Homeಅಂಕಣಗಳುಚೆನ್ನಣ್ಣನೆಂಬ ಬಂಡಾಯದ ಲಾವಣೀಕಾರ... ; ಬಂಡಾಯ ಸಾಹಿತ್ಯ ಸಂಘಟನೆಯ ಆರಂಭದ ದಿನಗಳ ನೆನೆಪು.

ಚೆನ್ನಣ್ಣನೆಂಬ ಬಂಡಾಯದ ಲಾವಣೀಕಾರ… ; ಬಂಡಾಯ ಸಾಹಿತ್ಯ ಸಂಘಟನೆಯ ಆರಂಭದ ದಿನಗಳ ನೆನೆಪು.

ಕಲೆಗಾಗಿ ಕಲೆ ಎಂಬ ಧೋರಣೆಯನ್ನು ವಿಮರ್ಶೆಗೆ ಒಳಪಡಿಸಿದ ಈ ಯುವ ಬರಹಗಾರರು, ‘ಖಡ್ಗವಾಗಲಿ ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣ ಮಿತ್ರ’ ಎಂಬ ಹೊಸ ಧ್ಯೇಯದೊಂದಿಗೆ ಬರಹ ಲೋಕವನ್ನು ಪ್ರವೇಶಿಸಿದರು.

- Advertisement -
- Advertisement -

ಆಗ 1979 ರ ವರ್ಷ, ಕನ್ನಡ ಸಾಹಿತ್ಯ ಪರಿಷತ್ ತನ್ನ ಐವತ್ತೊಂದನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಧರ್ಮಸ್ಥಳದಲ್ಲಿ ನಡೆಸಲು ನಿರ್ಧರಿಸಿತ್ತು. ಮತ್ತು ಆ ಸಮ್ಮೇಳನಕ್ಕೆ ನವ್ಯ ಸಾಹಿತ್ಯ ಪಂಥದ ಆರಂಭಿಕರು ಎಂದು ಕರೆಯಲ್ಪಡುತ್ತಿದ್ದ ಗೋಪಾಲಕೃಷ್ಣ ಅಡಿಗರನ್ನು ಅಧ್ಯಕ್ಷರನ್ನಾಗಿ ಘೋಷಿಸಿತ್ತು. ಆಗ ಸಾಹಿತ್ಯವಂದರೆ ನವ್ಯರ ಸೃಷ್ಠಿಯೆಂದು ಭಾವಿಸಿದ ದಿನಗಳು. ಇಂತಹ ಸ್ಥಿತಿಯಲ್ಲಿ ರಾಯಚೂರಿನ ದಲಿತ ಸಂಘಟನೆಯ ಬೋಳಬಂಡೆಪ್ಪ, ಬರಹಗಾರರಾದ ಜಂಬಣ್ಣ ಅಮರಚಿಂತ ಮತ್ತು ಚೆನ್ನಣ್ಣ ವಾಲೀಕಾರರು, ಧರ್ಮಸ್ಥಳದಲ್ಲಿ ನಡೆಯಲಿದ್ದ ಸಮ್ಮೇಳನದಲ್ಲಿ ‘ದಲಿತ’ ವಿಷಯವಾಗಿ ಒಂದು ಪ್ರತ್ಯೇಕ ಗೋಷ್ಠಿ ನಡೆಸಲು ಅನುಮತಿ ಕೋರಿ ಪ್ರಜಾವಾಣಿ ‘ವಾಚಕರ ವಾಣಿ’ಗೆ ಪತ್ರ ಬರೆದರು. ಆ ಪತ್ರದ ಪೂರ್ಣ ಸಾರ ‘ಸಂಕ್ರಮಣ’ ಪತ್ರಿಕೆಯಲ್ಲೂ ಪ್ರಕಟವಾಯಿತು. ಆದರೆ, ಅಂದಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಹಂ.ಪ ನಾಗರಾಜಯ್ಯ ‘ಕನ್ನಡದಲ್ಲಿ ಕಲಿತ, ಬಲಿತ ಮತ್ತು ದಲಿತ ಅನ್ನುವ ವಿಂಗಡನೆಗಳಿಲ್ಲ, ಅದೇನಿದ್ದರು ಒಳ್ಳೆಯ ಸಾಹಿತ್ಯ ಕೆಟ್ಟ ಸಾಹಿತ್ಯ, ನೀವು ಬಂದರೆ ಬರಬಹುದು ಇಲ್ಲ ಬಿಡಬಹುದು’ ಎಂದು ಬಿಟ್ಟರು. ಇದನ್ನು ಸವಾಲಿನಂತೆ ತೆಗೆದುಕೊಂಡ ಚೆನ್ನಣ್ಣ, ಜಂಬಣ್ಣ, ಬೋಳಬಂಡೆಪ್ಪ ಯಾರ ಮನವೋಲಿಕೆಗೆ ಜಗ್ಗಲಿಲ್ಲ. ಆದರೆ, ದಲಿತ ಗೋಷ್ಠಿಗೆ ಅವಕಾಶ ಕೊಡಬೇಕೆಂದು ಇತರೆ ಲೇಖಕರು ಒತ್ತಡ ಹೇರಿದ ಮೇಲೆ, ಅಧ್ಯಕ್ಷರು ಮಣಿದು ‘ದಲಿತ ಸಾಹಿತ್ಯ ಮತ್ತು ಇತರ ವಿಚಾರಗಳು’ ಎಂಬ ತಲೆಬರಹದಡಿ ಅನುಮತಿ ಕೊಟ್ಟರು. ಆದರೆ ಚೆನ್ನಣ್ಣ ವಾಲೀಕಾರರು ಇಡೀ ಪ್ರಕರಣವನ್ನು ವಿವರಿಸುವಂತೆ:

