೆದ ತಿಂಗಳು ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದರು.
ಕಳೆದ ತಿಂಗಳು ರಾಜ್ಯಸಭೆಯ 250 ನೇ ಅಧಿವೇಶನದಲ್ಲಿ ಮಾತನಾಡುವಾಗ ಪ್ರಧಾನಿ ಮೋದಿ ಅವರು ಶರದ್ ಪವಾರ್ ಅವರನ್ನು ಶ್ಲಾಘಿಸಿದ್ದರು. ಅಲ್ಲಿ ಬಿಜೆಪಿ ಸೇರಿದಂತೆ ಕೆಲವು ಪಕ್ಷಗಳು ಸಂಸತ್ತಿನ ಮಾನದಂಡಗಳನ್ನು ಹೇಗೆ ಪಾಲಿಸಬೇಕು ಎಂಬುದರ ಕುರಿತು ಎನ್‌ಸಿಪಿಯಿಂದ ಕಲಿಯಬೇಕು ಎಂದು ಮೋದಿ ಹೇಳಿದ್ದರು.
2016 ರಲ್ಲಿ, ಮೋದಿಯವರು ಪವಾರ್ ಅವರ ಆಹ್ವಾನದ ಮೇರೆಗೆ ಪುಣೆಯ ವಸಂತದಾದ ಸಕ್ಕರೆ ಸಂಸ್ಥೆಗೆ ಭೇಟಿ ನೀಡಿದಾಗ, ಅವರು ಎನ್‌ಸಿಪಿ ಮುಖ್ಯಸ್ಥ ಪವಾರ್‌ರನ್ನು ಸಾರ್ವಜನಿಕ ಜೀವನದಲ್ಲಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಹೊಗಳಿದ್ದರು.
“ನನಗೆ ಪವಾರ್ ಬಗ್ಗೆ ವೈಯಕ್ತಿಕವಾಗಿ ಗೌರವವಿದೆ. ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಅವರು ನನ್ನ ಬೆರಳು ಹಿಡಿದು ನಡೆಯಲು ಸಹಾಯ ಮಾಡಿದ್ದರು. ಇದನ್ನು ಸಾರ್ವಜನಿಕವಾಗಿ ಉಚ್ಚರಿಸಲು ನನಗೆ ಹೆಮ್ಮೆ ಇದೆ” ಎಂದು ಪ್ರಧಾನಿ ಮೋದಿ ಹೇಳಿದ್ದರು.
“ಅಜಿತ್ ಪವಾರ್ ಏಕಾಏಕಿ ಫಡ್ನವೀಸ್‌ಗೆ ಬೆಂಬಲ ನೀಡಿದ ವಿಷಯ ತಿಳಿದಾಗ, ನಾನು ಮೊದಲು ಸಂಪರ್ಕಿಸಿದ ವ್ಯಕ್ತಿ ಉದ್ಧವ್ ಠಾಕ್ರೆ. ಏನಾಯಿತು ಎಂಬುದು ಸರಿಯಾಗಿ ಗೊತ್ತಿಲ್ಲ. ಆದರೆ ನಾನು ಬಂಡಾಯವನ್ನು ಶಮನಮಾಡುತ್ತೇನೆ ಎಂದು ಅವರಿಗೆ ವಿಶ್ವಾಸ ಕೊಟ್ಟಿದ್ದೆ” ಎಂದು ಪವಾರ್ ಹೇಳಿದ್ದಾರೆ.
“ಅಜಿತ್ ಪವಾರ್ ಅವರ ಕ್ರಮಕ್ಕೆ ನನ್ನ ಬೆಂಬಲ ಇಲ್ಲ ಎಂದು ಎನ್‌ಸಿಪಿಯಲ್ಲಿರುವ ಎಲ್ಲರಿಗೂ ತಿಳಿದಾಗ, ಅವರೊಂದಿಗೆ ಇದ್ದ ಶಾಸಕರು ಕೂಡ ನಮ್ಮ ಜೊತೆ ಬಂದರು ಎಂದು ಅವರು ಹೇಳಿದ್ದಾರೆ.


