ಹೈದರಾಬಾದ್ನ ಟಿ-ಹಬ್ನಲ್ಲಿ ನಡೆಯುತ್ತಿರುವ ಇಸ್ರೇಲಿ ಕಂಪನಿಗಳ ಕಾರ್ಯಕ್ರಮವನ್ನು ವಿರೋಧಿಸಿದ್ದಕ್ಕಾಗಿ ಸೋಮವಾರ (ನ.16) ಮುಂಜಾನೆ ತೆಲಂಗಾಣ ಪೊಲೀಸರು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (ಎಸ್ಐಒ) ಮತ್ತು ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ನಾಯಕರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
maktoobmedia.com ವರದಿಯ ಪ್ರಕಾರ, ಹೈದರಾಬಾದ್ನ ಮಿರ್ಚೌಕ್ ಪೊಲೀಸರು ಎಸ್ಐಒ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಮೊಹಮ್ಮದ್ ತಾಜ್ ಮತ್ತು ರಾಜ್ಯ ಕಾರ್ಯದರ್ಶಿ ತಕಿಯುದ್ದೀನ್ ಝೈದ್ ಅವರನ್ನು ವಶಕ್ಕೆ ಪಡೆದಿದ್ದು, ಆದಿಲಾಬಾದ್ನ ಇಚೋಡಾದಲ್ಲಿ ಎಪಿಸಿಆರ್ ರಾಜ್ಯ ಸಂಯೋಜಕ ಉಮರ್ ಫಾರೂಕ್ ಅವರನ್ನು ಕೂಡ ಪೊಲೀಸರು ಪಡೆದಿದ್ದಾರೆ.
ರಾಜ್ಯ ಸರ್ಕಾರ ಇಸ್ರೇಲಿ ಕಂಪನಿಗಳ ಕಾರ್ಯಕ್ರಮವನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದ್ದ ನಾಗರಿಕ ಗುಂಪುಗಳ ಪತ್ರಿಕಾಗೋಷ್ಠಿಯಲ್ಲಿ ಈ ಮೂವರೂ ಉಪಸ್ಥಿತರಿದ್ದರು ಎಂದು ವರದಿ ಹೇಳಿದೆ.
ಎಐಎಂಐಎಂ ಚಾರ್ಮಿನಾರ್ ಶಾಸಕ ಮೀರ್ ಝುಲ್ಫಿಕರ್ ಅಲೀ ಮಧ್ಯಪ್ರವೇಶಿಸಿದ ನಂತರ, ಸೋಮವಾರ ಬೆಳಿಗ್ಗೆ ವಶಕ್ಕೆ ಪಡೆದವರನ್ನು ಬಿಡುಗಡೆ ಮಾಡಲಾಗಿದೆ. ಅವರ ವಿರುದ್ಧ ಯಾವುದೇ ಎಫ್ಐಆರ್ಗಳನ್ನು ದಾಖಲಿಸಲಾಗಿಲ್ಲ. ಈ ಬಂಧನಗಳನ್ನು ಸಂಘಟನೆಗಳು ‘ದಮನಕಾರಿ ಕ್ರಮ’ ಎಂದು ಕರೆದಿವೆ.
“ಆತ್ಮಸಾಕ್ಷಿಯ ಧ್ವನಿಗಳನ್ನು ಹತ್ತಿಕ್ಕುವುದರಿಂದ ದೃಢನಿಶ್ಚಯ, ಧೈರ್ಯ ಮತ್ತು ನ್ಯಾಯದಿಂದ ಕೂಡಿರುವ ಹೋರಾಟವನ್ನು ತಡೆಯಲು ಸಾಧ್ಯವಿಲ್ಲ. ಪ್ಯಾಲೆಸ್ತೀನ್ಗೆ ನಮ್ಮ ಬೆಂಬಲ ಮತ್ತು ಒಗ್ಗಟ್ಟು ಸದಾ ಅಚಲವಾಗಿರುತ್ತದೆ” ಎಂದು ಎಸ್ಐಒ ತೆಲಂಗಾಣ ತನ್ನ ಎಕ್ಸ್ ಬರೆದುಕೊಂಡಿದೆ.
“ಇದು ಕೇವಲ ಬೆದರಿಕೆ ಮತ್ತು ಇಸ್ರೇಲ್ಗೆ ನೀಡುತ್ತಿರುವ ಅಚಲ ಬೆಂಬಲವಲ್ಲದೆ ಬೇರೇನೂ ಅಲ್ಲ, ಹೈದರಾಬಾದ್ ನಗರ ಪೊಲೀಸರ ಈ ಕೃತ್ಯವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ” ಎಂದು ಸಾಮಾಜಿಕ ಕಾರ್ಯಕರ್ತ ಎಸ್ಕ್ಯೂ ಮಸೂದ್ ಎಕ್ಸ್ ಖಾತೆಯಲ್ಲಿ ಹೇಳಿದ್ದಾರೆ.
ತೆಲಂಗಾಣ ಸರ್ಕಾರದ ಸ್ಟಾರ್ಟ್ಅಪ್ ಇನ್ಕ್ಯುಬೇಟರ್ ಆಗಿರುವ ಟಿ-ಹಬ್, ನವೆಂಬರ್ 16 ರಂದು 20 ಇಸ್ರೇಲಿ ತಂತ್ರಜ್ಞಾನ ಕಂಪನಿಗಳ ನಿಯೋಗಕ್ಕೆ ಆತಿಥ್ಯ ವಹಿಸುತ್ತಿದೆ. ಈ ಕಂಪನಿಗಳ ಪೈಕಿ ಐದು ಕಂಪನಿಗಳು ಗಾಝಾ ಅಥವಾ ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶಗಳಲ್ಲಿ ಇಸ್ರೇಲಿ ಸಶಸ್ತ್ರ ಪಡೆಗಳು ಬಳಸುವ ಹಾರ್ಡ್ವೇರ್, ಸಾಫ್ಟ್ವೇರ್ ಅಥವಾ ಸೇವೆಗಳನ್ನು ಪೂರೈಸುತ್ತವೆ ಎಂದು ‘ಸಿಯಾಸತ್ ಡೈಲಿ’ ತನಿಖಾ ವರದಿ ಮಾಡಿದೆ.