ಸರಿ ಸುಮಾರು 1979ರ ಜನವರಿಯಿಂದ ಶುರುವಾದ ಈ ವಾಗ್ವಾದ, ಮುಖ್ಯವಾಗಿ ಧರ್ಮಸ್ಥಳ ಸಾಹಿತ್ಯ ಸಮ್ಮೇಳನದಲ್ಲಿ ಪ್ರತ್ಯೇಕ ‘ದಲಿತ ಗೋಷ್ಠಿ’ ಇಡಬೇಕೆಂಬುದಾಗಿತ್ತು. ಆದರೆ, ದಲಿತರ ಸಮಸ್ಯೆಯ ಬಗ್ಗೆ ಅಷ್ಟು ಹಗುರವಾಗಿ, ಲೇವಡಿ ಮಾಡಿ ಮಾತನಾಡಿದ್ದು, ಬಾಬಾ ಸಾಹೇಬರಿಗೆ ಮಾಡಿದ ಅವಮಾನ ಎಂದೆ ಭಾವಿಸಿ, ಧಿಕ್ಕರಿಸುವ ನಮ್ಮ ನಿರ್ಣಯವನ್ನು ಬದಲಿಸಲಿಲ್ಲ. ಇದು ಪ್ರತಿಭಟನೆಯ ಮಹಾ ಸ್ಪೋಟದಂತೆ ಎಲ್ಲಾ ಪತ್ರಿಕೆಗಳಲ್ಲಿ ಇದರ ಬಗ್ಗೆ ಚರ್ಚೆಯಾಯಿತು. ಒಂಟಿ ಹೋರಾಟಕ್ಕೆ ಸೋಲಾಗುತ್ತದೆ, ಆದರೆ ಸಮೂಹ ಶಕ್ತಿಗೆ ಸೋಲಿಲ್ಲ ಎಂಬುದನ್ನು ಮನಗಂಡು ಇನ್ನಿತರೆ ಸಂಗಾತಿಗಳನ್ನು ಇದರಲ್ಲಿ ಸೇರಿಸಿಕೊಂಡೆವು.

ಹನ್ಮಂತರಾಯಪ್ಪ, ಸಚಿವರಾಗಿದ್ದ ಬಿ. ಹೆಚ್ ರಂಗನಾಥರು ನಮ್ಮ ಬೆಂಬಲಕ್ಕೆ ನಿಂತರು. ಕೊನೆಗೆ ನಮ್ಮ ಮನವೋಲಿಸಲು, ಎಲ್.ಜಿ ಹಾವನೂರರು ಕರೆ ಮಾಡಿ ‘ಹಂ.ಪ ನಾಗರಾಜಯ್ಯ ನಮ್ಮನಿ ಹೆಣ್ಮಗಳನ್ನ ಮಾಡಕೊಂಡಾನ, ಅವನಗುಟ ಏನ್ ಬಿಡ್ರಿ, ಬಿಟ್ ಬಿಡ್ರಿ’ ಅಂದರು. ಆಗ, ನಾವು ಅವರಿಗೆ ‘ನೋಡ್ರಿ ಸಾರ್, ಹೆಣ್ಮಕ್ಳು-ಪಣ್ಮಕ್ಲು ವಿಷಯ ಏನಿದ್ರು ಮನ್ಯಾಗ ರ‍್ಲಿ, ಇದು ನಮ್ಮ ಸ್ವಾಭಿಮಾನದ ಪ್ರಶ್ನೆ’ಅಂದು ಬಿಟ್ಟಿವಿ. ಅಲ್ಲಿಂದ, ಪ್ರೊ. ಬಿ.ಕೃಷ್ಣಪ್ಪ ಮಾತಾಡಿ, ‘ಏಯ್, ನಾನು ಅವರ ಶಿಷ್ಯ ಇದ್ದಿನೋ, ಯಾಕ ಇಷ್ಟು ಹಠ ಮಾಡ್ತಿದ್ದಿರಿ, ಬಿಟ್ಟು ಬಿಡ್ರೀ…’ಅಂದರು. ‘ನೀವು, ದ.ಸಂ.ಸ ಸಂಚಾಲಕರು ಇರಬಹುದು, ನೀವು ಹೋಗ್ರಿ ಬಿಡ್ರಿ ಸುಡಗಾಡು ಸರ‍್ರಿ, ಇದು ಸಿದ್ಧಾಂತದ ವಿಷಯ, ನಾವು ಯಾರ ಮಾತು ಕೇಳೋದಿಲ್ಲ. ಬಯ್ಕಟ್ ಮಾಡೋದು ಅಂದರೆ ಬಯ್ಕಟ್ ಮಾಡೋದು ಅಷ್ಟೆ’ ಅಂತ ಜವಾಬು ಕೊಟ್ಟಿವಿ. ಮುಂದ ಕೃಷ್ಣಪ್ಪ ದೇವನೂರು ಮಹಾದೇವಗೆ ಫೋನ್ ಮಾಡಿದರೆ, ಮಹಾದೇವ ‘ಏಯ್, ಆ ರಾಯಚೂರಿನವ್ರತ್ರ ಇಟ್ಟುಕೋ ಬೇಡಿ. ಅವ್ರು ಯಾರ ಮಾತು ಕೇಳೋದಿಲ್ಲ. ಅವರ ಹಿಂದೆ ಬೇರೆ ಶಕ್ತಿಯಿವೆ’ ಅಂದರಂತೆ.

