ಪ್ರಧಾನಿ ನರೇಂದ್ರ ಮೋದಿಯವರ ವೀಡಿಯೊವನ್ನು ಫೇಸ್‌ಬುಕ್‌ನಿಂದ ತೆಗೆದುಹಾಕಿದ್ದಕ್ಕೆ ಸಂಬಂಧಿಸಿದಂತೆ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಕ್ಷಮೆಯಾಚಿಸಬೇಕೆಂದು ಸಂಸದೀಯ ಸ್ಥಾಯಿ ಸಮಿತಿ ಒತ್ತಾಯಿಸಿದ್ದು, ಈ ಕ್ರಮವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದೆ.
ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಕಾರ್ಯದರ್ಶಿಗೆ ಪತ್ರ ಬರೆದಿರುವ ಲೋಕಸಭೆಯ ಸೆಕ್ರೆಟರಿಯೇಟ್, ಮೂರು ದಿನಗಳಲ್ಲಿ ಕ್ಷಮೆಯಾಚಿಸದಿದ್ದರೆ ಜುಕರ್‌ಬರ್ಗ್‌ಗೆ ಲಭ್ಯವಿರುವ ಕಾನೂನು ರಕ್ಷಣೆ ಮತ್ತು ವಿನಾಯಿತಿಯನ್ನು ಹಿಂಪಡೆಯಬಹುದು ಎಂದು ತಿಳಿಸಿದೆ.
ಪರೀಕ್ಷಾ ವಿವಾದಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಕಠಿಣ ಕ್ರಮಗಳ ಕುರಿತು ಪ್ರಧಾನಿ ಮೋದಿ ಅವರು ವಿದ್ಯಾರ್ಥಿಗಳು ಹಾಗೂ ಜೆನ್ ಜಿ ಯುವಜನತೆಯನ್ನುದ್ದೇಶಿಸಿ ಮಾತನಾಡಿದ್ದ ವಿಡಿಯೋವನ್ನು ಫೇಸ್‌ಬುಕ್ ತೆಗೆದುಹಾಕಿರುವುದಕ್ಕೆ ಸಮಿತಿಯು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ವಿಡಿಯೋ ಮರುಸ್ಥಾಪನೆಯಾಗುವ ಮುನ್ನ ಸುಮಾರು ಐದರಿಂದ ಆರು ಗಂಟೆಗಳ ಕಾಲ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರಲಿಲ್ಲ.
“ಫೇಸ್‌ಬುಕ್‌ನಿಂದ ಸುಮಾರು 5-6 ಗಂಟೆಗಳ ಕಾಲ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪರೀಕ್ಷಾ ವಿವಾದಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಕಠಿಣ ಕ್ರಮಗಳ ಕುರಿತು ವಿದ್ಯಾರ್ಥಿಗಳು ಹಾಗೂ ಜೆನ್ ಜಿ ಯುವಜನತೆಯನ್ನುದ್ದೇಶಿಸಿ ಮಾತನಾಡಿದ್ದ ವಿಡಿಯೋವನ್ನು ತೆಗೆದುಹಾಕಿದ ಕ್ರಮವನ್ನು ಸಮಿತಿಯು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ” ಎಂದು ಲೋಕಸಭಾ ಸಚಿವಾಲಯದ ನಿರ್ದೇಶಕಿ ಎ. ಜ್ಯೋತಿರ್ಮಯಿ ಸಹಿ ಮಾಡಿರುವ ಪತ್ರದಲ್ಲಿ ತಿಳಿಸಲಾಗಿದೆ.