ಇಷ್ಟೆಲ್ಲಾ ಆದ ಮೇಲೆ, ‘ದಲಿತ ಸಾಹಿತ್ಯ ಮತ್ತು ಇತರ ವಿಚಾರಗಳು’ ಅನ್ನೋ ವಿಷಯ ಕೊಟ್ಟು ಮಾತಾಡಾಕ ಕರೆದರು. ಆಗಲೂ ನಾವು “ಆ ದೇವ್ರು ಹೇಳಿದರು ಒಪ್ಪುವುದಿಲ್ಲ” ಅಂತ ಪಟ್ಟು ಹಿಡಿದೆವು. ಅಷ್ಟೊತ್ತಿಗೆ ಗೆಳೆಯರಾದ ಬರಗೂರು ರಾಮಚಂದ್ರಪ್ಪ, ಸಿದ್ಧಲಿಂಗಯ್ಯ, ಚಂಪಾ, ಕಾಳೇಗೌಡ, ಡಿ.ಆರ್ ನಾಗರಾಜ್, ದೇವನೂರು ಮಹಾದೇವ ಆ ಪ್ರತಿರೋಧಕ್ಕೆ ಒಂದು ತಾತ್ವಿಕ ಸ್ವರೂಪ ಕೊಡಬೇಕು ಅಂದುಕೊಂಡು ಆರಂಭಿಸಿದ ಸಂಘಟನೆಯೇ ಬಂಡಾಯ ಸಾಹಿತ್ಯ ಸಂಘಟನೆ. (ಚೆನ್ನಣ್ಣ ವಾಲೀಕಾರರ ಸಂದರ್ಶನ, ಜೂನ್ 14, 2017)

ಆದರೆ, ಅಷ್ಟೊತ್ತಿಗಾಗಲೆ ಹೊಟ್ಟೆ ತುಂಬ ಹಸಿವು, ರಟ್ಟೆ ತುಂಬ ಸಿಟ್ಟು ಮತ್ತು ಎದೆ ತುಂಬ ಗಾಢವಾದ ಮನುಷ್ಯ ಪ್ರೀತಿಯನ್ನು ಇಟ್ಟುಕೊಂಡು ನಡು ಬಗ್ಗಿಸಿ ದುಡಿಯುವವರ ನೋವು-ನಲಿವುಗಳು ತಮ್ಮವೆಂದುಕೊಂಡು ಮತ್ತವರ ಅಭಿವ್ಯಕ್ತಿಯೇ ಕಾವ್ಯ ಎಂದು ಅದಾಗಲೆ ತಮ್ಮೆದುರು ಕಟ್ಟಲ್ಪಟ್ಟಿದ್ದ ನವ್ಯದ ಗೋಡೆಯನ್ನು ಜಿಗಿದು ಮತ್ತದನ್ನು ‘ಸೋಗಲಾಡಿ’ ಮೇಲ್ಜಾತಿ ಬ್ರಾಹ್ಮಣರ ಸೃಷ್ಠಿಯೆಂದೇ ಬಗೆದು ಜನಪದ ಕಾವ್ಯದಿಂದ ಪ್ರೇರಿತಗೊಂಡ ಹೊಸ ಭಾಷೆ, ಲಯಗಾರಿಕೆಯೊಂದಿಗೆ ಜನರನ್ನೇ ಕಾವ್ಯದ ವಸ್ತುಗಳನ್ನಾಗಿಟ್ಟುಕೊಂಡು ಬರೆವ ಲೇಖಕರ ದೊಡ್ಡ ಸಂಖ್ಯೆಯೇ ಹುಟ್ಟಿಕೊಂಡಿತ್ತು. ಹಾಗಾಗಿ, ಪತ್ರದ ಮನವಿಗೆ ತಿರಸ್ಕಾರದ ಉತ್ತರ ಕೊಟ್ಟ ಸಂಗತಿಯೇ, ಈ ಎಲ್ಲಾ ಯುವ, ಪ್ರಗತಿಪರ ಲೇಖಕರನ್ನು ಧರ್ಮಸ್ಥಳದಲ್ಲಿ ಸಮ್ಮೇಳನದ ನಡೆವ ದಿನದಂದೇ ಬೆಂಗಳೂರಿನಲ್ಲಿ ಸೇರಿಸಲು ಮತ್ತು ‘ಬಂಡಾಯ ಸಾಹಿತ್ಯ ಸಂಘಟನೆ’ ಹುಟ್ಟು ಹಾಕಲು ಪ್ರೇರಣೆಯಾಯಿತು. ಬೆಂಗಳೂರಿನ ದೇವಾಂಗ ಛತ್ರದಲ್ಲಿ ನಡೆದ ಬಂಡಾಯ ಸಾಹಿತ್ಯ ಸಂಘಟನೆ ಉದ್ಘಾಟನೆಗೆ ಬಂದಿದ್ದ ತೆಲುಗಿನ ಶ್ರೀ ಶ್ರೀ, ಮರಾಠಿಯ ದಯಾ ಪವಾರ ಮತ್ತು ಕನ್ನಡದ ಬಹುತೇಕ ಪ್ರಗತಿಪರ ಲೇಖಕರ ದಂಡು ಅಲ್ಲಿತ್ತು. ಇದರಿಂದ ಪ್ರೇರಿತರಾದ ಯುವಕರು ಮರಳಿ ತಮ್ಮ ಊರುಗಳಿಗೆ ಹೋಗಿ ಬಂಡಾಯ ಜಿಲ್ಲಾ ಸಮಿತಿಗಳಲ್ಲಿ ತೊಡಗಿಕೊಂಡು, ಚಳವಳಿಯ ಜೊತೆ-ಜೊತೆಗೆ ಸಾಹಿತ್ಯ ರಚನೆಗೆ ತೊಡಗಿಕೊಂಡರು.

987 ರಲ್ಲಿ ಬೋಳಬಂಡೆಪ್ಪನ ಮೊದಲ ವರ್ಷದ ಅಗಲಿಕೆಯ ನೆನಪಿಗಾಗಿ ಆತನ ಒಡನಾಡಿಗಳು ರಾಯಚೂರಿನಲ್ಲಿ ಹಮ್ಮಿಕೊಂಡಿದ್ದ ಕವಿಗೋಷ್ಠಿ. ಚಿತ್ರದ ಬಲ ತುದಿಯಲ್ಲಿ ಚೆನ್ನಣ್ಣ ವಾಲೀಕಾರರನ್ನು ಕಾಣಬಹುದು.

ಹೀಗೆ ರಾಯಚೂರಿನಿಂದ ಬಂದ ಯುವಕರ ದಂಡು, ಸಮ್ಮೇಳನಕ್ಕೆ ಹೊರಟಾಗಿನಿಂದಲೂ ರೈಲಿನಲ್ಲಿ ತೆಲುಗಿನಿಂದ ಅನುವಾದಿಸಲ್ಪಟ್ಟಿದ್ದ ಶ್ರೀ.ಶ್ರೀ, ಚೆರಬಂಡರಾಜು ಮತ್ತು ಗದ್ದರ್ ಮತ್ತು ಪ್ರಜಾಕಳಾ ಮಂಡಲಿಯ ಹಾಡುಗಳನ್ನು ಹಾಡುತ್ತ ಹೊಸ ಚೈತನ್ಯ ಪಡೆಯಹತ್ತಿದ್ದರು. ಇನ್ನು ತಮ್ಮನ್ನು ಅಷ್ಟೊಂದು ಪ್ರಭಾವಿಸಿದ ಲೇಖಕರನ್ನು ಸಮ್ಮೇಳನದಲ್ಲಿ ಕಂಡು, ಅವರ ಮಾತು ಕೇಳಿದ ಮೇಲಂತು, ಅವರ ಬಂಡಾಯದ ಮನಸ್ಥಿತಿಗೆ ಸಾಣೆ ಹಿಡಿದಂತಾಯಿತು. ಆದರೆ, ಒಂದು ಸಾಹಿತ್ಯಿಕ ಸಂಘಟನೆ, ತನ್ನ ಸಾಮಾಜಿಕ ಜವಬ್ದಾರಿಯನ್ನು ಮತ್ತ ಮತ್ತೆ ನಿರೂಪಿಸುವ ಪ್ರಕ್ರಿಯೆಯಲ್ಲಿ ಎಷ್ಟೋ ಸಲ ಅದರ ಸದಸ್ಯರಿಂದ ರಚಿಸಲ್ಪಟ್ಟ ಘೋಷಣೆ-ಭರಿತ ಸಾಲುಗಳನ್ನೂ ಕಾವ್ಯವೆಂದು ಮನ್ನಣೆ ನೀಡುವ ದುರಂತಕ್ಕೆ ಈಡಾಯಿತು. ಹೀಗಾಗಿ ರಜಾ ದಿನಗಳಲ್ಲಿ ರಾಯಚೂರಿನ ಹರಿಜನವಾಡದ ಸಮುದಾಯ ಭವನದಲ್ಲಿ ಬೋಳಬಂಡೆಪ್ಪ, ಅಮರಚಿಂತರು ಮತ್ತು ಇತರೆ ತೆಲುಗು ಬಲ್ಲವರಿಂದ ಅನುವಾದಿಸಲ್ಪಡುತ್ತಿದ್ದ ತೆಲುಗಿನ ವಿ.ರ.ಸಂ ಕವಿಗಳ ರಚನೆಗಳಿಗಿದ್ದ ‘ಸಿದ್ಧಾಂತ ಪ್ರಧಾನ’ ಕಲ್ಲು ಮುಳ್ಳಿಗೆ ಹೇಳಲಾ, ನನಗೋಳು ನಾನೇ ಕಲ್ಲಾಗಿ ಹೋಗಲಾ… ಎಂಬ ಕ್ರಾಂತಿಕಾರಕ ರಚನೆಗಳಿಗೂ ಮತ್ತು ಕನ್ನಡದಲ್ಲಿ ಸಿದ್ಧಲಿಂಗಯ್ಯನವರ ‘ದಲಿತರು ಬಂದರು ದಾರಿಬಿಡಿ-ದಲಿತರ ಕೈಯಿಗೆ ರಾಜ್ಯಕೊಡಿ’ ಎಂಬ ‘ಭಾವ ಪ್ರಧಾನ’ ರಚನೆಗಳಿಗೂ ವ್ಯತ್ಯಾಸವಂತು ಇತ್ತು.

ಹೀಗೆ ಉರಿಕೆಂಡದಂತೆ ಜನುಮ ತಾಳಿದ ಬಂಡಾಯ ಸಂಘಟನೆಯ ಜಿಲ್ಲಾ ಸಂಘಟನಾ ಜವಬ್ದಾರಿನ್ನು ಹೊರುವುದರ ಜೊತೆ-ಜೊತೆಗೆ, ಜಿಲ್ಲೆಯಲ್ಲಿ ದಲಿತ ಸಂಘಟನೆಯ ಅಗತ್ಯದ ಬಗ್ಗೆ ಅರಿವಿದ್ದ ಬೋಳಬಂಡೆಪ್ಪ, ಪ್ರೋ. ಬಿ. ಕೃಷ್ಣಪ್ಪ ಸ್ಥಾಪಿಸಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕವನ್ನು ನಗರದಲ್ಲಿ ಆರಂಭಿಸಿದರು. ಇದರ ಉದ್ಘಾಟನೆಗೆ ಬಂದಿದ್ದ ಕೃಷ್ಣಪ್ಪನವರು, ಸಾಹಿತ್ಯ ಲೋಕದ ರಾಜಕಾರಣವನ್ನು, ಜಾತಿ ವ್ಯವಸ್ಥೆಯ ಬೇರುಗಳು ಹೇಗೆ ಅಂತರ್-ಸಂಬಂಧಿಯಾಗಿವೆ ಎಂಬುದನ್ನು ವಿವರಿಸಿದರು. ಒಂದೆಡೆ ಬೋಳಬಂಡೆಪ್ಪ, ಅಮರಚಿಂತ ಮತ್ತು ವಾಲೀಕಾರರ ಒಡನಾಡಿಯಾಗಿದ್ದ ಮತ್ತು ರಾಯಚೂರಿನ ಜನ ಚಳವಳಿಗಳ ಮುಖಂಡರಾದ ಎಸ್.ಮಾರೆಪ್ಪನವರು ಅಭಿಪ್ರಾಯ ಪಡುವ ಹಾಗೆ:

“ಇಷ್ಟೋತ್ತಿಗಾಗಲೇ ಬೋಳಬಂಡೆಪ್ಪನವರಿಗೆ ಹಲವಾರು ದಲಿತ ನೌಕರರು ಬೆಂಬಲಕ್ಕೆ ನಿಂತರು. ದಿ. ಜೆ.ನಾಗಪ್ಪ, ಬಾಬು ಭಂಡಾರಿಗಲ್, ದಲಿತ ಕವಿ ದಿ.ಸೋಮಯ್ಯ ವಲ್ಲಭ, ಜೆ.ಎಂ.ತಾಯಪ್ಪ ಮತ್ತು ಚಂದ್ರಬಂಡ ತಿಮ್ಮಪ್ಪ ಇನ್ನೂ ಅನೇಕ ದಲಿತ ನೌಕರರು ಪಾಲ್ಗೊಳ್ಳುತ್ತಿದ್ದರು. ಕುರುಬದೊಡ್ಡಿ ಗ್ರಾಮದಲ್ಲಿ ಬತಕಪ್ಪ ಎಂಬ ದಲಿತ ರೈತ ಹೋಟೆಲ್ ಪ್ರವೇಶ ಮಾಡಿ ದಬ್ಬಾಳಿಕೆಗೆ ಒಳಗಾಗಿದ್ದರು. ರಾಜಲಬಂಡಾ ಗ್ರಾಮದಲ್ಲಿ ಹನುಮಂತಪ್ಪ ಎಂಬ ದಲಿತ ಯುವಕನನ್ನು ಹೊಡೆದು, ಸತ್ತಿದ್ದಾನೆಂದು ಬಿಸಾಡಿ ಹೋಗಿದ್ದು, ಯಾಪಲದಿನ್ನಿ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದಾಗ ಅವರಿಗೆ ಕೆರೆ ಭೂಮಿ ನೀಡುವಂತೆ ನಡೆದ ಹೋರಾಟದಂತಹ ಬಿಡಿ ಬಿಡಿ ಪ್ರಕರಣಗಳು ಇದ್ದರೂ, ಅಂತವರ ಬೆಂಬಲಕ್ಕೆ ನಿಂತ ನಮ್ಮ ನೌಕರ ವರ್ಗ ಎಸ್.ಪಿ. ಅವರಿಗೆ, ಪೊಲೀಸ್ ಸ್ಟೇಷನ್‌ಗೆ ಹೋಗಿ ಫಿರ್ಯಾದಿ ನೀಡಿ, ತಪ್ಪಿತಸ್ಥರನ್ನು ಬಂಧಿಸಬೇಕೆಂದು ಅರ್ಜಿ ಸಲಿಸುತ್ತಿದ್ದರು ಮತ್ತು ಆ ಹಳ್ಳಿಗೆ ಸೈಕಲ್, ಕಾಲ್ನಡಿಗೆ ಮೂಲಕ ತಲುಪಿ, ತೆಲುಗು ಹೋರಾಟದ ಹಾಡುಗಳನ್ನು ಹಾಡಿ, ದಲಿತರಿಗೆ ಧೈರ್ಯ ನೀಡುವುದು, ಅವರು ಊರು ಬಿಟ್ಟು ಹೋಗದಂತೆ ಸ್ಫೂರ್ತಿ ನೀಡಿವುದು ರೂಢಿಯಾಯಿತು. ಆಶ್ಚರ್ಯವೆಂಬಂತೆ ನಮ್ಮ ಜೊತೆ ದಲಿತರಲ್ಲದ ಜಂಬಣ್ಣ ಅಮರಚಿಂತ, ಚೆನ್ನಣ್ಣ ವಾಲೇಕರ್, ಲಕ್ಷ್ಮಣ ಇವರು ಜೊತೆಗೂಡಿದರು.

ನಗರದ ರಾಗಿಮಾನಗಡ್ಡದಲ್ಲಿದ್ದ ದಲಿತ ನೌಕರರಾದ ಪಾಂಡುರಂಗ, ಚಂದ್ರಕಾಂತ ಫೋಸ್ತೆ ಇವರೊಂದಿಗೆ ಜಯಣ್ಣನವರು ದಸಂಸ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಸಂಘಟನೆಯ ಹುರುಪಿನೊಂದಿಗೆ ಹೋರಾಟದ ಹಾಡುಗಳ ಪ್ರಾಕ್ಟೀಸು ದಿನನಿತ್ಯ ನಡೆಯುತ್ತಿತ್ತು. ಚೆನ್ನಣ್ಣ ವಾಲೀಕಾರ್ ಅವರು ಎಲ್‌ವಿಡಿ ಕಾಲೇಜು ಕನ್ನಡ ಪ್ರಾಧ್ಯಾಪಕರಾದ್ದರಿಂದ ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಂಡಾಯ ಸಾಹಿತಿಗಳನ್ನು ಆಹ್ವಾನಿಸಿ ನಮ್ಮನ್ನು ಹೋರಾಟದ ಹಾಡುಗಳನ್ನು ಹಾಡಲು ಕರೆಯುತ್ತಿದ್ದರು. ನಾನು ಕರೆಯಪ್ಪ ಮಾಸ್ತರ, ರೆಡ್ಡಿ ತಿಮ್ಮಯ್ಯ ಹಾಡುಗಾರರಾಗಿದ್ದೇವು. ಬೋಳಬಂಡೆಪ್ಪನವರು ನಮ್ಮ ಕಾರ್ಯಕ್ರಮದ ಕೊನೆಯ ಹಾಡು ಅವರೇ ಹಾಡುತ್ತಿದ್ದರು. ಸಂಘದವರು ಬಂದಿದ್ದರು ಮಾವ, ನಮಗೆ ಸಂಗತಿಗಳು ಹೇಳವ್ಯಾರೇ ಮಾವ ಎಂಬ ತೆಲುಗು ಅನುವಾದಿತ ಹಾಡು ಅವರು ಹಾಡಿದರೆ ಮಾತ್ರ ಶೋಭೆ ಇರುತ್ತಿತ್ತು”.

ಹೀಗೆ, ಪ್ರತೀ ಜಿಲ್ಲೆಯಲ್ಲೂ ಬಂಡಾಯ ಸಂಘಟನೆಯ ಘಟಕಗಳು ಆರಂಭವಾಗಿ, ಆಯಾ ಪ್ರಾಂತ್ಯದಲ್ಲಿ ನಡೆಯುತ್ತಿದ್ದ ಮೇಲ್ಜಾತಿಗಳ ದಬ್ಬಾಳಿಕೆ, ಜಾತಿ ನಿಂದನೆ ಮತ್ತು ತಳ ಸಮುದಾಯದ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿದ್ದ ಅತ್ಯಾಚಾರ ಪ್ರಕರಣಗಳ ವಿರುದ್ಧ ಹಲವು ಪ್ರತಿಭಟನೆಗಳು ನಡೆದವು. ಬಹುಶಃ ಇದೇ ಸಮಯದಲ್ಲಿಯೆ, ಕನ್ನಡ ಕಾವ್ಯ ಭಾಷೆ ಹೊಸ ಲಯವನ್ನು ಮತ್ತು ನುಡಿಗಟ್ಟನ್ನು ಪಡೆದುಕೊಂಡಿದ್ದಲ್ಲದೆ, ಸಾಹಿತ್ಯ ರಚನೆಯ ಉದ್ಧೇಶವನ್ನು ಮರು ಚರ್ಚೆಗೆ ಒಳಪಡಿಸಿತು. ಕಲೆಗಾಗಿ ಕಲೆ ಎಂಬ ಧೋರಣೆಯನ್ನು ವಿಮರ್ಶೆಗೆ ಒಳಪಡಿಸಿದ ಈ ಯುವ ಬರಹಗಾರರು, ‘ಖಡ್ಗವಾಗಲಿ ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣ ಮಿತ್ರ’ ಎಂಬ ಹೊಸ ಧ್ಯೇಯದೊಂದಿಗೆ ಬರಹ ಲೋಕವನ್ನು ಪ್ರವೇಶಿಸಿದರು. ಧಾರವಾಡದಲ್ಲಿ ಸಂಘಟನೆಯನ್ನು ಬಲಪಡಿಸಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ, ಯುವಕರಲ್ಲಿ ಪ್ರಗತಿಪರ ಆಲೋಚನೆಗಳನ್ನು ಬಿತ್ತುತ್ತಿದ್ದ ಚಂದ್ರಶೇಖರ ಪಾಟೀಲರು ಮತ್ತು ಅವರ ತಮ್ಮ ವಿಜಯ ಪಾಟೀಲರು, ಸವದತ್ತಿ ಯಲ್ಲಮ್ಮನ ದೇವಸ್ಥಾನದ ಸುತ್ತಲೂ ನಡೆಯುತ್ತಿದ್ದ ದಲಿತ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಬೆತ್ತಲೆ ಸೇವೆಯ ನಿಲ್ಲಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಹೋರಾಟಗಳಲ್ಲಿ, ಪ್ರೋ.ಬಿ ಕೃಷ್ಣಪ್ಪನವರು ಮತ್ತು ಅವರ ಸಂಗಡಿಗರ ದೊಡ್ಡ ದಂಡು ಪಾಲ್ಗೊಂಡಿತ್ತು.

ಇನ್ನು ರಾಯಚೂರಿನಲ್ಲಿ ಸಂಘಟನೆಯಷ್ಟೇ ದೊಡ್ಡ ಸಂಖ್ಯೆಯಲ್ಲಿ ಲೇಖಕರ ಸಾಹಿತ್ಯ ರಚನೆಯಲ್ಲಿ ತೊಡಗಿದರು. ಮುಂದೆ ಚೆನ್ನಣ್ಣ ವಾಲಿಕಾರರಿಗೆ ‘ಕರಿತೆಲಿ ಮಾನವನ ಜೀಪದ’ ಸಂಕಲನಕ್ಕೆ ಸಾಹಿತ್ಯ ಪರಿಷತ್ತಿನ ಬಹುಮಾನ ಬಂದಾಗ, ಶಾಂತರಸರು ಅದು ಕಾವ್ಯವೇ ಅಲ್ಲ ಎಂದು ವಾಚಕರ ವಾಣಿಗೆ ಪತ್ರ ಬರೆದಿದ್ದರು. ಆದರೆ, ಅದನ್ನು ಸಮರ್ಥಿಸಿಕೊಂಡಿದ್ದ ಬೋಳಬಂಡೆಪ್ಪ ಮತ್ತು ಅಮರಚಿಂತರು, ಶಾಂತರಸರಿಗೆ ತಕ್ಕ ಉತ್ತರವನ್ನು ಕೊಟ್ಟಿದ್ದರು. ಇದರ ಪರಿಣಾಮ ಹಲವು ವರ್ಷಗಳ ಕಾಲ ಜಂಬಣ್ಣ ಅಮರಚಿಂತ, ವಾಲೀಕಾರರು ತಮಗಿಂತ ಹಿರಿಯರಾದ ಶಾಂತರಸರೊAದಿಗೆ ಮುನಿಸು ಬೆಳೆಸಿಕೊಂಡು ವರ್ಷಗಳ ಕಾಲ ಮಾತು ಆಡಿರದ ಪ್ರಸಂಗವೂ ನಡೆಯಿತು. ಅಲ್ಲದೆ ಶಾಂತರಸರ ‘ಬಡೇಸಾಹೇಬು ಪುರಾಣ’ ಕ್ಕೆ ಬೋಳಬಂಡೆಪ್ಪ ಒಂದು ಪ್ರಖರ ವಿಮರ್ಶೆಯನ್ನು ಬರೆದಿದ್ದು ಕೂಡ ಇದಕ್ಕೆ ಕಾರಣವಾಗಿತ್ತು.

1981-82 ರಲ್ಲಿ ರಾಯಚೂರಿನಲ್ಲಿ ನಡೆದ ಬಂಡಾಯ ಸಾಹಿತ್ಯ ಸಂಘಟನೆಯ ಎರಡನೆಯ ರಾಜ್ಯ ಸಮ್ಮೇಳನದಲ್ಲಿ ಪ್ರಮುಖ ಪಾತ್ರ ವಹಿಸಿದ ಬೋಳಬಂಡೆಪ್ಪ, ಜಂಬಣ್ಣ ಅಮರಚಿಂತ, ಚೆನ್ನಣ್ಣ ವಾಲೀಕಾರ, ಭಗತರಾಜ ನಿಜಾಮಕಾರ, ಬಾಬು ಭಂಡಾರಿಗಲ್, ಶಿವಾನಂದ ಸಾಸಿವೆಹಳ್ಳಿ, ಕರಿಯಪ್ಪ ಮಾಸ್ತರ್, ಬಿ.ಟಿ ಲಲಿತಾ ನಾಯಕ ಮತ್ತು ಎಂ. ಲಕ್ಷ್ಮಣ್ ಮುಂತಾದವರು, ಸಮ-ಸಮಾಜದ ನಿರ್ಮಾಣದಲ್ಲಿ ‘ಸಾಹಿತಿಯ ಪಾತ್ರ ಜನಪರ ಆಶಯಗಳ ಪರವಾಗಿರಬೇಕು. ಕಲೆ ಕಲೆಗಾಗಿ ಎನ್ನುವ ಪುರೋಹಿತ ಶಾಹಿ ಭೂರ್ಜ್ವಾವಾದವನ್ನು ಬುಡಮೇಲು ಮಾಡಿ, ಕಲೆ, ಸಾಹಿತ್ಯ ‘ಸೃಷ್ಟಿಕರ್ತ’ರಾದ ಜನಸಾಮಾನ್ಯರಿಗಾಗಿ ಎಂದು ದಲಿತರು, ಶೋಷಿತರೇ ಪ್ರತಿನಿಧಿಸುವ ಸಾಹಿತ್ಯ ಪ್ರಕ್ರಿಯೆಯನ್ನು ಸೃಷ್ಟಿಸಬೇಕು’ ಎಂಬ ನಂಬಿಕೆಯನ್ನು ಬಲಪಡಿಸುವತ್ತ ದುಡಿದಿದ್ದರು. ಹೀಗೆ ಕನ್ನಡ ಸಾಹಿತ್ಯದ ಒಂದು ಘಟ್ಟಕ್ಕೆ ರಾಯಚೂರಿನಿಂದ ದನಿ ಹೊರಡಿಸಿ, ಪರೋಕ್ಷವಾಗಿ ಅದಕ್ಕೆ ಕಾರಣೀಭೂತರಾದ ಬೋಳಬಂಡೆಪ್ಪ, ಜಂಬಣ್ಣ ಅಮರಚಿಂತ ಮತ್ತು ಚೆನ್ನಣ್ಣ ವಾಲೀಕಾರರು ಬಿತ್ತಿದ ಆರಂಭದ ಬಂಡಾಯದ ಕಿಡಿ ನಂತರದ ದಿನಗಳಲ್ಲಿ ನಾಡಿನ ಇತರೆಡೆ ಹಬ್ಬಿದ್ದು ಈಗ ಇತಿಹಾಸ.

ಕೃಪೆ: ‘ಬಂಡಾಯದ ಬೋಳಬಂಡೆಪ್ಪ; ಬದುಕು, ಬರಹ ಸಂಘಟನೆ’, ಪಲ್ಲವ ಪ್ರಕಾಶನ, 2018 ಪುಸ್ತಕದಿಂದ ಆಯ್ದ ಪುಟಗಳು.

ಚಿತ್ರಗಳು : ಮಧು ಬೋಳಬಂಡೆಪ್ಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅತ್ಯುತ್ತಮ ಲೇಖನ. ಪ್ರಚುರವಿಲ್ಲದ ಆದರೆ ಬಹು ಮುಖ್ಯವಾದ ಮಾಹಿತಿಗಳನ್ನು ಒಳಗೊಂಡಿರುವ ಲೇಖನವಿದು.

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...